

ಜೈಪುರ್: ಬುಧವಾರ (ಅ.14) ಜರ್ಮನಿಯ ಫ್ರಾಂಕ್ಫರ್ಟ್ನಿಂದ ದೆಹಲಿಯತ್ತ ಪ್ರಯಾಣ ಬೆಳಿಸಿದ್ದ ಏರ್ ಇಂಡಿಯಾ ವಿಮಾನದ ಪೈಲಟ್, ಆಕಸ್ಮಿಕವಾಗಿ ಹೈಜಾಕ್ ಬಟನ್ ಕ್ಲಿಕ್ ಮಾಡಿದ ಹಿನ್ನಲೆ, ವಿಮಾನವನ್ನು ಜೈಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ವಿಮಾನ ಸಂಖ್ಯೆ AI-2030 ಫ್ರಾಂಕ್ಫರ್ಟ್ನಿಂದ ದೆಹಲಿಯತ್ತ ಬರುತ್ತಿದ್ದ ಸಂದರ್ಭದಲ್ಲಿ ಅಹಮದಾಬಾದ್ ಎಟಿಸಿ (ಏರೋಸ್ಪೇಸ್ ಟ್ರಾಫಿಕ್ ಕಂಟ್ರೋಲ್) ಗೆ 'Squawk-7500' ಹೈಜಾಕ್ ಅಲರ್ಟ್ ದೊರೆತಿದೆ. ಮಾಹಿತಿ ದೊರೆತ ತಕ್ಷಣ ಎಟಿಸಿ ವಿಮಾನವನ್ನು ತುರ್ತು ಭೂಸರ್ಶ ಮಾಡುವಂತೆ ನಿರ್ದೇಶಿಸಿದೆ.
ಜೈಪುರದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ನಂತರ, ಈ ಬಟನ್ಅನ್ನು ವಿಮಾನದ ಪೈಲಟ್, ಆಕಸ್ಮಿಕವಾಗಿ ಒತ್ತಿದ್ದಾಗಿ ತಿಳಿದುಬಂದಿದೆ. ಆದರೂ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಹಾಗೂ ವಿಮಾನವನ್ನು ಇನ್ನೊಮ್ಮೆ, ಪರೀಕ್ಷೆಗೆ ಒಳಪಡಿಸಿ, ಎಲ್ಲಾ ಸುರಕ್ಷಿತವಾಗಿದೆ ಎಂದು ತಿಳಿದು ಬಂದಿದೆ. ಇನ್ನೇನು ಕೆಲವೇ ಸಮಯದಲ್ಲಿ ಪ್ರಯಾಣಿಕರು, ಇದೇ ವಿಮಾನದ ಮೂಲಕ ದೆಹಲಿಯತ್ತ ಹಾರಾಟ ಆರಂಭಿಸಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಈ ಘಟನೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಳವೀಯ ನಗರ ಪೊಲೀಸ್ ಸಹಾಯಕ ಆಯುಕ್ತ ಶಿವ್ ದಯಾಳ್, ಫ್ರಾಂಕ್ಫರ್ಟ್ನಿಂದ ದೆಹಲಿಗೆ ತೆರಳುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ ಎಂದು ವಿಮಾನ ನಿಲ್ದಾಣ ಸಿಬ್ಬಂದಿ ನಮಗೆ ತಿಳಿಸಿದ್ದಾರೆ. ಹೀಗಾಗಿ ನಾವು ವಿಮಾನ ನಿಲ್ದಾಣಕ್ಕೆ ತೆರಳಿ, ವಿಮಾನವನ್ನು ಪರೀಕ್ಷೆಗೆ ಒಳಪಡಿಸುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ವಿಮಾನಯಾನ ಕ್ಷೇತ್ರದಲ್ಲಿ 'ಸ್ಕ್ವಾಕ್ 7500' (Squawk 7500) ಎಂಬುದು ವಿಮಾನವನ್ನು ಹೈಜಾಕ್ ಮಾಡಲು ಅಥವಾ ವಿಮಾನಕ್ಕೆ ಬಾಹ್ಯ ಶಕ್ತಿಗಳಿಂದ ಬೆದರಿಕೆ ಉಂಟಾದಾಗ ಪೈಲಟ್ಗಳು ಬಳಸುವ ಅಂತಾರಾಷ್ಟ್ರೀಯ ತುರ್ತು ಟ್ರಾನ್ಸ್ಪಾಂಡರ್ ಸಂಕೇತವಾಗಿದೆ. ವಿಮಾನದಲ್ಲಿರುವ ಟ್ರಾನ್ಸ್ಪಾಂಡರ್ ಸಾಧನವು ವಿಮಾನದ ಗುರುತು, ಎತ್ತರ ಮತ್ತು ವೇಗದ ಮಾಹಿತಿಯನ್ನು ನೆಲದ ಮೇಲಿರುವ ಏರ್ ಟ್ರಾಫಿಕ್ ಕಂಟ್ರೋಲ್ (ATC) ರಾಡಾರ್ಗಳಿಗೆ ನಿರಂತರವಾಗಿ ಕಳುಹಿಸುತ್ತಿರುತ್ತದೆ. ವಿಮಾನ ಅಪಹರಣಕ್ಕೊಳಗಾದ ತಕ್ಷಣ ಪೈಲಟ್ ರೇಡಿಯೋ ಮೂಲಕ ಮಾತನಾಡಿ ಪರಿಸ್ಥಿತಿಯನ್ನು ವಿವರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ, ಪೈಲಟ್ಗಳು ಯಾರಿಗೂ ತಿಳಿಯದಂತೆ ಸದ್ದಿಲ್ಲದೆ ಟ್ರಾನ್ಸ್ಪಾಂಡರ್ ಕೋಡ್ ಅನ್ನು 7500 ಕ್ಕೆ ಬದಲಾಯಿಸುತ್ತಾರೆ.
ಈ ಕೋಡ್ ಅನ್ನು ಸೆಟ್ ಮಾಡಿದ ಕ್ಷಣದಲ್ಲೇ ಏರ್ ಟ್ರಾಫಿಕ್ ಕಂಟ್ರೋಲ್ನ ರಾಡಾರ್ ಪರದೆಯ ಮೇಲೆ ವಿಶೇಷ ಎಚ್ಚರಿಕೆಯ ಸಂಕೇತ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಎಟಿಸಿ ನಿಯಂತ್ರಕರಿಗೆ ವಿಮಾನದಲ್ಲಿ ಹೈಜಾಕ್ ನಡೆದಿದೆ ಎಂಬುದು ತಕ್ಷಣವೇ ತಿಳಿಯುತ್ತದೆ. ಈ ಸಂದರ್ಭದಲ್ಲಿ ಎಟಿಸಿ ಸಿಬ್ಬಂದಿ ಪೈಲಟ್ನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಜಾಗರೂಕತೆಯಿಂದ ವರ್ತಿಸುತ್ತಾರೆ. ನೇರವಾಗಿ ವಿಮಾನ ಹೈಜಾಕ್ ಆಗಿದೆಯಾ? ಎಂದು ಕೇಳುವ ಬದಲು, ಅಪಹರಣಕಾರರಿಗೆ ಅನುಮಾನ ಬಾರದಂತಹ ಸಂವಹನ ಕೋಡ್ಗಳನ್ನು ಬಳಸಿ ಪರಿಸ್ಥಿತಿಯನ್ನು ಖಚಿತಪಡಿಸಿಕೊಳ್ಳುತ್ತಾರೆ.
ಸ್ಕ್ವಾಕ್ 7500 ಸಂಕೇತ ಖಚಿತವಾದ ಕೂಡಲೇ ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆಗಳು, ಸೇನೆ ಮತ್ತು ರಾಷ್ಟ್ರೀಯ ಭದ್ರತಾ ಪಡೆಗಳು (ಭಾರತದಲ್ಲಿ ಎನ್ಎಸ್ಜಿ ಕಮಾಂಡೋಗಳು ಸೇರಿದಂತೆ) ತಕ್ಷಣವೇ ಕಾರ್ಯಪ್ರವೃತ್ತವಾಗುತ್ತವೆ. ವಿಮಾನ ನಿಲ್ದಾಣದಲ್ಲಿ ಕಮಾಂಡೋಗಳು ಮತ್ತು ಆಂಬ್ಯುಲೆನ್ಸ್ಗಳೊಂದಿಗೆ ತುರ್ತು ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ವಿಮಾನಯಾನದಲ್ಲಿರುವ ಮೂರು ಪ್ರಮುಖ ತುರ್ತು ಕೋಡ್ಗಳಲ್ಲಿ 7500 (ಹೈಜಾಕ್), 7600 (ರೇಡಿಯೋ ಸಂವಹನ ಕಡಿತ) ಮತ್ತು 7700 (ಸಾಮಾನ್ಯ ವೈದ್ಯಕೀಯ ಅಥವಾ ತಾಂತ್ರಿಕ ತುರ್ತು ಪರಿಸ್ಥಿತಿ) ಸೇರಿವೆ; ಇವುಗಳಲ್ಲಿ 7500 ಅತ್ಯಂತ ಗಂಭೀರ ಹಾಗೂ ಭದ್ರತಾ ದೃಷ್ಟಿಯಿಂದ ನಿರ್ಣಾಯಕವಾದ ಕೋಡ್ ಆಗಿದೆ, (ಏಜೆನ್ಸೀಸ್).