ಢಾಕಾ: ಮಲೇಷ್ಯಾದಿಂದ ತವರಿಗೆ ವಾಪಾಸ್ ಆದ ವ್ಯಕ್ತಿಯನ್ನು ಮನೆಗೆ ಕರೆದೊಯ್ಯಲು ಏರ್‌ಪೋರ್ಟ್‌ಗೆ ಬಂದ ಮೂವರು ಮಹಿಳೆಯರು, ಅವನು ನನ್ನ ಗಂಡ ಎಂದು ಹೇಳಿ, ಪರಸ್ಪರ ಕಿತ್ತಾಡಿಕೊಳ್ಳುವ ಮೂಲಕ ಸೃಷ್ಟಿಸಿದ ಹೈಡ್ರಾಮಾ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಪತಿಯನ್ನು ಸ್ವಾಗತಿಸಲು ಮೂವರು ಮಹಿಳೆಯರು ಒಂದೇ ಸಮಯದಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಲ್ಲದೇ, ತಮ್ಮ ಗಂಡನನ್ನು ಇನ್ನೊಬ್ಬರು ಹಂಚಿಕೊಂಡಿದ್ದಾರೆ ಎಂಬ ವಿಷಯ ತಿಳಿದು ಭಾರಿ ಶಾಕ್ಗೆ ಒಳಗಾಗಿದ್ದಾರೆ. ಪತಿಗೆ ನೀವು ಯಾರ ಜತೆ ಹೋಗ್ತೀರಿ? ಎಂದು ಪ್ರಶ್ನಿಸಿದ ಪತ್ನಿಯರು, ಇದೇ ವಿಚಾರಕ್ಕೆ ಜೋರು ಜೋರಾಗಿ ಮಾತಿನ ಚಕಮಕಿ ನಡೆಸಿದ್ದಾರೆ.
ಮೂವರ ನಡುವಿನ ಮಾತು ತಾರಕಕ್ಕೇರಿದ ಬೆನ್ನಲ್ಲೇ ಮಹಿಳೆಯರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಬಾಂಗ್ಲಾದೇಶದ ಢಾಕಾ ಏರ್ಪೋರ್ಟ್ನಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಷ್ಟಕ್ಕೂ ಆ ಮೂವರು ಮಹಿಳೆಯರು ಅವನ ಹೆಂಡತಿಯರೇನಾ ಎಂಬ ಪ್ರಶ್ನೆಗಳು ಕೇಳಿಬಂದಿವೆ. ಕಾರಣ, ಒಬ್ಬರನ್ನು ಬಿಟ್ಟರೆ ಇನ್ನಿಬ್ಬರು ತನಗೆ ಗೊತ್ತಿಲ್ಲ ಎನ್ನುವಂತೆ ಆತ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಬಾಂಗ್ಲಾದೇಶದ ರಾಜಧಾನಿ ಢಾಕಾದ ಹಜರತ್ ಶಾಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ 10ರಂದು ಈ ಘಟನೆ ನಡೆದಿದ್ದು, ಮಲೇಷ್ಯಾದಿಂದ ಮನೆಗೆ ಮರಳುತ್ತಿದ್ದ ವ್ಯಕ್ತಿಯನ್ನು ಸ್ವಾಗತಿಸಲು ಆತನ ಮೂವರು ಪತ್ನಿಯರು ಒಂದೇ ಸಮಯದಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು ಎನ್ನಲಾಗಿದೆ.
ಈ ವೇಳೆ ಮಹಿಳೆಯೊಬ್ಬರು ಆತನ ಕೈ ಹಿಡಿದುಕೊಂಡೇ ಅಳುತ್ತಿರುವ ದೃಶ್ಯವೂ ಸೆರೆಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಜನರು ಜಮಾಯಿಸಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).