ಮೆಕ್ಸಿಕೋ ಸುಂಕ ಸಮರ 
ವಿದೇಶ

ಭಾರತದ ಮೇಲೆ ಮೆಕ್ಸಿಕೋ ಸುಂಕ ಸಮರ! ಈ ಟಾರಿಫ್​ನಿಂದ ದೇಶದ ಯಾವ ಸೆಕ್ಟರ್​ಗೆ ಪೆಟ್ಟು? ಏನೆಲ್ಲ ಸಮಸ್ಯೆ?

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ಆಯ್ತು ಈಗ ಮೆಕ್ಸಿಕೋ ಸುಂಕ ಸಮರ
  • ಭಾರತದ ಮೇಲೆ ಶೇ.50ರಷ್ಟು ಸುಂಕ ವಿಧಿಸಲು ಘೋಷಣೆ
  • ಮೆಕ್ಸಿಕೋ ನಿರ್ಧಾರದಿಂದ ಭಾರತದ ಆಟೋಮೊಬೈಲ್​ ವಲಯಕ್ಕೆ ಹೊಡೆತ
ನವದೆಹಲಿ: ಅಮೆರಿಕ ಬೆನ್ನಲ್ಲೇ ಭಾರತದ ವಸ್ತುಗಳ ಆಮದುಗಳ ಮೇಲೆ ಶೇ.50ರಷ್ಟು ಸುಂಕವನ್ನು ವಿಧಿಸಲು ಮೆಕ್ಸಿಕೋ ನಿರ್ಧರಿಸಿದೆ. ಟ್ರಂಪ್​ ರಾಷ್ಟ್ರ ಹೇರಿರುವ ಒತ್ತಡದ ಮೇರೆಗೆ ಮೆಕ್ಸಿಕೋ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಆಟೋಮೊಬೈಲ್​ ಬಿಡಿಭಾಗಗಳು, ಕಾರುಗಳು, ಆಟಿಕೆಗಳು, ಬಟ್ಟೆ, ಪ್ಲಾಸ್ಟಿಕ್‌ಗಳು, ಪೀಠೋಪಕರಣಗಳು, ಪಾದರಕ್ಷೆಗಳು, ಉಕ್ಕು, ಗೃಹೋಪಯೋಗಿ ವಸ್ತುಗಳು, ಚರ್ಮದ ವಸ್ತುಗಳು, ಅಲ್ಯೂಮಿನಿಯಂ, ಕಾಗದ, ಗಾಜು, ಸೋಪ್‌, ಕಾರ್ಡ್‌ಬೋರ್ಡ್, ಬೈಕ್​, ಪರ್ಫ್ಯೂಮ್​ ಮತ್ತು ಬ್ಯೂಟಿ ಪ್ರಾಡೆಕ್ಟ್​ಗಳ ಮೇಲೆ ಹೊಸ ಸುಂಕಗಳು ಜಾರಿಗೆ ಬರಲಿವೆ.
ಭಾರತೀಯ ಕೈಗಾರಿಕಾ ಒಕ್ಕೂಟದ (CII) ಮಾಹಿತಿಯ ಪ್ರಕಾರ, ಈ ವ್ಯಾಪಾರವು 2019-20ರಲ್ಲಿ 7.9 ಬಿಲಿಯನ್‌ ಡಾಲರ್​ನಿಂದ 2023-24ರಲ್ಲಿ 8.4 ಬಿಲಿಯನ್‌ ಡಾಲರ್​ಗೆ ಏರಿದೆ. ಹೊಸ ಸುಂಕಗಳು ಅನೇಕ ವಲಯಗಳ ಮೇಲೆ ಪರಿಣಾಮ ಬೀರಲಿದೆ. ಆದರೆ, ಆಟೋಮೊಬೈಲ್ ವಲಯದ ಮೇಲಿನ ಈ ಸುಂಕದ ಎಫೆಕ್ಟ್​ ದೊಡ್ಡದಾಗಿದೆ. ಕಾರುಗಳ ಮೇಲಿನ ಆಮದು ತೆರಿಗೆಯನ್ನು ಶೇ.20ರಿಂದ 50ಕ್ಕೆ ಹೆಚ್ಚಿಸಿರುವುದು ಮೆಕ್ಸಿಕೋಗೆ ಹೆಚ್ಚು ರಫ್ತು ಮಾಡುವ ವೋಕ್ಸ್‌ವ್ಯಾಗನ್, ಹುಂಡೈ, ನಿಸ್ಸಾನ್ ಮತ್ತು ಮಾರುತಿ ಸುಜುಕಿಯಂತಹ ಕಂಪನಿಗಳಿಗೆ ಹೊಡೆತ ನೀಡಲಿದೆ.
ವೋಕ್ಸ್‌ವ್ಯಾಗನ್, ಹುಂಡೈ ಮತ್ತು ನಿಸ್ಸಾನ್ ಭಾರತೀಯ ಕಂಪನಿಗಳಲ್ಲದಿದ್ದರೂ, ನಮ್ಮ ದೇಶದಲ್ಲಿ ಉತ್ಪಾದನಾ ಘಟಕಗಳು ಮತ್ತು ಸ್ಥಾವರಗಳನ್ನು ಹೊಂದಿರುವುದರಿಂದ ಅವು ಇಲ್ಲಿಂದ ಮೆಕ್ಸಿಕೋಗೆ ದೊಡ್ಡ ಪ್ರಮಾಣದಲ್ಲಿ ಕಾರುಗಳನ್ನು ರಫ್ತು ಮಾಡುತ್ತವೆ. ಹೀಗಾಗಿ, ಮೆಕ್ಸಿಕೋ ವಿಧಿಸಲಿರುವ ಶೇ.50ರಷ್ಟು ಸುಂಕದ ಬಿಸಿ ತಟ್ಟಲಿದೆ. ಮೆಕ್ಸಿಕೋದ ಕಟು ನಿರ್ಧಾರದ ಬಗ್ಗೆ ಕಾರು ತಯಾರಕರು, ಭಾರತೀಯ ಆಟೋಮೊಬೈಲ್ ಉದ್ಯಮ ಸಂಘ ಮತ್ತು ಭಾರತೀಯ ಸರ್ಕಾರ ಮುಂದೆ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ದಕ್ಷಿಣ ಆಫ್ರಿಕಾ ಮತ್ತು ಸೌದಿ ಅರೇಬಿಯಾ ನಂತರ ಭಾರತೀಯ ಕಾರುಗಳಿಗೆ ಮೆಕ್ಸಿಕೋ ಮೂರನೇ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದೆ. ಉತ್ಪಾದನೆಯನ್ನು ಗರಿಷ್ಠ ಮಟ್ಟದಲ್ಲಿ ನಿರ್ವಹಿಸಲು ಮತ್ತು ಪ್ರಮಾಣದ ಆರ್ಥಿಕತೆಯನ್ನು ಸಾಧಿಸಲು ಈ ರಫ್ತುಗಳು ಮುಖ್ಯವಾಗಿವೆ. ದೇಶೀಯ ಮಾರಾಟ ಕುಸಿದಾಗ ಲಾಭವನ್ನು ಕಾಯ್ದುಕೊಳ್ಳಲು ಸಹ ಇದು ಉಪಯುಕ್ತ,(ಏಜೆನ್ಸೀಸ್).