ನ್ಯೂಯಾರ್ಕ್ನ ಮೊದಲ ಮುಸ್ಲಿಂ ಮೇಯರ್ ಆಗಿ ಜೊಹ್ರಾನ್ ಮಮ್ದಾಮಿ ಪ್ರಮಾಣ ವಚನ
- ನ್ಯೂಯಾರ್ಕ್ ನಗರದ ಹೊಸ ಮೇಯರ್ ಆಗಿ ಜೊಹ್ರಾನ್ ಮಮ್ದಾಮಿ ಪ್ರಮಾಣ ವಚನ ಸ್ವೀಕಾರ
- ಮ್ಯಾನ್ಹ್ಯಾಟನ್ನಲ್ಲಿರುವ ಸಬ್ವೇ ಸ್ಟೇಷನ್ನಲ್ಲಿ ನಡೆದ ಐತಿಹಾಸಿಕ ಸಮಾರಂಭ
- ನ್ಯೂಯಾರ್ಕ್ ನಗರದ ಮೊಟ್ಟ ಮೊದಲ ಮುಸ್ಲಿಂ ಮೇಯರ್ ಎಂಬ ದಾಖಲೆ ಬರೆದ ಮಮ್ದಾಮಿ
ನ್ಯೂಯಾರ್ಕ್: ಭಾರತೀಯ ಮೂಲದ ಜೊಹ್ರಾನ್ ಮಮ್ದಾಮಿ ( Zohran Mamdani ) ಅವರು ನ್ಯೂಯಾರ್ಕ್ ನಗರದ ಹೊಸ ಮೇಯರ್ ಆಗಿ ಹೊಸ ವರ್ಷದಂದೇ ಪ್ರಮಾಣ ವಚನ ಸ್ವೀಕಾರ ಮಾಡಿದರು. ಮ್ಯಾನ್ಹ್ಯಾಟನ್ನಲ್ಲಿರುವ ಸಬ್ವೇ ಸ್ಟೇಷನ್ನಲ್ಲಿ ಈ ಐತಿಹಾಸಿಕ ಸಮಾರಂಭ ನಡೆಯಿತು.
ಅಮೆರಿಕದ ಅತಿದೊಡ್ಡ ನಗರ ಎನಿಸಿಕೊಂಡಿರುವ ನ್ಯೂಯಾರ್ಕ್ ನಗರದ ಮೊಟ್ಟ ಮೊದಲ ಮುಸ್ಲಿಂ ನಾಯಕನೆಂಬ ದಾಖಲೆಯನ್ನು ಮಮ್ದಾನಿ ಅವರು ಬರೆದಿದ್ದಾರೆ. ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್ ಮೇಲೆ ಕೈ ಇಟ್ಟು ಮಮ್ದಾನಿ ಅವರು ಪ್ರಮಾಣ ವಚನವನ್ನು ಸ್ವೀಕಾರ ಮಾಡಿದರು.
ಪ್ರಮಾಣ ವಚನ ಸ್ವೀಕಾರದ ಬಳಿಕ ಮಾತನಾಡಿದ ಮಮ್ದಾನಿ, ಇದು ನನಗೆ ದೊರೆತಂತಹ ಜೀವಮಾನದ ಗೌರವ ಮತ್ತು ಸವಲತ್ತು ಎಂದು ಹೇಳಿದರು.
ಈ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಮಮ್ದಾನಿ ಅವರ ರಾಜಕೀಯ ಮಿತ್ರರಾದ ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಅವರು ನ್ಯೂಯಾರ್ಕ್ ನಗರದ ಮೂಲ ಸುರಂಗಮಾರ್ಗ ನಿಲ್ದಾಣಗಳಲ್ಲಿ ಒಂದಾದ ಹಳೆಯ ಸಿಟಿ ಹಾಲ್ ನಿಲ್ದಾಣದಲ್ಲಿ ನಿರ್ವಹಿಸಿದರು. ಈ ನಿಲ್ದಾಣ ಅದ್ಭುತವಾದ ಕಮಾನಿನ ಛಾವಣಿಗಳಿಗೆ ಹೆಸರುವಾಸಿಯಾಗಿದೆ.
ಮಧ್ಯಾಹ್ನ 1 ಗಂಟೆಗೆ (ಸ್ಥಳೀಯ ಸಮಯ) ಸಿಟಿ ಹಾಲ್‌ನಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಮತ್ತೊಮ್ಮೆ ಬಹಳ ಅದ್ಧೂರಿಯಾಗಿ ಮಮ್ದಾನಿ ಅವರು ಮತ್ತೊಮ್ಮೆ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ.
ಅಂದಹಾಗೆ, ಅಮೆರಿಕದಲ್ಲಿ ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಡೆಮೋಕ್ರಾಟಿಕ್ ಪಕ್ಷದಿಂದ ಸ್ಪರ್ಧಿಸಿದ್ದ ಜೊಹ್ರಾನ್ ಮಮ್ದಾನಿ, ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ ಗೆಲುವು ಸಾಧಿಸಿದರು. ಈ ಮೂಲಕ ಮೊದಲ ಭಾರತೀಯ-ಅಮೆರಿಕನ್ ಮುಸ್ಲಿಂ ಮೇಯರ್ ಆಗಿ ಇತಿಹಾಸ ಸೃಷ್ಟಿಸಿದರು. ಅಲ್ಲದೆ, ಒಂದು ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ನ್ಯೂಯಾರ್ಕ್ ನಗರದ ಅತ್ಯಂತ ಕಿರಿಯ ಮೇಯರ್ ಆಗಿಯೂ ದಾಖಲೆ ಬರೆದಿದ್ದಾರೆ, (ಏಜೆನ್ಸೀಸ್).