ಅಮೆರಿಕ ಮತ್ತು ರಷ್ಯಾ ನಡುವಿನ ರಹಸ್ಯ ಒಪ್ಪಂದದ ವರದಿಗಳ ಬೆನ್ನಲ್ಲೇ, ಯುದ್ಧಕ್ಕೆ ತೆರೆ ಎಳೆಯಲು ಶೇ. 25 ರಷ್ಟು ಭೂಪ್ರದೇಶವನ್ನು ರಷ್ಯಾಗೆ ನೀಡಲು ಸಿದ್ಧವಿರುವುದಾಗಿ ಯೂಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ ಎನ್ನಲಾದ ಸುದ್ದಿ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. 
ವಿದೇಶ

ರಷ್ಯಾ-ಅಮೆರಿಕ ರಹಸ್ಯ ಮೈತ್ರಿಗೆ ಕಂಗೆಟ್ಟ ಯೂಕ್ರೇನ್: 25% ಭೂಮಿ ಬಿಟ್ಟುಕೊಡಲು ಸಿದ್ಧನಾದ ಝೆಲೆನ್‌ಸ್ಕಿ? Volodymyr Zelenskyy

ಅಮೆರಿಕ-ರಷ್ಯಾ ರಹಸ್ಯ ಒಪ್ಪಂದದ ವರದಿ ಬೆನ್ನಲ್ಲೇ ಕಂಗೆಟ್ಟ ಯೂಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ, ಯುದ್ಧ ನಿಲ್ಲಿಸಲು ರಷ್ಯಾಗೆ 25% ಭೂಭಾಗ ಬಿಟ್ಟುಕೊಡಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಸಂಚಲನ ಮೂಡಿಸಿದೆ.

ಯೂಕ್ರೇನ್​: ಕಳೆದ ಐದು ವರ್ಷಗಳಿಂದ ನಡೆದು ಬರುತ್ತಿದ್ದ ರಷ್ಯಾ-ಯೂಕ್ರೇನ್​ ಯುದ್ಧಕ್ಕೆ ಇದೀಗ ತೆರೆ ಬೀಳುವ ಲಕ್ಷಣ ಕಂಡು ಬರುತ್ತಿದೆ. ಇಷ್ಟು ದಿನಗಳ ಕಾಲ ಯೂಕ್ರೇನ್​ ಪರವಾಗಿ ನಿಂತಿದ್ದ ದೊಡ್ಡಣ್ಣ ಅಮೆರಿಕ ಈಗ, ರಷ್ಯಾ ಜತೆ ರಹಸ್ಯ ಒಪ್ಪಂದ ಮಾಡಿಕೊಂಡ ಹಿನ್ನಲೆ ಯೂಕ್ರೇನ್​ ಈಗ ಒಬ್ಬಂಟಿಯಾಗಿದೆ ಎಂದು ಜಾಗತಿಕ ಮಾಧ್ಯಮಗಳ ವರದಿ ತಿಳಿಸುತ್ತಿವೆ.

ಅಮೆರಿಕ- ರಷ್ಯಾ ಒಪ್ಪಂದದ ಸುದ್ದಿ ಹೊರಬಿದ್ದ ಹಿನ್ನಲೆಯಲ್ಲಿ ಕಂಗೆಟ್ಟಿರುವ ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಖಾಸಗಿ ಮಾಧ್ಯಮವೊಂದರಲ್ಲಿ ನಾವೀಗ ಯುದ್ಧವನ್ನು ನಿಲ್ಲಿಸಲು ಮುಂದಾಗುತ್ತಿದೆವೆಂದು ನೀಡಿರುವ ಹೇಳಿಕೆ ಈಗ ಎಲ್ಲಡೆ ಚರ್ಚೆಗೆ ಗ್ರಾಸವಾಗಿದೆ.

ಶೇ.25 ರಷ್ಟು ಭೂಪ್ರದೇಶ ಬಿಟ್ಟುಕೊಡುತ್ತೇವೆ!

ಇತ್ತೀಚೆಗೆ ದೊರೆತಿರುವ ಶಾಕಿಂಗ್​ ಸುದ್ದಿ ಏನೆಂದರೆ, ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಯೂಕ್ರೇನ್​ನ ಶೇ.25 ರಷ್ಟು ಭೂಪ್ರದೇಶವನ್ನು ರಷ್ಯಾಗೆ ಬಿಟ್ಟುಕೊಡಲು ಸಿದ್ಧರಾಗಿದ್ದಾರೆಂದು ಜಾಗತಿಕ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಅಲ್ಲಿ ತಳಿಸಿರುವಂತೆ ಕಳೆದ 5 ವರ್ಷಗಳಿಂದ ಈ ಸಂಘರ್ಷ ನಡೆಯುತ್ತಿದ್ದು, ಉಭಯ ಪಕ್ಷಗಳು ಭಾರೀ ನಷ್ಟ ಅನುಭವಿಸುತ್ತಿವೆ. ಹೀಗಾಗಿ ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಹೀಗಾಗಿ ನಮ್ಮ ಕೆಲ ಭೂಪ್ರದೇಶವನ್ನು ರಷ್ಯಾಗೆ ನೀಡಿದರೆ, ಯುದ್ಧ ನಿಲ್ಲುತ್ತದೆ ಎಂದರೆ ಅದಕ್ಕೂ ತಾವು ಸಿದ್ಧವಿರುವುದಾಗಿ ಝೆಲೆನ್ಸ್ಕಿಹೇಳಿದ್ದಾರೆ ಎನ್ನಲಾಗುತ್ತಿದೆ.

ಈ ಯುದ್ಧವನ್ನು ರಷ್ಯಾ ಗೆದ್ದಿಲ್ಲ!

ನಾವು, ಕೇವಲ ಯುದ್ಧವನ್ನು ನಿಲ್ಲಿಸಿ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಉದ್ದೇಶದಿಂದ, ಭೂಪ್ರದೇಶವನ್ನು ನೀಡುತ್ತಿದ್ದೆವೇ ಹೊರತು, ಈ ಸಂಘರ್ಷದಲ್ಲಿ ರಷ್ಯಾ ಗೆದ್ದಿದೆ ಎಂದಲ್ಲ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ನಮಗೆ, ನಮ್ಮ ಜನಕ್ಕೆ ಶಾಂತಿ ಮುಖ್ಯವಾಗಿದೆ. ಹೀಗಾಗಿ ನಾನು, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜತೆಗೆ ಸಭೆ ನಡೆಸಿ ಈ ಯುದ್ಧವನ್ನು ನಿಲ್ಲಿಸುವ ಕುರಿತು ಮಾತುಕತೆ ನಡೆಸಲಿದ್ದೇನೆ. ಇದಕ್ಕೆ ರಷ್ಯಾ ಕೂಡ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.

ಟ್ರಂಪ್​-ಪುತಿನ್​ ಸಿಕ್ರೇಟ್​ ಒಪ್ಪಂದ?

ಇನ್ನೊಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ರಷ್ಯಾ ಮೇಲೆ ಹೇರಿದ್ದ ಆರ್ಥಿಕ ದಿಗ್ಭಂದನವನ್ನು ತೆಗೆಯಲು ಸೂಚನೆ ನೀಡಿದ್ದು, ಇರಾನ್​ಗೆ ರಷ್ಯಾ ನೀಡುತ್ತಿದ್ದ ಸಹಾಯವನ್ನು ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮೀರ್​ ಪುತಿನ್​ ಅವರಲ್ಲಿ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ರಷ್ಯಾ, ಇರಾನ್​ಗೆ ಮಾಡುತ್ತಿರುವ ಸಹಾಯವನ್ನು ನಿಲ್ಲಿಸಿದರೆ, ಯೂಕ್ರೇನ್​​ ಯುದ್ಧದಿಂದ ಹಿಂಬರುವಂತೆ ಮಾಡುವುದಾಗಿ ಟ್ರಂಪ್​ ಭರವಸೆ ನೀಡಿದ್ದಾರೆನ್ನುವ ಮಾತು ಜಾಗತಿಕ ಮಾಧ್ಯಮಗಳಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ.

ಈ ಹಿನ್ನಲೆಯಲ್ಲಿಯೇ, ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಯುದ್ಧವನ್ನು ನಿಲ್ಲಿಸಿಲು ಶೇ. 25 ರಷ್ಟು ಭೂಭಾಗವನ್ನು ನೀಡಿಯಾದರೂ ಯುದ್ಧವನ್ನು ನಿಲ್ಲಿಸುತ್ತೇವೆಂದು ಹೇಳಿಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಮತ್ತೊಂದು ಮಾಹಿತಿ ಪ್ರಕಾರ, ರಷ್ಯಾ ಅಧ್ಯಕ್ಷ ಪುತಿನ್​, ಯೂಕ್ರೇನ್​ ಜೊತೆ ನಡೆಯುವ ಒಪ್ಪಂದದ ಸಂದರ್ಭದಲ್ಲಿ, ಚೀನಾ ಕೂಡ ಮಧ್ಯಸ್ಥಿಕೆ ವಹಿಸಬೇಕೆಂದು ಹೇಳಿದೆಯಂತೆ. ಆದರೆ ಈ ಬಗ್ಗೆ ಚೀನಾದಿಂದ ಯಾವುದೇ ಸ್ಪಷ್ಟನೆ ದೊರೆತಿಲ್ಲ. ಹಾಗೆಯೇ ಅಮೆರಿಕ ಕೂಡ ತನ್ನ ನ್ಯಾಟೋ ಸೇನೆಯನ್ನು ರಷ್ಯಾ ಸುತ್ತಲಿನ ದೇಶಗಳಲ್ಲಿ ನಿಯೋಜನೆ ಮಾಡುವಂತಿಲ್ಲವೆಂದು ಪುತಿನ್​ ತಾಕೀತು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ, ಈ ಎಲ್ಲಾ ಅಂತೆ-ಕಂತೆ, ಒಪ್ಪಂದಗಳು ಎಷ್ಟರ ಮಟ್ಟಿಗೆ ಯಶಸ್ಸನ್ನು ಕಾಣುತ್ತದೆ? ಜಗತ್ತಿನಲ್ಲಿ ನಿಜವಾಗಿಯೂ ಶಾಂತಿ ಸ್ಥಾಪನೆಯಾಗುತ್ತದೆಯೋ? ಅಥವಾ ಈ ಒಪ್ಪಂದ ಇನ್ನೊಂದು ಯುದ್ಧಕ್ಕೆ ನಾಂದಿಯಾಗುತ್ತದೆಯೋ? ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ, (ಏಜೆನ್ಸೀಸ್​).