ಭಾರತದಲ್ಲಿ ದಿನಗಳು, ಅಮೆರಿಕದಲ್ಲಿ ಕೇವಲ ಗಂಟೆಗಳು 
ವಿದೇಶ

ಭಾರತದಲ್ಲಿ ದಿನಗಳು, ಅಮೆರಿಕದಲ್ಲಿ ಕೇವಲ ಗಂಟೆಗಳು!: ಬ್ಯಾಲೆಟ್ ಪೇಪರ್ ಮತ ಎಣಿಕೆಯ ಸ್ಪೀಡ್ ಕೌಂಟಿಂಗ್ ಸೀಕ್ರೆಟ್ ಏನು ಗೊತ್ತಾ? | US Midterm Elections

US Midterm Elections: ಅಮೆರಿಕದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಮಧ್ಯಂತರ ಚುನಾವಣೆಯಲ್ಲಿ ಲಕ್ಷಾಂತರ ಜನರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇಲ್ಲಿ ವಿದ್ಯುನ್ಮಾನ ಮತಯಂತ್ರಗಳ (EVM) ಬದಲಿಗೆ ಬ್ಯಾಲೆಟ್ ಪೇಪರ್‌ಗಳನ್ನು ಬಳಸಲಾಗುತ್ತದೆ. ನಮ್ಮ ದೇಶದಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕೇವಲ 69,141 ಬ್ಯಾಲೆಟ್ ಪೇಪರ್​ ಎಣಿಸಲು ಬರೋಬ್ಬರಿ 57 ಗಂಟೆಗಳು ಬೇಕಾಗಿದ್ದವು. ಆದರೆ ಅಮೆರಿಕದಲ್ಲಿ 10 ಕೋಟಿಗೂ ಹೆಚ್ಚು ಮತಗಳನ್ನು ಎಣಿಸಿ ಕೆಲವೇ ಗಂಟೆಗಳಲ್ಲಿ ಫಲಿತಾಂಶದ ಮುನ್ಸೂಚನೆ ನೀಡುವುದು ಹೇಗೆ ಸಾಧ್ಯ..? ಅದರ ಕುರಿತಾದ ಕುತೂಹಲಕಾರಿ ವಿವರಣೆ ಇಲ್ಲಿದೆ.

ಅಮೆರಿಕನ್ನರು ಬ್ಯಾಲೆಟ್ ಪೇಪರ್‌ಗಳಲ್ಲೇ ಮತ ಚಲಾಯಿಸಿದರೂ, ಆ ಮತಗಳನ್ನು ಮನುಷ್ಯರ ಬದಲಾಗಿ ಯಂತ್ರಗಳು ಎಣಿಕೆ ಮಾಡುತ್ತವೆ. ಮತದಾರರು ತಮಗಿಷ್ಟವಾದ ಅಭ್ಯರ್ಥಿಯ ಹೆಸರಿನ ಮುಂಭಾಗದಲ್ಲಿರುವ ವೃತ್ತ ಅಥವಾ ಬಾಕ್ಸ್ ಅನ್ನು ಪೆನ್ನಿನಿಂದ ತುಂಬಿಸುತ್ತಾರೆ. ಮತ ಚಲಾಯಿಸಿದ ನಂತರ ಆ ಪೇಪರ್‌ಗಳನ್ನು ಪೋಲಿಂಗ್ ಬೂತ್‌ನಲ್ಲಿ ಅಥವಾ ಎಣಿಕೆ ಕೇಂದ್ರಗಳಲ್ಲಿ ಇರಿಸಲಾಗಿರುವ ಎಲೆಕ್ಟ್ರಾನಿಕ್ ಸ್ಕ್ಯಾನರ್ ಯಂತ್ರಗಳ ಮೂಲಕ ಹಾಕಲಾಗುತ್ತದೆ.

ಈ ಸ್ಕ್ಯಾನರ್‌ಗಳು ಪೇಪರ್ ಮೇಲಿನ ಗುರುತುಗಳನ್ನು ಓದಿ ತಕ್ಷಣವೇ ಅಭ್ಯರ್ಥಿಯ ಖಾತೆಗೆ ಮತವನ್ನು ಸೇರಿಸುತ್ತವೆ. ದೊಡ್ಡ ಎಣಿಕೆ ಕೇಂದ್ರಗಳಲ್ಲಿ ಗಂಟೆಗೆ ಸಾವಿರಾರು ಬ್ಯಾಲಟ್ ಪೇಪರ್‌ಗಳನ್ನು ಪ್ರಕ್ರಿಯೆಗೊಳಿಸುವ ಹೈ-ಸ್ಪೀಡ್ ಸ್ಕ್ಯಾನಿಂಗ್ ಯಂತ್ರಗಳನ್ನು ಬಳಸಲಾಗುತ್ತದೆ. ಯುಎಸ್ ಎಲೆಕ್ಷನ್ ಅಸಿಸ್ಟೆನ್ಸ್ ಕಮಿಷನ್ ಪ್ರಕಾರ, ಮೂಲ ಬ್ಯಾಲೆಟ್ ಪೇಪರ್‌ಗಳನ್ನು ಸುರಕ್ಷಿತವಾಗಿ ಕಾಯ್ದಿರಿಸಲಾಗುತ್ತದೆ. ಇದರಿಂದಾಗಿ ಯಾವುದೇ ಮರುಎಣಿಕೆ, ಆಡಿಟ್ ಅಥವಾ ವಿವಾದಗಳು ಎದುರಾದರೆ ಅವುಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.

ಚುನಾವಣೆಗೂ ಮುನ್ನವೇ ಸಿದ್ಧತೆ!

ಅಮೆರಿಕದಲ್ಲಿ ಚುನಾವಣೆಯ ಅಧಿಕೃತ ದಿನಕ್ಕಿಂತ ಮುಂಚೆಯೇ ಮಿಲಿಯನ್‌ಗಟ್ಟಲೆ ಮತಗಳು ಚಲಾವಣೆಯಾಗಿರುತ್ತವೆ. ದೇಶದ 43 ರಾಜ್ಯಗಳಲ್ಲಿ ಮತ್ತು ಯುಎಸ್ ವರ್ಜಿನ್ ಐಲ್ಯಾಂಡ್ಸ್‌ನಲ್ಲಿ ಅಂಚೆ ಮತಗಳನ್ನು ಹಾಗೂ ಮುಂಚಿತ ಮತಗಳನ್ನು ನೀಡಲು ಕಾನೂನಿನಲ್ಲಿ ಅವಕಾಶವಿದೆ. ಚುನಾವಣಾ ದಿನಕ್ಕೂ ಮುನ್ನವೇ ಚುನಾವಣಾಧಿಕಾರಿಗಳು ಬಂದಿರುವ ಅಂಚೆ ಲಕೋಟೆಗಳನ್ನು ತೆರೆಯುವುದು, ಮತದಾರರ ಸಹಿ ಹಾಗೂ ವಿವರಗಳನ್ನು ಪರಿಶೀಲಿಸುವುದು ಮತ್ತು ಬ್ಯಾಲಟ್ ಪೇಪರ್‌ಗಳನ್ನು ಸ್ಕ್ಯಾನಿಂಗ್‌ಗೆ ಸಿದ್ಧಪಡಿಸುವ ಕೆಲಸವನ್ನು ಪೂರ್ಣಗೊಳಿಸುತ್ತಾರೆ. ಕೆಲವು ರಾಜ್ಯಗಳಲ್ಲಿ ಸ್ಕ್ಯಾನಿಂಗ್ ಪ್ರಕ್ರಿಯೆಯನ್ನೂ ಮುಂಚಿತವಾಗಿ ಮಾಡಲಾಗುತ್ತದೆ. ಆದರೆ ನಿಯಮಗಳ ಪ್ರಕಾರ ಫಲಿತಾಂಶವನ್ನು ಮತದಾನ ಮುಕ್ತಾಯಗೊಳ್ಳುವವರೆಗೆ ಬಹಿರಂಗಪಡಿಸುವುದಿಲ್ಲ. ಇದರಿಂದ ಎಣಿಕೆಯ ದಿನದ ಕೆಲಸದ ಭಾರ ಶೇಕಡಾ 50ರಷ್ಟು ಕಡಿಮೆಯಾಗುತ್ತದೆ.

10,000ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಏಕಕಾಲಕ್ಕೆ ಎಣಿಕೆ

ಭಾರತದಂತೆ ಇಡೀ ರಾಜ್ಯ ಅಥವಾ ದೇಶಕ್ಕೆ ಒಂದೇ ಪ್ರಮುಖ ಕೇಂದ್ರದಲ್ಲಿ ಮತ ಎಣಿಕೆ ನಡೆಯುವುದಿಲ್ಲ. ಅಮೆರಿಕದಲ್ಲಿ ಯಾವುದೇ ಒಂದೇ ಕೇಂದ್ರಿಕೃತ ಮತ ಎಣಿಕೆ ವ್ಯವಸ್ಥೆಯಿಲ್ಲ. ಬದಲಾಗಿ ಕೌಂಟಿ, ನಗರ ಮತ್ತು ಪಟ್ಟಣಗಳ ಮಟ್ಟದಲ್ಲಿ 10,000ಕ್ಕೂ ಹೆಚ್ಚು ಸ್ಥಳೀಯ ಚುನಾವಣಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಎಣಿಕೆ ಸಿಬ್ಬಂದಿ ಯಂತ್ರಗಳ ನೆರವಿನಿಂದ ಕೆಲಸ ಮಾಡುತ್ತಾರೆ. ಮತ ಎಣಿಕೆ ಪೂರ್ಣಗೊಂಡ ತಕ್ಷಣ ಸ್ಥಳೀಯ ಕೇಂದ್ರಗಳು ಅಂಕಿಅಂಶಗಳನ್ನು ಕೇಂದ್ರ ಕಚೇರಿಗೆ ರವಾನಿಸುತ್ತವೆ. 1848ರಿಂದ ಮತ ಎಣಿಕೆ ಅಂಕಿಅಂಶಗಳನ್ನು ಸಂಗ್ರಹಿಸುವ ಅಸೋಸಿಯೇಟೆಡ್ ಪ್ರೆಸ್​​ನಂತಹ ಸುದ್ದಿ ಸಂಸ್ಥೆಗಳು 4,000ಕ್ಕೂ ಹೆಚ್ಚು ವರದಿಗಾರರು ಮತ್ತು ಸರ್ಕಾರಿ ವೆಬ್‌ಸೈಟ್‌ಗಳ ಮೂಲಕ ತಕ್ಷಣವೇ ದತ್ತಾಂಶಗಳನ್ನು ಕಲೆಹಾಕಿ ಸಾರ್ವಜನಿಕರಿಗೆ ತಲುಪಿಸುತ್ತವೆ.

ಎಣಿಕೆ ಪೂರ್ಣಗೊಳ್ಳುವ ಮುನ್ನವೇ ವಿಜೇತರ ಘೋಷಣೆ ಹೇಗೆ?

ಅಮೆರಿಕದ ಸುದ್ದಿ ಸಂಸ್ಥೆಗಳು ಇಡೀ 100% ಮತಗಳ ಎಣಿಕೆ ಮುಗಿಯುವ ಮುನ್ನವೇ ವಿಜೇತರನ್ನು ಘೋಷಿಸುತ್ತವೆ. ಉದಾಹರಣೆಗೆ, ಒಬ್ಬ ಅಭ್ಯರ್ಥಿಯು 1,00000 ಮತಗಳ ಮುನ್ನಡೆಯಲ್ಲಿದ್ದು, ಇನ್ನು ಎಣಿಕೆಯಾಗಬೇಕಾದ ಒಟ್ಟು ಮತಗಳ ಸಂಖ್ಯೆಯೇ ಕೇವಲ 20,000 ಇದ್ದರೆ, ಹಿನ್ನಡೆಯಲ್ಲಿದ್ದ ಅಭ್ಯರ್ಥಿಗೆ ಉಳಿದೆಲ್ಲ ಮತಗಳು ಸಿಕ್ಕರೂ ಗೆಲ್ಲಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ವಿಜೇತರನ್ನು ಮುಂಚಿತವಾಗಿಯೇ ಪ್ರಕಟಿಸುತ್ತವೆ. ಆದರೆ ಇದು ಅಧಿಕೃತ ಫಲಿತಾಂಶವಲ್ಲ(ಏಜೆನ್ಸೀಸ್​).