ವೆನೆಜುವೆಲಾ, ಇರಾನ್ ಬಳಿಕ ಕ್ಯೂಬಾ ಮೇಲೆ ಕಣ್ಣಿಟ್ಟ ಡೊನಾಲ್ಡ್ ಟ್ರಂಪ್!
- ನಾವು ಕ್ಯೂಬಾವನ್ನು ವಶ ಪಡಿಸಿಕೊಳ್ಳಲಿದ್ದೆವೆ
- ನಮ್ಮ ಒಂದು ಯುದ್ಧನೌಕೆ ನೋಡಿದರೆ ಆ ದೇಶ ಶರಣಾಗುತ್ತದೆ
- ವೆನೆಜುವೆಲಾ, ಇರಾನ್ ಬಳಿಕ ಕ್ಯೂಬಾ ಮೇಲೆ ಕಣ್ಣಿಟ್ಟ ಡೊನಾಲ್ಡ್ ಟ್ರಂಪ್!
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದಾ ತಮ್ಮ ವಿವಾದಾತ್ಮಕ ಹೇಳಿಕೆ ಮೂಲಕವೇ ವಿಶ್ವದಾದ್ಯಂತ ಸಂಚಲನ ಸೃಷ್ಟಿಸುವ ವ್ಯಕ್ತಿತ್ವ. ತಮ್ಮ ನೇರ ನುಡಿ ಮತ್ತು ಅನಿರೀಕ್ಷಿತ ನಿರ್ಧಾರಗಳಿಂದಲೇ ಸುದ್ದಿಯಾಗುವ ಟ್ರಂಪ್ (Donald Trump on Cuba), ಈಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಅಮೆರಿಕ ಶೀಘ್ರದಲ್ಲೇ ಕ್ಯೂಬಾವನ್ನು ಆಕ್ರಮಿಸಿಕೊಳ್ಳಲಿದೆ ಎಂದು ಅವರು ನೀಡಿರುವ ಹೇಳಿಕೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಮತ್ತು ಆತಂಕಕ್ಕೆ ಕಾರಣವಾಗಿದೆ.
ಪಾಮ್ ಬೀಚ್‌ನಲ್ಲಿ ನಡೆದಿದ್ದೇನು?
ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ಪ್ರತಿಷ್ಠಿತ ಫೋರಂ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಟ್ರಂಪ್ ಭಾಗವಹಿಸಿದ್ದರು. ಈ ವೇಳೆ ಮಾತನಾಡುತ್ತಾ, ಮಾಜಿ ಪ್ರತಿನಿಧಿ ಡಾನ್ ಮೈಕಾ ಅವರನ್ನು ಉದ್ದೇಶಿಸಿ ಕ್ಯೂಬಾ ಪ್ರಸ್ತಾಪ ಮಾಡಿದರು. ನಾವು ತಕ್ಷಣವೇ ಆ ಸ್ಥಳವನ್ನು (ಕ್ಯೂಬಾ) ಆಕ್ರಮಿಸಿಕೊಳ್ಳಲಿದ್ದೇವೆ ಎಂದು ಟ್ರಂಪ್ ಘೋಷಿಸಿದಾಗ ವೇದಿಕೆಯಲ್ಲಿದ್ದವರು ಒಂದು ಕ್ಷಣ ಸ್ತಬ್ಧರಾದರು.
ಯುದ್ಧನೌಕೆ ನೋಡಿದರೆ ಸಾಕು, ಅವರು ಶರಣಾಗುತ್ತಾರೆ!
ಕ್ಯೂಬಾದ ಪ್ರಸ್ತುತ ಸ್ಥಿತಿಯ ಬಗ್ಗೆ ಲೇವಡಿ ಮಾಡಿದ ಟ್ರಂಪ್, ಅಲ್ಲಿನ ಆಡಳಿತ ಮತ್ತು ಸಮಸ್ಯೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕ್ಯೂಬಾದಲ್ಲಿ ಹತ್ತಾರು ಸಮಸ್ಯೆಗಳಿವೆ, ಆದರೆ ನಾನು ಏಕಕಾಲಕ್ಕೆ ಎಲ್ಲವನ್ನೂ ಮಾಡಲು ಹೋಗುವುದಿಲ್ಲ. ಮೊದಲು ಒಂದು ಕೆಲಸ ಮುಗಿಸಿ ನಂತರ ಮುಂದಿನ ಹೆಜ್ಜೆ ಇಡುತ್ತೇನೆ ಎಂದರು.
ಇಷ್ಟಕ್ಕೇ ನಿಲ್ಲದ ಅವರು, ತಮ್ಮದೇ ಶೈಲಿಯಲ್ಲಿ ತಮಾಷೆ ಮಾಡುತ್ತಾ, ಅಮೆರಿಕದ ಯುದ್ಧನೌಕೆ ಕ್ಯೂಬಾದ ದಡಕ್ಕೆ ಬಂದು ನಿಂತರೆ ಸಾಕು, ಅಲ್ಲಿನ ಜನ ಧನ್ಯವಾದಗಳು, ನಾವು ಬಿಟ್ಟುಕೊಡುತ್ತೇವೆ ಎಂದು ತಾವಾಗಿಯೇ ಶರಣಾಗುತ್ತಾರೆ ಎಂದಿದ್ದಾರೆ. ಟ್ರಂಪ್ ಅವರ ಈ ಮಾತುಗಳು ಕೇವಲ ತಮಾಷೆಯೋ ಅಥವಾ ನಿಜವಾಗಿಯೂ ಕ್ಯೂಬಾ ಮೇಲೆ ಅಮೆರಿಕ ಕಣ್ಣಿಟ್ಟಿದೆಯೇ ಎಂಬ ಸಂಶಯವನ್ನು ಹುಟ್ಟುಹಾಕಿದೆ.
ಮೇ 1 ರಿಂದ ಕ್ಯೂಬಾಗೆ ಹೊಸ ಸಂಕಷ್ಟ!
ಟ್ರಂಪ್ ಹೇಳಿಕೆ ಕೇವಲ ಮಾತಿಗೆ ಸೀಮಿತವಾಗಿಲ್ಲ. 2026ರ ಮೇ 1 ರಿಂದ ಜಾರಿಗೆ ಬರುವಂತೆ ಕ್ಯೂಬಾ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಲು ಅವರು ಆದೇಶಿಸಿದ್ದಾರೆ. ಕ್ಯೂಬಾದ ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿ ಈ ನಿರ್ಬಂಧ ವಿಧಿಸಲಾಗಿದ್ದು, ಅವರೊಂದಿಗೆ ವ್ಯವಹಾರ ನಡೆಸುವ ವಿದೇಶಿ ಬ್ಯಾಂಕುಗಳಿಗೂ ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದು ಕ್ಯೂಬಾವನ್ನು ಆರ್ಥಿಕವಾಗಿ ಹೈರಾಣಾಗಿಸುವ ತಂತ್ರ ಎಂಬುದು ಜಾಗತಿಕ ತಜ್ಞರ ಅಭಿಪ್ರಾಯವಾಗಿದೆ.
ವಿಶ್ವಸಂಸ್ಥೆಯಲ್ಲಿ ತಲ್ಲಣ; ಶ್ವೇತಭವನದಲ್ಲಿ ಮೌನ
ಒಂದು ದೇಶದ ಅಧ್ಯಕ್ಷರು ಮತ್ತೊಂದು ದೇಶವನ್ನು ಆಕ್ರಮಿಸಿಕೊಳ್ಳುತ್ತೇವೆ ಎಂದು ಹೇಳುವುದು ಸಣ್ಣ ವಿಷಯವಲ್ಲ. ಇದು ರಾಜತಾಂತ್ರಿಕ ವಲಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಆದರೆ, ಈ ಬಗ್ಗೆ ಶ್ವೇತಭವನ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಟ್ರಂಪ್ ಅವರ ಈ ಆಕ್ರಮಣದ ಮಾತುಗಳು ಚುನಾವಣೆ ಅಥವಾ ರಾಜಕೀಯ ಗಿಮಿಕ್ ಇರಬಹುದೇ ಎಂಬ ಚರ್ಚೆಯೂ ಶುರುವಾಗಿದೆ.
ಮುಂದೇನು?
ಅಮೆರಿಕ ಮತ್ತು ಕ್ಯೂಬಾ ನಡುವಿನ ಸಂಬಂಧ ಮೊದಲಿನಿಂದಲೂ ಹಳಸಿದೆ. ಈಗ ಟ್ರಂಪ್ ಅವರ ಈ ಹೊಸ ನಡೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಕ್ಯೂಬಾ ಇದರ ವಿರುದ್ಧ ಯಾವ ರೀತಿ ಪ್ರತಿಕ್ರಿಯಿಸಲಿದೆ? ವಿಶ್ವದ ಇತರ ರಾಷ್ಟ್ರಗಳು ಅಮೆರಿಕದ ಈ ನಡೆಯನ್ನು ಬೆಂಬಲಿಸುತ್ತವೆಯೇ? ಕಾದು ನೋಡಬೇಕಿದೆ, (ಏಜನ್ಸೀಸ್).