Shashi Tharoor| ಕಾಂಗ್ರೆಸ್ ಸಂಸದ ಶಶಿ ತರೂರ್ 
ವಿದೇಶ

ಟ್ರಂಪ್- ಮಮ್ದಾನಿ ಭೇಟಿ; ಭಾರತದಲ್ಲಿ ಇದನ್ನು ನೋಡಲು ಇಷ್ಟಪಡುತ್ತೇನೆ: ಪ್ರಜಾಪ್ರಭುತ್ವದ ಬಗ್ಗೆ ಶಶಿ ತರೂರ್​ ಹೇಳಿದ್ದೇನು..? Shashi Tharoor

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಆಯ್ಕೆಯಾದ ಜೋಹ್ರಾನ್ ಮಮ್ದಾನಿ ನಡುವಿನ ಸಂವಾದವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor) ಶನಿವಾರ (ನ.22) ಶ್ಲಾಘಿಸಿದ್ದಾರೆ. ಅಲ್ಲದೆ, ಇದು ಆರೋಗ್ಯಕರ ಪ್ರಜಾಪ್ರಭುತ್ವದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್​ನಲ್ಲಿ ತರೂರ್​, ಪ್ರಜಾಪ್ರಭುತ್ವ ಹೀಗೆಯೇ ಕೆಲಸ ಮಾಡಬೇಕು. ಯಾವುದೇ ವಾಕ್ಚಾತುರ್ಯದ ನಿರ್ಬಂಧಗಳಿಲ್ಲದೆ, ಚುನಾವಣೆಯಲ್ಲಿ ನಿಮ್ಮ ದೃಷ್ಟಿಕೋನಕ್ಕಾಗಿ ಹೋರಾಡಿ. ಆದರೆ, ಅದು ಮುಗಿದ ನಂತರ ಮತ್ತು ಜನರು ಮಾತನಾಡಿದ ನಂತರ, ನೀವಿಬ್ಬರೂ ಸೇವೆ ಸಲ್ಲಿಸಲು ಪ್ರತಿಜ್ಞೆ ಮಾಡಿರುವ ರಾಷ್ಟ್ರದ ಸಾಮಾನ್ಯ ಹಿತಾಸಕ್ತಿಗಳಲ್ಲಿ ಪರಸ್ಪರ ಸಹಕರಿಸಲು ಕಲಿಯಿರಿ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ, ಭಾರತದಲ್ಲಿ ಇದನ್ನು ಇನ್ನಷ್ಟು ನೋಡಲು ಇಷ್ಟಪಡುತ್ತೇನೆ ಮತ್ತು ಇಂತಹ ರಾಜಕೀಯ ನಾಗರಿಕತೆಯನ್ನು ಬೆಳೆಸಲು ತಮ್ಮ ಪಾತ್ರವನ್ನು ನಿರ್ವಹಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ತರೂರ್ ತಿಳಿಸಿದ್ದಾರೆ. ಜನರ ತೀರ್ಪು ಸ್ಪಷ್ಟವಾದ ನಂತರ ರಾಜಕೀಯ ಪ್ರತಿಸ್ಪರ್ಧಿಗಳು ದ್ವೇಷವನ್ನು ಬದಿಗಿಟ್ಟ ಈ ಬದಲಾವಣೆಯನ್ನು ಭಾರತ ಕಲಿಯಬಹುದಾದ ಉದಾಹರಣೆ ಎಂದು ತರೂರ್ ಉಲ್ಲೇಖಿಸಿದ್ದಾರೆ.

ಮೋದಿ ಬಗ್ಗೆ ತರೂರ್ ಹೇಳಿದ್ದೇನು..?

ಕೆಲವು ದಿನಗಳ ಹಿಂದೆ, ರಾಮನಾಥ್ ಗೋಯೆಂಕಾ ಉಪನ್ಯಾಸದಲ್ಲಿ ತರೂರ್, ಪ್ರಧಾನಿ ಮೋದಿಯವರ ಭಾಷಣವು ಆರ್ಥಿಕ ದೃಷ್ಟಿಕೋನ ಮತ್ತು ಕ್ರಿಯೆಗೆ ಸಾಂಸ್ಕೃತಿಕ ಕರೆ ಎರಡನ್ನೂ ಪೂರೈಸಿತು. ಸಂದೀಪ್ ದೀಕ್ಷಿತ್ ಮತ್ತು ಸುಪ್ರಿಯಾ ಶ್ರೀನಾಟೆ ಅವರಂತಹ ಹಿರಿಯ ನಾಯಕರು ಸಾರ್ವಜನಿಕವಾಗಿ ತರೂರ್​ ಹೊಗಳಿಕೆಯನ್ನು ಪ್ರಶ್ನಿಸಿದರು.

ಜೋಹ್ರಾನ್ ಮಮ್ದಾನಿಯನ್ನು ಹೊಗಳಿದ ಟ್ರಂಪ್

ಇಬ್ಬರ ನಡುವಿನ ಮಾತುಕತೆ ಬಳಿಕ ಮಮ್ದಾನಿಯನ್ನು ಪಕ್ಕಕ್ಕೆ ನಿಲ್ಲಿಸಿಕೊಂಡು ಸುದ್ದಿಗೋಷ್ಠಿ ನಡೆಸಿದ ಟ್ರಂಪ್, ಮಮ್ದಾನಿಗೆ ಗೆಲುವಿಗೆ ಅಭಿನಂದನೆಗಳನ್ನು ತಿಳಿಸಿದರು. ಮಮ್ದಾನಿಯನ್ನು ಭೇಟಿಯಾದ ಬಳಿಕ ಆತನೊಬ್ಬ ತರ್ಕಬದ್ಧ ವ್ಯಕ್ತಿ, ನ್ಯೂಯಾರ್ಕ್ ನಗರ ಅವರ ಅವಧಿಯಲ್ಲಿ ಉತ್ತಮ ನಗರವಾಗಲಿದೆ ಎಂದು ಹೊಗಳಿದ್ದಾರೆ. ಮತ್ತು ನ್ಯೂಯಾರ್ಕ್​ ನಗರದ ಅಭಿವೃದ್ಧಿ ಸಹಾಯ ಮಾಡುವುದಾಗಿ, ಒಟ್ಟಾಗಿ ಹೋಗೋದಾಗಿ ಹೇಳಿದ್ದಾರೆ.
ಇಂದು ನಾವು ಒಂದು ಸಭೆ ನಡೆಸಿದ್ದೇವೆ, ಅದು ನಿಜಕ್ಕೂ ನನಗೆ ಆಶ್ಚರ್ಯವನ್ನುಂಟು ಮಾಡಿತು. ಮ್ಮ ನೀತಿಯಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಆದರೆ ನಾನು ಆತನಿಗೆ ಸಹಾಯ ಮಾಡಲು ಬಯಸುತ್ತೇನೆ, ಆತನಿಗೆ ನೋವುಂಟು ಮಾಡಲ್ಲ. ಯಾಕಂದರೆ ನಾನು ನ್ಯೂಯಾರ್ಕ್​ ನಗರವನ್ನು ಉತ್ತಮವಾಗಿಸಬೇಕೆಂದು ಬಯಸುತ್ತೇನೆ. ಅದು ನನನೆ ತುಂಬಾ ಇಷ್ಟವಾದ ನಗರ, ನಾನು ಅಲ್ಲಿಂದ ಬಂದಿದ್ದೇನೆ ಎಂದಿದ್ದಾರೆ.
ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿರುವ ವಿಷಯ ಇರುತ್ತವೆ. ಆದರೆ ಬಹುಶಃ ನ್ಯೂಯಾರ್ಕ್​​ನ ಒಳಿತಿಗಾಗಿ ನಾವು ಒಂದು ತೀರ್ಮಾನಕ್ಕೆ ಬರುತ್ತೇವೆ. ಆ ನಗರ ಅದ್ಭುತ ಯಶಸ್ಸು ಗಳಿಸಿದರೆ ನಾನು ತುಂಬಾ ಸಂತೋಷ ಪಡುತ್ತೇನೆ, ಮಮ್ದಾನಿ ಭೇಟಿ ಬಳಿಕ ನನಗೆ ಅವರ ಆಡಳಿತದಲ್ಲಿ ನ್ಯೂಯಾರ್ಕ್​ ಉತ್ತಮ ನಗರವಾಗಲಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ವರದಿಗಾರರೊಬ್ಬರು ಮಮ್ದಾನಿಗೆ, ನೀವು ಟ್ರಂಪ್​ ಅವರನ್ನು ಫ್ಯಾಸಿಸ್ಟ್ ಎಂದು ಕರೆದಿದ್ದೀರಿ ಅದನ್ನು ಒಪ್ಪುತ್ತೀರಾ ಎಂದು ಕೇಳಿದಾಗ, ಮಮ್ದಾನಿ ಅದರ ಬಗ್ಗೆ ನಾನು ಮಾತನಾಡಿದ್ದೇನೆ ಎಂದು ವಿವರಣೆ ನೀಡಲು ಮುಂದಾದಾಗ ತಡೆದ ಟ್ರಂಪ್, ಅದು ಸರಿ, ಹೌದು ಎನ್ನಿ, ವಿವರಣೆ ನೀಡುವುದಕ್ಕಿಂತ ಸುಲಭ. ನನಗೆ ಅಭ್ಯಂತರವಿಲ್ಲ, ಎಡಪಂಥಿಯ ಮತ್ತು ಬಲಪಂಥೀಯ ನಾಯಕರು ವಿಭಿನ್ನ ಸಮಯದಲ್ಲಿ ಒಬ್ಬರನ್ನೊಬ್ಬರು ಕಮ್ಯೂನಿಷ್ಟ್, ಫ್ಯಾಸಿಸ್ಟ್ ಎಂದು ಕರೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).