ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳುವದರ ಬಗ್ಗೆ ಸುಳಿವು ಕೊಟ್ಟ ಪುಟಿನ್
- ನಾಲ್ಕು ವರ್ಷದಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ
- ಈ ವಿಷಯ ಈಗ ಕೊನೆ ಘಟ್ಟಕ್ಕೆ ಬಂದಿದೆ: ವ್ಲಾಡಿಮಿರ್ ಪುಟಿನ್
- ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳುವದರ ಬಗ್ಗೆ ಸುಳಿವು ಕೊಟ್ಟ ಪುಟಿನ್
ಮಾಸ್ಕೋ: ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧವು ಈಗ ಸಮಾಪ್ತಿಯಾಗುವ ಲಕ್ಷಣ ಕಂಡುಬರುತ್ತಿದ್ದು, ಶನಿವಾರ (ಮೇ.9) ಮಾಸ್ಕೋದಲ್ಲಿ ರಷ್ಯಾ ವಿಜಯ ದಿನದಂದು ಮಾತನಾಡಿದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin on Russia Ukraine War), ಆ ವಿಷಯ ಈಗ ಮುಗಿಯುವ ಹಂತವನ್ನು ತಲುಪಿದೆ ಎಂದು ಅನಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಈ ಮೂಲಕ ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿದ್ದ ಯುದ್ಧವು ಶಾಂತಿ ಮಾತುಕತೆಗೆ ಮುಂದಾಗಲಿದೆ ಎಂಬ ಸೂಚನೆ ದೊರೆಯುತ್ತಿದೆ. ಹಾಗೆಯೇ ಈ ಹೇಳಿಕೆ ಕದನ ವಿರಾಮ ಘೋಷಣೆಯಾಗಿ ಉಭಯ ದೇಶಗಳು ತಲಾ 1,000 ಯುದ್ಧ ಕೈದಿಗಳನ್ನು ಹಸ್ತಾಂತರಿಸಲು ಸಮ್ಮತಿ ನೀಡಿದ ತರುವಾಯ ಕೇಳಿ ಬಂದಿದೆ.
ಸಣ್ಣ ಪ್ರಮಾಣದಲ್ಲಿ ನಡೆದ ವಿಜಯ್ ಪರೇಡ್!
ಶನಿವಾರ ನಡೆದ ರಷ್ಯಾ ವಿಜಯೋತ್ಸವ ಪರೇಡ್, ಕಳೆದ ವರ್ಷಕ್ಕಿಂತ ವಿಭಿನ್ನವಾಗಿ ನಡೆದಿದೆ. ಈ ಭಾರಿ ಕೇವಲ ಸೈನಿಕರ ಕವಾಯತು ಮಾತ್ರ ನಡೆದಿದ್ದು, ಯಾವುದೇ ಯುದ್ಧ ಟ್ಯಾಂಕ್, ಮಿಲಿಟರಿ ವಾಹನಗಳ ಪ್ರದರ್ಶನ ನಡೆದಿಲ್ಲ. ದೊಡ್ಡದಾದ ಪರದೆ ಮೇಲೆ ಮಿಸೈಲ್ಗಳ ಹಾಗೂ ಯುದ್ಧೋತ್ಪನ್ನಗಳ ವಿಡಿಯೋಗಳನ್ನಷ್ಟೆ ಪ್ರದರ್ಶಿಸಲಾಗಿದೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಪುಟಿನ್, ಎಂದಿನಂತೆ ರಷ್ಯನ್ ಸೈನಿಕರ ಸಾಹಸವನ್ನು ಹೊಗಳುತ್ತಾ, ನಾಟೋ ಬಣವನ್ನು ದೂಷಿಸಿದರು. ಉಕ್ರೇನ್ ಜೊತೆ ಮಾತುಕತೆ ಬಗ್ಗೆ ಹೇಳಿಕೆ ನೀಡಿದ ಪುಟಿನ್, ಉಭಯ ದೇಶಗಳು ಸಂಪೂರ್ಣ ಶಾಂತಿ ಬಯಸಿದರೆ ನಾವು ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ.
ಟ್ರಂಪ್ನಿಂದ ಕದನ ವಿರಾಮಕ್ಕೆ ಒತ್ತಾಯ
ರಷ್ಯಾ ಹಾಗೂ ಉಕ್ರೇನ್ ನಡುವೆ ಏರ್ಪಟ್ಟಿರುವ ಬಿಕ್ಕಟ್ಟನ್ನು ಬಗೆಹರಿಸಲು ಮುಂದಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎರಡನೇ ವಿಶ್ವ ಯುದ್ಧನ ನಂತರ ಬಲುದೀರ್ಘ ನಡೆಯುತ್ತಿರುವ ಯುದ್ಧವೆಂದರೆ ಅದು ರಷ್ಯಾ-ಉಕ್ರೇನ್ ಕದನವಾಗಿದೆ. ಈ ಎರಡು ದೇಶಗಳು ಸಂಘರ್ಷವನ್ನು ಬಿಟ್ಟು ಕದನ ವಿರಾಮ, ಶಾಂತಿ ಮಾತುಕತೆ ಬಗ್ಗೆ ಚಿಂತಿಸಬೇಕೆಂದು ಹೇಳಿದ್ದಾರೆ, (ಏಜನ್ಸೀಸ್).