ಗ್ರೀನ್‌ಲ್ಯಾಂಡ್ ನಮಗೇಕೆ..? ಅದು ನಮ್ಮ ಕೆಲಸವಲ್ಲ: ಟ್ರಂಪ್ ಹಠಕ್ಕೆ ವ್ಲಾಡಿಮಿರ್ ಪುಟಿನ್ ಅಚ್ಚರಿಯ ಪ್ರತಿಕ್ರಿಯೆ
ಮಾಸ್ಕೋ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಗ್ರೀನ್‌ಲ್ಯಾಂಡ್ ದ್ವೀಪವನ್ನು ವಶಪಡಿಸಿಕೊಳ್ಳಲು ನಡೆಸುತ್ತಿರುವ ಪಟ್ಟು ಜಾಗತಿಕ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಬೆಳವಣಿಗೆಯು ನ್ಯಾಟೋ (NATO) ರಾಷ್ಟ್ರಗಳ ನಡುವಿನ ಒಗ್ಗಟ್ಟನ್ನೇ ಪ್ರಶ್ನಿಸುವಂತೆ ಮಾಡಿರುವ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಈ ಬಗ್ಗೆ ಅತ್ಯಂತ ಅಚ್ಚರಿಯ ಮತ್ತು ಚಾಣಾಕ್ಷತನದ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬುಧವಾರ ತಡರಾತ್ರಿ ನಡೆದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯಲ್ಲಿ ದೂರದರ್ಶನದ ಮೂಲಕ ಮಾತನಾಡಿದ ಪುಟಿನ್, ಗ್ರೀನ್‌ಲ್ಯಾಂಡ್‌ಗೆ ಏನಾಗುತ್ತದೆ ಎಂಬುದು ನಮಗೆ ಸಂಬಂಧವಿಲ್ಲದ ವಿಷಯವಾಗಿಲ್ಲ. ಅದು ನಮ್ಮ ಕೆಲಸವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಡೆನ್ಮಾರ್ಕ್ ವಿರುದ್ಧ ಪುಟಿನ್ ವಾಗ್ದಾಳಿ
ಇಲ್ಲಿ ಒಂದು ವಿಷಯವನ್ನು ನಾವು ನೆನಪಿನಲ್ಲಿಡಬೇಕು. ಡೆನ್ಮಾರ್ಕ್ ಈಗ ಗ್ರೀನ್‌ಲ್ಯಾಂಡ್ ತನ್ನ ಅವಿಭಾಜ್ಯ ಅಂಗ ಎಂದು ಹೇಳಿಕೊಳ್ಳುತ್ತಿದೆ. ಆದರೆ ಇತಿಹಾಸವನ್ನು ನೋಡಿದರೆ, ಡೆನ್ಮಾರ್ಕ್ ಯಾವಾಗಲೂ ಗ್ರೀನ್‌ಲ್ಯಾಂಡ್ ಅನ್ನು ತನ್ನ ಒಂದು ವಸಾಹತುವಿನಂತೆ ನಡೆಸಿಕೊಂಡಿದೆ ಎಂದಿದ್ದಾರೆ. ಅಲ್ಲಿನ ಜನರ ಬಗ್ಗೆ ಡೆನ್ಮಾರ್ಕ್ ಕ್ರೂರವಾಗಿ ನಡೆದುಕೊಂಡ ಇತಿಹಾಸವಿದೆ. ಈ ಸತ್ಯವನ್ನು ಇಂದು ಯಾರು ಮಾತನಾಡುತ್ತಿಲ್ಲ. ಈಗ ಎಲ್ಲರಿಗೂ ಕೇವಲ ಆ ಪ್ರದೇಶದ ಮೇಲಿರುವ ಆರ್ಥಿಕ ಹಿತಾಸಕ್ತಿಗಳ ಬಗ್ಗೆ ಮಾತ್ರ ಕಾಳಜಿಯಿದೆ ಎಂದು ಪುಟಿನ್ ಕಿಡಿಕಾರಿದ್ದಾರೆ.
ನ್ಯಾಟೋ ಒಗ್ಗಟ್ಟಿನ ಬಗ್ಗೆ ಮಾರ್ಮಿಕ ನುಡಿ
ಅಮೆರಿಕದ ಅಧ್ಯಕ್ಷರು ತನ್ನದೇ ಮಿತ್ರರಾಷ್ಟ್ರಗಳ ಮೇಲೆ ಒತ್ತಡ ಹೇರುತ್ತಿರುವುದು ಮತ್ತು ಅದರ ಪರಿಣಾಮವಾಗಿ ನ್ಯಾಟೋ (NATO) ರಾಷ್ಟ್ರಗಳಲ್ಲಿ ಬಿರುಕು ಮೂಡುತ್ತಿರುವುದು ಆ ದೇಶಗಳ ಆಂತರಿಕ ಸಮಸ್ಯೆಯಾಗಿದೆ. ಅಲ್ಲದೆ, ಮಿತ್ರರಾಷ್ಟ್ರಗಳ ನಡುವೆ ಇರಬೇಕಾದ ಗೌರವ ಮತ್ತು ವಿಶ್ವಾಸ ಇಂದು ಮರೀಚಿಕೆಯಾಗುತ್ತಿದೆ. ಆದರೆ ರಷ್ಯಾಕ್ಕೆ ಇದರಿಂದ ಯಾವುದೇ ಲಾಭ ಅಥವಾ ನಷ್ಟವಿಲ್ಲ ಎಂದು ಅಧ್ಯಕ್ಷ ಪುಟಿನ್ ತಿಳಿಸಿದ್ದಾರೆ.
ಆರ್ಕ್ಟಿಕ್ ಪ್ರದೇಶದಲ್ಲಿ ರಷ್ಯಾದ ಹಿತಾಸಕ್ತಿ
ಮುಂದುವರೆದು ಮಾತನಾಡಿದ ರಷ್ಯಾ ಅಧ್ಯಕ್ಷ, ನಮಗೆ ನಮ್ಮ ಗಡಿಗಳ ಬಗ್ಗೆ ಮತ್ತು ಆರ್ಕ್ಟಿಕ್ ಪ್ರದೇಶದಲ್ಲಿನ ನಮ್ಮ ಹಕ್ಕುಗಳ ಬಗ್ಗೆ ಸ್ಪಷ್ಟ ಅರಿವಿದೆ. ನಾವು ನಮ್ಮ ಭೂಪ್ರದೇಶದ ಭದ್ರತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ತಿಳಿದಿದ್ದೇವೆ. ಇತರರು ತಮ್ಮ ಪ್ರದೇಶಗಳನ್ನು ಮಾರಾಟ ಮಾಡುತ್ತಾರೋ ಅಥವಾ ಇತರರು ಅದನ್ನು ಖರೀದಿಸುತ್ತಾರೋ ಎಂಬುದು ನಮಗೆ ಮುಖ್ಯವಲ್ಲ. ನಮ್ಮ ಗಮನ ನಮ್ಮ ದೇಶದ ಅಭಿವೃದ್ಧಿ ಮತ್ತು ರಕ್ಷಣೆಯ ಮೇಲಿದೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಜಾಗತಿಕ ಶಾಂತಿ ಮತ್ತು ಸಂಯಮ
ಜಗತ್ತಿನ ದೊಡ್ಡ ರಾಷ್ಟ್ರಗಳು ಸಣ್ಣ ರಾಷ್ಟ್ರಗಳನ್ನು ಕೇವಲ ಆಸ್ತಿಯಂತೆ ನೋಡುವುದನ್ನು ನಿಲ್ಲಿಸಬೇಕು. ರಷ್ಯಾ ಯಾವಾಗಲೂ ಅಂತಾರಾಷ್ಟ್ರೀಯ ಕಾನೂನು ಮತ್ತು ಸಾರ್ವಭೌಮತ್ವವನ್ನು ಗೌರವಿಸುತ್ತದೆ. ನಾವು ಯಾರನ್ನೂ ಹೆದರಿಸಲು ಹೋಗುವುದಿಲ್ಲ, ಆದರೆ ನಮ್ಮ ಹಿತಾಸಕ್ತಿಗಳಿಗೆ ಧಕ್ಕೆಯಾದಾಗ ಸುಮ್ಮನೆ ಕೂರುವುದಿಲ್ಲ ಎಂದು ಜಗತ್ತಿಗೆ ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ರಾಜತಾಂತ್ರಿಕತೆಯ ಮೇಲೆ ಪರಿಣಾಮ
ಆರ್ಕ್ಟಿಕ್ ಪ್ರದೇಶದಲ್ಲಿ ರಷ್ಯಾ ಮತ್ತು ಅಮೆರಿಕ ನಡುವೆ ಸದಾ ಪೈಪೋಟಿ ಇರುತ್ತದೆ. ಗ್ರೀನ್‌ಲ್ಯಾಂಡ್ ಅಮೆರಿಕದ ಪಾಲಾದರೆ ಆರ್ಕ್ಟಿಕ್‌ನಲ್ಲಿ ರಷ್ಯಾದ ಪ್ರಭಾವ ಕುಗ್ಗಬಹುದು ಎಂಬ ಆತಂಕವಿತ್ತು. ಆದರೆ ಪುಟಿನ್ ಅವರ ಈ ತಲೆಕೆಡಿಸಿಕೊಳ್ಳದ" ನಿಲುವು ಜಾಗತಿಕ ವಿಶ್ಲೇಷಕರನ್ನು ಅಚ್ಚರಿಗೊಳಿಸಿದೆ. ಟ್ರಂಪ್ ಅವರು ನ್ಯಾಟೋ ಮಿತ್ರರಾಷ್ಟ್ರಗಳ ಜೊತೆ ಜಗಳವಾಡುತ್ತಿರುವುದನ್ನು ರಷ್ಯಾ ದೂರದಿಂದಲೇ ಆಸ್ವಾದಿಸುತ್ತಿದೆ ಎಂಬ ಚರ್ಚೆಯೂ ಆರಂಭವಾಗಿದೆ,(ಏಜೆನ್ಸೀಸ್).