Volodymyr Zelensky | ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ 
ವಿದೇಶ

Volodymyr Zelensky | ರಷ್ಯಾಗೆ ಒಂದಿಚ್ಚು ಭೂಮಿಯನ್ನು ಬಿಡುವುದಿಲ್ಲ; ಟ್ರಂಪ್​ ಮಧ್ಯಸ್ಥತೆಯನ್ನು ತಿರಸ್ಕರಿಸಿದ ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

ಕೈವ್​: ನಾವು ಯುಕ್ರೇನ್​ನ ಒಂದು ಇಂಚು ಭೂಮಿಯನ್ನು ಸಹ ರಷ್ಯಾಗೆ ಬಿಟ್ಟುಕೊಡಲು ಬಯಸುವುದಿಲ್ಲ ಎನ್ನುವ ಮೂಲಕ ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ಅಮೆರಿಕದ ಮಾತುಕತೆಗಳನ್ನು ತಿರಸ್ಕರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ನಿಸ್ಸಂದೇಹವಾಗಿ, ರಷ್ಯಾ ನಾವು ಪ್ರದೇಶಗಳನ್ನು ಬಿಟ್ಟುಕೊಡಬೇಕೆಂದು ಒತ್ತಾಯಿಸುತ್ತಿದೆ. ಅಲ್ಲದೆ, ನಾವು ಒಂದು ಇಂಚು ಭೂಮಿಯನ್ನು ಸಹ ರಷ್ಯಾಗೆ ಬಿಟ್ಟುಕೊಡಲು ಬಯಸುವುದಿಲ್ಲ. ಅದಕ್ಕಾಗಿಯೇ ನಾವು ಹೋರಾಡುತ್ತಿದ್ದೇವೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ನಮ್ಮ ಭೂಮಿಯನ್ನು ವಿನಿಮಯ ಮಾಡಿಕೊಳ್ಳಲು ರಷ್ಯಾಗೆ ಯಾವುದೇ ಕಾನೂನು ಅಥವಾ ನೈತಿಕ ಹಕ್ಕಿಲ್ಲ ಎಂದು ಯುಕ್ರೇನ್​ ಅಧ್ಯಕ್ಷ ಕಿಡಿಕಾರಿದ್ದಾರೆ.
ರಷ್ಯಾದ ಆಕ್ರಮಣವು ನಾಲ್ಕು ವರ್ಷಗಳನ್ನು ಸಮೀಪಿಸುತ್ತಿರುವುದರಿಂದ, ಡಾನ್‌ಬಾಸ್‌ನ ಕೆಲವು ಭಾಗಗಳನ್ನು ಬಿಟ್ಟುಕೊಡಲು ಯುಕ್ರೇನ್ ಸಿದ್ಧವಾಗಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ ನಂತರ ಝೆಲೆನ್ಸ್ಕಿಯವರ ಪ್ರತಿಕ್ರಿಯೆ ಬಂದಿದೆ. ಅಲ್ಲದೆ, ಅಮೆರಿಕದ ಒತ್ತಡ ತಂತ್ರಗಳ ನಡುವೆಯೂ ಮಿತ್ರರಾಷ್ಟ್ರಗಳಿಂದ ಬೆಂಬಲವನ್ನು ಕೋರಿ ಝೆಲೆನ್ಸ್ಕಿ ತಮ್ಮ ಯುರೋಪಿಯನ್ ಪ್ರವಾಸವನ್ನು ಮುಂದುವರೆಸಿದ್ದಾರೆ.

ಝೆಲೆನ್ಸ್ಕಿ ಯುರೋಪಿಯನ್ ಪ್ರವಾಸ

ರೋಮ್‌ನಲ್ಲಿ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿರನ್ನು ಭೇಟಿಯಾದ ಝೆಲೆನ್ಸ್ಕಿ, ಭವಿಷ್ಯದ ರಷ್ಯಾದ ಆಕ್ರಮಣವನ್ನು ತಡೆಯಲು ಯುರೋಪಿಯನ್ ಏಕತೆ ಮತ್ತು ಬಲವಾದ ಭದ್ರತಾಯನ್ನು ಖಚಿತಪಡಿಸಬೇಕಾದ ಅಗತ್ಯ ತಿಳಿಸಿದ್ದಾರೆ.
ಯುಕ್ರೇನ್ ರಾಜಿ ಮಾಡಿಕೊಳ್ಳಬೇಕೆಂಬ ಟ್ರಂಪ್ ಒತ್ತಾಯವನ್ನು ವಿರೋಧಿಸಲು ಪ್ರಯತ್ನಿಸುತ್ತಾ ಯುಕ್ರೇನ್ ನಾಯಕ, ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ರಷ್ಯಾವು ಮೇಲುಗೈ ಸಾಧಿಸುತ್ತದೆ ಎಂದು ತಾನು ನಂಬುವುದಾಗಿ ಟ್ರಂಪ್ ಪೊಲಿಟಿಕೊಗೆ ತಿಳಿಸಿದರು. ಯುಕ್ರೇನ್‌ನಲ್ಲಿ ಸಮರ ಕಾನೂನಿನ ಅಡಿಯಲ್ಲಿ ಚುನಾವಣೆಗಳನ್ನು ನಡೆಸಬೇಕೆಂದು ಕರೆ ನೀಡಿದರು.

ಯುಕ್ರೇನ್​ ಮೇಲೆ ರಷ್ಯಾ ಡ್ರೋನ್ ದಾಳಿ

ರಷ್ಯಾ ರಾತ್ರೋರಾತ್ರಿ ಉಕ್ರೇನ್‌ನಾದ್ಯಂತ 110 ಡ್ರೋನ್‌ಗಳನ್ನು ಹಾರಿಸಿದೆ. ಅಲ್ಲದೆ, 20 ಕ್ಕೂ ಹೆಚ್ಚು ಡ್ರೋನ್‌ಗಳು ಇಂಧನ ಮೂಲಸೌಕರ್ಯವನ್ನು ಹಾನಿಗೊಳಿಸಿದವು, ಇದರಿಂದಾಗಿ ತುರ್ತು ವಿದ್ಯುತ್ ಕಡಿತವಾಗಿದೆ.
ಪ್ರತೀಕಾರವಾಗಿ, ಯುಕ್ರೇನ್ ರಷ್ಯಾದ ಒಳಭಾಗದ ಮೇಲೆ ಪ್ರತಿದಾಳಿ ನಡೆಸಿತು. ಕ್ರಾಸ್ನೋಡರ್ ಪ್ರದೇಶದ ದ್ರವೀಕೃತ ಅನಿಲ ಟರ್ಮಿನಲ್ ಮೇಲೆ ಡ್ರೋನ್ ದಾಳಿಯು ಬೆಂಕಿಗೆ ಕಾರಣವಾಯಿತು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ,(ಏಜೆನ್ಸೀಸ್).