ಇದು ಕೇವಲ ಇಬ್ಬರ ನಡುವಿನ ಸಂಘರ್ಷವಲ್ಲ ಇದು ಮೂರನೇ ವಿಶ್ವಯುದ್ಧ ಎಂದ ಸಾಜಿದ್ ತರಾರ್ (Sajid Tarar) 
ವಿದೇಶ

ಮೂರನೇ ಮಹಾಯುದ್ಧ ಈಗಾಗಲೇ ಶುರುವಾಗಿದೆ: ಪಾಕಿಸ್ತಾನದ ರಾಜಕೀಯ ತಜ್ಞ ಸಾಜಿದ್ ತರಾರ್ ಸ್ಪೋಟಕ ಹೇಳಿಕೆ! Sajid Tarar

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಂದುವರೆದ ಸಂಘರ್ಷ
  • ಇದು ಕೇವಲ ಇಬ್ಬರ ಸಂಘರ್ಷವಲ್ಲ ಇದು ಮೂರನೇ ವಿಶ್ವಯುದ್ಧ ಎಂದ ಸಾಜಿದ್ ತರಾರ್
  • ಇದರಿಂದ ರಷ್ಯಾ ಮತ್ತು ಪುಟಿನ್​ ಬಹಳ ಲಾಭ ಪಡೆಯಲಿದ್ದಾರೆ : ಸಾಜಿದ್ ತರಾರ್
ಅಮೆರಿಕ: ಜಗತ್ತಿನ ಕಣ್ಣು ಈಗ ಮಧ್ಯಪ್ರಾಚ್ಯದತ್ತ ನೆಟ್ಟಿದೆ. ಇಸ್ರೇಲ್, ಇರಾನ್ ಮತ್ತು ಅಮೆರಿಕದ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು, ಇದು ಮೂರನೇ ಮಹಾಯುದ್ಧದ ಮುನ್ಸೂಚನೆ ಎಂದು ಪಾಕಿಸ್ತಾನಿ ತಜ್ಞ ಸಾಜಿದ್ ತರಾರ್ (Sajid Tarar) ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇದು ಕೇವಲ ಯುದ್ಧವಲ್ಲ, ಮೂರನೇ ಮಹಾಯುದ್ಧ!

ಸಾಜಿದ್ ತರಾರ್ ಅವರ ಪ್ರಕಾರ, ಯಾವುದೇ ಒಂದು ಸಂಘರ್ಷದಲ್ಲಿ ಎರಡು, ಮೂರು ಅಥವಾ ಅದಕ್ಕಿಂತ ಹೆಚ್ಚು ದೇಶಗಳು ನೇರವಾಗಿ ಭಾಗಿಯಾದರೆ, ಅದನ್ನು ವಿಶ್ವ ಯುದ್ಧ ಎಂದೇ ಪರಿಗಣಿಸಬೇಕು. ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕದಂತಹ ಶಕ್ತಿಗಳು ಮುಖಾಮುಖಿಯಾಗಿರುವುದು ಈಗಿನ ಜಗತ್ತಿನ ಅತಿದೊಡ್ಡ ಅಪಾಯ ಎಂದು ಹೇಳಿದ್ದಾರೆ.
ಇಸ್ರೇಲ್ ಮತ್ತು ಲೆಬನಾನ್ ನಡುವಿನ ಯುದ್ಧ ಈಗ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಆದರೆ, ಇಸ್ರೇಲ್ ಕಡೆಯಿಂದ ಬರುತ್ತಿರುವ ಸುದ್ದಿಗಳ ಮೇಲೆ ಸಂಪೂರ್ಣ ನಿಷೇಧವಿದೆ. ಅಲ್ಲಿ ಏನಾಗುತ್ತಿದೆ ಎಂಬುದು ಜಗತ್ತಿಗೆ ಸರಿಯಾಗಿ ತಿಳಿಯುತ್ತಿಲ್ಲ. ಕೇವಲ ಟೆಹ್ರಾನ್‌ನಿಂದ ಬರುವ ಸುದ್ದಿಗಳು ಅಥವಾ ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗಳ ದೃಶ್ಯಗಳನ್ನು ಮಾತ್ರ ಮಾಧ್ಯಮಗಳು ತೋರಿಸುತ್ತಿವೆ ಎಂದು ತರಾರ್ ದೂರಿದ್ದಾರೆ.

ತೈಲದಿಂದ ನೀರಿನವರೆಗೂ ಬದಲಾದ ಯುದ್ಧದ ಸ್ವರೂಪ

ಈ ಯುದ್ಧ ಕೇವಲ ತೈಲಕ್ಕಾಗಿ ಅಷ್ಟೇ ಅಲ್ಲ, ಈಗ ನೀರಿನ ಮೂಲಗಳಿಗೂ ವಿಸ್ತರಿಸುತ್ತಿದೆ ಎಂಬುದು ತರಾರ್ ಅವರ ಮಾತಾಗಿದ್ದು, ಇರಾನ್ ಈಗ ಗಲ್ಫ್ ರಾಷ್ಟ್ರಗಳ ನೀರಿನ ಶುದ್ಧೀಕರಣ ಘಟಕಗಳನ್ನೇ ಟಾರ್ಗೆಟ್ ಮಾಡಲಿದೆ. ಒಂದು ವೇಳೆ ತೈಲ ಸಂಸ್ಕರಣಾಗಾರಗಳ ಜೊತೆಗೆ ನೀರಿನ ಘಟಕಗಳ ಮೇಲೂ ದಾಳಿ ನಡೆದರೆ, ಅದು ಆಧುನಿಕ ಯುದ್ಧಕ್ಕೆ ಹೊಸ ತಿರುವು ನೀಡುತ್ತದೆ. ಇದು ನಡೆದರೆ, ಮುಂದಿನ ದಿನಗಳಲ್ಲಿ ಯುದ್ಧಗಳು ತೈಲಕ್ಕಾಗಿ ಅಲ್ಲ, ಕುಡಿಯುವ ನೀರಿಗಾಗಿ ನಡೆಯಲಿವೆ, ಎಂದು ಅವರು ಎಚ್ಚರಿಸಿದ್ದಾರೆ.

ಇದರಿಂದ ರಷ್ಯಾಗೆ ಲಾಭವೇ?

ಹಾರ್ಮುಜ್ ಜಲಸಂಧಿ ಬಂದ್ ಆದರೆ ಅಥವಾ ಸೌದಿ ಅರೇಬಿಯಾದ ಸಂಸ್ಕರಣಾಗಾರಗಳ ಮೇಲೆ ದಾಳಿ ನಡೆದರೆ, ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ಭಾರಿ ಕೊರತೆ ಉಂಟಾಗುತ್ತದೆ. ಈ ಕೊರತೆಯಿಂದ ದೊಡ್ಡ ಮಟ್ಟದ ಲಾಭ ಪಡೆಯುವುದು ರಷ್ಯಾ ಎಂದು ತರಾರ್ ವಿಶ್ಲೇಷಿಸುತ್ತಾರೆ. ರಷ್ಯಾ ಮತ್ತು ಚೀನಾ ತಂತ್ರಜ್ಞಾನದ ಮೂಲಕ ಇರಾನ್‌ಗೆ ಬೆಂಬಲ ನೀಡುತ್ತಿವೆ ಎಂಬ ಗುಮಾನಿ ವಾಷಿಂಗ್ಟನ್ ವಲಯದಲ್ಲಿದೆ. ತೈಲ ಬೆಲೆ ಗಗನಕ್ಕೇರಿದರೆ ರಷ್ಯಾ ಭಾರಿ ಹಣ ಗಳಿಸುತ್ತದೆ, ಇದು ಯುರೋಪಿನ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಲಿದೆ ಎನ್ನುತ್ತಾರೆ ತರಾರ್.

ಪುಟಿನ್ ಅವರ ಮುಂದಿನ ಟಾರ್ಗೆಟ್ ಯಾರು?

ಒಂದು ಕಾಲದಲ್ಲಿ ಅಮೆರಿಕದ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾ, ಇರಾನ್, ಕ್ಯೂಬಾದಂತಹ ದೇಶಗಳನ್ನು ಗುರಿಯಾಗಿಸಿಕೊಂಡಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ರಷ್ಯಾದ ಶಕ್ತಿ ಬೆಳೆಯುತ್ತಿದ್ದು, ಪುಟಿನ್ ಉಕ್ರೇನ್ ನಂತರ ಯಾವ ದೇಶದ ಮೇಲೆ ಕಣ್ಣಿಟ್ಟಿದ್ದಾರೆ ಎಂಬುದು ಈಗ ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ,(ಏಜನ್ಸೀಸ್​).