ಎನ್‌ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್​ಗೆ ಹನಿಟ್ರ್ಯಾಪ್:​ ಟೆಕ್​ ಲೋಕದಲ್ಲಿ ಸದ್ದು ಮಾಡುತ್ತಿರುವ ಈ ಚೀನಿ ಬೆಡಗಿ ಯಾರು? 
ವಿದೇಶ

ಎನ್‌ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್​ಗೆ ಹನಿಟ್ರ್ಯಾಪ್:​ ಟೆಕ್​ ಲೋಕದಲ್ಲಿ ಸದ್ದು ಮಾಡುತ್ತಿರುವ ಈ ಚೀನಿ ಬೆಡಗಿ ಯಾರು? Alice Huang

ಆಲಿಸ್ ಹುವಾಂಗ್ ಮತ್ತು ಜೆನ್ಸೆನ್ ಹುವಾಂಗ್ ಮೊದಲ ಬಾರಿಗೆ ಎಲ್ಲಿ? ಹೇಗೆ? ಭೇಟಿಯಾದರು ಎಂಬ ಬಗ್ಗೆ ಸ್ಪಷ್ಟತೆಯಿಲ್ಲದಿದ್ದರೂ, ಜೂನ್ 2024 ರಲ್ಲಿ ತೈಪೆಯ ಬಾರ್ ಒಂದರಲ್ಲಿ ಜೆನ್ಸೆನ್ ಅವರ ಪಕ್ಕದಲ್ಲೇ ಕುಳಿತು ಮದ್ಯಪಾನ ಮಾಡುತ್ತಿದ್ದ ದೃಶ್ಯ ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ವಾಷಿಂಗ್ಟನ್​: ಕೃತಕ ಬುದ್ಧಿಮತ್ತೆ (AI) ಲೋಕದ ದೈತ್ಯ ಸಂಸ್ಥೆಯಾದ ಎನ್‌ವಿಡಿಯಾ (Nvidia)ದ ಸಿಇಒ ಜೆನ್ಸೆನ್ ಹುವಾಂಗ್ ಅವರ ವಿವಾಹೇತರ ಸಂಬಂಧ ಸದ್ಯ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ತಮ್ಮ ಸಂಸ್ಥೆಯ ಆಡಳಿತ ಮಂಡಳಿಯು ಸ್ವತಂತ್ರ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಜೆನ್ಸೆನ್ ಹುವಾಂಗ್ ತಮ್ಮ ತಪ್ಪನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಬರೋಬ್ಬರಿ 4.5 ಟ್ರಿಲಿಯನ್ ಡಾಲರ್ ಮೌಲ್ಯದ ಟೆಕ್​ ಸಂಸ್ಥೆಯ ಸಹ ಸಂಸ್ಥಾಪಕನನ್ನೇ ತನ್ನ ಮೋಹದ ಬಲೆಯಲ್ಲಿ ಬೀಳಿಸಿಕೊಂಡ ಆಲಿಸ್ ಹುವಾಂಗ್ (Alice Huang) ಯಾರು? ಈಕೆ ಚೀನಾದ ಗೂಢಚಾರಿಣಿಯೇ? ಆಕೆಯ ಹಿನ್ನೆಲೆ ಏನು? ಎಂಬ ಕುತೂಹಲಕರ ಮಾಹಿತಿಗಳು ಇದೀಗ ಒಂದೊಂದಾಗಿ ಹೊರಬರುತ್ತಿವೆ.

ರಹಸ್ಯ ಮಾಹಿತಿಗಳನ್ನು ಕದಿಯುವುದೇ ಉದ್ದೇಶವಾಗಿತ್ತು?

ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿರುವ ಇತ್ತೀಚಿನ ವರದಿಯ ಪ್ರಕಾರ, 63 ವರ್ಷದ ಜೆನ್ಸೆನ್ ಹುವಾಂಗ್ ಜತೆ ವಿವಾಹೇತರ ಸಂಬಂಧ ಹೊಂದಿದ್ದ ಆಲಿಸ್ ಹುವಾಂಗ್ ಚೀನಾದ ಗೂಢಚಾರಿ ಸಂಸ್ಥೆಯ ಸಕ್ರಿಯ ಏಜೆಂಟ್ ಎನ್ನಲಾಗಿದೆ. ಈ ವಿಚಾರವನ್ನು ಅಮೆರಿಕದ ಗುಪ್ತಚರ ಸಂಸ್ಥೆಗಳು ಪತ್ತೆಹಚ್ಚಿರುವುದಾಗಿ ವರದಿಯಾಗಿದೆ. ಸಿಂಗಾಪುರ ಮೂಲದ 'ಮೆಗಾಸ್ಪೀಡ್​' (Megaspeed) ಸಂಸ್ಥೆಯ ಮಾಜಿ ಕಾರ್ಯನಿರ್ವಾಹಕಿಯಾಗಿದ್ದ ಈಕೆಗೆ, ಜೆನ್ಸೆನ್ ಹುವಾಂಗ್ ಅವರ ಮನೆಹೆಸರೇ (Surname) ಇದ್ದರೂ ಇವರಿಬ್ಬರ ನಡುವೆ ಯಾವುದೇ ರಕ್ತಸಂಬಂಧವಿಲ್ಲ. ಜೆನ್ಸೆನ್ ಹುವಾಂಗ್ ಅವರ ಸಲುಗೆಯನ್ನು ದುರುಪಯೋಗಪಡಿಸಿಕೊಂಡು ಕಂಪನಿಯ ರಹಸ್ಯಗಳನ್ನು ಚೀನಾಗೆ ತಲುಪಿಸುವುದೇ ಈಕೆಯ ಪ್ರಮುಖ ಉದ್ದೇಶವಾಗಿತ್ತು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಬಾರ್​ ಒಂದರ ದೃಶ್ಯ

ಆಲಿಸ್ ಹುವಾಂಗ್ ಮತ್ತು ಜೆನ್ಸೆನ್ ಹುವಾಂಗ್ ಮೊದಲ ಬಾರಿಗೆ ಎಲ್ಲಿ? ಹೇಗೆ? ಭೇಟಿಯಾದರು ಎಂಬ ಬಗ್ಗೆ ಸ್ಪಷ್ಟತೆಯಿಲ್ಲದಿದ್ದರೂ, ಜೂನ್ 2024 ರಲ್ಲಿ ತೈಪೆಯ ಬಾರ್ ಒಂದರಲ್ಲಿ ಜೆನ್ಸೆನ್ ಅವರ ಪಕ್ಕದಲ್ಲೇ ಕುಳಿತು ಮದ್ಯಪಾನ ಮಾಡುತ್ತಿದ್ದ ದೃಶ್ಯ ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ಸಂದರ್ಭದಲ್ಲಿ ಗಿಗಾಬೈಟ್ ಮತ್ತು ನೆಟ್‌ಥಂಡರ್ ಕಂಪನಿಗಳ ಉನ್ನತಾಧಿಕಾರಿಗಳೂ ಜತೆಗಿದ್ದರು. ಆಶ್ಚರ್ಯಕರ ವಿಚಾರವೆಂದರೆ, ಅದೇ ಸಮಯದಲ್ಲಿ ಆಲಿಸ್ ಹುವಾಂಗ್ ಪ್ರತಿನಿಧಿಸುತ್ತಿದ್ದ ಮೆಗಾಸ್ಪೀಡ್ ಕಂಪನಿಯು ಎನ್‌ವಿಡಿಯಾದಿಂದ ಶತಕೋಟಿ ಡಾಲರ್ ಮೌಲ್ಯದ ಪ್ರೊಸೆಸರ್ ಚಿಪ್‌ಗಳನ್ನು ಖರೀದಿಸಲು ಬೃಹತ್ ಒಪ್ಪಂದವನ್ನು ಪ್ರಾರಂಭಿಸಿತ್ತು.

ಇದಾದ ನಂತರ 2025ರ ಮೇ ತಿಂಗಳಲ್ಲಿ ತೈಪೆಯ ರೆಸ್ಟೋರೆಂಟ್‌ ಒಂದರ ಹೊರಗೆ ಜೆನ್ಸೆನ್ ಹುವಾಂಗ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ ಆಲಿಸ್ ಅವರ ಬೆನ್ನಹಿಂದೆಯೇ ನಿಂತಿರುವುದು ಕಂಡುಬಂದಿತ್ತು. ಈ ವೇಳೆಗೆ ಮೆಗಾಸ್ಪೀಡ್​ ಕಂಪನಿಯು ಎನ್‌ವಿಡಿಯಾ ಜತೆ ನಡೆಸುತ್ತಿದ್ದ ವ್ಯವಹಾರಗಳು ಅಮೆರಿಕದ ವಾಷಿಂಗ್ಟನ್ ಗುಪ್ತಚರ ವಿಭಾಗದ ಕಣ್ಣಿಗೆ ಬಿದ್ದಿದ್ದವು. ಅಮೆರಿಕ ಸರ್ಕಾರವು ತಂತ್ರಜ್ಞಾನ ರಫ್ತಿನ ಮೇಲೆ ಹೇರಿದ ನಿರ್ಬಂಧಗಳನ್ನು ಮೀರಿ, ಮೆಗಾಸ್ಪೀಡ್ ಮುಖ್ಯಸ್ಥರು ಅಮೆರಿಕದ ಅತ್ಯಾಧುನಿಕ ಎಐ ಚಿಪ್‌ಗಳ ರಹಸ್ಯ ಮಾಹಿತಿಯನ್ನು ಚೀನಾದ ಬೀಜಿಂಗ್ ಸರ್ಕಾರಕ್ಕೆ ರವಾನಿಸುತ್ತಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗವಾಯಿತು.

ಅಮೆರಿಕದ ಗುಪ್ತಚರ ಇಲಾಖೆಯ ಗೌಪ್ಯ ದಾಖಲೆಗಳ ಪ್ರಕಾರ, ಚೀನಾದ ರಾಜ್ಯ ಭದ್ರತಾ ಸಚಿವಾಲಯವು (MSS) ಆಲಿಸ್ ಹುವಾಂಗ್ ಅವರನ್ನು ವಿಶೇಷವಾಗಿ ನೇಮಿಸಿಕೊಂಡಿತ್ತು. ಎನ್‌ವಿಡಿಯಾ ಸಂಸ್ಥೆಯ ಮುಖ್ಯಸ್ಥರಿಂದ ಗೌಪ್ಯ ಮಾಹಿತಿಗಳನ್ನು ಸಂಗ್ರಹಿಸುವುದು ಹಾಗೂ ಚೀನಾಗೆ ಅತ್ಯಾಧುನಿಕ ಎಐ ಚಿಪ್‌ಗಳನ್ನು ಮಾರಾಟ ಮಾಡಲು ಎನ್‌ವಿಡಿಯಾ ಮೇಲೆ ಒತ್ತಡ ಹೇರುವುದು ಈಕೆಯ ಮುಖ್ಯ ಗುರಿಯಾಗಿತ್ತು. ಹೀಗಿರುವಾಗ ಜೋ ಬೈಡೆನ್ ಆಡಳಿತವು ಚೀನಾಗೆ ಎಐ ಚಿಪ್‌ಗಳ ಪೂರೈಕೆಯನ್ನ ಸಂಪೂರ್ಣವಾಗಿ ನಿರ್ಬಂಧಿಸಿ ಶಾಕ್​ ನೀಡಿತ್ತು. ಆದರೆ, ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಜೆನ್ಸೆನ್ ಹುವಾಂಗ್ ಈ ರಫ್ತು ನಿಯಮಗಳನ್ನು ಸಡಿಲಗೊಳಿಸುವಂತೆ ತೀವ್ರವಾಗಿ ವಾದಿಸಿದ್ದರು.

ಯಾರು ಅಲಿಸ್​ ಹುವಾಂಗ್​?

ಚೀನಾದಲ್ಲಿ 'ಹುವಾಂಗ್ ಲೇ' (Huang Le) ಎಂದೂ ಕರೆಯಲ್ಪಡುವ ಆಲಿಸ್ ಹುವಾಂಗ್ ಚೀನಾ ದೇಶದ ಪೌರತ್ವ ಹೊಂದಿದ್ದಾರೆ. ಈಕೆಯ ವೃತ್ತಿಜೀವನದ ಹಿನ್ನೆಲೆಯನ್ನು ಕೆದಕಿದಾಗ ಅಚ್ಚರಿಗೊಳಿಸುವ ವಿಷಯಗಳು ಬೆಳಕಿಗೆ ಬಂದಿವೆ. ಚೀನಾದ ಖಾಸಗಿ ಫಂಡ್ ಡೇಟಾಬೇಸ್ ಪ್ರಕಾರ, ಈಕೆ ಹಿಂದೆ ಮಾಧ್ಯಮ ರಂಗದಲ್ಲಿದ್ದು ಹುನಾನ್ ಟಿವಿ (Hunan TV) ಹಾಗೂ ಚೀನಾದ ಸರ್ಕಾರಿ ವಾಹಿನಿ ಸಿಸಿಟಿವಿ (CCTV) ಯಲ್ಲಿ ಟಿವಿ ರಿಪೋರ್ಟರ್ ಆಗಿ ಕೆಲಸ ಮಾಡಿದ್ದರು. ನಂತರ ಹೆಚ್‌ಎಸ್‌ಬಿಸಿ (HSBC) ಬ್ಯಾಂಕ್‌ನ ಪ್ರೈವೇಟ್ ಬ್ಯಾಂಕಿಂಗ್ ವಿಭಾಗದ ಅಧ್ಯಕ್ಷರ ಸಹಾಯಕಿಯಾಗಿ ಮತ್ತು ಸಿಐಟಿಐಸಿ (CITIC) ಸೆಕ್ಯುರಿಟೀಸ್‌ನಲ್ಲಿ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು.

ಆದರೆ, ಈಕೆಯ ಹಿನ್ನೆಲೆಯ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ದಿ ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಹುನಾನ್ ಟಿವಿಯ ಉನ್ನತಾಧಿಕಾರಿಯೊಬ್ಬರು ತಮ್ಮ ಸಂಸ್ಥೆಯಲ್ಲಿ ಆಲಿಸ್ ಹುವಾಂಗ್ ಹೆಸರಿನ ವ್ಯಕ್ತಿ ಕೆಲಸವೇ ಮಾಡಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಚೀನಾದ ಸಿಸಿಟಿವಿ ವಾಹಿನಿಯ ಅಧಿಕೃತ ವೆಬ್‌ಸೈಟ್‌ನಲ್ಲೂ ಈಕೆಯ ಯಾವುದೇ ಪ್ರೊಫೈಲ್ ಪತ್ತೆಯಾಗಿಲ್ಲ. ಇದರಿಂದಾಗಿ ಈಕೆ ತನ್ನ ಹಳೆಯ ಗುರುತನ್ನು ಮರೆಮಾಚಿ ಗೂಢಚರ್ಯೆಗಾಗಿ ಮಾಧ್ಯಮ ಮತ್ತು ಬ್ಯಾಂಕಿಂಗ್ ಕ್ಷೇತ್ರದ ನಕಲಿ ಪ್ರೊಫೈಲ್ ಸೃಷ್ಟಿಸಿಕೊಂಡಿದ್ದರೆ ಎಂಬ ಶಂಕೆ ಹೆಚ್ಚಾಗಿದೆ.

ಹೂಡಿಕೆ ದಾಖಲೆಗಳ ಪ್ರಕಾರ, ಶಾಂಘೈ ಹೆಕ್ಸಿ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್ ಎಂಬ ಸಂಸ್ಥೆಯಲ್ಲಿ ಆಲಿಸ್ ಹುವಾಂಗ್ ಉನ್ನತ ಹುದ್ದೆಯಲ್ಲಿದ್ದರು. ಈ ಸಂಸ್ಥೆಗೆ ಚೀನಾದ ಗೇಮಿಂಗ್ ಕಂಪನಿ 7ರೋಡ್ ಜತೆ ಸಂಪರ್ಕವಿತ್ತು. ಆಲಿಸ್ ನೇತೃತ್ವದ ಸಂಸ್ಥೆಯು ಮೆಗಾಸ್ಪೀಡ್​ ಕಂಪನಿಯನ್ನು ನಡೆಸಿ ನಂತರ ಸ್ವಿಫ್ಟ್‌ಡೇಟಾಗೆ ಮಾರಾಟ ಮಾಡಿತಾದರೂ, ಆಲಿಸ್ ಮಾತ್ರ ಕಂಪನಿಯ ಪ್ರಮುಖ ಶಕ್ತಿಯಾಗಿ ಮುಂದುವರಿದಿದ್ದರು. ಕಳೆದ ಎರಡು ವರ್ಷಗಳಲ್ಲಿ ಈ ಮೆಗಾಸ್ಪೀಡ್​ ಕಂಪನಿಯು ಎನ್‌ವಿಡಿಯಾದಿಂದ ಬರೋಬ್ಬರಿ 4.8 ಬಿಲಿಯನ್ ಡಾಲರ್ (ಸುಮಾರು 40,000 ಕೋಟಿ ರೂಪಾಯಿ) ಮೌಲ್ಯದ ಚಿಪ್‌ಗಳನ್ನು ಖರೀದಿ ಮಾಡಿದೆ.

ಇನ್ನು ಜೆನ್ಸೆನ್​ ಹುವಾಂಗ್​ ಅಕ್ರಮ ಸಂಬಂಧದ ಪ್ರಕರಣದ ಬಗ್ಗೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿದ್ದು, ಜೆನ್ಸೆನ್​ ಹುವಾಂಗ್ ಪರ ಬ್ಯಾಟ್​ ಬೀಸಿರುವುದು ಅಚ್ಚರಿ ಮೂಡಿಸಿದೆ. ಹ್ಯಾಲೋವೀನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, "ಜೆನ್ಸೆನ್ ಹುವಾಂಗ್ ಅತ್ಯಂತ ಪ್ರಾಮಾಣಿಕ ಮತ್ತು ಅದ್ಭುತ ವ್ಯಕ್ತಿ. ಆದರೆ, ವೈಯಕ್ತಿಕವಾಗಿ ಏನು ನಡೆಯುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ" ಎಂದಿದ್ದಾರೆ. ಪ್ರಸ್ತುತ ಎನ್‌ವಿಡಿಯಾ ಕಂಪನಿಯು ಕ್ವಾರ್ಟರ್ಲಿ 59.69 ಬಿಲಿಯನ್ ಡಾಲರ್ ಲಾಭ ಗಳಿಸುವ ಮೂಲಕ ವಿಶ್ವದ ಅತ್ಯಂತ ಮೌಲ್ಯಯುತ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಸಿಇಒ ಜೆನ್ಸೆನ್ ಹುವಾಂಗ್ ಸುತ್ತಿಕೊಂಡಿರುವ ಈ ಚೀನಿ ಕನ್ಯೆಯ ಹನಿಟ್ರಾಪ್ ವಿವಾದ ಕಂಪನಿಯ ಭವಿಷ್ಯವನ್ನೇ ತೂಗುಯ್ಯಾಲೆಗೆ ತಳ್ಳಿದೆ, (ಏಜೆನ್ಸೀಸ್​).