ವಾಷಿಂಗ್ಟನ್: ವಿಶ್ವದ ಅತ್ಯಂತ ಬ್ಯುಸಿ ವಾಯುಮಾರ್ಗ ಹೊಂದಿರುವ ಅಮೆರಿಕದಲ್ಲಿ ನಿನ್ನೆ (ಶುಕ್ರವಾರ) ದಿಢೀರ್ ವಾಯು ಸಂಚಾರ ಸ್ತಬ್ಧಗೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಾಯು ಸಂಚಾರ ನಿಯಂತ್ರಣ ಕೇಂದ್ರಗಳ (ATC) ನಡುವಿನ ಸಂವಹನ ವ್ಯವಸ್ಥೆಯಲ್ಲಿ ಗಂಭೀರ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ದೇಶಾದ್ಯಂತ ಎಲ್ಲಾ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ತುರ್ತು ಆದೇಶ ಹೊರಡಿಸಿತ್ತು. ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಸುಮಾರು 11 ಸಾವಿರ ವಿಮಾನಗಳ ಹಾರಾಟ ರದ್ದಾಗಿ ಮತ್ತು ವಿಳಂಬವಾಗಿ, 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿ ತೀವ್ರ ಪರದಾಟ ನಡೆಸಿದ್ದರು. ಸದ್ಯ ತಾಂತ್ರಿಕ ಸಮಸ್ಯೆ ಬಗೆಹರಿದಿದ್ದು, ಇದೀಗ ವಿಮಾನ ಸಂಚಾರ ಪುನರಾರಂಭಗೊಂಡಿದೆ.
ಪ್ರಾದೇಶಿಕ ವಾಯು ಸಂಚಾರ ನಿಯಂತ್ರಣ ಕೇಂದ್ರಗಳಲ್ಲಿ ಸಂವಹನ ಸಂಪರ್ಕ ಕಡಿತಗೊಂಡ ಬೆನ್ನಲ್ಲೇ, ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿರುವ ಎಫ್‌ಎಎ 'ಗ್ರೌಂಡ್ ಸ್ಟಾಪ್' ಘೋಷಿಸಿದೆ. ಮುಂದಿನ ಆದೇಶದವರೆಗೆ ಯಾವುದೇ ವಿಮಾನ ಟೇಕ್-ಆಫ್ ಆಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಈ ಕುರಿತು ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅಮೆರಿಕದ ಸಾರಿಗೆ ಸಚಿವ ಸೀನ್ ಡಫಿ, "ತಾಂತ್ರಿಕ ಸಿಬ್ಬಂದಿ ಸಮಸ್ಯೆಯ ಮೂಲವನ್ನು ಪತ್ತೆಹಚ್ಚಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ. ಸಮಾಧಾನಕರ ಸಂಗತಿಯೆಂದರೆ, ಈಗಾಗಲೇ ಆಕಾಶದಲ್ಲಿ ಹಾರಾಟ ನಡೆಸುತ್ತಿರುವ ವಿಮಾನಗಳಿಗೆ ಯಾವುದೇ ತೊಂದರೆಯಾಗಿಲ್ಲ ಅವುಗಳ ಸುರಕ್ಷಿತ ಲ್ಯಾಂಡಿಂಗ್‌ಗೆ ಕ್ರಮ ಕೈಗೊಳ್ಳಲಾಗಿದೆ.
ಅಮೆರಿಕದ ಇತಿಹಾಸದಲ್ಲಿ ಇಡೀ ದೇಶದ ವಿಮಾನ ಸಂಚಾರಕ್ಕೆ ಬ್ರೇಕ್ ಹಾಕಿರುವುದು ಅತ್ಯಂತ ಅಪರೂಪ. 2001ರ ಸೆಪ್ಟೆಂಬರ್ 11ರ ಭೀಕರ ಭಯೋತ್ಪಾದಕ ದಾಳಿಯ ಬಳಿಕ ಇಂತಹ ನಿರ್ಬಂಧ ಹೇರಲಾಗಿತ್ತು. ತದನಂತರ 2023ರ ಜನವರಿಯಲ್ಲಿ ಕಂಪ್ಯೂಟರ್ ವ್ಯವಸ್ಥೆ ಕೈಕೊಟ್ಟಾಗ ವಿಮಾನಗಳು ಸ್ತಬ್ಧಗೊಂಡಿದ್ದವು. ಇದೀಗ ಮತ್ತೊಮ್ಮೆ ಅಂತಹದ್ದೇ ತುರ್ತು ಪರಿಸ್ಥಿತಿ ಎದುರಾಗಿರುವುದು ವಾಯುಯಾನ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಏಕಾಏಕಿ ಇಡೀ ದೇಶದ ವಿಮಾನ ಸಂಪರ್ಕ ಕಡಿತಗೊಂಡಿದ್ದರಿಂದ, ಇದರ ಹಿಂದೆ ಯಾವುದಾದರೂ ವಿದೇಶಿ ಶಕ್ತಿಗಳ ಸೈಬರ್ ದಾಳಿ ಅಥವಾ ವಿಧ್ವಂಸಕ ಕೃತ್ಯವಿದೆಯೇ ಎಂಬ ಆತಂಕ ಶುರುವಾಗಿತ್ತು. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಮಾರ್ಕ್‌ವೇನ್ ಮುಲ್ಲಿನ್, ಇದು ಕೇವಲ ದೂರಸಂಪರ್ಕ ವ್ಯವಸ್ಥೆಯಲ್ಲಿನ ತಾಂತ್ರಿಕ ವ್ಯತ್ಯಯವಷ್ಟೇ. ಇದರ ಹಿಂದೆ ಯಾವುದೇ ದುರುದ್ದೇಶಪೂರಿತ ಸೈಬರ್ ದಾಳಿಯ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕಾದ ಎಟಿಸಿಯಲ್ಲಿನ ಈ ವೈಫಲ್ಯಕ್ಕೆ, ಹಳೆಯ ತಂತ್ರಜ್ಞಾನ, ಉಪಕರಣಗಳು ಮತ್ತು ಸಂವಹನ ಸಮಸ್ಯೆಗಳಿಂದ ಬಳಲುತ್ತಿರುವ ಹಾಗೂ ಸಾವಿರಾರು ನಿಯಂತ್ರಕರ (controllers) ಕೊರತೆಯನ್ನು ಎದುರಿಸುತ್ತಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸೀನ್ ಡಫಿ, ಮಧ್ಯಾಹ್ನ 3:36 ಕ್ಕೆ ವಾಯು ಸಂಚಾರ ನಿಯಂತ್ರಣ ಕೇಂದ್ರಗಳು ರಾಡಾರ್ ಮತ್ತು ಸಂವಹನ ವ್ಯವಸ್ಥೆಗಳಲ್ಲಿ ಅಸ್ಥಿರತೆಯನ್ನು ಅನುಭವಿಸಿದಾಗ ಸಮಸ್ಯೆ ಪ್ರಾರಂಭವಾಯಿತು. ನಮ್ಮ ಸ್ವಿಚ್‌ಗಳು, ನಮ್ಮ ರೂಟರ್‌ಗಳು ವಾಸ್ತವವಾಗಿ ಡೇಟಾದಿಂದ ಓವರ್‌ಲೋಡ್ ಆಗಿದ್ದವು ಮತ್ತು ಅವು ಆ ರೂಟರ್‌ಗಳಿಂದ ಡೇಟಾದಲ್ಲಿ ನಮಗೆ ಅಸಂಗತತೆಯನ್ನು ನೀಡಲು ಪ್ರಾರಂಭಿಸಿದವು ಮತ್ತು ಇದರಿಂದಾಗಿ ನಾವು ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ್ದೇವೆ.
ಯಾವುದೇ ಹಂತದಲ್ಲೂ ರಾಡಾರ್ ಅಥವಾ ಸಂವಹನಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿಲ್ಲ. ಮತ್ತು ಸಾವಿರಾರು ವಿಮಾನಗಳನ್ನು ಸುರಕ್ಷಿತವಾಗಿ ಇಳಿಸಲು ಸಾಧ್ಯವಾಯಿತು. ತಕ್ಷಣದ ಸಮಸ್ಯೆಯನ್ನು ಪರಿಹರಿಸಲಾಗಿದೆ ಮತ್ತು ಹಾರಾಟ ಸುರಕ್ಷಿತವಾಗಿದೆ. ಆದರೆ ಇದೇ ರೀತಿಯ ವೈಫಲ್ಯಗಳನ್ನು ತಡೆಗಟ್ಟಲು ಹಳೆಯ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯ ವಿಶಾಲವಾದ ಕೂಲಂಕುಷ ಪರೀಕ್ಷೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ವಾಯುಯಾನ ಹೊಸ ವ್ಯವಸ್ಥೆಗೆ ಹಣಕಾಸು ವ್ಯವಸ್ಥೆಯನ್ನು ಒದಗಿಸಲು ವಿಫಲವಾದ ಕಾಂಗ್ರೆಸ್ ಅನ್ನು ಟೀಕಿಸಿರುವ ಡಫಿ, ಎಟಿಸಿ ವ್ಯವಸ್ಥೆಯನ್ನು ಆಧುನೀಕರಿಸಲು $50 ಬಿಲಿಯನ್ ನೀಡುವಂತೆ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಶ್ವೇತಭವನ ಮತ್ತು ಸಾರಿಗೆ ಇಲಾಖೆಯು ದೇಶದ ಹಳೆಯ ವಿಮಾನ ನಿಲ್ದಾಣಗಳು ಮತ್ತು ವಾಯು ಸಂಚಾರ ನಿಯಂತ್ರಣ ಮೂಲಸೌಕರ್ಯವನ್ನು ನವೀಕರಿಸಲು $30.1 ಬಿಲಿಯನ್ ಅನ್ನು ಅನುಮೋದಿಸುವಂತೆ ಕಾಂಗ್ರೆಸ್ ಅನ್ನು ಒತ್ತಾಯಿಸಿತ್ತು ಎನ್ನಲಾಗಿದೆ.
ಯುನೈಟೆಡ್ ಏರ್‌ಲೈನ್ಸ್: ತನ್ನ ಎಲ್ಲಾ ದೇಶೀಯ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುದಾಗಿ ಘೋಷಿಸಿದ್ದು, ಅಂತರರಾಷ್ಟ್ರೀಯ ವಿಮಾನಗಳನ್ನು ಎಫ್‌ಎಎ ಮಾರ್ಗಸೂಚಿಯಂತೆ ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದೆ.
ಅಮೆರಿಕನ್ ಏರ್‌ಲೈನ್ಸ್: ನಿರ್ಬಂಧ ತೆರವಾದ ತಕ್ಷಣ ಪ್ರಯಾಣಿಕರನ್ನು ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ತಲುಪಿಸಲು ಸಿಬ್ಬಂದಿ ಸನ್ನದ್ಧರಾಗಿದ್ದಾರೆ. ಆದರೂ ದಿನಪೂರ್ತಿ ವಿಮಾನಗಳ ವೇಳಾಪಟ್ಟಿಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.( ಏಜೇನ್ಸಿಸ್)