ಅಮೆರಿಕದ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದರೆ ಇರಾನ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. 
ವಿದೇಶ

"ಮೂರೇ ವಾರದಲ್ಲಿ ಟೆಹ್ರಾನ್ ವಶಪಡಿಸಿಕೊಳ್ಳುತ್ತೇವೆ": ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ವಾರ್ನಿಂಗ್! Donald Trump

ವಾಷಿಂಗ್ಟನ್​​: ಕಳೆದೊಂದು ವರ್ಷದಿಂದ ಅಮೆರಿಕ ಹಾಗೂ ಇರಾನ್​ ನಡುವೆ ಸಂಘರ್ಷ ಮುಂದುವರಿದಿದ್ದು, ಈ ಮಿಲಿಟರಿ ಸಂಘರ್ಷ ಸುಖಾಂತ್ಯ ಕಾಣುವ ಲಕ್ಷಣ ಕಾಣುತ್ತಿಲ್ಲ. ನಮ್ಮ ಅಧಿಕಾರಿಗಳ ಮೇಲೆ ಬೆದರಿಕೆ ಒಡ್ಡುವ ಪ್ರಯತ್ನ ಮಾಡಿದರೆ, ಇರಾನ್​ ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳಲಿದೆ ಎಂದು ಡೊನಾಲ್ಡ್​ ಟ್ರಂಪ್​ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರಿಗೆ ಇರಾನ್​ ಜೀವ ಬೆದರಿಕೆ ಒಡ್ಡಿದ ಹಿನ್ನಲೆ ಅವರನ್ನು ವಾಷಿಂಗ್ಟನ್​​ನಿಂದ ಮಿಲಿಟರಿ ಬೇಸ್​ಗೆ ಸ್ಥಳಾಂತರಿಸಿದ ನಂತರ ಅಧ್ಯಕ್ಷರಿಂದ ಈ ಹೇಳಿಕೆ ಹೊರಬಂದಿದೆ.

ಮೂರೇ ವಾರದಲ್ಲಿ ಯುದ್ಧ ಮುಗಿಸುತ್ತೇವೆ!

ಇನ್ನೂ ಈ ಕುರಿತು ಖಾಸಗಿ ಚಾನೆಲ್​ ಜತೆ ಮಾತನಾಡಿದ ಅಮೆರಿಕ ಅಧ್ಯಕ್ಷ, ನಾನು ಇನ್ನುವರೆಗೆ ಇರಾನ್​ ಮೇಲೆ ಯುದ್ಧ ಆರಂಭಿಸಿಲ್ಲ, ನಾನು ಕೇವಲ ಮಿಲಿಟರಿ ಕಾರ್ಯಾಚರಣೆಯನ್ನಷ್ಟೇ ನಡೆಸಿದ್ದೇವೆ. ಹೀಗಾಗಿ ಅಮೆರಿಕ ಯುದ್ಧದಲ್ಲಿ ನಿರತವಾಗಿದೆ ಎಂದು ಹೇಳಬೇಡಿ.

ಒಂದು ವೇಳೆ ನಾವು ಇರಾನ್​ ವಿರುದ್ಧ ಯುದ್ಧಕ್ಕಿಳಿದರೇ, ಕೇವಲ ಮೂರೇ ವಾರದಲ್ಲಿ ಟೆಹ್ರಾನ್​ ನಮ್ಮ ವಶವಾಗುತ್ತದೆ ಎಂದು ಟ್ರಂಪ್​ ಹೇಳಿದ್ದಾರೆ. ನಾನು ಸಂಘರ್ಷ ಆರಂಭವಾಗುವುದಕ್ಕಿಂತ, ಸಂಘರ್ಷ ಆರಂಭವಾದ ನಂತರ ಅತಿ ಹೆಚ್ಚು ತೈಲವನ್ನು ಇರಾನ್​ನಿಂದ ಖರೀದಿಸಿದ್ದೇವೆ. ಕೆಳೆದ ಐದು ತಿಂಗಳಿನಲ್ಲಿ ಒಂದೇ ಒಂದು ಸಾವು ಸಂಭವಿಸಿಲ್ಲವೆಂದು ಹೇಳಿದ್ದಾರೆ.

ದಾಳಿ ನಡೆಸಿ ಎಂದ ನೆತನ್ಯಾಹು; ಧರ್ಮಸಂಕಷ್ಟದಲ್ಲಿ ಟ್ರಂಪ್​!

ಕೆಲವು ಜಾಗತಿಕ ಮಾಧ್ಯಮಗಳು ವರದಿ ಮಾಡಿದಂತೆ, ಇಸ್ರೇಲ್​ನಲ್ಲಿ ಅಧಿಕಾರ ಕಳೆದುಕೊಳ್ಳುವ ಹಂತದಲ್ಲಿರುವ ಪ್ರಧಾನಿ ಬೆಂಜಾಮಿನ್​ ನೆತನ್ಯಾಹು, ಡೊನಾಲ್ಡ್​ ಟ್ರಂಪ್​ಗೆ ಇರಾನ್​ ಮೇಲೆ ವೈಮಾನಿಕ ದಾಳಿ ಮುಂದುವರಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ಆದರೆ, ಮಧ್ಯಂತರ ಚುನಾವಣೆಯಲ್ಲಿ ಸೋಲನ್ನು ಕಂಡಿರುವ ಟ್ರಂಪ್​ಗೆ. ನೂತನ ಡೆಮೊಕ್ರಟಿಕ್​ ಸಚಿವರು ಬೆಂಬಲ ನೀಡುತ್ತಿಲ್ಲ ಹಾಗೂ ಇರಾನ್​ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಕಡಿತಗೊಳಿಸುವಂತೆ ಒತ್ತಾಯ ಹೇರುತ್ತಿದ್ದಾಗಿ ತಿಳಿದುಬಂದಿದೆ.

ಜನರ ರಕ್ಷಣೆಗಾಗಿ ಪರಮಾಣು ಬೇಕಿದೆ!

ಇನ್ನು ಇರಾನ್​, ತಮ್ಮ ನ್ಯೂಕ್ಲಿಯರ್​ ಪ್ರಯೋಗವು ತಮ್ಮ ದೇಶದ ಜನರ ರಕ್ಷಣೆಗಾಗಿ ನಡೆಸುತ್ತೇವೆ ಹೊರತು, ಬಾಂಬ್​ಗಳನ್ನು ತಯಾರಿಸಿ, ಇತರ ದೇಶಗಳನ್ನು ಬೆದರಿಸಲಲ್ಲ ಎಂದು ತಿಳಿಸಿದೆ. ಆದರೆ, ಅರಬ್​ ದೇಶಗಳಾದ, ಯುಎಇ, ಕುವೇತ್​, ಬಹ್ರೇನ್​ ಹಾಗೂ ಸೌದಿ ಅರೇಬಿಯಾ ದೇಶಗಳು ಇರಾನ್​ ಪರಮಾಣು ಅಸ್ತ್ರವನ್ನು ಹೊಂದಬಾರದೆಂದು ತಾಕೀತು ಮಾಡಿದೆ.

ಇನ್ನು, ಅಮೆರಿಕ ತಾವು ಈಗಾಗಲೇ ತಿಳಿಸಿರುವ ಏಳು ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಶಾಂತಿ ಮಾತುಕತೆಗೆ ಸಿದ್ಧವೆಂದು ಇರಾನ್​ ತಿಳಿಸಿದ್ದು, ಈ ಬಗ್ಗೆ ಅಮೆರಿಕ ಇನ್ನು ಯಾವುದೇ ಹೇಳಿಕೆ ನೀಡಿಲ್ಲ. ಇನ್ನೂ ಈ ಅಮೆರಿಕ - ಇರಾನ್​ ನಡುವಿನ ಸಂಘರ್ಷ ಎಲ್ಲಿಗೆ ಬಂದು ನಿಲ್ಲಲಿದೆ ಎಂದು ಜಗತ್ತು ಕಾತುರದಿಂದ ಕಾಯುತ್ತಿರುವುದಂತೂ ನಿಜವಾಗಿದೆ, (ಏಜೆನ್ಸೀಸ್​).