ನಮಗೆ ಹಾಗೂ ಭಾರತಕ್ಕೆ ಹಿಮಾಲಯವೇ ಬೆದರಿಕೆ: ನೇಪಾಳ ವಿದೇಶಾಂಗ ಸಚಿವರ ಎಚ್ಚರಿಕೆ! ಅಚ್ಚರಿ ಕಾರಣ ಹೀಗಿದೆ...Himalaya  
ವಿದೇಶ

ನಮಗೆ ಹಾಗೂ ಭಾರತಕ್ಕೆ ಹಿಮಾಲಯವೇ ಬೆದರಿಕೆ: ನೇಪಾಳ ವಿದೇಶಾಂಗ ಸಚಿವರ ಎಚ್ಚರಿಕೆ! ಅಚ್ಚರಿ ಕಾರಣ ಹೀಗಿದೆ...Himalaya

ಪ್ರಮುಖ ಮುಖ್ಯಾಂಶಗಳು

  • ಹಿಮಾಲಯದಲ್ಲಿ ಕರಗುವ ಪ್ರತಿಯೊಂದೂ ಸಮುದ್ರ ಮಟ್ಟ ಏರಿಕೆಗೆ ಕಾರಣ
  • ರಾಜಕೀಯ ಭಿನ್ನತೆ ಮರೆತು ಪರಿಸರ ರಕ್ಷಿಸಲು ನೆರೆ ರಾಷ್ಟ್ರಗಳ ಒಗ್ಗೂಡುವಿಕೆಗೆ ನೇಪಾಳ ಸಚಿವರ ಕರೆ
  • ಹವಾಮಾನ ವೈಪರೀತ್ಯದಿಂದ ಮುಂದಿನ ದಿನಗಳಲ್ಲಿ ತೀವ್ರ ನೀರಿನ ಬಿಕ್ಕಟ್ಟು ಸೃಷ್ಟಿಯಾಗುವ ಎಚ್ಚರಿಕೆ
  • ಪರಿಸರ ಸಂರಕ್ಷಣೆಗಾಗಿ ಸಾಂಪ್ರದಾಯಿಕ ಮಾತುಕತೆ ಮೀರಿ ಕಾರ್ಯಪ್ರವೃತ್ತರಾಗಲು ಸಚಿವರ ಕರೆ
ಕಾಠ್ಮಂಡು: ಹಿಮಾಲಯದಲ್ಲಿ ( Himalaya ) ಕರಗುವ ಪ್ರತಿಯೊಂದೂ ಕೂಡ ಸಮುದ್ರ ಮಟ್ಟದಲ್ಲಿ ಏರಿಕೆಯಾಗುತ್ತದೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಎಚ್ಚರಿಸಿದ್ದಾರೆ. ಈ ಮೂಲಕ ಹಿಮಾಲಯದ ಪರಿಸರ ಅಸ್ಥಿರತೆಯು ನೇಪಾಳ ಹಾಗೂ ಭಾರತಕ್ಕೆ ಒಡ್ಡಿರುವ ಸಾಮಾನ್ಯ ಬೆದರಿಕೆಯಾಗಿದೆ ಎಂಬ ಗಂಭೀರವಾಗಿ ವಿಚಾರವನ್ನು ಸಚಿವರು ಮುಂದಿಟ್ಟಿದ್ದಾರೆ.
ಕಾಠ್ಮಂಡುವಿನಲ್ಲಿ ನಡೆದ ಎನ್‌ಡಿಟಿವಿ ವರ್ಲ್ಡ್ ಅನ್ವೀಕ್ಷಾ ಶೃಂಗಸಭೆಯಲ್ಲಿ ಮಾತನಾಡಿದ ಶಿಶಿರ್ ಖನಾಲ್, ಕೇವಲ 'ರೋಟಿ-ಬೇಟಿ' ಅಥವಾ 'ಸೀತಾ-ರಾಮ' ಎನ್ನುವ ಸಾಂಸ್ಕೃತಿಕ ನಂಟು ದೇಶಗಳ ನಡುವಿನ ಪ್ರಮುಖ ಬಾಂಧವ್ಯವಾಗಿದ್ದರು ಕೂಡ ಇಂದಿನ ತುರ್ತು ಸಂದರ್ಭದಲ್ಲಿ ಪರಿಸರ ಕಾಳಜಿಯು ಉಭಯ ದೇಶಗಳ ಪರಸ್ಪರ ಸಂಬಂಧದ ಮುಖ್ಯ ಕೇಂದ್ರವಾಗಬೇಕು ಎಂದು ಖನಾಲ್​ ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿಮಾಲಯದಲ್ಲಿ ಕರಗುವ ಪ್ರತಿಯೊಂದೂ ಕೂಡ ಸಮುದ್ರ ಮಟ್ಟದಲ್ಲಿ ಏರಿಕೆಯಾಗುತ್ತದೆ. ಇದರಿಂದ ನೇಪಾಳ ಮತ್ತು ಭಾರತಕ್ಕೆ ಅಪಾಯವಿದೆ ಎನ್ನುವ ಮೂಲಕ ನಿನ್ನೆ ನೇಪಾಳ-ಚೀನಾ ಗಡಿ ಭಾಗದಲ್ಲಿ ಸಂಭವಿಸಿದ ಪ್ರವಾಹದ ಉದಾಹರಣೆ ನೀಡಿ ಸಚಿವರು ಎಚ್ಚರಿಸಿದ್ದಾರೆ. ಹಿಮಾಲಯದ ಪರಿಸರ ಅಸ್ಥಿರತೆಯು ನೇಪಾಳ ಹಾಗೂ ಭಾರತಕ್ಕೆ ಒಡ್ಡಿರುವ ಸಾಮಾನ್ಯ ಬೆದರಿಕೆಯಾಗಿದ್ದು, ಹಿಮಾಲಯದಲ್ಲಿ ಉಂಟಾಗುವ ನೀರಿನ ಹರಿವು ಮತ್ತು ಸ್ಫೋಟಗಳು ಹೇಗೆ ನೇಪಾಳದಾದ್ಯಂತ ಭಾರಿ ವಿನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನು ನಾವು ಕಣ್ಣಾರೆ ಕಂಡಿದ್ದೇವೆ ಎಂದು ಖನಾಲ್​ ತಿಳಿಸಿದ್ದಾರೆ.
ಚೀನಾ, ನೇಪಾಳ, ಭಾರತ ಮತ್ತು ಭೂತಾನ್ ದೇಶಗಳು ಪರಿಸರದಿಂದ ಪರಸ್ಪರ ಬೆಸೆದುಕೊಂಡಿವೆ ಎಂದಿರುವ ಖನಾಲ್, ಈ ರಾಷ್ಟ್ರಗಳ ಒಟ್ಟಾರೆ ಉಳಿವು ಮತ್ತು ಭವಿಷ್ಯವು ಸಂಪೂರ್ಣವಾಗಿ ಹಿಮಾಲಯದ ಪರಿಸರವನ್ನು ರಕ್ಷಿಸುವುದರ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ. ರಾಜಕೀಯ ಪೈಪೋಟಿಗಳು ಏನೇ ಇದ್ದರೂ, ಹವಾಮಾನ ವೈಪರೀತ್ಯಕ್ಕೆ ಅತ್ಯಂತ ಸಂತ್ರಸ್ತವಾಗಿರುವ ಹಿಮಾಲಯನ್ ಪ್ರದೇಶದ ರಕ್ಷಣೆಗಾಗಿ ಎಲ್ಲರೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಟ್ಟಾಗಿ ಕೈಜೋಡಿಸಬೇಕಾದ ಅನಿವಾರ್ಯತೆ ಇದೆ ಎಂದು ಖನಾಲ್​ ಕರೆ ನೀಡಿದ್ದಾರೆ.
ಈ ಬಾರಿಯ ಭೀಕರ ಪ್ರವಾಹವು ಅದೃಷ್ಟವಶಾತ್ ನೇಪಾಳದ ಗಡಿಯನ್ನು ದಾಟಿ ಭಾರತದ ಕಡೆಗೆ ಹೆಚ್ಚು ಹಾನಿ ಮಾಡಿಲ್ಲವಾದರೂ, ಇಂತಹ ಘಟನೆಗಳು ಭೂತಕಾಲದಲ್ಲಿಯೂ ಸಂಭವಿಸಿವೆ ಮತ್ತು ಮುಂದೆಯೂ ಸಂಭವಿಸುವ ಸಾಧ್ಯತೆಯಿದೆ ಎಂದು ಸಚಿವರು ಎಚ್ಚರಿಸಿದ್ದಾರೆ. ನೇಪಾಳದ ಗಡಿಯಲ್ಲಿರುವ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳು ಇಂತಹ ಸಂದರ್ಭಗಳಲ್ಲಿ ಎಚ್ಚೆತ್ತುಕೊಂಡು ತುರ್ತು ಸಭೆಗಳನ್ನು ನಡೆಸಿರುವುದನ್ನು ಉಲ್ಲೇಖಿಸಿರುವ ಅವರು, ನೇಪಾಳದಿಂದ ಹರಿದು ಬರುವ ಗಂಡಕ್ (ನಾರಾಯಣಿ) ಹಾಗೂ ಕೋಸಿ ಮುಂತಾದ ನದಿಗಳು ಎರಡೂ ದೇಶಗಳ ಪಾಲಿಗೂ ಜೀವನಾಡಿಯಾಗಿವೆ ಎಂಬುದನ್ನು ನೆನಪಿಸಿದ್ದಾರೆ.
ಪರಿಸರ ಅಸಮತೋಲನವು ಕೇವಲ ಪ್ರವಾಹವಷ್ಟೇ ಅಲ್ಲದೆ, ಭವಿಷ್ಯದಲ್ಲಿ ತೀವ್ರವಾದ ನೀರಿನ ಬಿಕ್ಕಟ್ಟನ್ನು ಉಂಟುಮಾಡಬಹುದು ಎಂದು ಖನಾಲ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ವಾಸಿಸುವ ಸುಮಾರು ಎರಡು ಶತಕೋಟಿ ಜನರ ಕುಡಿಯುವ ನೀರಿನ ಲಭ್ಯತೆಯ ಮೇಲೆ ಹವಾಮಾನ ಬದಲಾವಣೆಯು ನೇರ ಪರಿಣಾಮ ಬೀರುವ ಸಾಧ್ಯತೆಯಿದ್ದು, ಇದು ಇಡೀ ನಾಗರಿಕತೆಗೆ ಎದುರಾಗಿರುವ ದೊಡ್ಡ ಗಂಡಾಂತರವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೊನೆಯದಾಗಿ, ಈ ಸಾಮೂಹಿಕ ಪರಿಸರ ಬಿಕ್ಕಟ್ಟನ್ನು ಎದುರಿಸಲು ಎಲ್ಲಾ ನೆರೆಹೊರೆ ರಾಷ್ಟ್ರಗಳು ಕೇವಲ ಸಾಂಪ್ರದಾಯಿಕ ಮಾತುಕತೆಗಳಿಗೆ ಸೀಮಿತವಾಗದೆ, ತ್ವರಿತವಾಗಿ ಒಗ್ಗೂಡಿ ಕಾರ್ಯಪ್ರವೃತ್ತರಾಗಬೇಕಾದ ಸಮಯ ಬಂದಿದೆ ಎಂದು ಖನಾಲ್​ ಅವರು ಆಹ್ವಾನಿಸಿದ್ದಾರೆ. ಹಿಮಾಲಯದ ಪರಿಸರ ವ್ಯವಸ್ಥೆಯನ್ನು ಉಳಿಸಲು ಜಾಗತಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಬಲವಾದ ಸಹಕಾರ ಅತ್ಯಾವಶ್ಯಕ ಎಂಬುದನ್ನು ಖನಾಲ್​ ಅವರ ಮಾತುಗಳು ಸ್ಪಷ್ಟಪಡಿಸುತ್ತವೆ, (ಏಜೆನ್ಸೀಸ್​).