ಡೊನಾಲ್ಡ್ ಟ್ರಂಪ್ ಮತ್ತು ಮೊಜ್ತಬಾ ಖಮೇನಿ 
ವಿದೇಶ

ಪಾಕ್​ನಲ್ಲಿ ಶಾಂತಿ ಮಾತುಕತೆ ವಿಫಲವಾದ ಬಳಿಕ ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ದವಾದ ಅಮೆರಿಕ-ಇರಾನ್| US-Iran peace talks

ವಾಷಿಂಗ್ಟನ್​: ಪಾಕಿಸ್ತಾನದಲ್ಲಿ ನಡೆದಿದ್ದ ಶಾಂತಿ ಮಾತುಕತೆ ವಿಫಲವಾದ ಬಳಿಕ ಕದನ ವಿರಾಮ ಕೊನೆಗೊಳ್ಳುವ ಮೊದಲು ಅಮೆರಿಕ-ಇರಾನ್(US-Iran peace talks)​ ನಡುವೆ ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ಧತೆ ನಡೆಸಲಾಗುತ್ತಿದ್ದು, ಮಾತುಕತೆ ಸ್ಥಳ ಪರಿಶೀಲಿಸಲಾಗುತ್ತಿದೆ ಎಂದು ಮಂಗಳವಾರ(ಏ. 14) ವರದಿಯಾಗಿದೆ.
ಅಸೋಸಿಯೇಟೆಡ್ ಪ್ರೆಸ್ ವರದಿ ಪ್ರಕಾರ, ಇರಾನ್ ತನ್ನ ಬೇಡಿಕೆಗಳಿಗೆ ಒಪ್ಪಲು ಸಿದ್ದವಾದ್ರೆ ಶೀಘ್ರದಲ್ಲೇ ವೈಯಕ್ತಿಕ ಮಾತುಕತೆಗಳನ್ನು ಪುನರಾರಂಭಿಸುವ ಇಚ್ಛೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೊರಿಸಿದ್ದಾರೆ. ಏ. 21ರಂದು ಕದನ ವಿರಾಮ ಮುಕ್ತಾಯಗೊಳ್ಳುವ ಮೊದಲು ಹೊಸ ಮಾತುಕತೆ ನಡೆಸಲು ಎರಡು ದೇಶಗಳು ಸಿದ್ಧತೆ ನಡೆಸಿವೆ ಎಂದ ಹೇಳಿದೆ.
ಇರಾನ್ ಮತ್ತು ಯುಎಸ್ ಹೊಸ ಮಾತುಕತೆಗೆ ಒಪ್ಪಿಕೊಂಡಿವೆ. ಆದರೆ ಅದೇ ಮಟ್ಟದ ನಿಯೋಗವು ಹಾಜರಾಗುವ ಬಗ್ಗೆ ಸ್ಪಷ್ಟತೆಯಿಲ್ಲ. ಮಾತುಕತೆ ನಡೆಯುವ ಸ್ಥಳ ಮತ್ತು ಸಮಯವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಇಸ್ಲಾಮಾಬಾದ್ ಅಥವಾ ಜಿನೀವಾದಲ್ಲಿ ನಡೆಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಗುರುವಾರ ಮಾತುಕತೆ ನಡೆಯಬಹುದು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಕರೆ ಬಂದಿದೆ

ಸೋಮವಾರ ಮುಂಜಾನೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಮಗೆ ಇನ್ನೊಂದು ಕಡೆಯಿಂದ ಕರೆ ಬಂದಿದೆ. ಅವರು ಒಪ್ಪಂದ ಮಾಡಿಕೊಳ್ಳಲು ಬಯಸುತ್ತಾರೆ ಎಂದು ತಿಳಿಸಿದ್ದರು. ಆ ಬಳಿಕ ಮತ್ತೆ ಮಾತುಕತೆಗೆ ಚಟುವಟಿಕೆಗಳು ಚಿಗುರಿವೆ ಎನ್ನಲಾಗಿದೆ.

ಮಾತುಕತೆ ವಿಷಯ ತಪ್ಪಾಗಿಲ್ಲ

ಇಸ್ಲಾಮಾಬಾದ್​ ಶಾಂತಿ ಮಾತುಕತೆ ವಿಫಲದ ಬಗ್ಗೆ ಫ್ಯಾಕ್ಸ್ ನ್ಯೂಸ್ ಜೊತೆ ಮಾತನಾಡಿರುವ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್​, ಮಾತುಕತೆಯ ವಿಷಯಗಳಲ್ಲಿ ತಪ್ಪಾಗಿವೆ ಎಂದು ನಾನು ಹೇಳುವುದಿಲ್ಲ. ವಿಷಯಗಳು ಸರಿಯಾಗಿ ನಡೆದಿವೆ. ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಯುದ್ಧವನ್ನು ಕೊನೆಗಾಣಿಸಲು ಇರಾನ್ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.
ಇಸ್ಲಾಮಾಬಾದ್​ನಲ್ಲಿ ಭಾನುವಾರ(ಏ. 12) ಜೆಡಿ ವ್ಯಾನ್ಸ್ ನೇತೃತ್ವದ ಅಮೆರಿಕ ನಿಯೋಗ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ನೇತೃತ್ವದ ಇರಾನಿನ ನಿಯೋಗವು 21 ಗಂಟೆಗಳ ಕಾಲ ನಡೆದ ಮುಖಾಮುಖಿ ಮಾತುಕತೆಯೂ ಯಾವುದೇ ಒಪ್ಪಂದಕ್ಕೆ ಬರದೆ ವಿಫಲವಾಗಿತ್ತು (ಏಜೆನ್ಸೀಸ್).