ನೋಡ ನೋಡುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯತ್ತ ಜಿಗಿದ ದೈತ್ಯ ಹುಲಿ: ಮುಂದೇನಾಯ್ತು? ಭಯಾನಕ ವಿಡಿಯೋ ವೈರಲ್...Tiger
- ಸರ್ಕಸ್ ಪ್ರದರ್ಶನದ ವೇಳೆ ಪ್ರೇಕ್ಷಕರ ಗ್ಯಾಲರಿಯತ್ತ ಜಿಗಿದ ದೈತ್ಯ ಹುಲಿ
- ರಷ್ಯಾದ ರೋಸ್ಟೊವ್-ಆನ್-ಡಾನ್‌ನಲ್ಲಿ ಭಾನುವಾರ (ಏಪ್ರಿಲ್ 19) ನಡೆದ ಘಟನೆ
- ಪ್ರಾಣಿಗಳು ಮತ್ತು ಪ್ರೇಕ್ಷಕರನ್ನು ಬೇರ್ಪಡಿಸುವ ರಕ್ಷಣಾ ಬೇಲಿ ಕುಸಿದು ಬಿದ್ದ ಬೆನ್ನಲ್ಲೇ ಜಿಗಿದ ಹುಲಿ
- ಹುಲಿ ಜಿಗಿದ್ದಿದ್ದರಿಂದ ಗಾಬರಿಗೊಂಡ ಪ್ರೇಕ್ಷಕರು ಪ್ರಾಣ ಉಳಿಸಿಕೊಳ್ಳಲು ಕಿರುಚುತ್ತಾ ಓಡಿದರು
ಮಾಸ್ಕೋ: ಸರ್ಕಸ್ ಪ್ರದರ್ಶನದ ವೇಳೆ ದೈತ್ಯ ಹುಲಿಯೊಂದು ( Tiger ) ಪ್ರೇಕ್ಷಕರ ಗ್ಯಾಲರಿಯತ್ತ ಜಿಗಿದು ಕೆಲಕಾಲ ಭಯದ ವಾತಾವರಣವನ್ನು ಸೃಷ್ಟಿಸಿದ ಘಟನೆ ರಷ್ಯಾದ ರೋಸ್ಟೊವ್-ಆನ್-ಡಾನ್‌ನಲ್ಲಿ ಭಾನುವಾರ (ಏಪ್ರಿಲ್ 19) ನಡೆದಿದೆ. ಪ್ರಾಣಿಗಳು ಮತ್ತು ಪ್ರೇಕ್ಷಕರನ್ನು ಬೇರ್ಪಡಿಸುವ ರಕ್ಷಣಾ ಬೇಲಿಯಲ್ಲಿ ತಾಂತ್ರಿಕ ದೋಷ ಉಂಟಾದ ನಂತರ ಹುಲಿ ತಪ್ಪಿಸಿಕೊಂಡಿತು ಎಂದು ವರದಿಯಾಗಿದೆ.
ಘಟನೆಯ ವಿವರಕ್ಕೆ ಬರುವುದಾದರೆ, ಸರ್ಕಸ್ ಪ್ರದರ್ಶನದ ವೇಳೆ ಮೂರು ಹುಲಿಗಳು ಸ್ಟೂಲ್‌ಗಳ ಮೇಲೆ ಕುಳಿತು ಪ್ರದರ್ಶನ ನೀಡುತ್ತಿದ್ದವು. ಈ ವೇಳೆ ಅನಿರೀಕ್ಷಿತವಾಗಿ ಸುತ್ತಲೂ ಇದ್ದ ರಕ್ಷಣಾ ಬೇಲಿ ಕುಸಿದು ಬಿದ್ದಿತು. ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದ್ದು, ಇದನ್ನು ಗಮನಿಸಿದ ಒಂದು ಹುಲಿ ತಕ್ಷಣವೇ ಪ್ರೇಕ್ಷಕರ ಗ್ಯಾಲರಿಯತ್ತ ಜಿಗಿಯಿತು.
ಹುಲಿ ಜಿಗಿದ್ದಿದ್ದರಿಂದ ಗಾಬರಿಗೊಂಡ ಪ್ರೇಕ್ಷಕರು ಪ್ರಾಣ ಉಳಿಸಿಕೊಳ್ಳಲು ಕಿರುಚುತ್ತಾ ಓಡಿದರು. ಆಶ್ಚರ್ಯದ ಸಂಗತಿಯೆಂದರೆ, ಇಂತಹ ಪ್ರಾಣಾಪಾಯದ ಸಂದರ್ಭದಲ್ಲೂ ಕೆಲವು ಪ್ರೇಕ್ಷಕರು ಹುಲಿ ಹತ್ತಿರ ಬಂದರೂ ಹೆದರದೆ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿರುವುದು ಕಂಡುಬಂದಿದೆ.
ಈ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಸ್ ನಿರ್ದೇಶಕರು, ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ. ಹುಲಿ ಹೊರಬಂದ ಕೂಡಲೇ ಟ್ರೈನರ್ ಅದರ ಕುತ್ತಿಗೆಗೆ ಪಟ್ಟಿ ಕಟ್ಟಿ ಸುರಕ್ಷಿತವಾಗಿ ಪಂಜರಕ್ಕೆ ಮರಳಿ ಕರೆದೊಯ್ದಿದ್ದಾರೆ. ಈ ಹುಲಿ ಸಾಕಿದ ಪ್ರಾಣಿಯಂತೆ ಉತ್ತಮ ತರಬೇತಿ ಪಡೆದಿತ್ತು. ಆದ್ದರಿಂದಲೇ, ಅದು ಜನರ ಮೇಲೆ ದಾಳಿ ಮಾಡಲಿಲ್ಲ ಎಂದು ನಿರ್ದೇಶಕರು ಸಮರ್ಥಿಸಿಕೊಂಡಿದ್ದಾರೆ.
ಆರಂಭಿಕ ವರದಿಗಳ ಪ್ರಕಾರ, ಮನುಷ್ಯರ ನಿರ್ಲಕ್ಷ್ಯದಿಂದಲೇ ರಕ್ಷಣಾ ಬೇಲಿ ಕುಸಿದು ಬಿದ್ದಿದೆ ಎನ್ನಲಾಗಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹುಲಿ ಪಕ್ಕದಲ್ಲೇ ಓಡಾಡುತ್ತಿದ್ದರೂ ಕೆಲ ಪ್ರೇಕ್ಷಕರು ಆರಾಮಾಗಿ ಕುಳಿತಿರುವುದನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.
ಅಂದಹಾಗೆ, ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಯಲು ಅನೇಕ ಪಾಶ್ಚಿಮಾತ್ಯ ದೇಶಗಳು ಸರ್ಕಸ್‌ನಲ್ಲಿ ಪ್ರಾಣಿಗಳ ಬಳಕೆಯನ್ನು ಈಗಾಗಲೇ ನಿಷೇಧಿಸಿವೆ. ಆದರೆ, ರಷ್ಯಾದಂತಹ ದೇಶಗಳಲ್ಲಿ ಇಂದಿಗೂ ಕರಡಿಗಳು, ಆನೆಗಳು ಮತ್ತು ಸೈಬೀರಿಯನ್ ಹುಲಿಗಳನ್ನು ಸರ್ಕಸ್ ಪ್ರದರ್ಶನಕ್ಕಾಗಿ ಬಳಸಲಾಗುತ್ತಿದೆ. ಪ್ರಾಣಿಗಳ ಕಲ್ಯಾಣಕ್ಕೆ ಸಂಬಂಧಿಸಿದ ಕಟ್ಟುನಿಟ್ಟಿನ ನಿಯಮಗಳ ಜಾಗತಿಕ ಚರ್ಚೆಯ ನಡುವೆಯೂ ಇಂತಹ ಕ್ರೀಡೆಗಳು ಕೆಲವು ಕಡೆ ಮುಂದುವರಿಯುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ, (ಏಜೆನ್ಸೀಸ್).