ವ್ಲಾಡಿಮಿರ್ ಪುಟಿನ್ ಮತ್ತು ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲವನ್ನು ಖರೀದಿಸುವ ದೇಶಗಳಿಗೆ ದಂಡ ವಿಧಿಸುವ ಮಸೂದೆಯನ್ನು ಶನಿವಾರ(ಆ. 08) ಅಮೆರಿಕದ ಸೆನೆಟ್(US Senate passes bill) ಅಂಗೀಕರಿಸಿದೆ ಎಂದು ವರದಿಯಾಗಿದೆ. ಇದು ಭಾರತ, ಚೀನಾ ಸೇರಿ ಪ್ರಮುಖ ಐದು ರಾಷ್ಟ್ರಗಳ ಪರಿಣಾಮ ಬೀರುವ ಸಾಧ್ಯತೆಯಿದೆ.
ಉಕ್ರೇನ್ ಯುದ್ಧಕ್ಕೆ ಹಣಕಾಸು ಒದಗಿಸಲು ಈ ವ್ಯಾಪಾರವು ಸಹಾಯ ಮಾಡುತ್ತದೆ ಎಂದು ಹೇಳುವ ಮತ್ತು ರಷ್ಯಾ ದೇಶದಿಂದ ಕಚ್ಚಾತೈಲ ಮತ್ತು ಗ್ಯಾಸ್ ಖರೀದಿಸುವ ದೇಶಗಳ ಮೇಲೆ ದಂಡ ವಿಧಿಸುವ ಈ ಮಸೂದೆಯನ್ನು ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಅಂಡ್ ಇರಾನ್ ಆಕ್ಟ್ ಆಫ್ 2026' ಎಂದು ಮರುನಾಮಕರಣ ಮಾಡಲಾಗಿದೆ. ಸೆನೆಟ್ನಲ್ಲಿ 86-11 ಮತಗಳ ಬಹುಮತದಿಂದ ಅಂಗೀಕರಿಸಲ್ಪಟ್ಟಿದೆ.
ಈ ಮಸೂದೆಯು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ರಷ್ಯಾದ ತೈಲ ಮತ್ತು ಅನಿಲವನ್ನು ಖರೀದಿಸುವ ಅಗ್ರ ಐದು ಆಮದುದಾರ ದೇಶಗಳ ಸರಕುಗಳ ಮೇಲೆ 100 ಪ್ರತಿಶತ ಸುಂಕವನ್ನು ವಿಧಿಸಲು ಅವಕಾಶ ನೀಡುತ್ತದೆ. ಆಗಸ್ಟ್ 31ರಂದು ಸದನ ಮತ್ತೆ ಆರಂಭವಾದಾಗ ಇದು ಅನುಮೋದನೆಗಾಗಿ ಪ್ರತಿನಿಧಿಗಳ ಸಭೆಗೆ ಹೋಗಲಿದೆ ಎನ್ನಲಾಗಿದೆ.
ಪ್ರಸ್ತುತ, ರಷ್ಯಾದಿಂದ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುವ ಅಗ್ರ ಐದು ದೇಶಗಳೆಂದರೆ ಚೀನಾ, ಭಾರತ, ಅಜೆರ್ಬೈಜಾನ್, ಹಂಗೇರಿ ಮತ್ತು ಸ್ಲೋವಾಕಿಯಾ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉದ್ಯಮಿಗಳು (ಒಲಿಗಾರ್ಕ್‌ಗಳು) ಮತ್ತು ಹಣಕಾಸು ಸಂಸ್ಥೆಗಳು ಸೇರಿದಂತೆ ರಷ್ಯಾದ ನಾಯಕರು ಹಾಗೂ ಅಧಿಕಾರಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಲು ಈ ಮಸೂದೆಯು ಉದ್ದೇಶಿಸಿದೆ.
ರಷ್ಯಾಕ್ಕೆ ಸಂಬಂಧಿಸಿದ ಕ್ರಮಗಳ ಜೊತೆಗೆ, ಈ ಮಸೂದೆಯು 1996ರ 'ಇರಾನ್ ನಿರ್ಬಂಧಗಳ ಕಾಯಿದೆ'ಯ ಅವಧಿಯನ್ನು 2031ರವರೆಗೆ ವಿಸ್ತರಿಸಲಿದೆ. ಇರಾನ್‌ನ ಇಂಧನ ವಲಯದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಈ ಕಾಯಿದೆಯಡಿ ದಂಡ ವಿಧಿಸಲಾಗುತ್ತದೆ ಎನ್ನಲಾಗಿದೆ.
ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಮತ್ತು ಡೆಮೋಕ್ರಾಟ್ ರಿಚರ್ಡ್ ಬ್ಲೂಮೆಂಟಲ್ ಈ ಮಸೂದೆಯ ನೇತೃತ್ವ ವಹಿಸಿದ್ದರು. ಕೀವ್‌ಗೆ ಭೇಟಿ ನೀಡಿದ ಬಳಿಕ ಜುಲೈ 11ರಂದು ಗ್ರಹಾಂ ಹಠಾತ್ ನಿಧನದ ಬಳಿಕ, ಉಕ್ರೇನ್‌ನ ಮಿತ್ರರಾಷ್ಟ್ರವಾಗಿ ಅವರ ಪರಂಪರೆಯನ್ನು ಗೌರವಿಸಲು ಮತ್ತು ಮಸೂದೆಯನ್ನು ಅಂಗೀಕರಿಸಲಾಗಿದೆ.
ಇನ್ನೂ ಈ ಮಸೂದೆ ಕುರಿತು ಮಾತನಾಡಿರುವ ದಿವಂಗತ ಸೆನೆಟರ್ ಲಿಂಡ್ಸೆ ಗ್ರಹಾಂ ಸಹೋದರಿ ಡಾರ್ಲಿನ್ ಗ್ರಹಾಂ, ಈ ಮಸೂದೆಯೂ ರಷ್ಯಾದ ಆರ್ಥಿಕತೆಯನ್ನು ಬಲಪಡಿಸುತ್ತಿರುವ ಪ್ರಾಥಮಿಕ ದೇಶಗಳಿಗೆ ಇದು ಸರಳವಾದ ನಿರ್ಣಯಕವಾದ ಆಯ್ಕೆಯನ್ನು ನೀಡುತ್ತದೆ. ಮೆರಿಕದೊಂದಿಗೆ ವ್ಯಾಪಾರ ಮಾಡುವುದು ಅಥವಾ ಅಗ್ಗದ ರಷ್ಯಾದ ಇಂಧನವನ್ನು ಖರೀದಿಸುವುದು ಇವೆರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ (ಏಜೆನ್ಸೀಸ್).