ಡೊನಾಲ್ಡ್ ಟ್ರಂಪ್ 
ವಿದೇಶ

ಯುದ್ಧ ಅಧಿಕಾರವನ್ನು ಮಿತಿಗೊಳಿಸುವ ನಿರ್ಣಯ ಅಂಗೀಕರಿಸಿದ ಅಮೆರಿಕ ಸೆನೆಟ್; ಟ್ರಂಪ್​ಗೆ ಮೂಗುದಾರ| US Senate

ವಾಷಿಂಗ್ಟನ್​: ಇರಾನ್‌ ವಿರುದ್ಧದ ಅಮೆರಿಕ ಯುದ್ಧವನ್ನು ಕೊನೆಗೊಳಿಸುವ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯುದ್ಧ ಅಧಿಕಾರವನ್ನು ಮಿತಿಗೊಳಿಸುವ ನಿರ್ಣಯವನ್ನು ಅಮೆರಿಕದ ಸೆನೆಟ್ ಅಂಗೀಕರಿಸಿದ್ದು, ಸ್ವತಃ ನಾಲ್ವರು ರಿಪಬ್ಲಿಕ್ ಶಾಸಕರು ಟ್ರಂಪ್ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ವರದಿಯಾಗಿದೆ.
ಸಿಬಿಎಸ್ ನ್ಯೂಸ್ ಪ್ರಕಾರ, ನಿರ್ಣಯವು 50-47 ಸೆನೆಟರ್​ಗಳ ಮತಗಳಲ್ಲಿ ಅನುಮೋದಿತವಾಗಿದೆ. ಮತ್ತು ನಾಲ್ವರು ರಿಪಬ್ಲಿಕ್ ಶಾಸಕರು ರಿಪಬ್ಲಿಕನ್​ ಪರ ಮತ ಚಲಾಯಿಸಿದ್ರೆ, ಮೂವರು ಶಾಸಕರು ಮತದಾನದಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ. ನೆಟ್ ಡೆಮೋಕ್ರಾಟ್‌ಗಳು ಇಂತಹ ನಿರ್ಣಯವನ್ನು ಅಂಗೀಕರಿಸಲು ಮಾಡಿದ ಎಂಟನೇ ಪ್ರಯತ್ನ ಇದಾಗಿದೆ.
ಡೆಮಾಕ್ರಟಿಕ್ ಸೆನೆಟರ್ ಟಿಮ್ ಕೈನೆ ಮಂಡಿಸಿದ ಈ ನಿರ್ಣಯವು, ಯುದ್ಧ ಘೋಷಣೆ ಅಥವಾ ಮಿಲಿಟರಿ ಬಲವನ್ನು ಬಳಸಲು ನಿರ್ದಿಷ್ಟ ಅಧಿಕಾರವನ್ನು ನೀಡದ ಹೊರತು, ಇರಾನ್‌ನ ಒಳಗೆ ಅಥವಾ ವಿರುದ್ಧದ ಯುದ್ಧದಿಂದ ಯುನೈಟೆಡ್ ಸ್ಟೇಟ್ಸ್ ಸಶಸ್ತ್ರ ಪಡೆಗಳನ್ನು ತೆಗೆದುಹಾಕುವಂತೆ ಅಧ್ಯಕ್ಷರಿಗೆ ನಿರ್ದೇಶನ ನೀಡುತ್ತದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕ್ಯಾಲಿಫೋರ್ನಿಯಾದ ಡೆಮೋಕ್ರಾಟ್ ಸೆನೆಟರ್ ಆಡಮ್ ಸ್ಕಿಫ್, ಇಂದು, ಡೆಮೋಕ್ರಾಟ್‌ಗಳು ಈ ಅಸಂವಿಧಾನಿಕ ಯುದ್ಧವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಮತ್ತೊಮ್ಮೆ ಮತ ಹಾಕುವಂತೆ ಒತ್ತಾಯಿಸಿದ್ದರು. ಏಳು ವಿಫಲ ಪ್ರಯತ್ನಗಳ ಬಳಿಕ ಇಂದು ನನ್ನ ರಿಪಬ್ಲಿಕನ್ ಸಹೋದ್ಯೋಗಿಗಳು ನಮ್ಮ ಯುದ್ಧ ಅಧಿಕಾರ ನಿರ್ಣಯವನ್ನು ಸದನಕ್ಕೆ ತರುವಲ್ಲಿ ಮತ್ತು ಯುದ್ಧ ಘೋಷಿಸುವ ನಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ಚಲಾಯಿಸುವಲ್ಲಿ ಸೇರಿಕೊಂಡಿದ್ದಕ್ಕಾಗಿ ಅವರಿಗೆ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.
ಅದೇ ರೀತಿ ಸೆನೆಟರ್ ಬರ್ನಿ ಸ್ಯಾಂಡರ್ಸ್ ಕೂಡ ನಿರ್ಣಯವನ್ನು ಸ್ವಾಗತಿಸಿದ್ದು, ಅಮೆರಿಕದ ಜನರು ಅಂತ್ಯವಿಲ್ಲದ ಯುದ್ಧಗಳಿಗೆ ಶತಕೋಟಿ ಖರ್ಚು ಮಾಡುವುದನ್ನು ವಿರೋಧಿಸುತ್ತಾರೆ ಎಂದು ಹೇಳಿದ್ದಾರೆ.

ಯುದ್ಧ ಕೊನೆಗಾಣಿಸುವುದಾಗಿ ಹೇಳಿದ ಟ್ರಂಪ್

ಯುಎಸ್​ ಸೆನೆಟ್​ನಲ್ಲಿ ಯುದ್ಧ ಅಧಿಕಾರದ ಮಿತಿಯನ್ನು ನಿರ್ಣಯ ಅಂಗೀಕರಿಸುತ್ತಿದ್ದಂತೆ ಮಾತನಾಡಿರುವ ಅಧ್ಯಕ್ಷ ಟ್ರಂಪ್, ನಾವು ಬಹಳ ಬೇಗ ಯುದ್ಧವನ್ನು ಕೊನೆಗಾಣಿಸುತ್ತೇವೆ. ಇರಾನ್ ತುಂಬಾ ಕೆಟ್ಟದಾಗಿ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ. ಮುಂಬರುವ ಅವಧಿಯಲ್ಲಿ ತೈಲ ಬೆಲೆಗಳು ತೀವ್ರವಾಗಿ ಕುಸಿಯುತ್ತವೆ. ನೀವು ಅದನ್ನು ನೋಡಲಿದ್ದೀರಿ ಎಂದು ಹೇಳಿದ್ದಾರೆ (ಏಜೆನ್ಸೀಸ್).