Venezuela earthquake 
ವಿದೇಶ

ವೆನೆಜುವೆಲಾ ಭೂಕಂಪ ದುರಂತ: ಮೃತರ ಸಂಖ್ಯೆ 235ಕ್ಕೆ ಏರಿಕೆ; 1,500ಕ್ಕೂ ಹೆಚ್ಚು ಮಂದಿಗೆ ಗಾಯ!

ಕಾರಕಾಸ್: ವೆನೆಜುವೆಲಾದಲ್ಲಿ ಸಂಭವಿಸಿದ ಅವಳಿ ಭೂಕಂಪಗಳ(Venezuela earthquake) ಪರಿಣಾಮ ಮೃತರ ಸಂಖ್ಯೆ 235ಕ್ಕೆ ಏರಿಕೆಯಾಗಿದೆ. 1,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೂಕಂಪ ಪೀಡಿತ ಪ್ರದೇಶಗಳಲ್ಲಿ ಸುಮಾರು 39 ಲಕ್ಷ ಮಕ್ಕಳು ವಾಸಿಸುತ್ತಿದ್ದು, ಅವರಿಗೆ ತುರ್ತು ಮಾನವೀಯ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಎಚ್ಚರಿಕೆ ನೀಡಿದೆ.

39 ಲಕ್ಷ ಮಕ್ಕಳು ಅಪಾಯದಲ್ಲಿ

ಯುನಿಸೆಫ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಭೂಕಂಪ ಪೀಡಿತ ಪ್ರದೇಶಗಳಲ್ಲಿ ಸಾವಿರಾರು ಮಕ್ಕಳು ಗಂಭೀರ ಅಪಾಯದಲ್ಲಿದ್ದಾರೆ ಎಂದು ತಿಳಿಸಿದೆ. ಗಾಯಗಳು, ಕುಟುಂಬದಿಂದ ಬೇರ್ಪಡುವುದು, ಸ್ಥಳಾಂತರ, ಮಾನಸಿಕ ಒತ್ತಡ, ಆರೋಗ್ಯ ಸೇವೆ, ಸುರಕ್ಷಿತ ಕುಡಿಯುವ ನೀರು, ಶಿಕ್ಷಣ ಹಾಗೂ ರಕ್ಷಣಾ ಸೇವೆಗಳ ಅಡಚಣೆಯಿಂದ ಮಕ್ಕಳು ಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆ ಇದೆ ಎಂದು ಸಂಸ್ಥೆ ಹೇಳಿದೆ.
ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರಿನ್ ರಸೆಲ್, "ವೆನೆಜುವೆಲಾದಿಂದ ಬರುತ್ತಿರುವ ದೃಶ್ಯಗಳು ಮತ್ತು ಅಲ್ಲಿನ ಸಿಬ್ಬಂದಿಯಿಂದ ಸಿಗುತ್ತಿರುವ ಮಾಹಿತಿ ಮನಕಲಕುವಂತಿದೆ. ಪರಿಹಾರ ಕಾರ್ಯಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ಅವರ ಯೋಗಕ್ಷೇಮಕ್ಕೆ ಮೊದಲ ಆದ್ಯತೆ ನೀಡಬೇಕು" ಎಂದು ತಿಳಿಸಿದ್ದಾರೆ.

235 ಸಾವು, 1,500ಕ್ಕೂ ಹೆಚ್ಚು ಗಾಯ

ವೆನೆಜುವೆಲಾ ಆರೋಗ್ಯ ಸಚಿವರ ಪ್ರಕಾರ, ದೇಶದ ವಿವಿಧ ಆಸ್ಪತ್ರೆಗಳಲ್ಲಿ ಇದುವರೆಗೆ ಭೂಕಂಪಕ್ಕೆ ಸಂಬಂಧಿಸಿದಂತೆ 235 ಮಂದಿ ಮೃತಪಟ್ಟಿರುವುದು ದಾಖಲಾಗಿದೆ. ಕೆಲವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದರೆ, ಇನ್ನೂ ಕೆಲವರು ಚಿಕಿತ್ಸೆ ಪಡೆಯುವ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇಂಧನ ಕ್ಷೇತ್ರಕ್ಕೆ ಸೀಮಿತ ಹಾನಿ

ಪ್ರಾಥಮಿಕ ಮಾಹಿತಿಯ ಪ್ರಕಾರ, ವೆನೆಜುವೆಲಾದ ತೈಲ ಮತ್ತು ಅನಿಲ ಮೂಲಸೌಕರ್ಯಕ್ಕೆ ಹೆಚ್ಚಿನ ಹಾನಿಯಾಗಿಲ್ಲ. ಪ್ರಮುಖ ಇಂಧನ ಘಟಕಗಳು ಭೂಕಂಪದಿಂದ ತೀವ್ರವಾಗಿ ಬಾಧಿತ ಪ್ರದೇಶಗಳಿಂದ ದೂರ ಇರುವುದರಿಂದ ದೊಡ್ಡ ಪ್ರಮಾಣದ ನಷ್ಟ ತಪ್ಪಿದೆ. ಆದರೆ ಭೂಕಂಪದ ಬಳಿಕ ಉಂಟಾದ ವ್ಯಾಪಕ ವಿದ್ಯುತ್ ವ್ಯತ್ಯಯದಿಂದ ದೇಶದ ದಿನನಿತ್ಯದ ಕಚ್ಚಾ ತೈಲ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವೆನೆಜುವೆಲಾ ಪ್ರತಿದಿನ ಸುಮಾರು 12 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದಿಸುತ್ತದೆ.
ಕಾರಾಬೊಬೊ ರಾಜ್ಯದ ಮೊರೋನ್ ಪಟ್ಟಣದಲ್ಲಿರುವ ದೇಶದ ಎರಡನೇ ಅತಿದೊಡ್ಡ ಪೆಟ್ರೋಕೆಮಿಕಲ್ ಘಟಕವನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಬಳಿಕ ಪರಿಸ್ಥಿತಿ ಸಾಮಾನ್ಯವಾದ ನಂತರ ಮತ್ತೆ ಕಾರ್ಯಾರಂಭ ಮಾಡಲಾಗಿದೆ,(ಏಜೆನ್ಸೀಸ್​​).