ದಾಳಿ ಮಾಡೋಣ ಅಂದಿದ್ದು ನೀವೇ! ಇರಾನ್ ಯುದ್ಧದ ಸಂಪೂರ್ಣ ಹೊಣೆ ರಕ್ಷಣಾ ಕಾರ್ಯದರ್ಶಿಯದ್ದು? ಟ್ರಂಪ್ ಮಾಸ್ಟರ್ ಸ್ಟ್ರೋಕ್! 
ವಿದೇಶ

ದಾಳಿ ಮಾಡೋಣ ಅಂದಿದ್ದು ನೀವೇ! ಇರಾನ್ ಯುದ್ಧದ ಸಂಪೂರ್ಣ ಹೊಣೆ ರಕ್ಷಣಾ ಕಾರ್ಯದರ್ಶಿಯದ್ದು? ಟ್ರಂಪ್ ಮಾಸ್ಟರ್ ಸ್ಟ್ರೋಕ್! ​TrumpVsHegseth

ವಾಷಿಂಗ್ಟನ್: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಸಂಘರ್ಷವು ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ನಡುವೆ ಜಗತ್ತೇ ನಿಬ್ಬೆರಗಾಗುವಂತಹ ಎರಡು ಪ್ರಮುಖ ಬೆಳವಣಿಗೆಗಳು ಸಂಭವಿಸಿವೆ. ಒಂದು, ಯುದ್ಧಕ್ಕೆ ಏಪ್ರಿಲ್ 9 ರ ಗಡುವು ನಿಗದಿಯಾಗಿರುವುದು. ಎರಡು, ಈ ಯುದ್ಧದ ಆರಂಭಕ್ಕೆ ತನ್ನ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್(​TrumpVsHegseth) ಅವರೇ ಕಾರಣ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ನೀವೇ ಹೇಳಿದ್ರಿ, ಮಾಡೋಣ ಅಂತ: ಪೀಟ್ ಮೇಲೆ ಟ್ರಂಪ್ ಹೊಣೆ

ಈ ಬಗ್ಗೆ ಟೆನ್ನೆಸ್ಸಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಟ್ರಂಪ್, ಪಕ್ಕದಲ್ಲೇ ಕುಳಿತಿದ್ದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರನ್ನು ಉದ್ದೇಶಿಸಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಪೀಟ್, ಈ ಬಗ್ಗೆ ಮೊದಲು ಮಾತನಾಡಿದ್ದೇ ನೀವು ಎಂದು ನಾನು ಭಾವಿಸುತ್ತೇನೆ. ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ನಾವು ನೋಡುತ್ತಾ ಕೂರಲು ಸಾಧ್ಯವಿಲ್ಲ, ಈ ದಾಳಿಯನ್ನು ಮಾಡೋಣ ಎಂದು ನೀವೇ ಹೇಳಿದ್ರಿ ಎಂದು ಟ್ರಂಪ್ ಘೋಷಿಸಿದ್ದಾರೆ.
ಇದಕ್ಕೆ ಪೂರಕವಾಗಿ ಮಾತನಾಡಿದ ಟ್ರಂಪ್, ಮಧ್ಯಪ್ರಾಚ್ಯದಲ್ಲಿ ದೊಡ್ಡ ಸಮಸ್ಯೆ ಇತ್ತು. ಇರಾನ್ ಪರಮಾಣು ಬಾಂಬ್‌ ತಯಾರಿಕೆಗೆ ಬಹಳ ಹತ್ತಿರವಾಗಿತ್ತು. ಈ ಸಮಸ್ಯೆಯನ್ನು ಈಗಲೇ ಕೊನೆಗಾಣಿಸೋಣ ಎಂಬ ಹಾದಿಯನ್ನು ನಾವು ಆರಿಸಿಕೊಂಡೆವು ಎಂದರು. ಈ ಮೂಲಕ ಯುದ್ಧದ ಸಂಪೂರ್ಣ ಕ್ರೆಡಿಟ್ ಮತ್ತು ಹೊಣೆಯನ್ನೂ ಪೀಟ್ ಹೆಗ್ಸೆತ್ ಮೇಲೆ ಹಾಕುವ ರಾಜತಾಂತ್ರಿಕ ನಡೆಯನ್ನು ಟ್ರಂಪ್ ತೋರಿದ್ದಾರೆ.

ಏಪ್ರಿಲ್ 9: ಯುದ್ಧಕ್ಕೆ ವಿರಾಮದ ದಿನಾಂಕ ಫಿಕ್ಸ್?

ಇಸ್ರೇಲಿ ಮಾಧ್ಯಮಗಳ ವರದಿಯ ಪ್ರಕಾರ, ಈ ವಿನಾಶಕಾರಿ ಯುದ್ಧವು ಏಪ್ರಿಲ್ 9 ರಂದು ಕೊನೆಗೊಳ್ಳುವ ಸಾಧ್ಯತೆಯಿದೆ. ಇದಕ್ಕೆ ಪೂರಕವಾಗಿ ಟ್ರಂಪ್ ಈಗಾಗಲೇ ಇರಾನ್‌ನ ಇಂಧನ ಸ್ಥಾವರಗಳ ಮೇಲೆ ಐದು ದಿನಗಳ ಕಾಲ ದಾಳಿ ನಡೆಸದಂತೆ ಮಿಲಿಟರಿಗೆ ಆದೇಶಿಸಿದ್ದಾರೆ.
ಈ ದಿನಾಂಕದ ಹಿಂದಿರುವ ರಹಸ್ಯವೇನು?
ಇಸ್ರೇಲ್ ಪ್ರೈಸ್: ಏಪ್ರಿಲ್ ತಿಂಗಳ ಕೊನೆಯಲ್ಲಿ ಟ್ರಂಪ್ ಅವರು ಇಸ್ರೇಲ್‌ಗೆ ಭೇಟಿ ನೀಡಿ ನ್ಯಾಷನಲ್ ಇಸ್ರೇಲ್ ಪ್ರೈಸ್ ಸ್ವೀಕರಿಸಲಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ: ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶಾಂತಿಯನ್ನು ಸ್ಥಾಪಿಸಿದ ಹರಿಕಾರನಾಗಿ ಟ್ರಂಪ್ ಮಿಂಚಲು ಈ ದಿನಾಂಕವನ್ನು ಆರಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ಇಸ್ಲಾಮಾಬಾದ್‌ನಲ್ಲಿ ರಹಸ್ಯ ಶಾಂತಿ ಮಾತುಕತೆ?

ಮೂಲಗಳ ಪ್ರಕಾರ, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಈ ವಾರ ಅಮೆರಿಕ ಮತ್ತು ಇರಾನ್ ನಡುವಿನ ಅತ್ಯಂತ ಪ್ರಮುಖ ಸಂಧಾನಕ್ಕೆ ವೇದಿಕೆಯಾಗಲಿದೆ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಖಾಲಿಬಾಫ್ ಈ ಸುದ್ದಿಯನ್ನು 'ಫೇಕ್ ನ್ಯೂಸ್' ಎಂದು ಕರೆದಿದ್ದರೂ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಧಾನದ ಪ್ರಕ್ರಿಯೆಗಳು ತೀವ್ರಗೊಂಡಿವೆ.

ಯುದ್ಧದ ಆರಂಭದ ಕುರಿತು ಇರುವ ಗೊಂದಲಗಳು

ಈ ಸಂಘರ್ಷ ಹೇಗೆ ಶುರುವಾಯಿತು ಎಂಬ ಬಗ್ಗೆ ಮೂರು ವಿಭಿನ್ನ ವಾದಗಳಿವೆ.
ಪರಮಾಣು ಭೀತಿ: ಇರಾನ್ ಪರಮಾಣು ಅಸ್ತ್ರ ಪಡೆಯುವುದನ್ನು ತಡೆಯಲು ಅಮೆರಿಕ ಈ ಹೆಜ್ಜೆ ಇರಿಸಿದೆ ಎಂಬುದು ಟ್ರಂಪ್ ವಾದವಾಗಿದೆ.
ಇಸ್ರೇಲ್ ತಂತ್ರ: ಇಸ್ರೇಲ್ ಈಗಾಗಲೇ ದಾಳಿಗೆ ಸಿದ್ಧವಾಗಿತ್ತು, ಅನಿವಾರ್ಯವಾಗಿ ಅಮೆರಿಕ ಇದರಲ್ಲಿ ಭಾಗಿಯಾಗಬೇಕಾಯಿತು ಎಂಬುದು ಇನ್ನೊಂದು ವಾದ.
ಮುಂಜಾಗ್ರತಾ ಕ್ರಮ: ದೊಡ್ಡ ಪ್ರಾದೇಶಿಕ ಯುದ್ಧವನ್ನು ತಪ್ಪಿಸಲು ಮೊದಲೇ ದಾಳಿ ನಡೆಸಲಾಗಿದೆ ಎಂಬ ಸಮರ್ಥನೆಯಾಗಿದೆ.

ಜಾಗತಿಕ ಪರಿಣಾಮ ಮತ್ತು ಆರ್ಥಿಕತೆ

25 ದಿನಗಳ ಈ ಯುದ್ಧವು ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ಹಾರ್ಮುಜ್ ಜಲಸಂಧಿಯ ದಿಗ್ಬಂಧನದಿಂದಾಗಿ ತೈಲ ಬೆಲೆಗಳು ಗಗನಕ್ಕೇರಿದ್ದು, ಸಗಟು ಮಾರುಕಟ್ಟೆಗಳಲ್ಲಿ ಸಂಚಲನ ಮೂಡಿದೆ. ಈಗ ಏಪ್ರಿಲ್ 9 ರ ಶಾಂತಿ ವಾರ್ತೆಯು ಮಾರುಕಟ್ಟೆಗಳಲ್ಲಿ ಸ್ವಲ್ಪ ಚೇತರಿಕೆ ತಂದಿದೆ,(ಏಜೆನ್ಸೀಸ್).