ಟ್ರೆಡ್‌ಮಿಲ್ ಮೇಲೆ ವ್ಯಾಯಾಮ ಮಾಡುತ್ತಿದ್ದ ಯುವತಿ ಜಿಮ್‌ನ ಮೂರನೇ ಮಹಡಿಯ ಕಿಟಕಿಯಿಂದ ಹೊರಬಿದ್ದ ದೃಶ್ಯ 
ವಿದೇಶ

ವರ್ಕೌಟ್ ತಂದ ಆಪತ್ತು: ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಯುವತಿ ದಾರುಣ ಸಾ*ವು; ವಿಡಿಯೋ ವೈರಲ್​! Treadmill Accident

ಪೊಂಟಿಯಾನಕ್: ಇಂಡೋನೇಷ್ಯಾದ ಜಿಮ್ ಒಂದರಲ್ಲಿ ಟ್ರೆಡ್‌ಮಿಲ್ ಮೇಲೆ ವ್ಯಾಯಾಮ ಮಾಡುತ್ತಿದ್ದ 22 ವರ್ಷದ ಯುವತಿಯೊಬ್ಬಳು, ಸಮತೋಲನ ಕಳೆದುಕೊಂಡು ಮೂರನೇ ಮಹಡಿಯಿಂದ ಕೆಳಗೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಜಿಮ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ.

ಅಷ್ಟಕ್ಕೂ ನಡೆದಿದ್ದೇನು?

ಈ ದುರಂತ ಘಟನೆ ಇಂಡೋನೇಷ್ಯಾದ ಪೊಂಟಿಯಾನಕ್ ಎಂಬಲ್ಲಿ ನಡೆದಿದೆ. 22 ವರ್ಷದ ಯುವತಿಯೊಬ್ಬಳು ಎಂದಿನಂತೆ ವರ್ಕೌಟ್ ಮಾಡಲು ಜಿಮ್‌ಗೆ ತೆರಳಿದ್ದರು. ಜಿಮ್‌ನ ಮೂರನೇ ಮಹಡಿಯಲ್ಲಿ ಇಡಲಾಗಿದ್ದ ಟ್ರೆಡ್‌ಮಿಲ್ ಮೇಲೆ ಆಕೆ ಓಡುತ್ತಾ ವ್ಯಾಯಾಮ ಮಾಡುತ್ತಿದ್ದರು. ಸ್ವಲ್ಪ ಸಮಯದ ನಂತರ, ಬೆವರು ಒರೆಸಿಕೊಳ್ಳಲು ಆಕೆ ಟವೆಲ್ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಆದರೆ, ಈ ವೇಳೆ ಟ್ರೆಡ್‌ಮಿಲ್ ವೇಗವಾಗಿ ಚಲಿಸುತ್ತಲೇ ಇತ್ತು. ಟವೆಲ್‌ನಿಂದ ಮುಖ ಒರೆಸಿಕೊಳ್ಳುವ ಭರದಲ್ಲಿ ಯುವತಿಗೆ ಟ್ರೆಡ್‌ಮಿಲ್ ವೇಗಕ್ಕೆ ತಕ್ಕಂತೆ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಕ್ಷಣಾರ್ಧದಲ್ಲಿ ಕಾಲು ಜಾರಿದ ಆಕೆ, ಚಲಿಸುತ್ತಿದ್ದ ಟ್ರೆಡ್‌ಮಿಲ್‌ನಿಂದ ಹಿಮ್ಮುಖವಾಗಿ ಎಸೆಯಲ್ಪಟ್ಟಿದ್ದಾರೆ.

ದುರದೃಷ್ಟವಶಾತ್, ಟ್ರೆಡ್‌ಮಿಲ್‌ನ ಹಿಂಭಾಗದಲ್ಲೇ ಇದ್ದ ಕಿಟಕಿ ತೆರೆದಿತ್ತು. ನಿಯಂತ್ರಣ ಕಳೆದುಕೊಂಡ ಯುವತಿ ನೇರವಾಗಿ ಆ ತೆರೆದ ಕಿಟಕಿಯ ಮೂಲಕ ಮೂರನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ಕೊನೆಯ ಕ್ಷಣಗಳು!

ಜಿಮ್ ಒಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದುರಂತ ಸೆರೆಯಾಗಿದೆ. ವಿಡಿಯೋದಲ್ಲಿ ಯುವತಿ ಆರಾಮವಾಗಿ ಟ್ರೆಡ್‌ಮಿಲ್ ಮೇಲೆ ವರ್ಕೌಟ್ ಮಾಡುತ್ತಿರುವುದು ಕಾಣಿಸುತ್ತದೆ. ಆದರೆ, ಮುಖ ಒರೆಸಿಕೊಳ್ಳಲು ಹೋಗಿ ಹಿಂದಕ್ಕೆ ತೂರಾಡಿದ ಆಕೆ, ಕಿಟಕಿಯ ಸರಳುಗಳನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗದೆ ಕೆಳಗೆ ಬೀಳುವ ಭಯಾನಕ ದೃಶ್ಯ ದಾಖಲಾಗಿದೆ.

ಆಸ್ಪತ್ರೆಗೆ ಸಾಗಿಸಿದರೂ ಉಳಿಯಲಿಲ್ಲ ಜೀವ!

ಮೂರನೇ ಮಹಡಿಯಿಂದ ನೇರವಾಗಿ ಕೆಳಗಿದ್ದ ಕಾಂಕ್ರೀಟ್ ನೆಲದ ಮೇಲೆ ಬಿದ್ದ ಪರಿಣಾಮ ಯುವತಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಘಟನೆ ನಡೆದ ತಕ್ಷಣ ಜಿಮ್ ಸಿಬ್ಬಂದಿ ಹಾಗೂ ಸುತ್ತಮುತ್ತಲಿದ್ದವರು ಆಕೆಯ ನೆರವಿಗೆ ಧಾವಿಸಿದ್ದಾರೆ.

ತೀವ್ರ ರಕ್ತಸ್ರಾವವಾಗುತ್ತಿದ್ದ ಆಕೆಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ವೈದ್ಯರ ಸತತ ಪ್ರಯತ್ನದ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಕೊನೆಯುಸಿರೆಳೆದಿದ್ದಾರೆ. 2024 ರಲ್ಲಿ ನಡೆದ ಈ ಘಟನೆಯ ವಿಡಿಯೋ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜಿಮ್ ಮಾಲೀಕರ ನಿರ್ಲಕ್ಷ್ಯದ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

ಮೂರನೇ ಮಹಡಿಯಲ್ಲಿ ಟ್ರೆಡ್‌ಮಿಲ್ ಇಡುವಾಗ ಹಿಂಭಾಗದಲ್ಲಿ ತೆರೆದ ಕಿಟಕಿ ಇಟ್ಟಿದ್ದು ಎಷ್ಟು ಸರಿ? ಕಿಟಕಿಗೆ ಕನಿಷ್ಠ ಗ್ರಿಲ್ ಕೂಡ ಅಳವಡಿಸದೆ ಇರುವುದು ಈ ಸಾವಿಗೆ ಕಾರಣ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ, (ಏಜೆನ್ಸೀಸ್​).