ಸ್ಯಾನ್ ಫ್ರಾನ್ಸಿಸ್ಕೋ: ಜಾಗತಿಕ ಟೆಕ್ ಮತ್ತು ಕೃತಕ ಬುದ್ದಿಮತ್ತೆ (AI) ಲೋಕದ ದಿಗ್ಗಜ ಕಂಪನಿ 'ಎನ್ವಿಡಿಯಾ' (Nvidia) ಸಿಇಒ ಜೆನ್ಸನ್ ಹುವಾಂಗ್ ಈಗ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೆನ್ಸನ್ ಹುವಾಂಗ್ ಎರಡು ವಿವಾಹೇತರ ಸಂಬಂಧಗಳನ್ನು ಹೊಂದಿದ್ದರು, ಅದರಲ್ಲಿ ಒಂದು ಶಂಕಿತ ಚೀನೀ ಗೂಢಚಾರರೊಂದಿಗಿನ ಸಂಬಂಧವೂ ಸೇರಿದೆ ಎಂದು ವರದಿಯಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಹುವಾಂಗ್ ಅವರ ಭವಿಷ್ಯವನ್ನು ನಿರ್ಧರಿಸಲು ಕಂಪನಿಯ ಆಡಳಿತ ಮಂಡಳಿ ತುರ್ತು ಸಭೆ ಸೇರಲು ಸಜ್ಜಾಗಿದೆ.
ಚೀನಾದ ಕಂಪನಿಗಳಿಗೆ ಎನ್ವಿಡಿಯಾ ಚಿಪ್ಗಳ ಸಾಗಣೆಯನ್ನು ಸುಗಮಗೊಳಿಸುವಲ್ಲಿ ಭಾಗಿಯಾಗಿದ್ದಾರೆ ಎಂದು ಯುಎಸ್ ಗುಪ್ತಚರ ಸಂಸ್ಥೆ ಶಂಕಿಸಿರುವ ಆಲಿಸ್ ಹುವಾಂಗ್ ಎಂಬುವವರೊಂದಿಗೆ ಜೆನ್ಸನ್ ಸಂಬಂಧ ಹೊಂದಿದ್ದರು ಎಂಬ ವಿಚಾರ ಮೊದಲು ಹೊರಬಿದ್ದಿತ್ತು. ಇದರ ಬೆನ್ನಲ್ಲೇ, ಎನ್ವಿಡಿಯಾದ ಆರೋಗ್ಯ ರಕ್ಷಣಾ ವಿಭಾಗದ ಉಪಾಧ್ಯಕ್ಷೆ ಕಿಂಬರ್ಲಿ ಪೊವೆಲ್ ಅವರೊಂದಿಗೂ ಹುವಾಂಗ್ ವಿವಾಹೇತರ ಸಂಬಂಧ ಹೊಂದಿದ್ದರು ಎಂದು 'ನ್ಯೂಯಾರ್ಕ್ ಟೈಮ್ಸ್' (NYT) ವರದಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ಕೇಳಲು ನ್ಯೂಯಾರ್ಕ್ ಟೈಮ್ಸ್ ವರದಿಗಾರರು ಫೋನ್ ಮಾಡಿದಾಗ, "ನೀವು ನನ್ನೊಂದಿಗೆ ನೇರವಾಗಿ ಮಾತನಾಡಬಾರದು" ಎಂದು ಹೇಳಿ ಹುವಾಂಗ್ ಕರೆ ಕಟ್ ಮಾಡಿದ್ದಾರೆ ಎನ್ನಲಾಗಿದೆ.
ಈ ವಿವಾದ ಭುಗಿಲೇಳುತ್ತಿದ್ದಂತೆ ಭಾನುವಾರ ಉದ್ಯೋಗಿಗಳಿಗೆ ಪತ್ರ ಬರೆದಿದ್ದ ಜೆನ್ಸನ್ ಹುವಾಂಗ್, ತಮ್ಮ ಪತ್ನಿಗೆ ವಿಶ್ವಾಸದ್ರೋಹ ಬಗೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಮತ್ತು ಇದಕ್ಕೆ ತಾವೇ ಸಂಪೂರ್ಣ ಜವಾಬ್ದಾರರು ಎಂದಿದ್ದಾರೆ. ಆದರೆ ಸಂಬಂಧದ ಕುರಿತು ಹೆಚ್ಚಿನ ವಿವರ ನೀಡಿಲ್ಲ.
ವಿದೇಶಿ ಗುಪ್ತಚರ ಕಾರ್ಯಾಚರಣೆಯಿಂದ ಹುವಾಂಗ್ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆಯೇ ಎಂಬ ಬಗ್ಗೆ ಎನ್ವಿಡಿಯಾ ಮಂಡಳಿ ಈಗಾಗಲೇ ಸ್ವತಂತ್ರ ತನಿಖೆ ಆರಂಭಿಸಿದೆ. ಈ ವಿವಾದ ಶುರುವಾದಾಗಿನಿಂದ ಕಂಪನಿಯ ಷೇರುಗಳು ಪಾತಾಳಕ್ಕೆ ಕುಸಿಯುತ್ತಿದ್ದು, ಒಂದೇ ವಾರದಲ್ಲಿ ಎನ್ವಿಡಿಯಾ ಸುಮಾರು 600 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ. ಬುಧವಾರದ ವಹಿವಾಟಿನಲ್ಲೂ ಷೇರುಗಳು ಶೇ. 8ರಷ್ಟು ಕುಸಿದಿವೆ.
1993 ರಲ್ಲಿ ಎನ್ವಿಡಿಯಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಜೆನ್ಸನ್ ಹುವಾಂಗ್ ಅವರನ್ನು ತಕ್ಷಣವೇ ಹುದ್ದೆಯಿಂದ ತೆಗೆದುಹಾಕುವುದು ಮಂಡಳಿಗೆ ದೊಡ್ಡ ಸವಾಲಾಗಿದೆ. ಏಕೆಂದರೆ ಕಂಪನಿಯಲ್ಲಿ ಸದ್ಯಕ್ಕೆ ಉತ್ತರಾಧಿಕಾರದ ಯೋಜನೆ ಇಲ್ಲ. ಒಂದು ವೇಳೆ ಹುವಾಂಗ್ ಕಾನೂನು ಅಥವಾ ಕಂಪನಿ ನೀತಿ ಉಲ್ಲಂಘಿಸಿರುವುದು ಸಾಬೀತಾದರೆ ಮಂಡಳಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹುವಾಂಗ್ ಪರ ಬ್ಯಾಟ್ ಬೀಸಿದ್ದು, "ಅವರು ನಮ್ಮ ದೇಶಕ್ಕಾಗಿ ಅದ್ಭುತ ಕೆಲಸ ಮಾಡಿದ್ದಾರೆ" ಎಂದು ಬೆಂಬಲ ಸೂಚಿಸಿದ್ದಾರೆ. ಆದರೆ, ಬೀಜಿಂಗ್ಗೆ ಮಾಹಿತಿ ರವಾನಿಸಿದ ಚೀನೀ ಉದ್ಯಮಿಯೊಂದಿಗಿನ ನಂಟಿನ ಬಗ್ಗೆ ವಿವರಣೆ ನೀಡದಿದ್ದರೆ, ಹುವಾಂಗ್ ಅವರಿಗೆ ಅಮೆರಿಕದ ಕಾಂಗ್ರೆಸ್ನಿಂದ ಸಮನ್ಸ್ ಜಾರಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ, (ಏಜೆನ್ಸೀಸ್).