ನವದೆಹಲಿ: ಸಮುದ್ರದ ಮೇಲೆಯೇ ಸುಸಜ್ಜಿತವಾದ ಐಷಾರಾಮಿ ಮನೆ, ಕಣ್ಣು ಹಾಯಿಸಿದಷ್ಟೂ ನೀಲಿ ಸಾಗರ, ಜಗತ್ತಿನ ಎಲ್ಲ ಖಂಡಗಳನ್ನು ಸುತ್ತುವ ಭರವಸೆಗಳೊಂದಿಗೆ ಪಯಣ ಆರಂಭಿಸಿದ್ದ ಅಮೆರಿಕದ ಐಷಾರಾಮಿ ರೆಸಿಡೆನ್ಶಿಯಲ್ ಕ್ರೂಸ್ ಶಿಪ್ 'ದಿ ಒಡಿಸ್ಸಿ' ( Villa Vie Odyssey Cruise ) ಈಗ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಸಾಗರ ಮಧ್ಯದಲ್ಲೇ ಸ್ತಬ್ಧಗೊಂಡಿದೆ.
ಹೌದು, ಕಡಲ ಮೇಲೆ ಜೀವನ ನಡೆಸುವ ಅಪರೂಪದ ಅನುಭವ ಪಡೆಯಲು ಲಕ್ಷಾಂತರ ಡಾಲರ್ ವ್ಯಯಿಸಿ ಹಡಗನ್ನೇ ತವರು ಮಾಡಿಕೊಂಡಿದ್ದ ನೂರಾರು ಪ್ರಯಾಣಿಕರಿಗೆ ಈಗ ತೀವ್ರ ನಿರಾಶೆಯಾಗಿದೆ. ಇಂಧನ ಬೆಲೆ ಏರಿಕೆ ಹಾಗೂ ನಿರ್ವಹಣಾ ವೆಚ್ಚ ಭರಿಸಲಾಗದೆ ಅಮೆರಿಕದ ಕಂಪನಿ ಹಡಗಿನ ನಿರ್ವಹಣೆಯನ್ನೇ ಕೈಚೆಲ್ಲಿದ್ದು, ಈ ಐಷಾರಾಮಿ ಹಡಗಿನ ಪ್ರವಾಸ ಕಾಂಬೋಡಿಯಾದಲ್ಲಿ ಅರ್ಧಕ್ಕೇ ಮೊಟಕುಗೊಂಡಿದೆ.
ಅಮೆರಿಕದ ಫ್ಲೋರಿಡಾ ಮೂಲದ 'ವಿಲ್ಲಾ ವಿ ರೆಸಿಡೆನ್ಸಸ್' ಕಂಪನಿಯು ಸಾಗರ ಪ್ರಿಯರಿಗಾಗಿ ಈ ವಿಶೇಷ ಸುದೀರ್ಘ ಪ್ರವಾಸವನ್ನು ಆಯೋಜಿಸಿತ್ತು. ಮೂರೂವರೆ ವರ್ಷಗಳ ಅವಧಿಯಲ್ಲಿ ಜಗತ್ತಿನ ಏಳು ಖಂಡಗಳನ್ನು ಸುತ್ತುವ ಗುರಿಯೊಂದಿಗೆ ಎರಡು ವರ್ಷಗಳ ಹಿಂದೆ ಈ ನೌಕೆ ತನ್ನ ಯಾನವನ್ನು ಆರಂಭಿಸಿತ್ತು.
ಯೋಜನೆ ಪ್ರಕಾರ, ಈ ಐಷಾರಾಮಿ ಪಯಣ 2030ರ ಆಗಸ್ಟ್ವರೆಗೆ ಮುಂದುವರಿಯಬೇಕಿತ್ತು. ಆದರೆ, ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಇರಾನ್ ಯುದ್ಧದ ಪರಿಣಾಮವಾಗಿ ಏಷ್ಯಾದಲ್ಲಿ ಡೀಸೆಲ್ ಹಾಗೂ ಇಂಧನ ದರಗಳು ಗಗನಕ್ಕೇರಿವೆ. ಇದರಿಂದಾಗಿ ಹಡಗಿನ ದೈನಂದಿನ ನಿರ್ವಹಣಾ ವೆಚ್ಚವು ತಡೆದುಕೊಳ್ಳಲಾಗದಷ್ಟು ಹೆಚ್ಚಾಗಿದ್ದು, ಪ್ರಯಾಣ ಮುಂದುವರಿಸಲು ಸಾಧ್ಯವಿಲ್ಲವೆಂದು ಕಂಪನಿ ತನ್ನ ಹತಾಶೆಯನ್ನು ಹೊರ ಹಾಕಿದೆ.
ಇಂಧನ ಬೆಲೆ ಏರಿಕೆಯ ಹೊಡೆತ ಎಷ್ಟು ತೀವ್ರವಾಗಿದೆ ಅಂದರೆ, ಈ ಹಿಂದೆ ಪ್ರತಿ ಕ್ಯಾಬಿನ್ಗೆ ತಿಂಗಳಿಗೆ ಸರಾಸರಿ 1,800 ಡಾಲರ್ಗಳಷ್ಟಿದ್ದ ಇಂಧನ ವೆಚ್ಚವು ದಿಢೀರನೆ 6,000 ದಿಂದ 8,000 ಡಾಲರ್ಗಳಿಗೆ (ಸುಮಾರು 5 ರಿಂದ 6.5 ಲಕ್ಷ ರೂಪಾಯಿ) ಜಿಗಿದಿದೆ. ಆರ್ಥಿಕ ನಷ್ಟದಿಂದ ಬಚಾವಾಗಲು ಹಡಗಿನ ಕಂಪನಿಯು ನೌಕೆಯ ವೇಗವನ್ನು ಕಡಿಮೆ ಮಾಡುವುದು, ಬಂದರುಗಳಲ್ಲಿ ದೀರ್ಘಕಾಲ ತಂಗುವುದು ಸೇರಿದಂತೆ ಹಲವು ಕಟ್ಟುನಿಟ್ಟಿನ ಉಳಿತಾಯ ಕ್ರಮಗಳನ್ನು ಕೈಗೊಂಡಿತಾದರೂ ನಷ್ಟವನ್ನು ತಡೆಯಲು ಸಾಧ್ಯವಾಗಲಿಲ್ಲ.
ಐದು ದಿನಗಳ ಭೇಟಿಗಾಗಿ ಅಕ್ಟೋಬರ್ 23 ರಂದು ಕಾಂಬೋಡಿಯಾದ ಸಿಹಾನೌಕ್ವಿಲ್ ಬಂದರಿಗೆ ಆಗಮಿಸಿದ್ದ 'ದಿ ಒಡಿಸ್ಸಿ', ಅಲ್ಲಿಂದ ಮುಂದಿನ ನಿಲ್ದಾಣವಾದ ವಿಯೆಟ್ನಾಂಗೆ ತೆರಳಬೇಕಿತ್ತು. ಆದರೆ ಸಾಲ ಮತ್ತು ಡೀಸೆಲ್ ಕೊರತೆಯಿಂದಾಗಿ ಹಡಗನ್ನು ಅಲ್ಲಿಯೇ ಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಈ ಐಷಾರಾಮಿ ನೌಕೆಯಲ್ಲಿ ಪ್ರಪಂಚದ 15 ವಿವಿಧ ದೇಶಗಳಿಗೆ ಸೇರಿದ 203 ಪ್ರಯಾಣಿಕರು ಹಾಗೂ 156 ಸಿಬ್ಬಂದಿ ವರ್ಗದವರು ಇದ್ದರು. ವಿನೂತನ ಅನುಭವ ಪಡೆಯಲು ಬಂದಿದ್ದ ಪ್ರಯಾಣಿಕರಿಗೆ, ಈಗ ತಕ್ಷಣವೇ ಹಡಗಿನಿಂದ ಕೆಳಗಿಳಿಯುವಂತೆ ಆಡಳಿತ ಮಂಡಳಿ ಸೂಚಿಸಿದೆ. ಸ್ವಂತ ಮನೆ ಎಂದು ನಂಬಿದ್ದ ತೇಲುವ ಸೌಧವನ್ನು ಬಿಟ್ಟು ಹೊರಬರಲಾಗದೆ ಪ್ರಯಾಣಿಕರು ಕಂಗಾಲಾಗಿದ್ದಾರೆ. ಅತ್ತ 2029 ರಲ್ಲಿ ಮತ್ತೊಂದು ರೆಸಿಡೆನ್ಶಿಯಲ್ ಕ್ರೂಸ್ ಶಿಪ್ ಅನ್ನು ಸಾಗರಕ್ಕಿಳಿಸಲು ಯೋಜನೆ ರೂಪಿಸಿದ್ದ ಈ ಕಂಪನಿಗೆ, ಈಗ ಎದುರಾಗಿರುವ ಬೃಹತ್ ಆರ್ಥಿಕ ಹಿನ್ನಡೆ ಕೋಟ್ಯಂತರ ಡಾಲರ್ ನಷ್ಟ ತಂದಿಟ್ಟಿದ್ದು, ಕಂಪನಿಯ ಭವಿಷ್ಯವೇ ಈಗ ಪ್ರಶ್ನಾರ್ಥಕವಾಗಿದೆ, (ಏಜೆನ್ಸೀಸ್).