ಇರಾನ್​ ದಾಳಿಗೆ ನೇತನ್ಯಾಹು ಮೃತಪಟ್ಟಿದ್ದಾರೆಯೇ? ಕೊನೆಗೂ ಮೌನ ಮುರಿದ ಇಸ್ರೇಲ್​ ಪ್ರಧಾನಿ ಕಚೇರಿ! Benjamin Netanyahu  
ವಿದೇಶ

ಇರಾನ್​ ದಾಳಿಗೆ ನೆತನ್ಯಾಹು ಮೃತಪಟ್ಟಿದ್ದಾರೆಯೇ? ಕೊನೆಗೂ ಮೌನ ಮುರಿದ ಇಸ್ರೇಲ್​ ಪ್ರಧಾನಿ ಕಚೇರಿ! Benjamin Netanyahu

ಪ್ರಮುಖ ಮುಖ್ಯಾಂಶಗಳು

  • ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೃತಪಟ್ಟಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ
  • ನೆತನ್ಯಾಹು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದೇ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ
  • ಇದೀಗ ನೆತನ್ಯಾಹು ಅವರ ಕಚೇರಿ ಮೌನ ಮುರಿದಿದ್ದು ಹರಿದಾಡುತ್ತಿರುವ ವದಂತಿಗಳೆಲ್ಲ ಸುಳ್ಳು ಎಂದಿದೆ
ಟೆಲ್ ಅವಿವ್: ಇರಾನ್​ ಸೇನೆ ನಡೆಸಿದ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ( Benjamin Netanyahu ) ಮೃತಪಟ್ಟಿದ್ದಾರೆ ಅನ್ನೋ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ಜೋರಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ನೆತನ್ಯಾಹು ಕೂಡ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದೇ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದೆಲ್ಲದರ ನಡುವೆ ಇಸ್ರೇಲ್​ ಪ್ರಧಾನಿ ಕಚೇರಿ ಕೊನೆಗೂ ಮೌನ ಮುರಿದಿದೆ. 
ಫೆ.28ರಂದು ಶುರುವಾದ ಇರಾನ್-ಇಸ್ರೇಲ್ ಯುದ್ಧವು 15ನೇ ದಿನಕ್ಕೆ ಕಾಲಿಟ್ಟಿದೆ. ನೆತನ್ಯಾಹು ಅವರು ಶುಕ್ರವಾರ (ಮಾರ್ಚ್​​ 13) ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ವಿಡಿಯೋವನ್ನು ಹಂಚಿಕೊಂಡರು. ವಿಡಿಯೋದಲ್ಲಿ ಮಾತನಾಡುವಾಗ ಅವರ ಬಲಗೈಯಲ್ಲಿ ಆರು ಬೆರಳುಗಳಿರುವುದನ್ನು ಅನೇಕ ಮಂದಿ ಗಮನಿಸಿದರು. ಇದಾದ ಬಳಿಕ ವಿಡಿಯೋದಲ್ಲಿರುವ ವ್ಯಕ್ತಿ ನೆತನ್ಯಾಹು ಅಲ್ಲ ಎಂಬ ವದಂತಿಗಳು ಹರಡಿತು.  ಇದರ ನಡುವೆ ಅಮೆರಿಕದ ರಾಜಕೀಯ ವಿಶ್ಲೇಷಕಿ ಕ್ಯಾಂಡೇಸ್ ಓವೆನ್ಸ್ ಕೂಡ ನೆತನ್ಯಾಹು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಅಲ್ಲದೆ, ಅವರ ಕಚೇರಿ ಕೇವಲ ನಕಲಿ ವಿಡಿಯೋಗಳನ್ನು ಏಕೆ ಹಂಚಿಕೊಳ್ಳುತ್ತಿದೆ ಅಂತಾನೂ ಪ್ರಶ್ನೆ ಮಾಡಿದರು.
ಫ್ಯಾಕ್ಟ್ ಚೆಕ್: ಸತ್ಯವೇನು..?
ಈ ವದಂತಿಗಳ ಬಗ್ಗೆ ಎಕ್ಸ್‌ನ AI ಚಾಟ್‌ಬಾಟ್ Grok ಸ್ಪಷ್ಟನೆ ನೀಡಿದೆ. ನೆತನ್ಯಾಹು ಅವರಿಗೆ ಎಲ್ಲರಂತೆ ಪ್ರತಿ ಕೈಯಲ್ಲಿ ಐದು ಬೆರಳುಗಳೇ ಇವೆ. ವಿಡಿಯೋದಲ್ಲಿ ಅವರು ಪೋಡಿಯಂ ಬಳಿ ಕೈ ಸನ್ನೆಯ ಮೂಲಕ ಮಾತನಾಡುತ್ತಿರುವಾಗ ಕ್ಯಾಮರಾ ಆಂಗಲ್ ಮತ್ತು ಕೆಂಪು ವೃತ್ತದ ಎಫೆಕ್ಟ್‌ನಿಂದಾಗಿ ಅದು ಆರು ಬೆರಳುಗಳಂತೆ ಕಾಣುವ ಆಪ್ಟಿಕಲ್ ಇಲ್ಯೂಷನ್ ಸೃಷ್ಟಿಸಿದೆ ಎಂದು ಅದು ಹೇಳಿದೆ. ಅಷ್ಟೇ ಅಲ್ಲದೆ, ನೆತನ್ಯಾಹು ಸಾವನ್ನಪ್ಪಿದ್ದಾರೆ ಎಂಬ ಇರಾನ್ ಮಾಧ್ಯಮಗಳ ವರದಿಯನ್ನು ಕೂಡ ಗ್ರೋಕ್ ತಳ್ಳಿಹಾಕಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.

ಪ್ರಧಾನಿ ಕಚೇರಿ ಹೇಳಿದ್ದೇನು?

ಇದೀಗ ನೆತನ್ಯಾಹು ಅವರ ಕಚೇರಿ ಈ ವದಂತಿಗಳಿಗೆ ಸ್ಪಷ್ಟನೆ ನೀಡಿದೆ. ಪ್ರಧಾನಿ ನೆತನ್ಯಾಹು ಇನ್ನೂ ಸತ್ತಿಲ್ಲ ಮತ್ತು ಹರಿದಾಡುತ್ತಿರುವ ವದಂತಿಗಳೆಲ್ಲ ಸುಳ್ಳು ಎಂದು ಘೋಷಿಸಿದೆ. ನೆತನ್ಯಾಹು ಚೆನ್ನಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿಗೆ, ನೆತನ್ಯಾಹು ವಿಚಾರದಲ್ಲಿ ಹರಿದಾಡಿದ್ದ ವದಂತಿಗೆ ಸ್ಪಷ್ಟನೆ ಸಿಕ್ಕಿದಂತಾಗಿದೆ. ಆದರೂ, ಸಾರ್ವಜನಿಕವಾಗಿ ನೆತನ್ಯಾಹು ಕಾಣಿಸಿಕೊಳ್ಳುವವರೆಗೂ ಈ ವದಂತಿ ಜೀವಂತವಾಗಿಯೇ ಇರುತ್ತದೆ, (ಏಜೆನ್ಸೀಸ್​).