ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮತ್ತೆ ಮತ್ತೆ ಕಿತ್ತಾಡುತ್ತಿರುವುದೇಕೆ? Pakistan and Afghanistan
- ಪಾಕಿಸ್ತಾನವು ತನ್ನ ನೆರೆಯ ತಾಲಿಬಾನ್ ವಿರುದ್ಧ ಬಹಿರಂಗವಾಗಿಯೇ ಯುದ್ಧ ಘೋಷಣೆ ಮಾಡಿದೆ
- ಪ್ರಸ್ತುತ ಇಸ್ಲಮಾಬಾದ್ ಮತ್ತು ಕಾಬೂಲ್ ನಡುವೆ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ
- ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದಿದ್ದ ಕದನ ವಿರಾಮವನ್ನು ಎರಡೂ ರಾಷ್ಟ್ರಗಳು ಉಲ್ಲಂಘಿಸಿವೆ
Pakistan and Afghanistan : ಪಾಕಿಸ್ತಾನವು ತನ್ನ ನೆರೆಯ ತಾಲಿಬಾನ್ ವಿರುದ್ಧ ಬಹಿರಂಗವಾಗಿಯೇ ಯುದ್ಧ ಘೋಷಣೆ ಮಾಡುವುದರೊಂದಿಗೆ ಇಸ್ಲಾಮಾಬಾದ್ ಮತ್ತು ಕಾಬೂಲ್ ನಡುವೆ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ. ಹಠಾತ್ ಭುಗಿಲೆದ್ದ ಈ ಘರ್ಷಣೆಯು ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದಿದ್ದ ಕದನ ವಿರಾಮವನ್ನು ಉಲ್ಲಂಘಿಸಿದೆ.
ಅಫ್ಘಾನಿಸ್ತಾನವು ತನ್ನ ಗಡಿಯಲ್ಲಿ ಪ್ರತೀಕಾರದ ದಾಳಿ ನಡೆಸಿರುವುದಾಗಿ ಹೇಳಿಕೊಂಡ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನಿ ಪಡೆ ಕಾಬೂಲ್ ಮತ್ತು ಕಂದಹಾರ್ ಮೇಲೆ ವಾಯುದಾಳಿ ನಡೆಸಿದೆ. ಪಾಕಿಸ್ತಾನವು ಶುಕ್ರವಾರ ಮುಂಜಾನೆ ಕಾಬೂಲ್ ಮತ್ತು ಇತರ ಎರಡು ಅಫ್ಘಾನ್ ಪ್ರಾಂತ್ಯಗಳಲ್ಲಿ ವಾಯುದಾಳಿ ನಡೆಸಿತು. ಇದಕ್ಕೂ ಮೊದಲು, ಭಾನುವಾರದ ದಾಳಿಗೆ ಪ್ರತೀಕಾರವಾಗಿ ಅಫ್ಘಾನಿಸ್ತಾನ ಪಾಕಿಸ್ತಾನದ ಮೇಲೆ ಗಡಿಯಾಚೆಗಿನ ದಾಳಿ ನಡೆಸಿತ್ತು.
ಕಳೆದ ಭಾನುವಾರ ಪಾಕಿಸ್ತಾನದ ಸೇನೆಯು ಅಫ್ಘಾನಿಸ್ತಾನದ ಗಡಿಯಲ್ಲಿ ದಾಳಿ ನಡೆಸಿ ಕನಿಷ್ಠ 70 ಉಗ್ರರನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕ ಜನರು ಈ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಪಾಕ್ ಹೇಳಿಕೊಂಡಿದೆ. ಆದರೆ, ಅಫ್ಘಾನಿಸ್ತಾನ ಈ ಹೇಳಿಕೆಯನ್ನು ತಿರಸ್ಕರಿಸಿದೆ. ಏಕಾಏಕಿ ದಾಳಿ ಮಾಡುವ ಮೂಲಕ ದೇಶದ ವಾಯುಪ್ರದೇಶ ಮತ್ತು ಸಾರ್ವಭೌಮತ್ವವನ್ನು ಪಾಕಿಸ್ತಾನ ಉಲ್ಲಂಘನೆ ಮಾಡಿದೆ ಎಂದು ಅಫ್ಘಾನ್ ಆರೋಪಿಸಿದೆ. ಇದು ಎರಡೂ ಏಷ್ಯಾ ದೇಶಗಳ ನಡುವಿನ ಉದ್ವಿಗ್ನತೆಯಲ್ಲಿ ತೀವ್ರ ಏರಿಕೆಯನ್ನು ಸೂಚಿಸುತ್ತಿದೆ.
ಅಫ್ಘಾನಿಸ್ತಾನ ಮೇಲಿನ ದಾಳಿಯ ಬಳಿಕ ಕಾಬೂಲ್ ಮೇಲೆ ಪಾಕಿಸ್ತಾನ ದಾಳಿ ಮಾಡಿದೆ. ಶುಕ್ರವಾರ ಕಾಬೂಲ್‌ನಲ್ಲಿ ಕನಿಷ್ಠ ಮೂರು ಸ್ಫೋಟಗಳ ಸದ್ದು ಕೇಳಿಬಂದಿದ್ದು, ಅಫ್ಘಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ಪಾಕಿಸ್ತಾನವು ದಕ್ಷಿಣದಲ್ಲಿರುವ ಕಂದಹಾರ್ ಮತ್ತು ಆಗ್ನೇಯ ಪ್ರಾಂತ್ಯದ ಪಕ್ತಿಯಾದಲ್ಲಿಯೂ ವಾಯುದಾಳಿ ನಡೆಸಿದೆ ಎಂದು ಹೇಳಿದ್ದಾರೆ.
ನಿನ್ನೆ ರಾತ್ರಿ, ಅಫ್ಘಾನಿಸ್ತಾನವು ಅಫ್ಘಾನ್ ಗಡಿ ಪ್ರದೇಶಗಳಲ್ಲಿ ಪ್ರತೀಕಾರವಾಗಿ ಗಡಿಯಾಚೆಯಿಂದ ಪಾಕಿಸ್ತಾನದ ಮೇಲೆ ದಾಳಿ ನಡೆಸಿತು ಮತ್ತು ಒಂದು ಡಜನ್‌ಗೂ ಹೆಚ್ಚು ಪಾಕಿಸ್ತಾನಿ ಸೇನಾ ಠಾಣೆಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ. ಎರಡೂ ದೇಶಗಳ 2,611-ಕಿಲೋಮೀಟರ್ (1,622-ಮೈಲಿ) ಉದ್ದದ ಗಡಿಯನ್ನು ಡ್ಯುರಾಂಡ್ ರೇಖೆ ಎಂದು ಕರೆಯಲಾಗುತ್ತದೆ. ಆದರೆ, ಇದನ್ನು ಅಫ್ಘಾನಿಸ್ತಾನವು ಔಪಚಾರಿಕವಾಗಿ ಗುರುತಿಸಿಕೊಂಡಿಲ್ಲ.
ಪಾಕಿಸ್ತಾನಿ ಸೇನೆಯ ನಿರಂತರ ದಾಳಿಯಿಂದಾಗಿ, ಡುರಾಂಡ್ ರೇಖೆಯ ಉದ್ದಕ್ಕೂ ಪಾಕಿಸ್ತಾನಿ ಸೇನಾ ನೆಲೆಗಳು ಮತ್ತು ಮಿಲಿಟರಿ ಸ್ಥಾಪನೆಗಳ ವಿರುದ್ಧ ದೊಡ್ಡ ಪ್ರಮಾಣದ ಆಕ್ರಮಣಕಾರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ ಎಂದು ಮುಜಾಹಿದ್ ಗುರುವಾರ ರಾತ್ರಿ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಆರು ಪ್ರಾಂತ್ಯಗಳ ಗಡಿಯಲ್ಲಿ ಪ್ರತೀಕಾರದ ದಾಳಿಗಳು ನಡೆದಿವೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ತಿಳಿಸಿದೆ.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ತಿಂಗಳುಗಳ ಉದ್ವಿಗ್ನತೆ
ಎರಡು ನೆರೆಹೊರೆಯವರ ನಡುವೆ ತಿಂಗಳುಗಳಿಂದ ಉದ್ವಿಗ್ನತೆ ಹೆಚ್ಚಿದ್ದು, ಅಕ್ಟೋಬರ್‌ನಲ್ಲಿ ನಡೆದ ದಾಳಿಯಲ್ಲಿ ನೂರಾರು ಸೈನಿಕರು, ನಾಗರಿಕರು ಮತ್ತು ಶಂಕಿತ ಉಗ್ರರು ಸಾವಿಗೀಡಾಗಿದರು. ಕಾಬೂಲ್‌ನಲ್ಲಿ ನಡೆದ ಸ್ಫೋಟಗಳ ನಂತರ ಹಿಂಸಾಚಾರ ಪ್ರಾರಂಭವಾಯಿತು. ಇದನ್ನು ಅಫ್ಘಾನ್ ಅಧಿಕಾರಿಗಳು ಪಾಕಿಸ್ತಾನದ ಮೇಲೆ ಆರೋಪಿಸಿದ್ದಾರೆ. ಈ ಸಮಯದಲ್ಲಿ ಇಸ್ಲಾಮಾಬಾದ್, ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಅಫ್ಘಾನಿಸ್ತಾನದ ಒಳಗೆ ಆಳವಾಗಿ ದಾಳಿಗಳನ್ನು ನಡೆಸಿದೆ.
ಎರಡು ದೇಶಗಳ ನಡುವೆ ಕತಾರ್ ಮಧ್ಯಸ್ಥಿಕೆ ವಹಿಸಿ ಕದನ ವಿರಾಮಕ್ಕೆ ಕರೆ ನೀಡಿತ್ತು. ಆದರೆ, ಎರಡೂ ದೇಶಗಳು ಕದನ ವಿರಾಮವನ್ನು ಉಲ್ಲಂಘಿಸಿವೆ. ನವೆಂಬರ್‌ನಲ್ಲಿ ನಡೆದ ಹಲವಾರು ಸುತ್ತಿನ ಔಪಚಾರಿಕ ಶಾಂತಿ ಮಾತುಕತೆಗಳು ವಿಫಲವಾಗಿವೆ. 2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಿರುವುದನ್ನು ಪಾಕಿಸ್ತಾನ ಆರಂಭದಲ್ಲಿ ಸ್ವಾಗತಿಸಿತ್ತು. ಕಾಬೂಲ್ ಪತನದ ನಂತರ, ಆಗಿನ ಪ್ರಧಾನಿ ಇಮ್ರಾನ್ ಖಾನ್ ಆಫ್ಘನ್ನರು ಗುಲಾಮಗಿರಿಯ ಸಂಕೋಲೆಗಳನ್ನು ಮುರಿದಿದ್ದಾರೆ ಎಂದು ಹೇಳಿದ್ದರು. ಆದರೆ, ತಾಲಿಬಾನ್ ನಿರೀಕ್ಷಿಸಿದಷ್ಟು ಸಹಕಾರಿಯಾಗಿಲ್ಲ ಎಂದು ಇಸ್ಲಾಮಾಬಾದ್ ಕಂಡುಕೊಂಡ ಕಾರಣ ಎರಡು ನೆರೆಹೊರೆಯವರ ನಡುವೆ ಉದ್ವಿಗ್ನತೆ ಹೆಚ್ಚಾಗತೊಡಗಿತು.
ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರಗಾಮಿ ಗುಂಪು ಮತ್ತು ಅದರ ಅನೇಕ ಸದಸ್ಯರು ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದಾರೆ ಮತ್ತು ನೈಋತ್ಯ ಪ್ರಾಂತ್ಯದ ಬಲೂಚಿಸ್ತಾನಕ್ಕೆ ಸ್ವಾತಂತ್ರ್ಯವನ್ನು ಬಯಸುವ ಜಾತ್ಯಾತೀತ ಸಶಸ್ತ್ರ ದಂಗೆಕೋರರು ಅಫ್ಘಾನಿಸ್ತಾನವನ್ನು ಸುರಕ್ಷಿತ ತಾಣವಾಗಿ ಬಳಸುತ್ತಿದ್ದಾರೆ ಎಂದು ಇಸ್ಲಾಮಾಬಾದ್ ಆರೋಪಿಸಿದೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಉಗ್ರಗಾಮಿತ್ವ ಮತ್ತು ಹಿಂಸಾಚಾರ ಹೆಚ್ಚಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ, (ಏಜೆನ್ಸಿಸ್).