

ಅಜ್ಮೀರ್: ಕೆಲ ದಿನಗಳ ಹಿಂದೆ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದ್ದಕ್ಕೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ವಕೀಲರೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ರಾಜಸ್ಥಾನದ ಕಿಶನ್‌ಗಢದಲ್ಲಿ ನಡೆದಿತ್ತು. ಲೇಡಿ ಡಿಎಸ್‌ಪಿ ಕೈಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದಂತೆ ವಕೀಲರ ಸಮುದಾಯ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ, ಹೆದ್ದಾರಿ ತಡೆದು ನಡೆಸಿದ ತೀವ್ರ ಪ್ರತಿಭಟನೆಗೆ ಬೆದರಿದ ಮಹಿಳಾ ಅಧಿಕಾರಿ ಕೊನೆಗೆ ವಿಡಿಯೋ ಮಾಡಿ ಕ್ಷಮೆಯಾಚಿಸಿದ್ದಾರೆ.
ಕಿಶನ್‌ಗಢದ ಟ್ರಾಫಿಕ್ ಡಿಎಸ್‌ಪಿ ಅಂಜು ಯಾದವ್ ವಕೀಲ ಬಾಬುಲಾಲ್ ಬಗಾರಿಯಾ ಅವರ ಕೆನ್ನೆಗೆ ಹೊಡೆದ ದೃಶ್ಯ ವೈರಲ್ ಆಗಿದ್ದು, ಖಾಕಿ ದರ್ಪದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಶನಿವಾರ (ಅ.10) ಸಂಜೆ ವೇಳೆಗೆ ವಕೀಲ ಬಾಬುಲಾಲ್ ಬಗಾರಿಯಾ ಕಿಶನ್‌ಗಢದ ಮಾರುಕಟ್ಟೆಗೆ ತರಕಾರಿ ಖರೀದಿಸಲು ತೆರಳಿದ್ದರು. ಮಾರುಕಟ್ಟೆ ಪ್ರವೇಶಿಸುವ ಮುನ್ನ ರಸ್ತೆ ಬದಿಯಲ್ಲಿ ತಮ್ಮ ವಾಹನವನ್ನು ಪಾರ್ಕ್ ಮಾಡಿದ್ದರು. ಸ್ವಲ್ಪ ಸಮಯದ ಬಳಿಕ ತರಕಾರಿ ಮಾರ್ಕೆಟ್ ಬಳಿ ವಾಹನ ನಿಲ್ಲಿಸಿರುವ ಸಂಬಂಧ ಪೊಲೀಸರಿಂದ ಅವರಿಗೆ ಕರೆ ಬಂದಿದೆ.
ಕರೆ ಬಂದ ತಕ್ಷಣ ಸ್ಥಳಕ್ಕೆ ಓಡೋಡಿ ಬಂದ ವಕೀಲ ಬಾಬುಲಾಲ್ ರೊಂದಿಗೆ ಅಂಜು ಯಾದವ್ ವಾಗ್ವಾದಕ್ಕಿಳಿದಿದ್ದಾರೆ. ನನ್ನ ತಪ್ಪಾಗಿದೆ, ಇನ್ನೊಮ್ಮೆ ಹೀಗೆ ಮಾಡಲ್ಲ ಎಂದು ಬಾಬುಲಾಲ್ ಕೈಮುಗಿದು ಕೇಳಿಕೊಂಡರೂ ಕ್ಯಾರೆ ಎನ್ನದ ಡಿಎಸ್‌ಪಿ ಅಂಜು ಯಾದವ್, ನಡುರಸ್ತೆಯಲ್ಲೇ ಸಾರ್ವಜನಿಕರ ಎದುರು ವಕೀಲರ ಕೆನ್ನೆಗೆ ಬಾರಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ ವಾಹನದ ಕೀಲಿಯನ್ನು ಕಿತ್ತುಕೊಂಡು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.
ಮಹಿಳಾ ಪೊಲೀಸ್ ಅಧಿಕಾರಿ ವಕೀಲನಿಗೆ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಿಶನ್‌ಗಢ ಮತ್ತು ಅಜ್ಮೀರ್‌ನ ವಕೀಲರು ಸಿಡಿದೆದ್ದಿದ್ದಾರೆ. ಅಜ್ಮೀರ್ ಜಿಲ್ಲಾ ವಕೀಲರ ಸಂಘದ ಸದಸ್ಯರು ತಕ್ಷಣವೇ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ, ರಸ್ತೆಗೆ ಧುಮುಕಿದ್ದಾರೆ.
ಡಿಎಸ್‌ಪಿ ಅಂಜು ಯಾದವ್ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಜೈಪುರ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಹೆದ್ದಾರಿಯಲ್ಲೇ ಹೈಡ್ರಾಮಾ ಮುಂದುವರೆದಿದೆ.
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಾಗ, ಸಿಟಿ ಬಸ್ ಚಾಲಕನೊಬ್ಬನೊಂದಿಗೆ ವಕೀಲರು ತೀವ್ರ ಮಾತಿನ ಚಕಮಕಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯ ಕಡೆಗೆ ನುಗ್ಗಿದ ವಕೀಲರು, ಅಲ್ಲಿ ಪೊಲೀಸರು ಹಾಕಿದ್ದ ಭದ್ರತಾ ಬ್ಯಾರಿಕೇಡ್‌ಗಳನ್ನು ಕಿತ್ತೊಗೆಯಲು ಯತ್ನಿಸಿದ್ದಾರೆ.
ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತಳ್ಳಾಟ, ನೂಕಾಟ ನಡೆದು ಪರಿಸ್ಥಿತಿ ಕೈಮೀರುವ ಹಂತ ತಲುಪಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಿಮಾಂಶು ಜಂಗಿದ್ ಭಾರಿ ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಹರಸಾಹಸ ಪಟ್ಟರು.
ವಿವಾದ ತಾರಕಕ್ಕೇರಿ, ವಕೀಲರ ಪ್ರತಿಭಟನೆ ರಾಜಸ್ಥಾನದಾದ್ಯಂತ ಕಾವು ಪಡೆದುಕೊಳ್ಳುತ್ತಿದ್ದಂತೆ ಡಿಎಸ್‌ಪಿಅಂಜು ಯಾದವ್ ಮೆತ್ತಗಾಗಿದ್ದಾರೆ. ಭಾನುವಾರ ವಕೀಲ ಬಾಬುಲಾಲ್ ಬಗಾರಿಯಾ ಅವರನ್ನು ಖುದ್ದು ಭೇಟಿಯಾದ ಅವರು, ವಿಡಿಯೋ ರೆಕಾರ್ಡ್ ಮಾಡಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ನಾನು ಕೂಡ ಒಂದು ಸಾಮಾನ್ಯ ಕುಟುಂಬದಿಂದ ಬಂದವಳು. ಆ ಕ್ಷಣದಲ್ಲಿ ಆ ರೀತಿ ವರ್ತಿಸಬಾರದಿತ್ತು, ನನ್ನ ವರ್ತನೆಗೆ ವಿಷಾದಿಸುತ್ತೇನೆ ಎಂದು ಅಧಿಕಾರಿ ಕ್ಷಮೆ ಕೋರಿದ್ದಾರೆ. ಆದಾಗ್ಯೂ, ಅಧಿಕಾರದ ಅಮಲಿನಲ್ಲಿ ಸಾರ್ವಜನಿಕವಾಗಿ ಹಲ್ಲೆ ನಡೆಸುವ ಇಂತಹ ಪೊಲೀಸ್ ದರ್ಪಕ್ಕೆ ಕೇವಲ ಕ್ಷಮೆಯಾಚನೆ ಸಾಲದು, ಶಿಸ್ತು ಕ್ರಮ ಜರುಗಿಸಬೇಕು ಎನ್ನುವುದು ವಕೀಲರ ವಾದವಾಗಿದೆ, (ಏಜೆನ್ಸೀಸ್).