ಯಾರೀ ಎವೆಲಿನ್ ಡಿಕ್? ಪತಿ ಕೇಸ್​ನಲ್ಲಿ ಖುಲಾಸೆ, ಶಿಶುವಿನ ಕೊಲೆಗೆ ಜೀವಾವಧಿ ಶಿಕ್ಷೆ ಪಡೆದು ಕಣ್ಮರೆಯಾದ ನಿಗೂಢ ಮಹಿಳೆ  
ವಿದೇಶ

ಯಾರೀ ಎವೆಲಿನ್ ಡಿಕ್? ಪತಿ ಕೇಸ್​ನಲ್ಲಿ ಖುಲಾಸೆ, ಶಿಶುವಿನ ಕೊಲೆಗೆ ಜೀವಾವಧಿ ಶಿಕ್ಷೆ ಪಡೆದು ಕಣ್ಮರೆಯಾದ ನಿಗೂಢ ಮಹಿಳೆ

Evelyn Dick: ಕೆನಡಾದಲ್ಲಿ ಸುಮಾರು 80 ವರ್ಷಗಳ ಹಿಂದೆ ನಡೆದಿದ್ದ ಒಂದು ಅಪರಾಧ ಪ್ರಕರಣ ಇಂದಿಗೂ ಕುತೂಹಲ ಮತ್ತು ನಿಗೂಢತೆಗೆ ಸಾಕ್ಷಿಯಾಗಿದೆ ಎಂದರೆ ನಂಬುತ್ತೀರಾ? ಅಚ್ಚರಿ ಅನಿಸಿದರೂ ಇದು ನಿಜವೇ. ಗಂಡ ಮತ್ತು ಮಗುವನ್ನು ಭೀಕರವಾಗಿ ಕೊಲೆಗೈದು ಜೀವಾವಧಿ ಶಿಕ್ಷೆಗೆ ಗುರಿಯಾದವಳು ಕೇವಲ 11 ವರ್ಷ ಜೈಲುವಾಸದ ಬಳಿಕ ಸುಳಿವೇ ಇಲ್ಲದಂತೆ ಕಣ್ಮರೆಯಾದ ಘಟನೆ ಇಂದಿಗೂ ಕೆನಡಾದ ಜನತೆಗೆ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ.

ಕೆನಡಾದ ಅಪರಾಧ ಇತಿಹಾಸದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಪ್ರಕರಣಗಳಲ್ಲಿ ಎವೆಲಿನ್ ಡಿಕ್ ಪ್ರಕರಣವೂ ಒಂದು. 1946ರಲ್ಲಿ ಪತಿಯ ದೇಹದ ಅವಶೇಷಗಳು ಪತ್ತೆಯಾದ ಘಟನೆ ಹಾಗೂ ಕೆಲವೇ ದಿನಗಳಲ್ಲಿ ಆಕೆಯ ಮನೆಯ ಅಟ್ಟದಲ್ಲಿ ಸಿಮೆಂಟ್‌ನೊಳಗೆ ಶಿಶುವಿನ ಮೃತದೇಹ ಪತ್ತೆಯಾಗಿದ್ದು ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಈ ಪ್ರಕರಣದಲ್ಲಿ ಎವೆಲಿನ್ ವಿರುದ್ಧ ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದರೂ, ನ್ಯಾಯಾಲಯದ ತೀರ್ಪುಗಳು ಮಾತ್ರ ವಿಭಿನ್ನವಾಗಿದ್ದವು ಎಂಬುದೇ ಅಚ್ಚರಿ.

ಬೆಟ್ಟದಲ್ಲಿ ಪತ್ತೆಯಾದ ಅಪರಿಚಿತನ ದೇಹ

1946ರ ಮಾರ್ಚ್ 16ರಂದು ಕೆನಡಾದ ಒಂಟಾರಿಯೊ ಪ್ರಾಂತ್ಯದ ಹ್ಯಾಮಿಲ್ಟನ್ ನಗರದ ಮೌಂಟೇನ್ ಪ್ರದೇಶದಲ್ಲಿ ಆಟವಾಡುತ್ತಿದ್ದ ಮಕ್ಕಳು ಒಂದು ಸೂಟ್‌ಕೇಸ್ ಗಮನಿಸಿದರು. ಅದರೊಳಗೆ ವ್ಯಕ್ತಿಯ ದೇಹದ ಅವಶೇಷಗಳಿದ್ದನ್ನು ಕಂಡು ಚೀರಾಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಅದರಲ್ಲಿದ್ದ ತಲೆ, ಕೈ ಮತ್ತು ಕಾಲುಗಳಿಲ್ಲದ ಸ್ಥಿತಿಯಲ್ಲಿ ದೇಹವನ್ನು ನೋಡಿ, ತನಿಖೆ ಆರಂಭಿಸಿದರು.

ತನಿಖೆಯ ಬಳಿಕ ಆ ದೇಹವು ಜಾನ್ ಡಿಕ್ ಎಂಬ ವ್ಯಕ್ತಿಗೆ ಸೇರಿದ್ದು ಎಂದು ಗುರುತಿಸಲಾಯಿತು. ಆರಂಭದಲ್ಲಿ ಆತನೊಬ್ಬ ಟ್ಯಾಕ್ಸಿ ಚಾಲಕ ಎನ್ನಲಾಗಿತ್ತು. ಬಳಿಕ ಅವರು ಹ್ಯಾಮಿಲ್ಟನ್ ಸ್ಟ್ರೀಟ್ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಎಂಬುದನ್ನು ಖಚಿತಪಡಿಸಿಕೊಳ್ಳಲಾಯಿತು. ಅಸಲಿಗೆ, ಈತನಿಗೂ ಎವೆಲಿನ್​ಗೂ ದಾಂಪತ್ಯ ಸಂಬಂಧವಿತ್ತು ಎಂದು ಅಲ್ಲಿನ ವರದಿಗಳು ತಿಳಿಸುತ್ತವೆ.

ಪತ್ನಿ ಎವೆಲಿನ್ ಸುತ್ತ ತನಿಖೆ

ಜಾನ್ ಡಿಕ್ ಕಾಣೆಯಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಆತನ ಪತ್ನಿ ಎವೆಲಿನ್ ಅವರನ್ನು ವಿಚಾರಣೆಗೆ ಒಳಪಡಿಸಿದರು. ತನಿಖೆಯ ವೇಳೆ ಜಾನ್ ಅವರ ದೇಹದ ಅವಶೇಷಗಳನ್ನು ವಿಲೇವಾರಿ ಮಾಡಿರುವ ಬಗ್ಗೆ ಸುಳಿವುಗಳು ಲಭ್ಯವಾದವು. ಎವೆಲಿನ್ ಬಳಸಿದ್ದ ಕಾರಿನಲ್ಲಿ ರಕ್ತದ ಗುರುತುಗಳು ಪತ್ತೆಯಾಗಿದ್ದವು. ಮನೆಯ ಕುಲುಮೆಯ ಬಳಿ ಸುಟ್ಟ ಮಾನವ ಅವಶೇಷಗಳೂ ಪೊಲೀಸರಿಗೆ ಸಿಕ್ಕಿದ್ದವು. ಈ ಹಿನ್ನೆಲೆಯಲ್ಲಿ ಎವೆಲಿನ್ ಹಾಗೂ ಇತರ ಕೆಲವರ ವಿರುದ್ಧ ಜಾನ್ ಡಿಕ್ ಸಾವಿಗೆ ಸಂಬಂಧಿಸಿದ ಆರೋಪಗಳನ್ನು ದಾಖಲಿಸಲಾಯಿತು.

ಸೂಟ್‌ಕೇಸ್‌ನಲ್ಲಿ ಮಗುವಿನ ಮೃತದೇಹ

ಪತಿಯ ಸಾವಿನ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮತ್ತೊಂದು ಶಾಕ್​ ಕಾದಿತ್ತು. ಎವೆಲಿನ್ ಅವರ ಮನೆಯ ಅಟ್ಟವನ್ನು ಸಾಕ್ಷಿಗಳಿಗಾಗಿ ಹುಡುಕುತ್ತಿದ್ದಾಗ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂತು. ಅಲ್ಲಿ ಸಿಕ್ಕ ಸೂಟ್‌ಕೇಸ್‌ನೊಳಗೆ ಸಿಮೆಂಟ್‌ನಿಂದ ಮುಚ್ಚಲಾಗಿದ್ದ ಶಿಶುವಿನ ಮೃತದೇಹ ಪತ್ತೆಯಾಗಿತ್ತು. ಬಳಿಕ ಆ ಮಗು ಎವೆಲಿನ್ ಅವರಿಗೆ ಜನಿಸಿದ ನವಜಾತ ಶಿಶು ಎಂಬುದು ತನಿಖೆಯಿಂದ ಗೊತ್ತಾಯಿತು.

ಈ ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ದ ಪೊಲೀಸರು, ಮಗುವಿನ ಸಾವಿನ ಕುರಿತು ಎವೆಲಿನ್ ವಿರುದ್ಧ ಗಂಭೀರ ಆರೋಪಗಳು ದಾಖಲಿಸಿದರು. ಗಂಡ ಮತ್ತು ಮಗುವಿನ ಸಾವುಗಳಿಗೆ ತಾನು ಕಾರಣವಲ್ಲ ಎಂದು ವಾದಿಸಿದ ಕೊಲೆಗಡುಕಿ, ಇದ್ಯಾವುದೂ ತನಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದಳು. ವಿಚಾರಣೆಯನ್ನು ನಡೆಸಿದ ಕೋರ್ಟ್​, ಪತಿಯ ಕೇಸ್​ನಲ್ಲಿ ಆಕೆಗೆ ಖುಲಾಸೆ ನೀಡಿತು.

ಆರಂಭದಲ್ಲಿ ಜಾನ್ ಡಿಕ್ ಕೊಲೆ ಪ್ರಕರಣದಲ್ಲಿ ಎವೆಲಿನ್‌ಗೆ ಶಿಕ್ಷೆ ವಿಧಿಸಿದ್ದ ನ್ಯಾಯಾಲಯ, ಅದೇ ಮೇಲ್ಮನವಿಯ ಬಳಿಕ ಆ ತೀರ್ಪನ್ನು ರದ್ದುಗೊಳಿಸಿತು. 1947ರಲ್ಲಿ ನಡೆದ ಮರು ವಿಚಾರಣೆಯಲ್ಲಿ ಪತಿಯ ಕೊಲೆ ಕೇಸ್​ನಲ್ಲಿ ಆಕೆ ವಿರುದ್ಧದ ಆರೋಪಗಳನ್ನು ಖುಲಾಸೆಗೊಳಿಸಿತು. ಆದರೆ, ಹಸುಗೂಸಿನ ಪ್ರಕರಣದಲ್ಲಿ ಅವರು ಮ್ಯಾನ್ಸ್‌ಲಾಟರ್ ಅಪರಾಧಕ್ಕೆ ತಪ್ಪಿತಸ್ಥರೆಂದು ತೀರ್ಪು ಕೊಟ್ಟಿತು. ಈ ಪ್ರಕರಣದಲ್ಲಿ ಆಕೆಗೆ ಜೀವಾವಧಿ ಶಿಕ್ಷೆ ವಿಧಿಸಿತು. ಹೀಗಾಗಿ, ಪತಿಯ ಕೊಲೆ ಹಾಗೂ ಮಗುವಿನ ಸಾವಿನ ಪ್ರಕರಣಗಳ ನ್ಯಾಯಾಲಯದ ತೀರ್ಪುಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕಾಯಿತು.

11 ವರ್ಷಗಳ ಬಳಿಕ ಜೈಲಿನಿಂದ ರಿಲೀಸ್​

ಕೋರ್ಟ್​ ನೀಡಿದ ಜೀವಾವಧಿ ಶಿಕ್ಷೆಯಲ್ಲಿ ಸುಮಾರು 11 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ಎವೆಲಿನ್ ಡಿಕ್, 1958ರಲ್ಲಿ ಪೆರೋಲ್ ಮೇಲೆ ಬಿಡುಗಡೆಯಾದರು. ಕೊಲೆ ಪ್ರಕರಣಗಳಿಂದ ಆಕೆ ಮೇಲೆ ಭಾರಿ ಆಕ್ರೋಶಗಳು ವ್ಯಕ್ತವಾಗಿತ್ತು. ಇದರಿಂದ ಅಲ್ಲಿನ ಅಧಿಕಾರಿಗಳು ಆಕೆಗೆ ಹೊಸ ಗುರುತು ನೀಡಿ, ನೂತನ ಜೀವನ ಆರಂಭಿಸಲು ಅವಕಾಶ ಕಲ್ಪಿಸಿಕೊಟ್ಟರು ಎಂದು ವರದಿಗಳು ಹೇಳುತ್ತವೆ. 1980ರ ದಶಕದಲ್ಲಿ ಎವೆಲಿನ್​ಗೆ ರಾಜಕೀಯ ಕ್ಷಮಾದಾನವೂ ದೊರೆಯಿತು ಎಂದು ಪ್ರಕರಣದ ದಾಖಲೆಗಳು ತಿಳಿಸುತ್ತವೆ.

ಜೈಲಿನಿಂದ ಹೊರಬಂದ ಎವೆಲಿನ್ ಡಿಕ್ ಇಂದಿಗೂ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆಕೆ ಬದುಕಿದ್ದಾಳೋ, ಸತ್ತಿದ್ದಾಳೋ ಅಥವಾ ಮತ್ತೊಂದು ದೇಶದಲ್ಲಿ ಜೀವನ ಮಾಡುತ್ತಿದ್ದಾಳೋ ಎಂಬ ಮಾಹಿತಿ ಯಾರೊಬ್ಬರಿಗೂ ಗೊತ್ತಿಲ್ಲ. ಈಗಲೂ ಆಕೆಯ ಪತಿಯ ಸಾವಿನ ನಿಜವಾದ ಹೊಣೆಗಾರಿಕೆ ಯಾರ ಮೇಲಿತ್ತು ಎಂಬ ಪ್ರಶ್ನೆ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಹೀಗಾಗಿ, ಈ ಪ್ರಕರಣ ಕೆನಡಾದ ಅಪರಾಧ ಇತಿಹಾಸದ ಅತ್ಯಂತ ಚರ್ಚಿತ ಮತ್ತು ನಿಗೂಢ ಪ್ರಕರಣಗಳಲ್ಲಿ ಒಂದಾಗಿಯೇ ಉಳಿದಿದೆ,(ಏಜೆನ್ಸೀಸ್).