ತಂತಿಯಿಲ್ಲ, ಕೀಬೋರ್ಡ್ ಅಂತೂ ಇಲ್ವೇ ಇಲ್ಲ! ಕೈನಿಂದ ಮುಟ್ಟದೆಯೇ ಸಂಗೀತ ನುಡಿಸುವ ವಿಶ್ವದ ಅಪರೂಪದ ವಾದ್ಯವಿದು | Theremin  
ವಿದೇಶ

ತಂತಿಯಿಲ್ಲ, ಕೀಬೋರ್ಡ್ ಅಂತೂ ಇಲ್ವೇ ಇಲ್ಲ! ಕೈನಿಂದ ಮುಟ್ಟದೆಯೇ ಸಂಗೀತ ನುಡಿಸುವ ವಿಶ್ವದ ಅಪರೂಪದ ವಾದ್ಯವಿದು | Theremin

Theremin: ವಾದ್ಯ ಅಂದಾಕ್ಷಣ ನಮಗೆ ಮೊದಲಿಗೆ ನೆನಪಾಗುವುದೇ ತಬಲ, ವೀಣೆ, ಕೊಳಲು, ಗಿಟಾರ್​. ಅದರಲ್ಲೂ, ಇವುಗಳಿಂದ ಬರುವ ಇಂಪಾದ ಸಂಗೀತಕ್ಕೆ ಮಾನವ ಸ್ಪರ್ಶ ಬೇಕೇ ಬೇಕು. ಕೈಯಲ್ಲಿ ಹಿಡಿದು ನುಡಿಸುವುದು, ತಂತಿಗಳನ್ನು ಮೀಟುವುದು ಅಥವಾ ಕೀಬೋರ್ಡ್​ಗಳನ್ನು ಒತ್ತುವ ಮೂಲಕ ಒಂದೊಳ್ಳೆ ಸಂಗೀತವನ್ನು ಸೃಷ್ಟಿಸಲು ಮನುಷ್ಯನ ಅವಶ್ಯಕತೆ ತುಂಬಾ ಮುಖ್ಯ. ಇಲ್ಲದಿದ್ದರೆ, ಆ ವಾದ್ಯಗಳಿಗೆ ಅರ್ಥವೇ ಇಲ್ಲದಂತಾಗಿ ಬಿಡುತ್ತೆ. ಆದರೆ, ಇಲ್ಲೊಂದು ಹಳೆಯ ವಾದ್ಯ ಮಾತ್ರ ಮಾನವನ ಸ್ಪರ್ಶವೇ ಪಡೆಯದೇ ಮ್ಯೂಸಿಕ್​ ಕೊಡುವ ಸಾಮರ್ಥ್ಯವನ್ನು ಹೊಂದಿದೆ. ಅದುವೇ ಯಾವುದೇ ಆಧುನಿಕ ಟೆಕ್ನಾಲಜಿ ಇಲ್ಲದ 90ರ ದಶಕದಲ್ಲಿ.

ನಿಮಗೆ ಅನಿಸುತ್ತಾ? ಯಾವುದೇ ವಸ್ತುವನ್ನು ಮುಟ್ಟದೆಯೇ ಕೇವಲ ಕೈಗಳ ಚಲನೆಯಿಂದ ಸುಮಧುರ ಸಂಗೀತವನ್ನು ಸೃಷ್ಟಿಸಬಹುದು ಅಂತ? ಅಸಲಿಗೆ ಹೌದು. ಸಂಗೀತ ಲೋಕದಲ್ಲಿ ಇಂತಹದೊಂದು ವಿಶಿಷ್ಟ ವಾದ್ಯವಿದೆ. ಅದುವೇ 'ಥೆರೆಮಿನ್'. ಗಾಳಿಯಲ್ಲಿ ಕೈಗಳನ್ನು ಆಡಿಸುವ ಮೂಲಕವೇ ನಾದ ಹೊರಡಿಸುವ ಈ ಎಲೆಕ್ಟ್ರಾನಿಕ್ ವಾದ್ಯ ತನ್ನ ವಿಭಿನ್ನ ಧ್ವನಿ ಮತ್ತು ನುಡಿಸುವ ಶೈಲಿಯಿಂದ ಸಂಗೀತ ಪ್ರೇಮಿಗಳ ಗಮನ ಸೆಳೆದಿದೆ. ಅಚ್ಚರಿ ಎಂದರೆ ಖ್ಯಾತಿ ಗಳಿಸಿದ್ದರೂ ಇಂದಿಗೂ ಎಷ್ಟೋ ಮಂದಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ.

1920ರಲ್ಲಿ ಆವಿಷ್ಕಾರ

ಥೆರೆಮಿನ್ ವಾದ್ಯವನ್ನು 1920ರಲ್ಲಿ ರಷ್ಯಾದ ಭೌತಶಾಸ್ತ್ರಜ್ಞ ಲೆವ್ ಸೆರ್ಗೆಯೆವಿಚ್ ಟರ್ಮನ್ (ಲಿಯಾನ್ ಥೆರೆಮಿನ್) ಸೃಷ್ಟಿಸಿದರು. ಎಲೆಕ್ಟ್ರಾನಿಕ್ ಸಾಧನಗಳ ಮೇಲೆ ಪ್ರಯೋಗ ನಡೆಸುತ್ತಿದ್ದ ಸಂದರ್ಭದಲ್ಲಿ, ದೈಹಿಕ ಸ್ಪರ್ಶವಿಲ್ಲದೆಯೇ ಧ್ವನಿಯ ಏರಿಳಿತವನ್ನು ಕಂಟ್ರೋಲ್​ ಮಾಡಬಹುದಾದ ತಂತ್ರಜ್ಞಾನವನ್ನು ಅವರು ಕಂಡುಕೊಂಡರು. ಇದರ ಫಲವಾಗಿ ಮೊದಲ ಥೆರೆಮಿನ್ ರೂಪುಗೊಂಡಿತು. ಆರಂಭದಲ್ಲಿ ಇದನ್ನು 'ಈಥರ್‌ಫೋನ್' ಎಂದು ಕರೆದಿದ್ದೇ ಆದರೂ ನಂತರದಲ್ಲಿ ಹೆಸರು ಬದಲಾಯಿಸಿದರು.

ಮುಟ್ಟದೆಯೇ ನುಡಿಯುವುದು ಹೇಗೆ?

ಥೆರೆಮಿನ್‌ನಲ್ಲಿ ಎರಡು ಆ್ಯಂಟೆನಾಗಳಿರುತ್ತವೆ. ಒಂದು ಧ್ವನಿಯ ಸ್ವರ ಅಥವಾ ಪಿಚ್‌ ನಿಯಂತ್ರಿಸಿದರೆ, ಮತ್ತೊಂದು ಧ್ವನಿಯ ಪ್ರಮಾಣ ಅಥವಾ ವಾಲ್ಯೂಮ್‌ ಅನ್ನು ಕಂಟ್ರೋಲ್​ ಮಾಡುತ್ತದೆ. ವಾದ್ಯವನ್ನು ನುಡಿಸುವವರು ಆ್ಯಂಟೆನಾಗಳ ಸುತ್ತ ಕೈಗಳನ್ನು ಚಲಿಸುವ ಮೂಲಕ ವಿಭಿನ್ನ ಸ್ವರಗಳನ್ನು ಸೃಷ್ಟಿಸುತ್ತಾರೆ. ಕೈಗಳ ಸ್ಥಾನ ಮತ್ತು ಚಲನೆಯಲ್ಲಿನ ಸಣ್ಣ ಬದಲಾವಣೆಯೂ ಧ್ವನಿಯಲ್ಲಿ ವ್ಯತ್ಯಾಸ ಉಂಟುಮಾಡುತ್ತದೆ.

ಈ ವಾದ್ಯವನ್ನು ನುಡಿಸಲು ಹೆಚ್ಚಿನ ಏಕಾಗ್ರತೆ, ಕೈಗಳ ಮೇಲಿನ ನಿಯಂತ್ರಣ ಮತ್ತು ಸಾಕಷ್ಟು ಅಭ್ಯಾಸದ ಅಗತ್ಯವಿದೆ. ಹೀಗಾಗಿ, ಥೆರೆಮಿನ್ ನೋಡುವುದಕ್ಕೆ ಸರಳವಾಗಿ ಕಂಡರೂ, ಅದನ್ನು ಪರಿಣತಿಯಿಂದ ನುಡಿಸುವುದು ಅಷ್ಟು ಸುಲಭದ ಮಾತಲ್ಲ ಎನ್ನುತ್ತಾರೆ ಅನೇಕ ಸಂಗೀತ ಪಂಡಿತರು.

ಸಿನಿಮಾದಲ್ಲೂ ಬಳಕೆ

ಥೆರೆಮಿನ್‌ನ ವಿಶಿಷ್ಟವಾದ, ಕೆಲವೊಮ್ಮೆ ಅಲೌಕಿಕ ಅನುಭವ ನೀಡುವ ವಾದ್ಯವಾದರೂ ಇದನ್ನು ಹಲವು ಕ್ಷೇತ್ರಗಳಲ್ಲಿ ಬಳಸಿಕೊಳ್ಳಲಾಗಿದೆ. ಕೆಲವು ಶಾಸ್ತ್ರೀಯ ಸಂಗೀತ ಸಂಯೋಜನೆಗಳು ಮತ್ತು ಪ್ರದರ್ಶನಗಳಲ್ಲಿ ಈ ವಾದ್ಯಕ್ಕೆ ಮಹತ್ವದ ಸ್ಥಾನ ದೊರೆತಿದೆ. ಸೈನ್ಸ್​-ಫಿಕ್ಷನ್ ಹಾಗೂ ಭಯಾನಕ ಚಿತ್ರಗಳ ಬಿಜಿಎಂಗೆ ಇದರಿಂದ ಹೊರಬರುವ ವಿಚಿತ್ರ ನಾದವನ್ನು ಬಳಸಲಾಗಿದೆ. ಇನ್ನು, ಹೊಸ ಬಗೆಯ ಧ್ವನಿಗಳನ್ನು ಪ್ರಯೋಗಿಸುವ ಸಂಗೀತಗಾರರಿಗೆ ಥೆರೆಮಿನ್ ವಿಶೇಷ ಆಕರ್ಷಣೆಯಾಗಿದೆ.

ಪ್ರಸಿದ್ಧ ಥೆರೆಮಿನ್ ಕಲಾವಿದರು

ಥೆರೆಮಿನ್ ವಾದ್ಯವನ್ನು ಜನಪ್ರಿಯಗೊಳಿಸುವಲ್ಲಿ ಹಲವು ಕಲಾವಿದರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದರ ಆವಿಷ್ಕಾರಕ ಲಿಯಾನ್ ಥೆರೆಮಿನ್ ಸ್ವತಃ ಪರಿಣತ ವಾದಕರಾಗಿದ್ದು, ಕ್ಲಾರಾ ರಾಕ್‌ಮೋರ್ ಅವರು ತಾಂತ್ರಿಕ ನೈಪುಣ್ಯ ಮತ್ತು ಭಾವಪೂರ್ಣ ವಾದ್ಯ ನುಡಿಸುವುದಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಆಧುನಿಕ ಕಾಲದ ಪ್ರಮುಖ ಥೆರೆಮಿನ್ ಕಲಾವಿದರಲ್ಲಿ ಲಿಡಿಯಾ ಕವಿನಾ ಕೂಡ ಒಬ್ಬರು. ಅವರು ಲಿಯಾನ್ ಥೆರೆಮಿನ್ ಅವರ ಮೊಮ್ಮಗಳು ಎಂಬುದು ವಿಶೇಷ.

ಒಟ್ಟಿನಲ್ಲಿ, ಥೆರೆಮಿನ್ ಕೇವಲ ಒಂದು ಸಂಗೀತ ವಾದ್ಯವಲ್ಲ. ವಿಜ್ಞಾನ ಮತ್ತು ಕಲೆಯ ಸಮ್ಮಿಲನಕ್ಕೆ ಒಂದು ಅದ್ಭುತ ಉದಾಹರಣೆ ಎನ್ನಲಾಗಿದೆ. ಯಾವುದೇ ಸ್ಪರ್ಶವಿಲ್ಲದೆ ಗಾಳಿಯಲ್ಲಿನ ಕೈಗಳ ಚಲನೆಯಿಂದಲೇ ಸಂಗೀತ ಸೃಷ್ಟಿಸುವ ಇದರ ವೈಶಿಷ್ಟ್ಯ, ವಿಶೇಷತೆ ಇಂದಿಗೂ ಜಗತ್ತಿನ ಸಹಸ್ರಾರು ಸಂಗೀತ ಪ್ರೇಮಿಗಳನ್ನು ಬೆರಗುಗೊಳಿಸುತ್ತಿದೆ,(ಏಜೆನ್ಸೀಸ್).