ವರ್ಕೌಟ್, ಡಯಟ್ ಮಾಡಿ ಸಾಕಾಗಿದೆಯೇ? ತೂಕ ಇಳಿಸಿಕೊಳ್ಳಲು ಹೆಬ್ಬಾವೇ ಹೆಲ್ಪ್ ಮಾಡಲಿದೆ! ಏನಿದು ವಿಜ್ಞಾನಿಗಳ ಹೊಸ ಸೀಕ್ರೆಟ್? Lose Weight 
ವಿದೇಶ

ವರ್ಕೌಟ್, ಡಯಟ್ ಮಾಡಿ ಸಾಕಾಗಿದೆಯೇ? ತೂಕ ಇಳಿಸಿಕೊಳ್ಳಲು ಹೆಬ್ಬಾವೇ ಹೆಲ್ಪ್ ಮಾಡಲಿದೆ! ಏನಿದು ವಿಜ್ಞಾನಿಗಳ ಹೊಸ ಸೀಕ್ರೆಟ್? Lose Weight

ಪ್ರಮುಖ ಮುಖ್ಯಾಂಶಗಳು

  • ನಮ್ಮ ಸುತ್ತಮುತ್ತ ಬೊಜ್ಜು ಅಥವಾ ಅತಿಯಾದ ದೇಹದ ತೂಕದ ಸಮಸ್ಯೆಯಿಂದ ಬಳಲುತ್ತಿರುವ ಎಷ್ಟೋ ಜನರಿದ್ದಾರೆ
  • ತೂಕ ಇಳಿಸಿಕೊಳ್ಳುವ ಸಲುವಾಗಿ ಅನೇಕ ಮಂದಿ ಜಿಮ್‌ಗೆ ಹೋಗಿ ಕಠಿಣ ವರ್ಕೌಟ್‌ ಮಾಡುತ್ತಾರೆ
  • ಕೆಲವರಂತೂ ಕಟ್ಟುನಿಟ್ಟಾದ ಡಯಟ್ ಪ್ಲಾನ್ ಪಾಲಿಸುವುದನ್ನು ನೀವು ಖಂಡತಿ ನೋಡಿರುತ್ತೀರಿ
  • ತೂಕ ಇಳಿಸಿಕೊಳ್ಳುವವರಿಗೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಭರವಸೆಯ ಸುದ್ದಿ ತಂದಿದ್ದಾರೆ
Lose Weight : ನಮ್ಮ ಸುತ್ತಮುತ್ತ ಬೊಜ್ಜು ಅಥವಾ ಅತಿಯಾದ ದೇಹದ ತೂಕದ ಸಮಸ್ಯೆಯಿಂದ ಬಳಲುತ್ತಿರುವ ಅದೆಷ್ಟೋ ಜನರಿದ್ದಾರೆ. ಅವರಲ್ಲಿ ಹೆಚ್ಚಿನವರು ತೂಕ ಇಳಿಸಿಕೊಳ್ಳುವ ಸಲುವಾಗಿ ಜಿಮ್‌ಗೆ ಹೋಗುವುದು, ಕಠಿಣ ವರ್ಕೌಟ್‌ ಮಾಡುವುದು ಮತ್ತು ಕಟ್ಟುನಿಟ್ಟಾದ ಡಯಟ್ ಪ್ಲಾನ್ ಪಾಲಿಸುವುದನ್ನು ನೀವು ನೋಡಿರುತ್ತೀರಿ. ಆದರೆ, ಎಷ್ಟೇ ಪ್ರಯತ್ನ ಮಾಡಿದರೂ ಅಂದುಕೊಂಡಷ್ಟು ತೂಕ ಇಳಿಕೆಯಾಗದೇ ಬೇಸರಗೊಳ್ಳುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಅಂತಹವರಿಗೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಇದೀಗ ಭರವಸೆಯ ಸುದ್ದಿಯೊಂದನ್ನು ಹೊತ್ತು ತಂದಿದ್ದಾರೆ.
ಹೌದು, ಇತ್ತೀಚಿನ ಅಧ್ಯಯನಗಳ ಪ್ರಕಾರ, ಮನುಷ್ಯರಲ್ಲಿನ ಬೊಜ್ಜಿನ ಸಮಸ್ಯೆಗೆ ಹೆಬ್ಬಾವುಗಳ ರಕ್ತವು ಪ್ರಮುಖ ಪರಿಹಾರವಾಗಬಲ್ಲದು ಎಂಬುದನ್ನು ಪತ್ತೆಹಚ್ಚಲಾಗಿದೆ. ಬರ್ಮೀಸ್ ಹೆಬ್ಬಾವುಗಳನ್ನು ಬಳಸಿ ನಡೆಸಿದ ವಿಜ್ಞಾನಿಗಳ ಈ ವಿಶೇಷ ಸಂಶೋಧನೆಯಲ್ಲಿ, ಅವುಗಳ ರಕ್ತದಲ್ಲಿರುವ 'ಪಿಟಸ್' (pTOS) ಎಂಬ ವಿಶಿಷ್ಟ ಮಾಲಿಕ್ಯೂಲ್ (Metabolite) ಆಹಾರದ ಮೇಲಿನ ಹಸಿವನ್ನು ನಿಯಂತ್ರಿಸುವ ಮೂಲಕ ದೇಹದ ತೂಕವನ್ನು ಪರಿಣಾಮಕಾರಿಯಾಗಿ ಇಳಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ ಎಂಬ ರೋಚಕ ಸತ್ಯ ಬಯಲಾಗಿದೆ.
ಚಿಕ್ಕ ವಯಸ್ಸಿನ ಹೆಬ್ಬಾವುಗಳು ಆಹಾರ ಸೇವಿಸುವ ಮುನ್ನ ಮತ್ತು ಆಹಾರ ಸೇವಿಸಿದ ನಂತರ ಅವುಗಳ ದೇಹದಿಂದ ರಕ್ತವನ್ನು ಸಂಗ್ರಹಿಸಿ ಈ ವಿಶಿಷ್ಟ ಅಧ್ಯಯನವನ್ನು ನಡೆಸಲಾಗಿದೆ. ಹೆಬ್ಬಾವುಗಳು ತಮ್ಮ ಸ್ವಂತ ದೇಹದ ತೂಕಕ್ಕೆ ಸಮನಾಗಿರುವಷ್ಟು ದೊಡ್ಡ ಪ್ರಾಣಿಗಳನ್ನು ಬೇಟೆಯಾಡಿ ನುಂಗುವ ಅದ್ಭುತ ಸಾಮರ್ಥ್ಯವನ್ನು ಹೊಂದಿವೆ. ಒಮ್ಮೆ ಆಹಾರವನ್ನು ಸೇವಿಸಿದ ಬಳಿಕ, ಮುಂದಿನ ಕೆಲವು ದಿನಗಳವರೆಗೆ ಅವುಗಳ ಇಡೀ ದೇಹವು ಕೇವಲ ಜೀರ್ಣಕ್ರಿಯೆಗಾಗಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಈ ಪ್ರಕ್ರಿಯೆಯಲ್ಲಿ, ಆಹಾರ ಸೇವನೆಯ ನಂತರ ಅವುಗಳ ರಕ್ತದಲ್ಲಿ ಕೆಲವು ನಿರ್ದಿಷ್ಟ ಮಾಲಿಕ್ಯೂಲ್‌ಗಳ (ಅಣುಗಳು) ಪ್ರಮಾಣವು ಅತ್ಯಂತ ವೇಗವಾಗಿ ಹೆಚ್ಚಾಗುತ್ತದೆ ಎಂಬುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಹೆಬ್ಬಾವುಗಳಲ್ಲಿ ಕಂಡುಬರುವ ಈ ಅಪರೂಪದ ವಿದ್ಯಮಾನವೇ ಅವುಗಳ ಅಸಾಮಾನ್ಯ ಹಾಗೂ ವಿಶಿಷ್ಟವಾದ ಚಯಾಪಚಯ ಕ್ರಿಯೆಗೆ (Metabolism) ಪ್ರಮುಖ ಕಾರಣ ಎಂದು ವಿಜ್ಞಾನಿಗಳು ಬಲವಾಗಿ ನಂಬಿದ್ದಾರೆ.
ಅಂದಹಾಗೆ, ಹೆಬ್ಬಾವುಗಳು ಆಹಾರ ಸೇವಿಸಿದ ನಂತರ ಅವುಗಳ ದೇಹದಲ್ಲಿ 200ಕ್ಕೂ ಹೆಚ್ಚು ಮಾಲಿಕ್ಯೂಲ್‌ಗಳು ಗಣನೀಯವಾಗಿ ಹೆಚ್ಚಾಗುತ್ತವೆ ಮತ್ತು ಅವುಗಳಲ್ಲಿ ವಿಶೇಷವಾಗಿ 'ಪಿಟಸ್' (pTOS) ಎಂಬ ಮಾಲಿಕ್ಯೂಲ್ ಮಾತ್ರ ಬರೋಬ್ಬರಿ ಸಾವಿರ ಪಟ್ಟು ವೃದ್ಧಿಯಾಗುತ್ತದೆ ಎಂಬುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಜೀರ್ಣಾಂಗ ನಾಳದಲ್ಲಿರುವ ಬ್ಯಾಕ್ಟೀರಿಯಾಗಳಿಂದ ಉತ್ಪತ್ತಿಯಾಗುವ ಈ ವಿಶಿಷ್ಟ ಮಾಲಿಕ್ಯೂಲ್ ಮನುಷ್ಯರಲ್ಲೂ ಕೂಡ ಅಲ್ಪ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ಬೊಜ್ಜಿನ ಸಮಸ್ಯೆಗೆ ಯಾವ ಮಟ್ಟಿಗೆ ಚಿಕಿತ್ಸೆಯಾಗಬಲ್ಲದು ಎಂಬುದನ್ನು ಪರೀಕ್ಷಿಸಲು ಸಂಶೋಧಕರು ಅತಿಯಾದ ತೂಕ ಹೊಂದಿದ್ದ ಇಲಿಗಳಿಗೆ ಈ 'ಪಿಟಸ್' ಮಾಲಿಕ್ಯೂಲ್ ಅನ್ನು ನೀಡಿ ಪ್ರಯೋಗ ನಡೆಸಿದಾಗ ಅತ್ಯಂತ ಅಸಾಧಾರಣ ಬದಲಾವಣೆ ಕಂಡುಬಂದಿದೆ.
ಕೇವಲ 28 ದಿನಗಳ ಅವಧಿಯಲ್ಲಿ ಆ ಇಲಿಗಳು ಆಹಾರ ಸೇವಿಸುವ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿಕೊಂಡಿದ್ದು, ಇದರ ಪರಿಣಾಮವಾಗಿ ಅವುಗಳ ಒಟ್ಟಾರೆ ದೇಹದ ತೂಕದಲ್ಲಿ ಶೇ. ಒಂಬತ್ತರಷ್ಟು (9%) ತೂಕ ಇಳಿಕೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ 'ಪಿಟಸ್' (pTOS) ಮಾಲಿಕ್ಯೂಲ್ ಮನುಷ್ಯರಲ್ಲಿ ಹಸಿವನ್ನು ನಿಯಂತ್ರಿಸುವ ಮೆದುಳಿನ ಪ್ರಮುಖ ಭಾಗವಾದ 'ಹೈಪೋಥಾಲಮಸ್' (Hypothalamus) ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ಈ ಕಾರಣದಿಂದಾಗಿ, ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೆ ಬೊಜ್ಜಿನ ಸಮಸ್ಯೆಯನ್ನು ಗುಣಪಡಿಸುವ ಅತ್ಯಾಧುನಿಕ ಚಿಕಿತ್ಸಾ ಪದ್ಧತಿಯನ್ನು ಅಭಿವೃದ್ಧಿಪಡಿಸಬಹುದು ಎಂಬ ದೊಡ್ಡ ಭರವಸೆಯನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಈ ಹೆಬ್ಬಾವಿನ ರಕ್ತದ ಮಾಲಿಕ್ಯೂಲ್‌ಗಳು ಮನುಷ್ಯರಲ್ಲಿ ಬಳಸಲು ಎಷ್ಟು ಮಟ್ಟಿಗೆ ಸುರಕ್ಷಿತ ಮತ್ತು ಸೂಕ್ತ ಎಂಬುದನ್ನು ಅಧಿಕೃತವಾಗಿ ಖಚಿತಪಡಿಸಿಕೊಳ್ಳಲು ಇನ್ನು ಹೆಚ್ಚಿನ ಸಂಶೋಧನೆಗಳು ಹಾಗೂ ಹಂತ-ಹಂತದ ವಿವರವಾದ ಅಧ್ಯಯನಗಳ ಅಗತ್ಯವಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್​).