ನೈಜೀರಿಯಾದಲ್ಲಿ ಐಸಿಸ್ ಭಯೋತ್ಪಾದಕರ ಮೇಲೆ ಅಮೆರಿಕ ದಾಳಿ
- ನೈಜೀರಿಯಾದಲ್ಲಿ ಐಸಿಸ್ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಅಮೆರಿಕ ದಾಳಿ
- ಕ್ರಿಶ್ಚಿಯನ್ನರ ಹತ್ಯೆಗೆ ಪ್ರತೀಕಾರವಾಗಿ ಈ ಮಾರಕ ದಾಳಿ ನಡೆದಿದೆ ಎಂದು ಡೊನಾಲ್ಡ್ ಟ್ರಂಪ್
- ಮೃತ ಭಯೋತ್ಪಾದಕರು ಸೇರಿದಂತೆ ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು ಎಂದ ಟ್ರಂಪ್
ವಾಷಿಂಗ್ಟನ್: ನೈಜೀರಿಯಾದಲ್ಲಿ ಐಸಿಸ್ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಅಮೆರಿಕ ದಾಳಿ ನಡೆಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ( Donald Trump ) ಗುರುವಾರ ಹೇಳಿದ್ದಾರೆ. ನೈಜೀರಿಯಾದಲ್ಲಿ ಕ್ರಿಶ್ಚಿಯನ್ನರ ಹತ್ಯೆಗೆ ಪ್ರತೀಕಾರವಾಗಿ ಈ ಮಾರಕ ದಾಳಿಗಳನ್ನು ನಡೆಸಿರುವುದಾಗಿ ಮತ್ತು ಅನೇಕ ಐಸಿಸ್ ಭಯೋತ್ಪಾದಕರು ಸಾವಿಗೀಡಾಗಿ ಟ್ರಂಪ್ ತಿಳಿಸಿದ್ದಾರೆ.
ಇತ್ತೀಚೆಗೆ ಐಸಿಸ್ ಭಯೋತ್ಪಾದಕರು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ನರಮೇಧ ನಡೆಸುತ್ತಿದ್ದಾರೆ. ಈ ಕುರಿತು ಅಮೆರಿಕ ಹಲವು ಬಾರಿ ಐಸಿಸ್ ಭಯೋತ್ಪಾದಕರಿಗೆ ಎಚ್ಚರಿಕೆ ನೀಡಿದರೂ ಕ್ಯಾರೆ ಎನ್ನಲಿಲ್ಲ. ಹೀಗಾಗಿ, ನೈಜೀರಿಯಾದ ಅಧಿಕಾರಿಗಳ ಕೋರಿಕೆಯ ಮೇರೆಗೆ ಅಮೆರಿಕ, ಕ್ರಿಸ್‌ಮಸ್ ದಿನದಂದೇ ಮಾರಕ ದಾಳಿಗಳನ್ನು ನಡೆಸಿದೆ ಎಂದು ಟ್ರಂಪ್ ತಮ್ಮ ಸೋಶಿಯಲ್ ಮೀಡಿಯಾ ಟ್ರೂತ್ನಲ್ಲಿ ತಿಳಿಸಿದ್ದಾರೆ.
ಈ ದಾಳಿಯಲ್ಲಿ ಅನೇಕ ಭಯೋತ್ಪಾದಕರು ಸಾವಿಗೀಡಾಗಿದ್ದಾರೆ ಎಂದು ಅಮೆರಿಕದ ರಕ್ಷಣಾ ಇಲಾಖೆ ತಿಳಿಸಿದೆ. ಆದಾಗ್ಯೂ, ಎಷ್ಟು ಜನರು ಮೃತಪಟ್ಟಿದ್ದಾರೆ ಅನ್ನೋದನ್ನು ಬಹಿರಂಗಪಡಿಸಿಲ್ಲ.
ನಮ್ಮ ಸೇನೆಯನ್ನು ದೇವರು ಆಶೀರ್ವದಿಸಲಿ ಎಂದಿರುವ ಟ್ರಂಪ್, ಮೃತ ಭಯೋತ್ಪಾದಕರು ಸೇರಿದಂತೆ ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು, ಕ್ರಿಶ್ಚಿಯನ್ನರ ಮೇಲಿನ ಹತ್ಯೆ ಮುಂದುವರಿದರೆ ಇನ್ನೂ ಹೆಚ್ಚಿನ ಭಯೋತ್ಪಾದಕರನ್ನು ಹೊಡೆದುರುಳಿಸುತ್ತೇವೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ನೈಜೀರಿಯಾ ಅಧಿಕಾರಿಗಳ ಕೋರಿಕೆಯ ಮೇರೆಗೆ ಹಲವಾರು ಐಸಿಸ್ ಭಯೋತ್ಪಾದಕರನ್ನು ಕೊಂದಿರುವುದಾಗಿ ಯುಎಸ್ ಆಫ್ರಿಕಾ ಕಮಾಂಡ್ ಪೋಸ್ಟ್‌ನಲ್ಲಿ ತಿಳಿಸಿದರೆ, ನೈಜೀರಿಯಾ ಸರ್ಕಾರದ ಬೆಂಬಲ ಮತ್ತು ಸಹಕಾರಕ್ಕೆ ಪೆಂಟಗನ್ ಮುಖ್ಯಸ್ಥ ಪೀಟ್ ಹೆಗ್ಸೆತ್ ಕೃತಜ್ಞತೆ ಸಲ್ಲಿಸಿದ್ದಾರೆ.
ಅಂದಹಾಗೆ, ನೈಜೀರಿಯಾದಲ್ಲಿ ಟ್ರಂಪ್ ನೇತೃತ್ವದಲ್ಲಿ ಅಮೆರಿಕದ ಪಡೆಗಳು ನಡೆಸಿದ ಮೊದಲ ದಾಳಿ ಇದಾಗಿದೆ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಟ್ರಂಪ್ ಅವರು ಪಶ್ಚಿಮ ಆಫ್ರಿಕಾದ ರಾಷ್ಟ್ರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಾದ ನಂತರ, ನೈಜೀರಿಯಾದ ಅಸಂಖ್ಯಾತ ಸಶಸ್ತ್ರ ಸಂಘರ್ಷಗಳ ಮಧ್ಯೆ ಅಲ್ಲಿನ ಕ್ರೈಸ್ತರು ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅಮೆರಿಕ ಇದೀಗ ದಾಳಿ ಮಾಡಿ, ಭಯೋತ್ಪಾದಕರನ್ನು ಹೊಡೆದುರುಳಿಸಿದೆ, (ಏಜೆನ್ಸೀಸ್).