ಇರಾನ್ ವಿರುದ್ಧ ತೊಡೆತಟ್ಟಿದ ಯುಎಇ, ಸೌದಿ! ಹಾರ್ಮುಜ್ ಜಲಸಂಧಿ ವಶಕ್ಕೆ ಅಂತಾರಾಷ್ಟ್ರೀಯ ಪ್ಲಾನ್..?
ದುಬೈ: ಜಗತ್ತಿನ ಒಟ್ಟು ತೈಲ ಪೂರೈಕೆಯ ಶೇ. 20ರಷ್ಟು ಭಾಗ ಸಾಗುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವುದು ಈಗ ಗಲ್ಫ್ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ. ಇಷ್ಟು ದಿನ ಇರಾನ್ ಜೊತೆ ಮೃದು ಧೋರಣೆ ಹೊಂದಿದ್ದ ಯುಎಇ(UAEvsIran), ಈಗ ಅಮೆರಿಕದೊಂದಿಗೆ ಕೈಜೋಡಿಸಿ ಇರಾನ್ ವಿರುದ್ಧ ನೇರ ಸೇನಾ ಕಾರ್ಯಾಚರಣೆ ನಡೆಸಲು ಸಜ್ಜಾಗಿದೆ ಎಂಬ ಸ್ಫೋಟಕ ವರದಿ ಹೊರಬಿದ್ದಿದೆ.
ಯುಎಇ ಕಾರ್ಯತಂತ್ರದಲ್ಲಿ ಭಾರಿ ಬದಲಾವಣೆ
ವಾಲ್ ಸ್ಟ್ರೀಟ್ ಜರ್ನಲ್ (WSJ) ವರದಿಯ ಪ್ರಕಾರ, ಇರಾನ್‌ನ ನಿರಂತರ ದಾಳಿ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ದಿಗ್ಬಂಧನದಿಂದ ಬೇಸತ್ತಿರುವ ಯುಎಇ, ಈಗ ಇರಾನ್ ವಿರುದ್ಧ ಅತಿ ದೊಡ್ಡ ಸೇನಾ ಒಕ್ಕೂಟ ರಚಿಸಲು ಮುಂದಾಗಿದೆ.
ವಿಶ್ವಸಂಸ್ಥೆಯಲ್ಲಿ ಲಾಬಿ: ಹಾರ್ಮುಜ್ ಜಲಸಂಧಿಯನ್ನು ಬಲವಂತವಾಗಿ ತೆರೆಯಲು ಅನುಮತಿ ನೀಡುವಂತೆ ಯುಎಇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಒತ್ತಡ ಹೇರುತ್ತಿದೆ.
ದ್ವೀಪಗಳ ವಶಕ್ಕೆ ಆಗ್ರಹ: ಇರಾನ್ ಆಡಳಿತದಲ್ಲಿರುವ ಆದರೆ ಯುಎಇ ಹಕ್ಕು ಸಾಧಿಸುತ್ತಿರುವ ಅಬು ಮೂಸಾ ಸೇರಿದಂತೆ ಆಯಕಟ್ಟಿನ ದ್ವೀಪಗಳನ್ನು ಅಮೆರಿಕದ ಸೇನೆಯು ವಶಪಡಿಸಿಕೊಳ್ಳಬೇಕು ಎಂಬುದು ಯುಎಇ ಆಗ್ರಹವಾಗಿದೆ.
ಇರಾನಿಗಳಿಗೆ ನಿಷೇಧ: ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಎಮಿರೇಟ್ಸ್, ಎತಿಹಾದ್ ಮತ್ತು ಫ್ಲೈದುಬೈ ವಿಮಾನಯಾನ ಸಂಸ್ಥೆಗಳು ಇರಾನಿ ಪ್ರಜೆಗಳ ಪ್ರವೇಶವನ್ನು ನಿರ್ಬಂಧಿಸಿವೆ. ದುಬೈನಲ್ಲಿ ದಶಕಗಳಿಂದ ಇದ್ದ ಇರಾನ್ ಆಸ್ಪತ್ರೆ ಮತ್ತು ಇರಾನ್ ಕ್ಲಬ್‌ಗಳನ್ನು ಈಗಾಗಲೇ ಮುಚ್ಚಲಾಗಿದೆ.
ಸೌದಿ ಅರೇಬಿಯಾದ ಎಚ್ಚರಿಕೆ: ಸಹನೆ ಮುಗಿಯುತ್ತಿದೆ
ಅರಬ್ ಜಗತ್ತಿನ ನಾಯಕ ಸೌದಿ ಅರೇಬಿಯಾ ಕೂಡ ಇರಾನ್ ವಿರುದ್ಧ ಗುಡುಗಿದೆ. ಸೌದಿ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಮಾತನಾಡಿ, 2023ರಲ್ಲಿ ಮರುಸ್ಥಾಪನೆಯಾಗಿದ್ದ ಅಲ್ಪಸ್ವಲ್ಪ ವಿಶ್ವಾಸವೂ ಈಗ ಸಂಪೂರ್ಣವಾಗಿ ಪುಡಿಯಾಗಿದೆ. ಇರಾನ್ ತನ್ನ ಆಕ್ರಮಣಕಾರಿ ಧೋರಣೆ ನಿಲ್ಲಿಸದಿದ್ದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಸೌದಿ ಅರೇಬಿಯಾದ ತೈಲ ಆಧಾರಿತ ಆರ್ಥಿಕತೆಗೆ ಇರಾನ್ ದೊಡ್ಡ ಹೊಡೆತ ನೀಡುತ್ತಿರುವುದು ಸೌದಿ ಕೆರಳಲು ಮುಖ್ಯ ಕಾರಣವಾಗಿದೆ.
ಇಸ್ರೇಲ್ ಜೊತೆ ಅರಬ್ ರಾಷ್ಟ್ರಗಳ ಹೊಸ ಮೈತ್ರಿ..?
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇತ್ತೀಚೆಗೆ ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಇರಾನ್ ಬಗ್ಗೆ ನಾನು ಅರಬ್ ನಾಯಕರಿಗೆ ನೀಡಿದ್ದ ಎಚ್ಚರಿಕೆ ಈಗ ನಿಜವಾಗುತ್ತಿದೆ. ಕೆಲವು ಅರಬ್ ದೇಶಗಳು ಈಗ ನಮ್ಮ ಜೊತೆ ಸೇರಿ ಹೋರಾಡಲು ಆಸಕ್ತಿ ತೋರುತ್ತಿವೆ ಎಂದು ಹೇಳುವ ಮೂಲಕ ಮಧ್ಯಪ್ರಾಚ್ಯದಲ್ಲಿ ಇರಾನ್ ವಿರುದ್ಧ ಹೊಸ ಅರಬ್-ಇಸ್ರೇಲ್ ಮೈತ್ರಿಕೂಟ ರಚನೆಯಾಗುತ್ತಿರುವುದನ್ನು ಖಚಿತಪಡಿಸಿದ್ದಾರೆ.
ಹಾರ್ಮುಜ್ ಜಲಸಂಧಿ ಏಕೆ ಮುಖ್ಯ?
ಜಗತ್ತಿನ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯ ಬಹುಪಾಲು ಈ ಕಿರಿದಾದ ಜಲಸಂಧಿಯ ಮೂಲಕವೇ ಸಾಗುತ್ತದೆ.
ಇರಾನ್ ಇಲ್ಲಿ ಮೈನ್‌ಗಳನ್ನು ಅಳವಡಿಸಿ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿದೆ.
ಇಲ್ಲಿ ಸಂಚಾರ ಸ್ಥಗಿತಗೊಂಡರೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರಲಿದ್ದು, ಭಾರತ ಸೇರಿದಂತೆ ಹಲವು ದೇಶಗಳ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಲಿದೆ.
ಮುಂದೇನು?
ಬಹ್ರೇನ್ ಬೆಂಬಲದೊಂದಿಗೆ ಅಮೆರಿಕ ಮಂಡಿಸಿರುವ ನಿರ್ಣಯದ ಮೇಲೆ ಗುರುವಾರ ಮತದಾನ ನಡೆಯಲಿದೆ. ಒಂದು ವೇಳೆ ಈ ನಿರ್ಣಯ ಅಂಗೀಕಾರವಾದರೆ, ಅಮೆರಿಕ, ಯುಎಇ ಮತ್ತು ಬ್ರಿಟನ್ ಪಡೆಗಳು ಜಂಟಿಯಾಗಿ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಇರಾನ್ ಮೇಲೆ ಯುದ್ಧ ಸಾರುವ ಸಾಧ್ಯತೆಯಿದೆ. ಇದು ನಡೆದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಗಲ್ಫ್ ರಾಷ್ಟ್ರವೊಂದು ಇರಾನ್ ವಿರುದ್ಧ ನೇರವಾಗಿ ಯುದ್ಧಭೂಮಿಗೆ ಇಳಿದಂತಾಗುತ್ತದೆ,(ಏಜೆನ್ಸೀಸ್).