ನಾವು ಇರಾನ್ ಹಿತಾಸಕ್ತಿಗಾಗಿ ಕೆಲಸ ಮಾಡ್ತೇವೆ! ದೊಡ್ಡಣ್ಣನಿಗೆ ರಷ್ಯಾ ಸೆಡ್ಡು! ಅಮೆರಿಕ-ಇಸ್ರೇಲ್ ನಿದ್ದೆಗೆಡಿಸಿದ ಪುಟಿನ್ ಅವರ ಆ ಒಂದು ಭರವಸೆ ಏನು?
ಮಾಸ್ಕೋ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಬೆನ್ನಲ್ಲೇ, ಜಾಗತಿಕ ರಾಜಕೀಯ ಸಮೀಕರಣಗಳು ವೇಗವಾಗಿ ಬದಲಾಗುತ್ತಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಅವರು ಸೋಮವಾರ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದು, ಇರಾನ್‌ನ ಹಿತಾಸಕ್ತಿಗೆ ಅನುಗುಣವಾಗಿ ರಷ್ಯಾ ಕಾರ್ಯನಿರ್ವಹಿಸಲಿದೆ ಎಂದು ಘೋಷಿಸುವ ಮೂಲಕ ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪ್ರಬಲ ಸಂದೇಶ ರವಾನಿಸಿದ್ದಾರೆ.
ಭದ್ರವಾದ ಯುದ್ಧಕಾಲದ ಗೆಳೆತನ
ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಈ ಸಭೆಯಲ್ಲಿ ಪುಟಿನ್ ಅವರು ಮಾಸ್ಕೋ ಮತ್ತು ಟೆಹ್ರಾನ್ ನಡುವಿನ ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.
ಕಾರ್ಯತಂತ್ರದ ಮೈತ್ರಿ: ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜೊತೆಗಿನ ತನ್ನ ಕಾರ್ಯತಂತ್ರದ ಸಂಬಂಧಗಳನ್ನು ಮುಂದುವರಿಸಲು ರಷ್ಯಾ ದೃಢಸಂಕಲ್ಪ ಮಾಡಿದೆ ಎಂದು ಪುಟಿನ್ ಈ ಭೇಟಿಯ ವೇಳೆ ತಿಳಿಸಿದ್ದಾರೆ.
ಖಮೇನಿ ಸಂದೇಶ: ಕಳೆದ ವಾರ ಇರಾನ್‌ನ ಪರಮೋಚ್ಚ ನಾಯಕ ಮುಜ್ತಬಾ ಖಮೇನಿ ಅವರಿಂದ ತಮಗೆ ವಿಶೇಷ ಸಂದೇಶ ಬಂದಿರುವುದನ್ನು ಪುಟಿನ್ ಬಹಿರಂಗಪಡಿಸಿದ್ದು, ಉನ್ನತ ಮಟ್ಟದಲ್ಲಿ ಉಭಯ ದೇಶಗಳ ನಡುವೆ ನಿರಂತರ ಸಂವಹನ ನಡೆಯುತ್ತಿರುವುದನ್ನು ಇದು ಸಾಬೀತುಪಡಿಸಿದೆ.
ಇರಾನ್ ಹಿತಾಸಕ್ತಿಯೇ ನಮ್ಮ ಆದ್ಯತೆ"
ಪ್ರಸ್ತುತ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಮಾತನಾಡಿದ ಪುಟಿನ್, ರಷ್ಯಾ ತೆಗೆದುಕೊಳ್ಳುವ ಕ್ರಮಗಳು ಇರಾನ್ ಮತ್ತು ಈ ಪ್ರಾಂತ್ಯದ ಒಟ್ಟಾರೆ ಹಿತಾಸಕ್ತಿಗಳಿಗೆ ಅನುಗುಣವಾಗಿರಲಿವೆ ಎಂದು ಭರವಸೆ ನೀಡಿದ್ದಾರೆ. ಇರಾನ್ ನಿಯೋಗದಲ್ಲಿ ವಿದೇಶಾಂಗ ಸಚಿವರ ಜೊತೆಗೆ ಉಪ ವಿದೇಶಾಂಗ ಸಚಿವ ಕಾಜೆಮ್ ಘರಿಬಾಬಾದಿ ಮತ್ತು ಮಾಸ್ಕೋದ ಇರಾನ್ ರಾಯಭಾರಿ ಕಾಜೆಮ್ ಜಲಾಲಿಯವರು ಉಪಸ್ಥಿತರಿದ್ದರು.
ರಷ್ಯಾದ ಸಂಧಾನದ ಕೊಡುಗೆ
ಇದೇ ವೇಳೆ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಾತನಾಡಿ, ಇರಾನ್ ಮತ್ತು ಇತರ ಶಕ್ತಿಗಳ ನಡುವಿನ ಸಂಘರ್ಷವನ್ನು ಬಗೆಹರಿಸಲು ರಷ್ಯಾ ಸಂಧಾನಕಾರನ ಪಾತ್ರ ವಹಿಸಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಶಾಂತಿಯ ಪ್ರಯತ್ನ: ಎರಡೂ ಕಡೆಯವರಿಗೆ ಒಪ್ಪಿಗೆಯಾಗುವ ಸಂಧಾನ ಸೇವೆಗಳನ್ನು ನೀಡಲು ನಾವು ಸಿದ್ಧರಿದ್ದೇವೆ. ಶಾಂತಿ ನೆಲೆಸಲು ಮತ್ತು ಯುದ್ಧದ ಹಾದಿಗೆ ಮರಳದಂತೆ ತಡೆಯಲು ನಾವು ಶಕ್ತಿಮೀರಿ ಪ್ರಯತ್ನಿಸುತ್ತೇವೆ ಎಂದು ಪೆಸ್ಕೋವ್ ಹೇಳಿದ್ದಾರೆ.
ಜಾಗತಿಕ ಪರಿಣಾಮ
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ ನಂತರ, ರಷ್ಯಾ ಮತ್ತು ಇರಾನ್ ನಡುವಿನ ಸಂಬಂಧ ಈಗ ಹೊಸ ಆಯಾಮ ಪಡೆದುಕೊಂಡಿದೆ. ಯುಕ್ರೇನ್ ಯುದ್ಧದಲ್ಲಿ ಇರಾನ್‌ನ ಡ್ರೋನ್‌ಗಳು ರಷ್ಯಾಕ್ಕೆ ನೆರವಾಗಿದ್ದವು, ಈಗ ಇರಾನ್ ಸಂಕಷ್ಟದಲ್ಲಿರುವಾಗ ಪುಟಿನ್ ಅವರು ಬಹಿರಂಗವಾಗಿ ಬೆಂಬಲ ಸೂಚಿಸಿರುವುದು ಪಾಶ್ಚಿಮಾತ್ಯ ಒಕ್ಕೂಟಕ್ಕೆ ಸವಾಲಾಗಿ ಪರಿಣಮಿಸಿದೆ,(ಏಜೆನ್ಸೀಸ್).