ವಾರ್ಸಾ: ವ್ಯಾಲೆಂಟೈನ್ಸ್ ಡೇ ಎಂದರೆ ಸಾಮಾನ್ಯವಾಗಿ ಪ್ರೇಮಿಗಳ ಸಂಭ್ರಮದ ದಿನ. ಆದರೆ, ಬ್ರೇಕಪ್ ಆಗಿ ನೋವಿನಲ್ಲಿರುವವರಿಗೆ ಅಥವಾ ಮಾಜಿ ಪ್ರೇಮಿಯ ಮೇಲೆ ಸಿಟ್ಟಿನಲ್ಲಿರುವವರಿಗೆ ಈ ಬಾರಿ ಜಗತ್ತಿನ ಕೆಲವು ಪ್ರಾಣಿಸಂಗ್ರಹಾಲಯಗಳು ಸಖತ್ ಆಫರ್ ನೀಡಿವೆ. ನಿಮ್ಮ ಮಾಜಿ ಪ್ರೇಮಿಯ (Ex) ಹೆಸರನ್ನು ಜಿರಳೆಗೆ ಇಟ್ಟು, ಅದನ್ನು ಪ್ರಾಣಿಗಳಿಗೆ ಆಹಾರವಾಗಿ ನೀಡುವುದರ ಮೂಲಕ ಆ ಅಧ್ಯಾಯವನ್ನು ಶಾಶ್ವತವಾಗಿ ಮುಚ್ಚುವ ಅವಕಾಶವನ್ನು ಇವು ಕಲ್ಪಿಸಿವೆ.
ಏನಿದು 'ಜಿರಳೆ' ಅಭಿಯಾನ?
ಪೋಲೆಂಡ್‌ನ ಓರಿಯಂಟೇರಿಯಂ ಪ್ರಾಣಿಸಂಗ್ರಹಾಲಯ (Orientarium Zoo) ಈ ವರ್ಷವೂ ತನ್ನ ವಿಶಿಷ್ಟ 'ಬ್ರೇಕಪ್ ಗಿಫ್ಟ್' ಐಡಿಯಾವನ್ನು ಮರುಜೀವಗೊಳಿಸಿದೆ. ಮಾಜಿ ಪ್ರೇಮಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಬಯಸುವವರು ಅಥವಾ ಹಳೆಯ ನೆನಪುಗಳಿಂದ ಹೊರಬರಲು ಬಯಸುವವರಿಗಾಗಿ ಈ ಅಭಿಯಾನವನ್ನು ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸೇಡಿನ ಬೆಲೆ ಎಷ್ಟು? (ಪ್ಯಾಕೇಜ್ ವಿವರಗಳು)
ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಪ್ರಾಣಿಸಂಗ್ರಹಾಲಯ ವಿವಿಧ ಹಂತದ ಬೆಲೆಗಳನ್ನು ನಿಗದಿಪಡಿಸಿದೆ. ಹೌದು, ಬೇಸಿಕ್ ಪ್ಯಾಕೇಜ್ (Rs 1,290): ಸುಮಾರು 50 ಸ್ಲೋಟಿ (Zloty) ನೀಡಿ ನೀವು ಮಡಗಾಸ್ಕರ್ ಜಿರಳೆಯನ್ನು ದತ್ತು ಪಡೆಯಬಹುದು ಮತ್ತು ಅದಕ್ಕೆ ನಿಮ್ಮ ಮಾಜಿ ಪ್ರೇಮಿಯ ಹೆಸರಿಡಬಹುದು. ಬದಲಿಗೆ ನಿಮಗೆ ಡಿಜಿಟಲ್ ಸರ್ಟಿಫಿಕೇಟ್ ಸಿಗಲಿದೆ. ಫೋಟೋಗ್ರಾಫಿಕ್ ಪ್ಯಾಕೇಜ್ (Rs 3,870): 150 ಸ್ಲೋಟಿ ನೀಡಿದರೆ, ನಿಮ್ಮ 'ಹೆಸರುಳ್ಳ' ಆ ಜಿರಳೆಯನ್ನು ಪ್ರಾಣಿಗಳು ತಿನ್ನುವ ಫೋಟೋ ಪುರಾವೆಯನ್ನು ನಿಮಗೆ ಕಳುಹಿಸಲಾಗುತ್ತದೆ. VIP ಪ್ಯಾಕೇಜ್ (Rs 7,740): ಇದು ಅಂತಿಮ ಹಂತದ ಸೇಡು! 300 ಸ್ಲೋಟಿ ಪಾವತಿಸಿದರೆ, ನೀವೇ ಖುದ್ದಾಗಿ ಪ್ರಾಣಿಸಂಗ್ರಹಾಲಯಕ್ಕೆ ಹೋಗಿ ಸಿಬ್ಬಂದಿ ಮೇಲ್ವಿಚಾರಣೆಯಲ್ಲಿ ಆ ಜಿರಳೆಯನ್ನು ಮೀರ್‌ಕ್ಯಾಟ್ (Meerkat) ಎಂಬ ಪ್ರಾಣಿಗೆ ಆಹಾರವಾಗಿ ನೀಡಬಹುದು.
ಬ್ರಾಂಕ್ಸ್ ಜೂ ಮತ್ತು ಇತರ ಪ್ರಾಣಿಸಂಗ್ರಹಾಲಯಗಳ ಸ್ಪರ್ಧೆ
ಕೇವಲ ಪೋಲೆಂಡ್ ಮಾತ್ರವಲ್ಲ, ಅಮೆರಿಕದ ಬ್ರಾಂಕ್ಸ್ ಜೂ (Bronx Zoo) ಕೂಡ ಈ ಅಭಿಯಾನದಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿಯವರೆಗೆ ಸುಮಾರು 60,000 ಜನರು ಈ ರೀತಿ ಜಿರಳೆಗಳಿಗೆ ಹೆಸರಿಟ್ಟಿದ್ದು, ಇದರಿಂದ ಪ್ರಾಣಿಸಂಗ್ರಹಾಲಯಕ್ಕೆ ಬರೋಬ್ಬರಿ 1 ಮಿಲಿಯನ್ ಡಾಲರ್ (ಅಂದಾಜು 8 ಕೋಟಿ ರೂ.) ದೇಣಿಗೆ ಸಂಗ್ರಹವಾಗಿದೆ.
ಬ್ರಾಂಕ್ಸ್ ಜೂ ತನ್ನ ಜಾಹೀರಾತಿನಲ್ಲಿ, "ಚಾಕೊಲೇಟ್ ಮತ್ತು ಹೂವುಗಳು ಬಾಡಿ ಹೋಗುತ್ತವೆ, ಆದರೆ ಜಿರಳೆಗಳ ನೆನಪು ಶಾಶ್ವತ. ಈ ಬಾರಿ ನಿಮ್ಮ ಪ್ರೀತಿಯನ್ನು ಜಿರಳೆಗಳ ಮೂಲಕ ವ್ಯಕ್ತಪಡಿಸಿ" ಎಂದು ವ್ಯಂಗ್ಯವಾಗಿ ಹೇಳಿಕೊಂಡಿದೆ. ಇಷ್ಟೇ ಅಲ್ಲದೆ, ಪ್ರಾಣಿಸಂಗ್ರಹಾಲಯದ ಪ್ರವೇಶ ದ್ವಾರದಲ್ಲಿ 'ಜಿರಳೆಗಳ ಹೆಸರಿನ ಫಲಕ'ವನ್ನು ಕೂಡ ಹಾಕಲಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಪ್ರತಿಕ್ರಿಯೆಗಳು
ಈ ಅಭಿಯಾನದ ಬಗ್ಗೆ ಜನರು ಭರ್ಜರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು, "ಜಿರಳೆಯನ್ನು ಉಳಿಸಿ, ನನ್ನ ಮಾಜಿಯನ್ನೇ ಮೀರ್‌ಕ್ಯಾಟ್‌ಗೆ ಆಹಾರವಾಗಿ ನೀಡಲು ಸಾಧ್ಯವೇ?" ಎಂದು ಕೇಳಿದ್ದಾರೆ. ಸಿಟಿ ಅಡ್ಮಿನ್ ಖಾತೆಗಳು ಕೂಡ, "ಇನ್ಸ್ಟಾಗ್ರಾಮ್‌ನಲ್ಲಿ ಮಾಜಿಗಳನ್ನು ಸ್ಟಾಕ್ ಮಾಡುವುದನ್ನು ನಿಲ್ಲಿಸಿ, ಅವರನ್ನು ಇಲ್ಲಿ ಮರುಬಳಕೆ (Recycle) ಮಾಡಿ" ಎಂದು ಕಿಚಾಯಿಸಿವೆ. ನೆನಪಿಡಿ: ಇದು ಕೇವಲ ತಮಾಷೆಗಾಗಿ ಮತ್ತು ಪ್ರಾಣಿಗಳ ಆರೈಕೆಯ ದೇಣಿಗೆ ಸಂಗ್ರಹಕ್ಕಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮವಾಗಿದೆ. ಹಳೆಯ ಸಂಬಂಧದ ಕಹಿ ನೆನಪುಗಳನ್ನು ನಗೆಯೊಂದಿಗೆ ಮರೆಯಲು ಇದೊಂದು ವಿಭಿನ್ನ ದಾರಿ ಅಷ್ಟೇ,(ಏಜೆನ್ಸೀಸ್).