Worlds Oldest Men: ಜಗತ್ತಿನಲ್ಲಿ ಬಹಳ ಅಪರೂಪದಲ್ಲೇ ಅಪರೂಪದ ಘಟನೆ ಇದು ಎಂದರೆ ಖಂಡಿತ ತಪ್ಪಾಗಲಾರದು. ಕಾರಣ, ಶತಾಯುಷಿ ಪಟ್ಟವನ್ನೂ ಮೀರಿ ಜೀವನ ಸಾಗಿಸುತ್ತಿರುವ ಪ್ರಪಂಚದ ಎರಡೂ ಹಿರಿಯ ಜೀವಗಳು ಒಂದೇ ದಿನ ತಮ್ಮ ಜನ್ಮದಿನವನ್ನು ಪರಸ್ಪರ ಶುಭಕೋರುವ ಮೂಲಕ ಸಂಭ್ರಮಿಸಿಕೊಂಡಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ.
ದೇಹಕ್ಕೆ ಎಷ್ಟು ವಯಸ್ಸಾದರೇನು? ನಮ್ಮ ಸ್ನೇಹಕ್ಕಲ್ಲ ಎಂಬುದನ್ನು ಈ ವೃದ್ಧರು ಪರಸ್ಪರ ಜನ್ಮದಿನದ ಶುಭಾಶಯ ತಿಳಿಸುವ ಮೂಲಕ ಸಾಬೀತುಪಡಿಸಿದ್ದಾರೆ. ಆಸ್ಟ್ರೇಲಿಯಾದ ಕೆನ್ ವೀಕ್ಸ್ (113) ಮತ್ತು ಬ್ರೆಜಿಲ್‌ನ ಜೋವಾವೊ ಮರಿನ್ಹೋ ನೆಟೊ (114) ಇವರಿಬ್ಬರೂ ಒಂದು ವರ್ಷದ ಅಂತರದಲ್ಲಿ ಜನಿಸಿದ್ದಾರೆ. ನ್ಯೂ ಸೌತ್ ವೇಲ್ಸ್‌ನಲ್ಲಿ ವಾಸವಿರುವ ಕೆನ್ ಅವರಿಗೆ 113 ವರ್ಷ ತುಂಬಿದ್ದರೆ, ಜೋವಾವೊಗೆ 114 ವರ್ಷ ವಯಸ್ಸಾಗಿದೆ.
ಜಗತ್ತಿನ ಅತ್ಯಂತ ಹಿರಿಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಎಥೆಲ್ ಕ್ಯಾಟರ್‌ಹ್ಯಾಮ್ (ಯುಕೆ) ಎಂಬ ಮಹಿಳೆಗೆ ಈಗ 117 ವರ್ಷ. ಇತ್ತೀಚೆಗಷ್ಟೇ ಇವರೂ ಸಹ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದರು. ಇದಾದ ಕೆಲವೇ ತಿಂಗಳಲ್ಲಿ ಜೋವಾವೊ ಮತ್ತು ಕೆನ್ ಜೋಡಿಗೆ ಈ ವಿಶೇಷ ದಿನ ಮತ್ತೊಮ್ಮೆ ಸಿಕ್ಕಿರುವುದು ಸದ್ಯ ಕುಟುಂಬಸ್ಥರಲ್ಲಿ ಮತ್ತು ಸ್ನೇಹಿತರಲ್ಲಿ ಅತೀವ ಖುಷಿ ತಂದಿದೆ.
ಜೋವಾವೋ ಸಾರ್ವಕಾಲಿಕ ಅತ್ಯಂತ ಹಿರಿಯ ವ್ಯಕ್ತಿಗಳ ಪಟ್ಟಿಯಲ್ಲಿ 236ನೇ ಸ್ಥಾನದಲ್ಲಿದ್ದಾರೆ. ಅತ್ಯಂತ ಹಿರಿಯ ಪುರುಷನಾಗಿ ಅವರ ಅಪರೂಪದ ಸಾಧನೆ ಈಗ ಒಂದು ವರ್ಷ ಹಾಗೂ 314 ದಿನಗಳನ್ನು ಪೂರೈಸಿದ್ದು, ಇವರ ಹೆಸರು ಗಿನ್ನಿಸ್ ದಾಖಲೆಯಲ್ಲೂ ಸೇರಿದೆ. ಕಳೆದ 13 ವರ್ಷಗಳಲ್ಲಿಯೇ ಇದು ಎರಡನೇ ಅತ್ಯಂತ ದೀರ್ಘಾವಧಿಯ ವಯಸ್ಸಿನ ದಾಖಲೆ ಎನ್ನಲಾಗಿದೆ. ಪ್ರಸ್ತುತ, ವಿಶ್ವದ 10ನೇ ಅತ್ಯಂತ ಹಿರಿಯ ವ್ಯಕ್ತಿಯಾಗಿರುವ ಅವರು, ಎಥೆಲ್ ಸೇರಿದಂತೆ ಒಟ್ಟು 8 ಇತರ ಮಹಿಳೆಯರ ಬಳಿಕ ಈ ಸ್ಥಾನವನ್ನು ಅಲಂಕರಿಸಿದ್ದಾರೆ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).