ಟರ್ಕಿ ಸ್ಟೀಲ್ ಪ್ಲಾಂಟ್​ನಲ್ಲಿ ಭಾರಿ ಸ್ಫೋಟ: ದುರಂತದಲ್ಲಿ 16 ಕಾರ್ಮಿಕರು ಸಾವು; 13 ಜನರ ಸ್ಥಿತಿ ಗಂಭೀರ | Turkey Steel Plant  
ವಿದೇಶ

ಟರ್ಕಿ ಸ್ಟೀಲ್ ಪ್ಲಾಂಟ್​ನಲ್ಲಿ ಭಾರಿ ಸ್ಫೋಟ: ದುರಂತದಲ್ಲಿ 16 ಕಾರ್ಮಿಕರು ಸಾವು; 13 ಜನರ ಸ್ಥಿತಿ ಗಂಭೀರ | Turkey Steel Plant

Turkey Steel Plant Explosion: ಟರ್ಕಿ ಉಕ್ಕಿನ ಕಾರ್ಖಾನೆಯಲ್ಲಿ ಭಾರಿ ಸ್ಫೋಟವೊಂದು ಸಂಭವಿಸಿದ್ದು, ದುರ್ಘಟನೆಯಲ್ಲಿ 16 ಕಾರ್ಮಿಕರು ಸ್ಥಳದಲ್ಲೇ ದುರಂತವಾಗಿ ಸಾವಿಗೀಡಾಗಿದ್ದಾರೆ.

ಪಶ್ಚಿಮ ಟರ್ಕಿಯ ಇಜ್ಮಿರ್ ಪ್ರಾಂತ್ಯದ ಅಲಿಯಾಗಾ ಪ್ರದೇಶದಲ್ಲಿರುವ 'ಹಬಾಸ್' (HABAS) ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ 16 ಕಾರ್ಮಿಕರು ಮೃತಪಟ್ಟಿದ್ದು, 13 ಮಂದಿಗೂ ಹೆಚ್ಚು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಕಾರ್ಖಾನೆಯಲ್ಲಿ ಬಾಯ್ಲರ್ ಬದಲಾಯಿಸುವ ಕೆಲಸ ನಡೆಯುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಹಳೆಯ ಬಾಯ್ಲರ್ ಅನ್ನು ತೆಗೆದು ಹೊಸದನ್ನು ಅಳವಡಿಸುವ ಪ್ರಕ್ರಿಯೆಯಲ್ಲಿ ಕ್ರೇನ್ ಅನ್ನು ಬಳಸಲಾಗುತ್ತಿತ್ತು. ಆದರೆ, ಅನಿರೀಕ್ಷಿತವಾಗಿ ಕ್ರೇನ್ ನಿಯಂತ್ರಣ ತಪ್ಪಿ ಕುಲುಮೆಯೊಳಗೆ ಬಿದ್ದಿದೆ. ಇದರಿಂದ ಭಾರಿ ಸ್ಫೋಟ ಸಂಭವಿಸಿ, ಉಕ್ಕಿನ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಇಡೀ ಕಾರ್ಖಾನೆಗೆ ವ್ಯಾಪಿಸಿದೆ ಎಂದು ವಿವರಿಸಿದ್ದಾರೆ.

ಕಾರ್ಖಾನೆಯಲ್ಲಿದ್ದ 200 ಕಾರ್ಮಿಕರು

ಅಪಘಾತ ಸಂಭವಿಸಿದ ಸಮಯದಲ್ಲಿ ಕಾರ್ಖಾನೆಯ ಆವರಣದಲ್ಲಿ ಸುಮಾರು 200 ಕಾರ್ಮಿಕರಿದ್ದರು ಎಂದು ಗವರ್ನರ್ ಸುಲೇಮಾನ್ ಎಲ್ಬಾನ್ ತಿಳಿಸಿದ್ದಾರೆ. ಸಾಮಾನ್ಯವಾಗಿ ಇಲ್ಲಿ 300 ಮಂದಿ ಕೆಲಸ ಮಾಡುತ್ತಾರೆ. ಆದರೆ, ಬಾಯ್ಲರ್ ಬದಲಾವಣೆಗಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದರಿಂದ, ಆ ಸಮಯದಲ್ಲಿ ಕಾರ್ಮಿಕರ ಸಂಖ್ಯೆ ಕಡಿಮೆಯಿತ್ತು ಎಂದು ಹೇಳಿದ್ದಾರೆ.

ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪವೇ ಸಂಭವಿಸಿತು ಎನ್ನುವ ಅನುಭವ ಉಂಟಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಭಾರಿ ಶಬ್ದ ಮತ್ತು ಆಕಾಶದಲ್ಲಿ ದಟ್ಟ ಹೊಗೆ ಆವರಿಸಿದ ಬೆನ್ನಲ್ಲೇ ಮಾಹಿತಿ ಪಡೆದ ಅಗ್ನಿಶಾಮಕ ಮತ್ತು ತುರ್ತು ಸೇವಾ ತಂಡಗಳು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿವೆ ಎಂದು ವರದಿಯಾಗಿದೆ.

ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಈ ಘಟನೆಯಲ್ಲಿ ಮೃತ ಕಾರ್ಮಿಕರಿಗೆ ಸಂತಾಪ ಸೂಚಿಸಿದ್ದಾರೆ. ಅಪಘಾತಕ್ಕೆ ಕಾರಣಗಳೇನು ಮತ್ತು ಎಲ್ಲಾದರೂ ನಿರ್ಲಕ್ಷ್ಯ ವಹಿಸಲಾಗಿದೆಯೇ ಎಂಬ ಬಗ್ಗೆ ನ್ಯಾಯಾಂಗ ಹಾಗೂ ಆಡಳಿತಾತ್ಮಕ ತನಿಖೆಗೆ ಆದೇಶಿಸಿದ್ದಾರೆ. ತಪ್ಪಿತಸ್ಥರು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್).