ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮುಂದುವರೆದಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಮ್ಮ ಅಪಾಚೆ ಹೆಲಿಕ್ಯಾಪ್ಟರ್ ಅನ್ನು ಇರಾನ್ ಹೊಡೆದುರಳಿಸಿದೆ ಎಂದು ಹೇಳಿದ ಬಳಿಕ, ಅಮೆರಿಕ ಸೇನೆ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಪ್ರತಿಯಾಗಿ ಇರಾನ್ ಸಹ ಯುಎಸ್ ನೌಕಾನೆಲೆಗಳ ಮೇಲೆ ಪ್ರತಿದಾಳಿ ನಡೆಸಿದೆ ಎಂದು ವರದಿಯಾಗಿದೆ.
ಅಮೆರಿಕದ ಅಧಿಕಾರಿಗಳ ಪ್ರಕಾರ, ಹಾರ್ಮುಜ್ ಜಲಸಂಧಿಯ ಸುತ್ತಲಿನ ಹಲವಾರು ಇರಾನಿನ ವಾಯು ರಕ್ಷಣಾ ಮತ್ತು ರಾಡಾರ್ ವ್ಯವಸ್ಥೆಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಒಟ್ಟು ಮೂರು ಸುತ್ತಿನ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಇರಾನ್‌ನ ಜಾಸ್ಕ್ ಮತ್ತು ಬಂದರ್ ಅಬ್ಬಾಸ್‌ನಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ, ಆದರೆ ಈ ದಾಳಿಯ ಅಲೆಯ ವ್ಯಾಪ್ತಿಯ ಬಗ್ಗೆ ಸ್ಪಷ್ಟತೆ ಇಲ್ಲ. ಕ್ವೆಶ್ಮ್ ದ್ವೀಪದಲ್ಲಿಯೂ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎಂದು ಇರಾನ್‌ನ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇರಾನ್ ಪ್ರತೀಕಾರ
ದಕ್ಷಿಣ ಇರಾನ್‌ನ ಜಾಸ್ಕ್, ಸಿರಿಕ್ ಮತ್ತು ಕೆಶ್ಮ್ ದ್ವೀಪದ ಹಲವಾರು ಸ್ಥಳಗಳ ಮೇಲೆ ಅಮೆರಿಕ ದಾಳಿ ನಡೆಸಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC) ದೃಢಪಡಿಸಿದೆ. ಪ್ರತೀಕಾರವಾಗಿ ಬಹ್ರೇನ್‌ನಲ್ಲಿರುವ US ಐದನೇ ಫ್ಲೀಟ್ ಮೇಲೆ ಡ್ರೋನ್ ದಾಳಿ ನಡೆಸುವ ಮೂಲಕ ಅಮೆರಿಕದ ದಾಳಿಗೆ ಪ್ರತಿದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.
ಇನ್ನೂ ಯುಎಸ್ ದಾಳಿ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ಅಮೆರಿಕ ಇರಾನ್‌ನ ತಾಳ್ಮೆಯನ್ನು ಪರೀಕ್ಷಿಸಲು ಮುಂದಾಗಿದೆ. ಇರಾನ್ ಸಶಸ್ತ್ರ ಪಡೆಗಳು ಯಾವುದೇ ದಾಳಿ ಅಥವಾ ಬೆದರಿಕೆಗೆ ಉತ್ತರಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದು, ನೀವು ಸುರಕ್ಷಿತವಾಗಿರಲು ಬಯಸಿದರೆ ನಮ್ಮ ಪ್ರದೇಶವನ್ನು ಬಿಟ್ಟು ಹೋಗಿ ಎಂದು ಗುಡುಗಿದ್ದಾರೆ (ಏಜೆನ್ಸೀಸ್).