ಪಾಕಿಸ್ತಾನದ ಪಂಜಾಬ್‌ನಲ್ಲಿ ಅಜ್ಞಾತ ಬಂದೂಕುಧಾರಿಗಳಿಂದ ಗುಂಡಿನ ದಾಳಿ 
ವಿದೇಶ

ಪಾಕ್‌ನಲ್ಲಿ ಮತ್ತೆ 'ಅಜ್ಞಾತ ಬಂದೂಕುಧಾರಿ' ಅಟ್ಟಹಾಸ: ಲಷ್ಕರ್ ಕಮಾಂಡರ್ ಇಮ್ರಾನ್ ಖಾನ್ ಹತ್ಯೆ? ವಿಡಿಯೋ ವೈರಲ್! Unknown Gunmen

ಪಾಕಿಸ್ತಾನದ ಪಂಜಾಬ್‌ನಲ್ಲಿ ಅಜ್ಞಾತ ಬಂದೂಕುಧಾರಿಯಿಂದ ಭೀಕರ ಶೂಟೌಟ್; ಲಷ್ಕರ್-ಎ-ತೊಯ್ಬಾ ಕಮಾಂಡರ್ ಇಮ್ರಾನ್ ಖಾನ್ ಹತ್ಯೆ ಶಂಕೆ? ನಡುರಸ್ತೆಯ ಶಾಕಿಂಗ್ ವಿಡಿಯೋ ವೈರಲ್.

ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳ ಬೇಟೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಇತ್ತೀಚೆಗೆ ಪಾಕಿಸ್ತಾನದ ಪಂಜಾಬ್​ ಪ್ರದೇಶದಲ್ಲಿ ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ವ್ಯಕ್ತಿಯೋರ್ವನ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ಮಳೆಗೆರೆದಿದ್ದು, ಮೃತ ವ್ಯಕ್ತಿಯನ್ನು ಕುಖ್ಯಾತ ಭಯೋತ್ಪಾದನಾ ಗುಂಪಾದ ಲಷ್ಕರ್​-ಎ-ತೊಯ್ಬಾದ ಕಮಾಂಡರ್​ ಇಮ್ರಾನ್​ ಖಾನ್​ ಎಂದು ಹೇಳಲಾಗುತ್ತಿದೆ.

ಈ ಇಮ್ರಾನ್​ ಖಾನ್​, ಒಬ್ಬ ಉಗ್ರಗಾಮಿಯಾಗಿದ್ದು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ಜತೆಗೆ ನಿಕಟ ಸಂಪರ್ಕ ಹೊಂದಿದ್ದನೆಂದು ಹೇಳಲಾಗುತ್ತಿದೆ. ಆದರೆ, ಈ ಶೂಟೌಟ್​ನಲ್ಲಿ ಸತ್ತವನು ಇದೇ ಇಮ್ರಾನ್​ ಖಾನ್​ ಎಂದು ಇದುವರೆಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಬೈಕ್​ ಏರಿ ಹೋಗುತ್ತಿದ್ದವನ ಮೇಲೆ ಗುಂಡಿನ ದಾಳಿ!

ಈ ಘಟನೆ ಕುರಿತು ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋವೊಂದು ವೈರಲ್​ ಆಗುತ್ತಿದ್ದು, ಈ ಘಟನೆ ಮಂಗಳವಾರ (ಅ.14) ಮಧ್ಯಾಹ್ನ 11.30 ಸುಮಾರಿಗೆ ನಡೆದಿದೆ. ಈ ವಿಡಿಯೋನಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್​ ಏರಿ ಹೊರಡುತ್ತಿದ್ದಾಗ, ಬಿಳಿ ಬಣ್ಣದ ಬಟ್ಟೆ ಧರಿಸಿರುವ ಬಂದೂಕುಧಾರಿ ಇತನ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡು ತಗಲುತ್ತಿದ್ದಂತೆ ಬೈಕ್​ನಿಂದ ನೆಲಕ್ಕೆ ಬಿದ್ದ ವ್ಯಕ್ತಿ, ಬಂದೂರುಧಾರಿಯನ್ನು ತಡೆಯಲು ವಿಫಲ ಯತ್ನ ನಡೆಸಿದ್ದಾನೆ. ಆದರೆ, ಭರ್ತಿ ಎರಡು ಮ್ಯಾಗಜೀನ್​ ಗುಂಡು ತಗುಲಿದ ಹಿನ್ನಲೆ ಆ ವ್ಯಕ್ತಿ ಸ್ಥಳದಲ್ಲೇ ಕುಸಿದು ಬಿದ್ದು, ಸಾವನ್ನಪ್ಪಿದ್ದಾನೆ. ಇನ್ನು ಗುಂಡಿನ ದಾಳಿ ನಡೆಸಿದ ವ್ಯಕ್ತಿ ದಾಳಿ ಬಳಿಕ ಪರಾರಿಯಾಗಿದ್ದಾನೆ.

ಇದು ಅಧಿಕೃತ ಮಾಹಿತಿಯಲ್ಲ!

ಆದರೆ, ಈ ವಿಡಿಯೋ ಹಾಗೂ ಘಟನೆಯಲ್ಲಿ ಸತ್ತವನು ಲಷ್ಕರ್​ ಕಮಾಂಡರ್​, ಇಮ್ರಾನ್​ ಖಾನ್​ ಎಂದು ಇಲ್ಲಿವರೆಗೆ ತಿಳಿದುಬಂದಿಲ್ಲ. ಹಾಗೆಯೇ ಈ ಕುರಿತು ಪಾಕ್​ ಪೊಲೀಸರಾಗಲೀ, ಅಲ್ಲಿಯ ಮಾಧ್ಯಮಗಳಾಗಲೀ ಸತ್ತವನ ಮಾಹಿತಿಯನ್ನು ಇಲ್ಲಿವರೆಗೆ ಹಂಚಿಕೊಂಡಿಲ್ಲ. ಹೀಗಾಗಿ ಅಧಿಕೃತ ಮಾಹಿತಿ ದೊರೆಯುವವರೆಗೆ ಇಲ್ಲಿ ಸತ್ತವನು ಪಾಕ್​ ಮೂಲದವನು ಎಂದಷ್ಟೇ ನಾವು ಊಹಿಸ ಬಹುದಾಗಿದ್ದು, ಇದು ಉಗ್ರ ಇಮ್ರಾನ್​ ಖಾನ್​ ಎಂದು ಹೇಳಲಾಗುವುದಿಲ್ಲ.

ಆದರೆ, ಕಳೆದ ಏಳೆಂಟು ತಿಂಗಳಲ್ಲಿ ಪಾಕಿಸ್ತಾನ, ಅದರಲ್ಲೂ ಪಂಜಾಬ್​, ಗಿಲ್ಟಿಟ್​, ಬಾಲ್ಟಿಸ್ತಾನ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳ ಮೂಲಕ ಲಷ್ಕರ್​, ಹಿಂದೂಸ್ತಾನ್​ ಮುಜಾಹಿದ್ದೀನ್​ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ ಭಯೋತ್ಪಾದರ ಸಂಹಾರ ನಡೆಯುತ್ತಿರುವುದಂತು ನಿಜವಾಗಿದೆ, (ಏಜೆನ್ಸೀಸ್​).