ಈ ವರ್ಷವೇ ಪುಟಿನ್​ಗೆ ಕೊನೇ? ರಷ್ಯಾ ಅಧ್ಯಕ್ಷನ ಬಗ್ಗೆ​ ಬಾಬಾ ವಾಂಗಾ ನುಡಿದ ಸ್ಫೋಟಕ ಭವಿಷ್ಯ ಏನು? | Baba Vanga  
ವಿದೇಶ

ಈ ವರ್ಷವೇ ಪುಟಿನ್​ಗೆ ಕೊನೇ? ರಷ್ಯಾ ಅಧ್ಯಕ್ಷನ ಬಗ್ಗೆ​ ಬಾಬಾ ವಾಂಗಾ ನುಡಿದ ಸ್ಫೋಟಕ ಭವಿಷ್ಯ ವೈರಲ್​ | Baba Vanga

ಇತ್ತೀಚೆಗೆ ನೆಟ್ಟಿಗರು ಉಲ್ಲೇಖಿಸಿರುವ ಮಾಹಿತಿಯ ಪ್ರಕಾರ, ಈ ವರ್ಷದ ಕೊನೆಯಲ್ಲಿ ರಷ್ಯಾದ ಅಧ್ಯಕ್ಷ ಸ್ಥಾನ ಮತ್ತೊಬ್ಬರಿಗೆ ಹೋಗುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ.

Baba Vanga: ತಮ್ಮ ಭವಿಷ್ಯವಾಣಿಗಳಿಂದಲೇ ವಿಶ್ವವಿಖ್ಯಾತಿಯಾಗಿರುವ ಬಾಬಾ ವಂಗಾ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪ್ರಸಕ್ತ 2026ನೇ ವರ್ಷಕ್ಕೆ ಸಂಬಂಧಿಸಿದಂತೆ ಅವರು ಹಿಂದೆಯೇ ನುಡಿದಿದ್ದ ಕೆಲವು ಭಯಾನಕ ಭವಿಷ್ಯವಾಣಿಗಳು ಮತ್ತು ಮುನ್ಸೂಚನೆಗಳು ಇದೀಗ ಜಾಗತಿಕ ಮಟ್ಟದಲ್ಲಿ ಹೊಸ ಆತಂಕ ಹಾಗೂ ತೀವ್ರ ಕುತೂಹಲಕ್ಕೆ ಕಾರಣವಾಗಿವೆ. ಆ ಪೈಕಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಅವರ ನಾಯಕತ್ವವೂ ಒಂದು.

ಡಯಾನಾ ರಾಜಕುಮಾರಿಯ ಸಾವು ಹಾಗೂ ಕೋವಿಡ್-19 ಸಾಂಕ್ರಾಮಿಕ ಸೇರಿದಂತೆ ಜಾಗತಿಕ ಮಟ್ಟದ ಹಲವು ಪ್ರಮುಖ ಘಟನೆಗಳನ್ನು ನಿಖರವಾಗಿ ಊಹಿಸಿದ್ದ ಕೀರ್ತಿ ಬಾಬಾ ವಂಗಾ ಅವರ ಭವಿಷ್ಯವಾಣಿಗೆ ಇದೆ. ಇದೇ ಕಾರಣಕ್ಕೆ ಮತ್ತೊಮ್ಮೆ ಅವರ ಭವಿಷ್ಯವಾಣಿಗಳು ಮುನ್ನೆಲೆಗೆ ಬಂದಿವೆ ಹಾಗೂ ಆಗಾಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತವೆ. ಇತ್ತೀಚೆಗೆ ನೆಟ್ಟಿಗರು ಉಲ್ಲೇಖಿಸಿರುವ ಮಾಹಿತಿಯ ಪ್ರಕಾರ, ಈ ವರ್ಷದ ಕೊನೆಯಲ್ಲಿ ರಷ್ಯಾದ ಅಧ್ಯಕ್ಷ ಸ್ಥಾನ ಮತ್ತೊಬ್ಬರಿಗೆ ಹೋಗುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ.

ಈ ವರ್ಷ ಮುಗಿಯುವುದರೊಳಗೆ ಮೂರನೇ ಮಹಾಯುದ್ಧ ಸ್ಫೋಟಗೊಳ್ಳುತ್ತದೆ ಮತ್ತು ರಷ್ಯಾಕ್ಕೆ ಹೊಸ ಅಧ್ಯಕ್ಷನ ಆಗಮನವಾಗಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾಗಿ ವರದಿಗಳು ಉಲ್ಲೇಖಿಸಿವೆ. ಹಾಗೆ ನೋಡುವುದಾದರೆ, ವ್ಲಾಡಿಮಿರ್​ ಪುಟಿನ್ ಅವರ 26 ವರ್ಷಗಳ ಆಡಳಿತ ಕೊನೆಗೊಳ್ಳಲಿದೆ ಎಂದೇ ಅರ್ಥ. ವಂಗಾ ಅವರ ಸ್ಫೋಟಕ ಭವಿಷ್ಯವಾಣಿಗಳನ್ನು ನಂಬುವವರಲ್ಲಿ ಈ ವಿಷಯಗಳು ತೀವ್ರ ಕುತೂಹಲ ಕೆರಳಿಸಿದೆ.

ಉಕ್ರೇನ್​ ಜತೆ ಮುಗಿಯದ ಯುದ್ಧ

ಮತ್ತೊಂದೆಡೆ, ವರ್ಷಗಳಿಂದ ಉಕ್ರೇನ್ ವಿರುದ್ಧ ಯುದ್ಧ ಸಾರುತ್ತಿರುವ ರಷ್ಯಾ ಅಧ್ಯಕ್ಷ ಪುಟಿನ್​, ಯಾವುದೇ ಕಾರಣಕ್ಕೂ ನಾವು ಬಗ್ಗೋದಿಲ್ಲ ಎಂಬ ಮಾತನ್ನು ಆಗಾಗ್ಗೆ ತಮ್ಮ ದಾಳಿಯಿಂದ ಸಾಬೀತುಪಡಿಸುತ್ತಲೇ ಇದ್ದಾರೆ. ಈ ಮಧ್ಯೆ, ಉಕ್ರೇನ್​ಗೆ ಬೆಂಬಲಿಸುವ ಬ್ರಿಟನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳ ದಾಳಿ ಕೈಗೊಳ್ಳುವುದಾಗಿ ಪುಟಿನ್ ಖಡಕ್​ ಎಚ್ಚರಿಕೆ ನೀಡಿದ್ದಾರೆ. ಇದೆಲ್ಲವೂ, ಮುಂದೊಂದು ದಿನ ಪುಟಿನ್​ ಅಧಿಕಾರವನ್ನು ಕಸಿಯುವ ಎಲ್ಲ ಸಾಧ್ಯತೆಗಳಿವೆ ಎಂಬುದನ್ನು ಪರೋಕ್ಷವಾಗಿ ಸೂಚಿಸುತ್ತಿದೆ ಎಂಬುದರಲ್ಲಿ ಅನುಮಾನವೇ ಬೇಡ.

ಯಾರೀ ಬಾಬಾ ವಂಗಾ?

ವರದಿಗಳ ಪ್ರಕಾರ, ಬಾಬಾ ವಂಗಾ ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

ಅನೇಕ ಭವಿಷ್ಯಗಳು ನಿಜವಾಗಿವೆ

ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು…ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್​ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ.

2026ರ ಇನ್ನಿತರ ಭವಿಷ್ಯವಾಣಿಗಳು

ಪ್ರಸ್ತುತ ನಡೆಯುತ್ತಿರುವ ಯುದ್ಧದಿಂದಾಗಿ ಬಾಬಾ ವಂಗಾರ ಇನ್ನುಳಿದ 2026ರ ಭವಿಷ್ಯವಾಣಿಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದೆ. ಬಾಬಾ ವಂಗಾ ಹೇಳಿದಂತೆ ಈ ವರ್ಷ ರಷ್ಯಾದಲ್ಲಿ ಹೊಸ ನಾಯಕ ಹೊರಹೊಮ್ಮುತ್ತಾನೆ. ಆ ನಾಯಕನನ್ನು ಜನರು ವಿಶ್ವ ನಾಯಕ ಎಂದು ಆಚರಿಸುತ್ತಾರಂತೆ. ಆತ ಅಂತಾರಾಷ್ಟ್ರೀಯ ಶಕ್ತಿ ಸಮೀಕರಣವನ್ನು ಬದಲಾಯಿಸುತ್ತಾನಂತೆ. ಜನರು ಹೆಚ್ಚು ಇಷ್ಟಪಡುವ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳ ಬೆಲೆಗಳು ಅನಿರೀಕ್ಷಿತವಾಗಿ ಏರಿಕೆಯಾಗುತ್ತವೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇದು ಸಾಮಾನ್ಯ ಜನರಿಗೆ ತೊಂದರೆ ತರುತ್ತದೆ.

ಅಲ್ಲದೆ, ಬ್ಯಾಂಕ್ ಸಂಸ್ಥೆಗಳ ಕುಸಿತ, ಬೆಲೆ ಏರಿಕೆ ಮತ್ತು ಹಣಕಾಸು ವ್ಯವಸ್ಥೆಯು ತೀವ್ರ ಸಂಕಷ್ಟ ಎದುರಿಸಲಿದೆ. ಇನ್ನು ಚಿನ್ನದ ಬೆಲೆಯು ಅಸಾಧಾರಣವಾಗಿ ಏರಿದ ನಂತರ ಕುಸಿಯಬಹುದು ಅಂತಾನೂ ಬಾಬಾ ವಂಗಾ ಹೇಳಿದ್ದಾರೆ. 2026ರ ನವೆಂಬರ್ ತಿಂಗಳಲ್ಲಿ ಒಂದು ದೊಡ್ಡ ಬಾಹ್ಯಾಕಾಶ ನೌಕೆ ಭೂಮಿಯನ್ನು ಸಮೀಪಿಸಲಿದೆ ಎಂದು ಊಹಿಸಲಾಗಿದೆ. ಇದು ಮಾನವರು ಮತ್ತೊಂದು ಪ್ರಪಂಚದೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಮತ್ತು ಅನ್ಯಗ್ರಹ ಜೀವಿಗಳು ಮನುಷ್ಯರೊಂದಿಗೆ ಮಾತನಾಡಲು ಅನುವು ಮಾಡಿಕೊಡುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಈ ರೀತಿಯ ಇನ್ನು ಸಾಕಷ್ಟು ಭವಿಷ್ಯವಾಣಿಗಳನ್ನು ವಂಗಾ ಹೇಳಿದ್ದಾರೆ.