US Iran Conflict: ಇರಾನ್ ಹಾಗೂ ಅಮೆರಿಕ ನಡುವೆ ಸೃಷ್ಟಿಯಾಗಿರುವ ಭೌಗೋಳಿಕ-ರಾಜಕೀಯ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ಪ್ರಸ್ತುತ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯಹಾಡಲು ಉಭಯ ದೇಶಗಳ ನಡುವೆ ಶಾಂತಿ ಒಪ್ಪಂದದ ಸಮ್ಮತಿ ಸಿಗದ ಹಿನ್ನೆಲೆಯಲ್ಲಿ ಇರಾನ್ ಮೇಲಿನ ಸೈನಿಕ ದಾಳಿಗಳನ್ನು ಭಾನುವಾರದಿಂದಲೇ ಪುನರಾರಂಭಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಮಧ್ಯಂತರ ಚುನಾವಣೆಗಾಗಿ ಫ್ಲೋರಿಡಾದಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ 80 ವರ್ಷದ ಟ್ರಂಪ್, ಇರಾನ್ ವಿರುದ್ಧ ತಮ್ಮ ಆಡಳಿತ ಕೈಗೊಂಡ ಮಿಲಿಟರಿ ಕ್ರಮಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ದಾಳಿಯ ಯೋಜನೆಗಳ ವಿವರಗಳನ್ನು ನಾನು ಮುಂಚಿತವಾಗಿ ಬಹಿರಂಗಪಡಿಸುವುದಿಲ್ಲ. ಬಹುಶಃ ನಾಳೆಯೇ (ಭಾನುವಾರ) ನಾವು ಮತ್ತೆ ದಾಳಿ ಆರಂಭಿಸಬಹುದು. ಇನ್ನೊಂದೆಡೆ ಬೃಹತ್ ಹಾಗೂ ಸುಂದರವಾದ ಶಾಂತಿ ಒಪ್ಪಂದ ಏರ್ಪಡುವ ಸಾಧ್ಯತೆಯೂ ಇದೆ. ಇರಾನ್ಗೆ ಒಪ್ಪಂದ ಮಾಡಿಕೊಳ್ಳುವ ಆಸೆಯಿದೆ, ಆದರೆ ಅವರು ಆ ಒಪ್ಪಂದಕ್ಕೆ ಬದ್ಧವಾಗಿರುತ್ತಾರೆಯೇ ಎನ್ನುವುದೇ ಸದ್ಯದ ಯಕ್ಷಪ್ರಶ್ನೆಯಾಗಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
ಫೆಬ್ರವರಿ 28 ರಿಂದ ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿ ಕಾರ್ಯಾಚರಣೆಯನ್ನು ಉಲ್ಲೇಖಿಸಿದ ಅವರು, ಅಮೆರಿಕನ್ ನೌಕಾಪಡೆ ಹಾಗೂ ರಕ್ಷಣಾ ಪಡೆಗಳು ಅದ್ಭುತವಾಗಿ ಕಾರ್ಯನಿರ್ವಹಿಸಿವೆ ಎಂದರು. ಇರಾನ್ನ ಯುದ್ಧ ವಿಮಾನಗಳನ್ನು ಹಾಗೂ 259 ಯುದ್ಧನೌಕೆಗಳನ್ನು ಧ್ವಂಸಗೊಳಿಸಲಾಗಿದ್ದು, ಇರಾನ್ ಸದ್ಯ ತೀವ್ರ ಆರ್ಥಿಕ ಬಿಕ್ಕಟ್ಟು ಹಾಗೂ ಹಣದುಬ್ಬರದಿಂದ ಕಂಗಾಲಾಗಿದೆ ಎಂದು ಪ್ರತಿಪಾದಿಸಿದರು.
ಟರ್ಕಿಯಲ್ಲಿನ ಅಮೆರಿಕದ ರಾಯಭಾರಿ ಟಾಮ್ ಬ್ಯಾರಕ್ ಈ ವಾರಾಂತ್ಯದಲ್ಲೇ ಇರಾನ್ ಮೇಲೆ ದಾಳಿ ಮರುಆರಂಭಗೊಳ್ಳಬಹುದು ಎಂದು ಸುಳಿವು ನೀಡಿದ್ದರು. ಮಧ್ಯಪ್ರಾಚ್ಯದಲ್ಲಿ ಅಣ್ವಸ್ತ್ರ ಅಭಿವೃದ್ಧಿ ಯೋಜನೆಯನ್ನು ಸಂಪೂರ್ಣವಾಗಿ ತೊರೆಯುವುದು ಮತ್ತು ಜಾಗತಿಕ ಇಂಧನ ಸಾರಿಗೆಯ ಶೇ.20ರಷ್ಟು ತೈಲ ಹಾದುಹೋಗುವ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದು ಅಮೆರಿಕದ ಪ್ರಮುಖ ಷರತ್ತಾಗಿದೆ.
ಆದರೆ ತೆಹ್ರಾನ್ ಆಡಳಿತವು ಈ ಬೇಡಿಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಇತ್ತೀಚೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನಿರ್ ಇರಾನ್ಗೆ ಭೇಟಿ ನೀಡಿ, ಸಮೃದ್ಧ ಯುರೇನಿಯಂ ಹಸ್ತಾಂತರಿಸುವಂತೆ ಮನವೊಲಿಸಲು ಯತ್ನಿಸಿದರೂ ಫಲ ನೀಡಿಲ್ಲ. ಅಮೆರಿಕ ತನ್ನ ಆರ್ಥಿಕ ದಿಗ್ಬಂಧನವನ್ನು ಸಂಪೂರ್ಣವಾಗಿ ತೆರವುಗೊಳಿಸಿದರೆ ಮಾತ್ರ ಜಲಸಂಧಿಯ ನಿರ್ಬಂಧ ತೆರವುಗೊಳಿಸುವುದಾಗಿ ಇರಾನ್ ಸ್ಪಷ್ಟಪಡಿಸಿದೆ. ಉಭಯ ದೇಶಗಳ ಈ ಪಟ್ಟಿನಿಂದಾಗಿ ಮಧ್ಯಪ್ರಾಚ್ಯದಲ್ಲಿ ಮತ್ತೆ ಮಹಾಯುದ್ಧದ ಭೀತಿ ಆವರಿಸಿದೆ(ಏಜೆನ್ಸೀಸ್).