ಈಡನ್ ಗಾರ್ಡನ್ಸ್‌ನಲ್ಲಿ ಸ್ಕಾಟ್ಲೆಂಡ್ ಕಥೆ ಮುಗಿಸಿದ ವಿಂಡೀಸ್..! ಹ್ಯಾಟ್ರಿಕ್ ವಿಕೆಟ್​ ಕಿತ್ತ RCB ವೇಗಿ 
ವಿದೇಶ

ಈಡನ್ ಗಾರ್ಡನ್ಸ್‌ನಲ್ಲಿ ಸ್ಕಾಟ್ಲೆಂಡ್ ಕಥೆ ಮುಗಿಸಿದ ವಿಂಡೀಸ್..! ಹ್ಯಾಟ್ರಿಕ್ ವಿಕೆಟ್​ ಕಿತ್ತ RCB ವೇಗಿ | Romario Shepherd

ಕೋಲ್ಕತ್ತಾ: ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಇಂದು ಮತ್ತೊಂದು ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಯಿತು. ಟಿ20 ವಿಶ್ವಕಪ್​ನ ತನ್ನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಸ್ಕಾಟ್ಲೆಂಡ್ ವಿರುದ್ಧ 35 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ ರೊಮಾರಿಯೋ ಶೆಫರ್ಡ್(Romario Shepherd), ಟಿ20 ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ವೆಸ್ಟ್ ಇಂಡೀಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪಂದ್ಯದ ಚಿತ್ರಣ

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್, ಶಿಮ್ರಾನ್ ಹೆಟ್ಮೆಯರ್ ಅವರ ಸ್ಫೋಟಕ ಅರ್ಧಶತಕದ (64 ರನ್, 36 ಎಸೆತ) ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ ಒಂದು ಹಂತದಲ್ಲಿ ನಾಯಕ ರಿಚಿ ಬೆರಿಂಗ್ಟನ್ ಅವರ ಹೋರಾಟದಿಂದ ಪಂದ್ಯದಲ್ಲಿ ಹಿಡಿತ ಸಾಧಿಸುವ ಮುನ್ಸೂಚನೆ ನೀಡಿತ್ತು.

ಶೆಫರ್ಡ್ ಸೃಷ್ಟಿಸಿದ ಸಂಚಲನ

ಸ್ಕಾಟ್ಲೆಂಡ್ ಇನಿಂಗ್ಸ್‌ನ 17ನೇ ಓವರ್ ಪಂದ್ಯದ ಗತಿಯನ್ನೇ ಬದಲಿಸಿತು. ರೊಮಾರಿಯೋ ಶೆಫರ್ಡ್ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಪಡೆದು ಈಡನ್ ಗಾರ್ಡನ್ಸ್ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು.
ಎರಡನೇ ಎಸೆತ: ಮ್ಯಾಥ್ಯೂ ಕ್ರಾಸ್ ಔಟ್.
ಮೂರನೇ ಎಸೆತ: ಮೈಕಲ್ ಲೀಸ್ಕ್ ಕ್ಯಾಚ್ ನೀಡಿ ನಿರ್ಗಮನ.
ನಾಲ್ಕನೇ ಎಸೆತ: ಆಲಿವರ್ ಡೇವಿಡ್ಸನ್ ಕ್ಲೀನ್ ಬೌಲ್ಡ್ - ಹ್ಯಾಟ್ರಿಕ್!
ಇಷ್ಟಕ್ಕೇ ನಿಲ್ಲದ ಶೆಫರ್ಡ್ ಅದೇ ಓವರ್‌ನ ಕೊನೆಯ ಎಸೆತದಲ್ಲಿ ಸಫ್ಯಾನ್ ಶರೀಫ್ ವಿಕೆಟ್ ಪಡೆಯುವ ಮೂಲಕ ಒಂದೇ ಓವರ್‌ನಲ್ಲಿ 4 ವಿಕೆಟ್ ಕಿತ್ತು ಸ್ಕಾಟ್ಲೆಂಡ್ ಬೆನ್ನೆಲುಬು ಮುರಿದರು. ಅಂತಿಮವಾಗಿ ಶೆಫರ್ಡ್ 5 ವಿಕೆಟ್ ಪಡೆದು ಪಂದ್ಯದ ಹೀರೊ ಎನಿಸಿಕೊಂಡರು. ಸ್ಕಾಟ್ಲೆಂಡ್ ತಂಡ 18.5 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು.

ದಾಖಲೆಗಳ ಸುರಿಮಳೆ

1. ಟಿ20 ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ಪಡೆದ ವೆಸ್ಟ್ ಇಂಡೀಸ್‌ನ ಮೊದಲ ಬೌಲರ್ ಆಗಿದ್ದಾರೆ.
2. ಈಡನ್ ಗಾರ್ಡನ್ಸ್‌ನಲ್ಲಿ ಟಿ20 ವಿಶ್ವಕಪ್ ಪಂದ್ಯವೊಂದರಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ.
3. 2026ರ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಹ್ಯಾಟ್ರಿಕ್,(ಏಜೆನ್ಸೀಸ್​)