ಅಮೆರಿಕಕ್ಕೆ ಯುಎಇ ಬಿಗ್ ಶಾಕ್  
ವಿದೇಶ

ವಿಮಾನ, ನಗದು, ಟನ್​ಗಟ್ಟಲೇ ಚಿನ್ನ! ಇರಾನ್​ ವಿರುದ್ಧ ಕೆಂಡಾಕಾರುತ್ತಿರುವ ಅಮೆರಿಕಕ್ಕೆ ಯುಎಇ ಬಿಗ್ ಶಾಕ್​? | UAE Iran Deal

ಪ್ರಮುಖ ಮುಖ್ಯಾಂಶಗಳು

  • ಅಮೆರಿಕಕ್ಕೆ ಯುಎಇ ಬಿಗ್ ಶಾಕ್? ಇರಾನ್ ಪರ ಮಹತ್ವದ ಹೆಜ್ಜೆ
  • ಯುಎಇಯಿಂದ ಸುಮಾರು 15 ಸೆಕೆಂಡ್‌ಹ್ಯಾಂಡ್ ಪ್ರಯಾಣಿಕ ವಿಮಾನಗಳು
  • ಅಮೆರಿಕ–ಇರಾನ್ ಸಂಘರ್ಷದಿಂದ ಕೊಲ್ಲಿ ರಾಷ್ಟ್ರಗಳಲ್ಲಿ ಆತಂಕ
UAE Iran Deal: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮುಂದುವರೆದಂತೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರಮುಖ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಇದೀಗ ಅಮೆರಿಕಕ್ಕೆ ಬಿಗ್ ಶಾಕ್ ಕೊಟ್ಟಿದೆ. ಇದರ ಬೆನ್ನಲ್ಲೇ ಇರಾನ್ ಅನ್ನು ಓಲೈಸುವ ಕೆಲಸದಲ್ಲಿ ತೊಡಗಿದ್ದು, ಇದರ ಭಾಗವಾಗಿ ದುಬಾರಿ ಮೌಲ್ಯದ ವಿಮಾನ, ಅಪಾರ ಪ್ರಮಾಣದ ನಗದು, ಟನ್​ಗಟ್ಟಲೆ ಚಿನ್ನವನ್ನು ಇರಾನ್​ಗೆ ವರ್ಗಾಯಿಸಿರುವುದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ತಿಳಿಸಿವೆ. 
ಇರಾನ್ ಮೇಲೆ ಅಮೆರಿಕ ಸೇನೆ ಕ್ಷಿಪಣಿಗಳ ದಾಳಿಗಳನ್ನು ನಡೆಸುತ್ತಲೇ ಇದೆ. ಇರಾನ್ ಕೂಡ ಇದಕ್ಕೆ ಪ್ರತಿದಾಳಿಯ ಮೂಲಕ ಪ್ರತ್ಯುತ್ತರ ನೀಡುತ್ತಿದೆ. ಇರಾನಿನ ಮೇಲೆ ಅಮೆರಿಕ ದಾಳಿ ನಡೆಸುತ್ತಿದ್ದರೆ, ಇರಾನ್ ಅಮೆರಿಕದ ನೆಲೆಗಳು ಮತ್ತು ಯುಎಇಯ ಪ್ರಮುಖ ಪ್ರದೇಶಗಳ ಮೇಲೆ ಕ್ಷಿಪಣಿಗಳ ಮಳೆಗರೆಯುತ್ತಿದೆ. ಆದರೆ, ಇತ್ತೀಚೆಗಷ್ಟೇ ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದ್ದರೂ ಅದು ಜಾರಿಯಾಗುತ್ತಿಲ್ಲ. ಇದರಿಂದಾಗಿ ಗಲ್ಫ್ ರಾಷ್ಟ್ರಗಳ ಮೇಲೂ ಗಂಭೀರವಾದ ದಾಳಿ ನಡೆಯುತ್ತಿದೆ. ಭವಿಷ್ಯದಲ್ಲಿ ಈ ರೀತಿ ಟಾರ್ಗೆಟ್ ಆಗಬಾರದು ಎಂಬ ಪ್ಲ್ಯಾನ್​ನೊಂದಿಗೆ ಮುಂದಾಗಿರುವ ಯುಎಇ, ಇರಾನಿನ ಬೆನ್ನು ಸವರುವ ಕೆಲಸಕ್ಕಿಳಿದಿದೆ.  ​ 
ಈ ಭಾಗವಾಗಿ, ಯುಎಸ್ ನಿರ್ಬಂಧಗಳಿಂದಾಗಿ ಹಲವಾರು ದೇಶಗಳಲ್ಲಿ ಇರಾನ್ ಆಸ್ತಿಗಳನ್ನು ಬ್ಯಾಂಕ್‌ಗಳಲ್ಲಿ ಫ್ರೀಜ್ ಮಾಡಲಾಗಿದೆ. ಯುಎಇ ತನ್ನಲ್ಲಿರುವ ಇರಾನ್​ಗೆ ಸಂಬಂಧಿಸಿದ ನಿಧಿಯನ್ನು ಬಿಡುಗಡೆ ಮಾಡಲು ಮತ್ತು ಯುದ್ಧದಿಂದ ದೂರವಿರಲು ನಿರ್ಧರಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇರಾನ್ ದಾಳಿಯಿಂದ ಬಚಾವ್ ಆಗಲು ಇದೇ ಆ.11 ಮತ್ತು 12ರಂದು ವಿಮಾನಗಳ ಸಮೇತ ಹಣ ಹಾಗೂ ಅಪಾರ ಪ್ರಮಾಣದ ಚಿನ್ನವನ್ನು ವರ್ಗಾಯಿಸಲಾಗಿತ್ತು ಎಂದು ತಿಳಿದುಬಂದಿದೆ. ಇದರೊಟ್ಟಿಗೆ, ಯುಎಇಯ ಕೆಲವು ಕಂಪನಿಗಳು ಈಗಾಗಲೇ ಇರಾನ್ ವಿಮಾನಯಾನ ಸಂಸ್ಥೆಗಳಿಗೆ ಬಳಸಲಾದ ಸುಮಾರು 15 ಸೆಕೆಂಡ್ ಹ್ಯಾಂಡ್ ಫ್ಲೈಟ್​ಗಳನ್ನು ಮಾರಾಟ ಮಾಡಲು ಸಹ ಒಪ್ಪಿಕೊಂಡಿವೆ.
ಇವುಗಳಲ್ಲಿ ಸೆಕೆಂಡ್ ಹ್ಯಾಂಡ್ ಸೌದಿಯಾ ಬೋಯಿಂಗ್ 777, ಹಾಗೆಯೇ ಕೆಲವು ಬೋಯಿಂಗ್ 737 ಮತ್ತು ಏರ್‌ಬಸ್ A320 ವಿಮಾನಗಳು ಸೇರಿವೆ ಎಂದು ತಿಳಿಸಲಾಗಿದೆ. ಎರಡು ಏರ್‌ಬಸ್ ಎ320 ವಿಮಾನಗಳು ಈಗಾಗಲೇ ಇರಾನ್‌ಗೆ ಆಗಮಿಸಿವೆ. ಇರಾನ್‌ಗೆ ಇನ್ನೂ 14 ಪ್ರಯಾಣಿಕ ವಿಮಾನಗಳನ್ನು ಹಿಂದಿರುಗಿಸಲು ಯುಎಇ ಮುಂದಾಗಿದೆ ಎಂದು ವರದಿಯಾಗಿದೆ. ಜೂನ್ 8ರಂದು ಅಬುಧಾಬಿಯಿಂದ ಮೆಹ್ರಾಬಾದ್‌ಗೆ ವಿಮಾನವೊಂದು ಹಾರಿದ್ದು, ಅದರಲ್ಲಿ ಸುಮಾರು ಮೂರು ಬಿಲಿಯನ್ ಡಾಲರ್‌ಗಳನ್ನು ಆ ದೇಶಕ್ಕೆ ವರ್ಗಾಯಿಸಲಾಗಿದೆ. ಜತೆಗೆ ಎರಡು ಟನ್ ಚಿನ್ನವನ್ನು ಈಗಾಗಲೇ ಇರಾನ್‌ಗೆ ವರ್ಗಾಯಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಸರಳವಾಗಿ ಹೇಳುವುದಾದರೆ, ಯುಎಇ ಇರಾನ್‌ನೊಂದಿಗೆ ನೇರ ಸಂಘರ್ಷವನ್ನು ಬಯಸುತ್ತಿಲ್ಲ. ಅಮೆರಿಕ-ಇರಾನ್ ಸಂಘರ್ಷ ಉಲ್ಬಣಗೊಂಡರೆ ಕೊಲ್ಲಿ ವಲಯದ ರಾಷ್ಟ್ರಗಳೂ ಇದರಿಂದ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಹೀಗಾಗಿಯೇ, ಯುಎಇ ಇರಾನ್‌ನೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳಲು ಮತ್ತು ಅದರ ಭದ್ರತೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿಯಲ್ಲಿ ಉಲ್ಲೇಖಿಸಿವೆ,(ಏಜೆನ್ಸೀಸ್).