Donald Trump > ಖಮೇನಿ ಜೀವಂತ, ಆದರೆ ಸ್ಥಿತಿ ಭೀಕರವಾಗಿದೆ ಎಂದು ಟ್ರಂಪ್ ಹೊಸ ಬಾಂಬ್! 
ವಿದೇಶ

ಇರಾನ್ ಸುಪ್ರೀಂ ಲೀಡರ್ ಕುರಿತು ಮುಗಿಯದ ನಿಗೂಢತೆ: ಖಮೇನಿ ಜೀವಂತ, ಆದರೆ ಸ್ಥಿತಿ ಭೀಕರವಾಗಿದೆ ಎಂದು ಟ್ರಂಪ್ ಹೊಸ ಬಾಂಬ್! | Donald Trump

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಬದುಕಿರುವ ಬಗ್ಗೆ ಗೊಂದಲ ಮುಂದುವರಿದಿರುವ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಮೊಜ್ತಬಾ ಖಮೇನಿ ಇನ್ನೂ ಜೀವಂತವಾಗಿದ್ದಾರೆ ಆದರೆ ಈ ಅಮೆರಿಕ ನಡೆಸಿದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ,

ಅವರ ಎಡಗೈ, ಎಡಕಾಲು ಸೇರಿದಂತೆ ಇಡೀ ಎಡಭಾಗಕ್ಕೆ ಗಂಭೀರ ಗಾಯಗಳಾಗಿವೆ

ಎಂದು ಬುಧವಾರ ಹೇಳಿಕೆ ನೀಡಿದ್ದಾರೆ.

ಅಮೆರಿಕದ ವಿಶ್ಲೇಷಕ ಗ್ಲೆನ್ ಬೆಕ್ ಅವರೊಂದಿಗಿನ ಸಂದರ್ಶನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಒಂದು ವೇಳೆ ಮೊಜ್ತಬಾ ಅವರು ಮೃತಪಟ್ಟಿದ್ದರೆ ಅಥವಾ ಕಾರ್ಯನಿರ್ವಹಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರೆ, ಇರಾನ್ ಆಡಳಿತವು ಜಗತ್ತಿಗೆ ದೊಡ್ಡ ಮಟ್ಟದ ಸುಳ್ಳು ನಾಟಕವಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ಅವರು ಮೃತಪಟ್ಟಿದ್ದರೆ, ಇರಾನ್‌ನವರು ಚೆನ್ನಾಗಿ ನಾಟಕವಾಡುತ್ತಿದ್ದಾರೆ. ಏಕೆಂದರೆ ಮುಖ್ಯ ತೀರ್ಮಾನಗಳಿಗೆ ಕೊನೆಯದಾಗಿ ಅವರ ಆಶೀರ್ವಾದ ಪಡೆಯಲು ಸದಾ ಅವರ ಬಳಿ ಹೋಗಿ ಮಾತನಾಡುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅಂತಹವರ ಜೊತೆ ಒಪ್ಪಂದ ಮಾಡಿಕೊಳ್ಳುವುದು ಸೂಕ್ತವಲ್ಲ. ಅವರು ಅತ್ಯಂತ ನಂಬಿಕಸ್ಥ ಗುಂಪೇನಲ್ಲ ಎಂಬುದನ್ನು ನಾನು ನಿಮಗೆ ಹೇಳುತ್ತೇನೆ ಎಂದು ಟ್ರಂಪ್​ ತಿಳಿಸಿದ್ದಾರೆ.
ಫೆಬ್ರವರಿ 28 ರಂದು ಟೆಹ್ರಾನ್‌ನಲ್ಲಿ ನಡೆದ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಮೊಜ್ತಬಾ ತಂದೆ ಅಯಾತೊಲ್ಲಾ ಅಲಿ ಖಮೇನಿ ಮೃತಪಟ್ಟ ನಂತರ, ಮೊಜ್ತಬಾರನ್ನು ಇರಾನ್‌ನ ಸುಪ್ರೀಂ ಲೀಡರ್ ಆಗಿ ಮಾಡಲಾಗಿತ್ತು. ಆದರೆ, ಆ ದಿನದಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಆದರೂ ಇರಾನ್ ಮಾಧ್ಯಮಗಳು ಮತ್ತು ಅಧಿಕಾರಿಗಳು ಕಾಲಕಾಲಕ್ಕೆ ಅವರ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
ಇದಕ್ಕೂ ಮುನ್ನ ಟ್ರಂಪ್ ಮೊಜ್ತಬಾ ಮೃತಪಟ್ಟಿದ್ದಾರೆ ಎಂದಿದ್ದರು, ಆದರೆ ನಂತರ ತಮ್ಮ ಮಾತನ್ನು ಹಿಂಪಡೆದು ಅವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದಿದ್ದರು. ಮತ್ತೊಂದೆಡೆ, ಇರಾನ್ ಅಧ್ಯಕ್ಷ ಮಸೂದ್ ಪೆಜೆಷ್ಕಿಯಾನ್ ಅವರು ಮೊಜ್ತಬಾ ಅವರೊಂದಿಗೆ ಸಂಪರ್ಕ ಸಾಧಿಸುವುದು ಅತ್ಯಂತ ಕಷ್ಟಕರವಾಗಿದೆ ಎಂದು ಹೇಳಿದ್ದು, ಇದು ಅವರ ಸಾವಿನ ಕುರಿತಾದ ವದಂತಿಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕ ಬರುವಂತೆ ಮಾಡಿತ್ತು.
ಪ್ರಸ್ತುತ ಅವರೊಂದಿಗೆ ಸಂಪರ್ಕ ಸಾಧಿಸುವುದು ತುಂಬಾ ಕಷ್ಟಕರವಾಗಿದೆ, ಆದರೆ ಏನೇ ಆದರೂ ಅವರ ಉಪಸ್ಥಿತಿಯೇ ನಮಗೆ ಕಾರ್ಯನಿರ್ವಹಿಸಲು ದೊಡ್ಡ ಶಕ್ತಿಯಾಗಿದೆ ಎಂದು ಪೆಜೆಷ್ಕಿಯಾನ್ ಹೇಳಿದ್ದಾಗಿ ಎಎಫ್‌ಪಿ ವರದಿ ಮಾಡಿತ್ತು. ನಂತರ ಪೆಜೆಷ್ಕಿಯಾನ್ ಅವರು ಮೊಜ್ತಬಾ ಅವರನ್ನು ಭೇಟಿಯಾಗಿದ್ದರು, ಆದರೆ ಆ ಭೇಟಿ ಎಲ್ಲಿ ನಡೆಯಿತು ಎಂಬ ಸ್ಥಳದ ವಿವರವನ್ನು ಬಹಿರಂಗಪಡಿಸಲಾಗಿಲ್ಲ. ಡಾ. ಮಸೂದ್ ಪೆಜೆಷ್ಕಿಯಾನ್ ಅವರು ತಮ್ಮ ಅಧ್ಯಕ್ಷತೆಯ ಮೂರನೇ ವರ್ಷದ ಆರಂಭದಲ್ಲಿ ಅಯಾತೊಲ್ಲಾ ಮೊಜ್ತಬಾ ಖಮೇನಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎಂದು ಮೊಜ್ತಬಾ ಕಚೇರಿ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿತ್ತು(ಏಜೆನ್ಸೀಸ್).