ಇರಾನ್ ಒಪ್ಪಂದದ ಬೆನ್ನಲ್ಲೇ ಟ್ರಂಪ್-ನೆತನ್ಯಾಹು ಜಟಾಪಟಿ ತಾರಕಕ್ಕೆ: ಇಸ್ರೇಲ್ ಅಸ್ತಿತ್ವಕ್ಕೆ ಸವಾಲಾಯಿತೇ ಅಮೆರಿಕದ ಶಾಂತಿ ಸೂತ್ರ?
ವಾಷಿಂಗ್ಟನ್: ವರ್ಷಗಳಿಂದ ಜಗತ್ತಿನ ಅತ್ಯಂತ ಬಲಿಷ್ಠ ರಾಜತಾಂತ್ರಿಕ ಜೋಡಿ ಎಂದೇ ಗುರುತಿಸಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(TrumpVsNetanyahu) ನಡುವಿನ ಸ್ನೇಹ ಸಂಬಂಧ ಈಗ ಸಂಪೂರ್ಣವಾಗಿ ಹದಗೆಟ್ಟಿದೆ. ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ದಿಢೀರ್ ಶಾಂತಿ ಒಪ್ಪಂದ ಈ ಇಬ್ಬರು ನಾಯಕರನ್ನು ಈಗ ಪರಸ್ಪರ ಎದುರುಬೀಳುವಂತೆ ಮಾಡಿದೆ. ಯುದ್ಧವನ್ನು ಕೊನೆಗಾಣಿಸಿದ ಈ ಒಪ್ಪಂದವನ್ನು ಟ್ರಂಪ್ ತಮ್ಮ ಬಹುದೊಡ್ಡ ರಾಜಕೀಯ ವಿಜಯ ಎಂದು ಬಿಂಬಿಸಿಕೊಳ್ಳುತ್ತಿದ್ದರೆ, ಇಸ್ರೇಲ್ ಮಾತ್ರ ಇದನ್ನು ತನ್ನ ಅಸ್ತಿತ್ವಕ್ಕೆ ಬಂದೊದಗಿದ ಭಾರಿ ದೊಡ್ಡ ಕಂಟಕ ಎಂದು ಭಾವಿಸಿದೆ.
ಟ್ರಂಪ್ ಕೋಪಕ್ಕೆ ಕಾರಣವಾದ ಲೆಬನಾನ್ ಮೇಲಿನ ದಾಳಿ!
ಇರಾನ್ ಜತೆ ಅಮೆರಿಕ ಶಾಂತಿ ಮಾತುಕತೆ ನಡೆಸುತ್ತಿದ್ದಾಗಲೇ ಇಸ್ರೇಲ್ ಸೇನೆಯು ಲೆಬನಾನ್‌ನ ಬೈರೂತ್ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿತ್ತು. ಅಮೆರಿಕ-ಇರಾನ್ ಒಪ್ಪಂದ ಪ್ರಕಟವಾಗಲು ಕೇವಲ ಕೆಲವು ಗಂಟೆಗಳ ಮುನ್ನ ನಡೆದ ಈ ದಾಳಿಯು ಒಪ್ಪಂದವನ್ನೇ ಮುರಿದುಬೀಳಿಸುವ ಹಂತಕ್ಕೆ ತಲುಪಿತ್ತು. ಇದರಿಂದ ತೀವ್ರ ಆಕ್ರೋಶಗೊಂಡ ಟ್ರಂಪ್, ಆಪ್ತ ವಲಯದಲ್ಲಿ ನೆತನ್ಯಾಹು ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮಾತುಕತೆ ನಡೆಯುತ್ತಿರುವಾಗಲೇ ಬಿಬಿ ಆ ದಾಳಿಯನ್ನು ಏಕೆ ಮಾಡಬೇಕಿತ್ತೋ ತಿಳಿಯುತ್ತಿಲ್ಲ, ಆತನಿಗೆ ಕನಿಷ್ಠ ಜ್ಞಾನವೂ ಇಲ್ಲ ಎಂದು ಟ್ರಂಪ್ ಕಿಡಿಕಾರಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಅಲ್ಲದೆ, ಇಸ್ರೇಲ್ ಕರಾರಿಗೆ ಒಪ್ಪದಿದ್ದರೆ ಹಿಜ್ಬುಲ್ಲಾ ಸಶಸ್ತ್ರ ಗುಂಪನ್ನು ಹತ್ತಿಕ್ಕುವ ಜವಾಬ್ದಾರಿಯನ್ನು ಸಿರಿಯಾ ದೇಶಕ್ಕೆ ನೀಡುವುದಾಗಿಯೂ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆತನ್ಯಾಹು, ಅಮೆರಿಕದ ನಿರ್ಧಾರಗಳನ್ನು ನಾವು ಗೌರವಿಸುತ್ತೇವೆ, ಆದರೆ ಇಸ್ರೇಲ್‌ನ ಭದ್ರತೆಯ ರಕ್ಷಣೆ ನನ್ನ ಮೊದಲ ಆದ್ಯತೆ ಮತ್ತು ಜವಾಬ್ದಾರಿ ಎಂದು ಜಾಗರೂಕತೆಯ ಉತ್ತರ ನೀಡಿದ್ದಾರೆ.
ಇರಾನ್ ಒಪ್ಪಂದ ಇಸ್ರೇಲ್‌ಗೆ ಮರಣಶಾಸನವೇ?
ಪ್ರಸ್ತುತ ಅಮೆರಿಕ ಮತ್ತು ಇರಾನ್ ನಡುವೆ ಆಗಿರುವ ಮಧ್ಯಂತರ ಒಪ್ಪಂದವು 60 ದಿನಗಳ ಕಾಲಾವಕಾಶವನ್ನು ನೀಡಿದ್ದು, ಈ ಅವಧಿಯಲ್ಲಿ ಉಭಯ ದೇಶಗಳು ಮುಂದಿನ ಶಾಶ್ವತ ಶಾಂತಿಗೆ ನೀಲನಕ್ಷೆ ಸಿದ್ಧಪಡಿಸಲಿವೆ. ಆದರೆ, ಈ ಒಪ್ಪಂದದಲ್ಲಿ ಇರಾನ್‌ನ ಪರಮಾಣು ಯೋಜನೆಗಳ ನಿಯಂತ್ರಣದ ಬಗ್ಗೆ ಯಾವುದೇ ಕಠಿಣ ನಿಯಮಗಳನ್ನು ರೂಪಿಸಿಲ್ಲ ಎಂಬುದು ಇಸ್ರೇಲ್‌ನ ಆತಂಕಕ್ಕೆ ಮುಖ್ಯ ಕಾರಣವಾಗಿದೆ.
ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ತಂತ್ರಜ್ಞಾನ ಮತ್ತು ಮಧ್ಯಪ್ರಾಚ್ಯದ ಸಶಸ್ತ್ರ ಗುಂಪುಗಳಿಗೆ ಸಿಗುತ್ತಿರುವ ಆರ್ಥಿಕ ನೆರವನ್ನು ತಡೆಯುವ ಯಾವುದೇ ಪ್ರಸ್ತಾಪ ಸದ್ಯದ ಅಜೆಂಡಾದಲ್ಲಿ ಇಲ್ಲ. ಹೀಗಾಗಿಯೇ ಇಸ್ರೇಲ್‌ನ ಉನ್ನತ ಅಧಿಕಾರಿಯೊಬ್ಬರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸುತ್ತಾ, ಈ ಒಪ್ಪಂದ ಇಸ್ರೇಲ್ ಪಾಲಿಗೆ ಅತ್ಯಂತ ಕೆಟ್ಟದಾಗಿದೆ, ಇದನ್ನು ಇಸ್ರೇಲ್‌ನ ಯಾವೊಬ್ಬ ನಾಯಕನೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸ್ವತಂತ್ರ ಕಾರ್ಯಾಚರಣೆಯ ಎಚ್ಚರಿಕೆ ನೀಡಿದ ಇಸ್ರೇಲ್
ಅಮೆರಿಕದ ಈ ಒಪ್ಪಂದಕ್ಕೆ ನಾವು ಸಂಪೂರ್ಣವಾಗಿ ಬದ್ಧರಾಗಿರಲು ಸಾಧ್ಯವಿಲ್ಲ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಇರಾನ್ ಎಷ್ಟೇ ಒತ್ತಡ ಹೇರಿದರೂ ದಕ್ಷಿಣ ಲೆಬನಾನ್‌ನಿಂದ ಇಸ್ರೇಲ್ ಸೇನೆಯನ್ನು ಹಿಂಪಡೆಯುವುದಿಲ್ಲ ಮತ್ತು ಗಡಿ ಭಾಗದ ನಾಗರಿಕರ ರಕ್ಷಣೆಗಾಗಿ ಸೇನಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸಾರಿದ್ದಾರೆ. ಇತ್ತ ಇಸ್ರೇಲ್ ಇಂಧನ ಸಚಿವ ಎಲಿ ಕೋಹೆನ್ ಕೂಡ, ಇರಾನ್ ಏನಾದರೂ ರಹಸ್ಯವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಮರುಸೃಷ್ಟಿಸಲು ಮುಂದಾದರೆ ಅಮೆರಿಕದ ಹಸ್ತಕ್ಷೇಪವಿಲ್ಲದೆಯೇ ಇಸ್ರೇಲ್ ಸ್ವತಂತ್ರವಾಗಿ ಇರಾನ್ ಮೇಲೆ ದಾಳಿ ನಡೆಸಲಿದೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ನೆತನ್ಯಾಹು ಪಾಲಿಗೆ ರಾಜಕೀಯ ಅಳಿವು-ಉಳಿವಿನ ಪ್ರಶ್ನೆ!
ಈ ವರ್ಷದ ಕೊನೆಯಲ್ಲಿ ಇಸ್ರೇಲ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಸಮೀಕ್ಷೆಗಳ ಪ್ರಕಾರ ನೆತನ್ಯಾಹು ಜನಪ್ರಿಯತೆ ಕುಸಿದಿದೆ. ಈ ಹಿಂದೆ ಟ್ರಂಪ್ ಜೊತೆಗಿನ ಆಪ್ತ ಸ್ನೇಹವನ್ನು ತೋರಿಸಿಯೇ ನೆತನ್ಯಾಹು ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದರು. ಆದರೆ ಈಗ ಅದೇ ಟ್ರಂಪ್ ಇಸ್ರೇಲ್ ವಿರೋಧಿ ಎನ್ನಲಾದ ಒಪ್ಪಂದಕ್ಕೆ ಮುಂದಾಗಿರುವುದು ನೆತನ್ಯಾಹು ಅವರ ರಾಜಕೀಯ ಭವಿಷ್ಯವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಕೇವಲ ಶೇ. 41 ರಷ್ಟು ಇಸ್ರೇಲಿಗರು ಮಾತ್ರ ಟ್ರಂಪ್ ಇಸ್ರೇಲ್ ಭದ್ರತೆಗೆ ಪೂರಕವಾಗಿದ್ದಾರೆ ಎಂದು ನಂಬಿದ್ದಾರೆ.
ಸದ್ಯ ನೆತನ್ಯಾಹು ಮುಂದೆ ಎರಡು ಕಠಿಣ ಆಯ್ಕೆಗಳಿವೆ: ಒಂದೋ ಟ್ರಂಪ್ ಮಾತನ್ನು ಕೇಳಿ ಲೆಬನಾನ್‌ನಿಂದ ಸೇನೆ ಹಿಂಪಡೆದು ದೇಶದ ಒಳಗಿನ ಜನರ ಆಕ್ರೋಶಕ್ಕೆ ಗುರಿಯಾಗುವುದು, ಇಲ್ಲವೇ ಅಮೆರಿಕದ ಸ್ನೇಹವನ್ನು ಕಳೆದುಕೊಂಡು ಇರಾನ್ ವಿರುದ್ಧ ಒಂಟಿಯಾಗಿ ಯುದ್ಧ ಮುಂದುವರಿಸುವುದು. ಈ 60 ದಿನಗಳ ಅವಧಿಯು ಮಧ್ಯಪ್ರಾಚ್ಯದ ಭವಿಷ್ಯವನ್ನು ಮಾತ್ರವಲ್ಲದೆ, ಟ್ರಂಪ್-ನೆತನ್ಯಾಹು ಸ್ನೇಹದ ಅಂತ್ಯವನ್ನೂ ನಿರ್ಧರಿಸಲಿದೆ,(ಏಜೆನ್ಸೀಸ್).