

ವಾಷಿಂಗ್ಟನ್: ಹಲವು ಯುದ್ಧಗಳನ್ನು ತಡೆದಿದ್ದರೂ ತಮಗೆ ನೋಬೆಲ್ ಶಾಂತಿ ಪ್ರಶಸ್ತಿ ಸಿಗಲಿಲ್ಲ ಎಂದು ನಿರಂತರವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಈಗ ಜಗತ್ತಿನ ಅತ್ಯುನ್ನತ ಪತ್ರಿಕೋದ್ಯಮ ಗೌರವವಾದ ಪುಲಿಟ್ಜರ್ ಪ್ರಶಸ್ತಿಯ ಮೇಲೆಯೂ ಕಣ್ಣಿಟ್ಟಿದ್ದಾರೆ. ತಮ್ಮ ಬರಹಗಳಿಗೂ ಪುಲಿಟ್ಜರ್ ಪ್ರಶಸ್ತಿ ಸಿಗಬೇಕಿತ್ತು ಎಂದು ಹೇಳುವ ಮೂಲಕ ಟ್ರಂಪ್ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಬುಧವಾರ ದಕ್ಷಿಣ ಕೆರೊಲಿನಾದ ಪೆಂಡಲ್ಟನ್‌ನಲ್ಲಿರುವ ಟಿ. ಎಡ್ ಗ್ಯಾರಿಸನ್ ಅರೆನಾದಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ತಮಗೆ ಎರಡೂ ಜಾಗತಿಕ ಪ್ರಶಸ್ತಿಗಳು ಸಿಗದಿರುವ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದರು. ರಷ್ಯಾ ತನಿಖೆಯ ಕುರಿತು ವರದಿ ಮಾಡಿ ಪುಲಿಟ್ಜರ್ ಪ್ರಶಸ್ತಿ ಗೆದ್ದ ಪತ್ರಕರ್ತರನ್ನು ಕಟುವಾಗಿ ಟೀಕಿಸಿದ ಅವರು, ಆ ವರದಿಗಳಲ್ಲಿದ್ದ ಮಾಹಿತಿ ಸಂಪೂರ್ಣ ತಪ್ಪು ಎಂದು ಆರೋಪಿಸಿದರು.
ನನಗೆ ನೋಬೆಲ್ ಪ್ರಶಸ್ತಿ ಸಿಗಲಿಲ್ಲ, ಪುಲಿಟ್ಜರ್ ಪ್ರಶಸ್ತಿಯೂ ಸಿಗಲಿಲ್ಲ. ನನ್ನ ಅತ್ಯುತ್ತಮ ಬರಹಕ್ಕಾಗಿ ನನಗೂ ಪುಲಿಟ್ಜರ್ ಪ್ರಶಸ್ತಿ ಸಿಗಬೇಕಿತ್ತು. ಪ್ರಸ್ತುತ ಪ್ರಶಸ್ತಿ ಪಡೆದವರಿಗೆ ಅದು ಸಿಗಬಾರದಿತ್ತು. ರಷ್ಯಾ ವಿಷಯದ ಬಗ್ಗೆ ಅದ್ಭುತವಾಗಿ ಬರೆದಿದ್ದಾರೆಂದು ಅವರಿಗೆ ಪ್ರಶಸ್ತಿ ನೀಡಲಾಯಿತು, ಆದರೆ ವರದಿಗಳಲ್ಲಿದ್ದದ್ದು ಎಲ್ಲವೂ ಸುಳ್ಳು, ಅವರ ಲೆಕ್ಕಾಚಾರವೇ ತಪ್ಪಾಗಿದೆ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ.
ಹಲವು ಯುದ್ಧಗಳನ್ನು ತಡೆದಿದ್ದರೂ ನೋಬೆಲ್ ಶಾಂತಿ ಪ್ರಶಸ್ತಿಯನ್ನು ನಿರಾಕರಿಸಲಾಗಿದೆ ಎಂಬ ತಮ್ಮ ಹಳೆಯ ಅಳಲನ್ನು ತೋಡಿಕೊಂಡ ಅಮೆರಿಕಾ ಅಧ್ಯಕ್ಷ, ತಾವು ನೋಬೆಲ್ ಮಾತ್ರವಲ್ಲದೆ ಪತ್ರಿಕೋದ್ಯಮದ ಅತ್ಯುನ್ನತ ಪುಲಿಟ್ಜರ್ ಪ್ರಶಸ್ತಿಗೂ ಅರ್ಹ ಎಂದು ಹೇಳಿಕೊಳ್ಳುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಪುಲಿಟ್ಜರ್ ಪ್ರಶಸ್ತಿ ಬಗೆಗಿನ ಟ್ರಂಪ್ ಬೇಡಿಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಆಹಾರವಾಗಿದ್ದು, ನೆಟ್ಟಿಗರು ಅವರ ಬರಹದ ಸಾಮರ್ಥ್ಯ ಮತ್ತು ಭಾಷಾ ಶೈಲಿಯನ್ನು ತಮಾಷೆ ಮಾಡುತ್ತಿದ್ದಾರೆ.
ಮಕ್ಕಳ ಪುಸ್ತಕವನ್ನೂ ಬರೆಯಲಾಗದ ವ್ಯಕ್ತಿಯೊಬ್ಬರು ತಮಗೆ ಪುಲಿಟ್ಜರ್ ಬೇಕು ಎಂದು ಭಾವಿಸುತ್ತಿದ್ದಾರೆ ಎಂದು ಓರ್ವ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ಇಂಗ್ಲಿಷ್ ಭಾಷೆಯನ್ನು ಅವರು ಬಂಧಿಯಂತೆ ನಡೆಸಿಕೊಳ್ಳುತ್ತಾರೆ, ಅವರು ಮಾತನಾಡುವ ವಾಕ್ಯಗಳಿಗೆ ಹುಡುಕಾಟ ನಡೆಸಬೇಕಾಗುತ್ತದೆ, ಅಂತಹುದರಲ್ಲಿ ಟ್ರಂಪ್‌ಗೆ ಬರಹಕ್ಕಾಗಿ ಪುಲಿಟ್ಜರ್ ಬೇಕಂತೆ ಎಂದು ಗೇಲಿ ಮಾಡಿದ್ದಾರೆ. ಎಕ್ಸ್ನ ಮತ್ತೊಬ್ಬ ಬಳಕೆದಾರ, ಅವರ ತಲೆಯಲ್ಲಿ ಏನೇನೋ ಓಡುತ್ತಿದೆ, ಮುಜುಗರದಿಂದ ಬಚಾವಾಗಲು ಮಾಡುತ್ತಿರುವ ಈ ಪ್ರಯತ್ನಗಳು ತೀರಾ ಹಾಸ್ಯಾಸ್ಪದವಾಗಿವೆ ಎಂದು ಬರೆದುಕೊಂಡಿದ್ದಾರೆ.
2026ರ ಪುಲಿಟ್ಜರ್ ಪ್ರಶಸ್ತಿ ಪಟ್ಟಿಯಲ್ಲಿ ಟ್ರಂಪ್ ಮತ್ತು ಅವರ ಸರ್ಕಾರದ ನೀತಿಗಳ ಕುರಿತು ಪ್ರಕಟವಾದ ವರದಿಗಳೇ ಮುಂಚೂಣಿಯಲ್ಲಿದ್ದವು. ಫೆಡರಲ್ ಏಜೆನ್ಸಿಗಳಲ್ಲಾದ ಬದಲಾವಣೆಗಳು ಮತ್ತು ಉದ್ಯೋಗ ಕಡಿತದಿಂದ ಸಾಧಾರಣ ಜನರ ಮೇಲಾದ ಪರಿಣಾಮಗಳ ಕುರಿತು ವರದಿ ಮಾಡಿದ ದಿ ವಾಷಿಂಗ್ಟನ್ ಪೋಸ್ಟ್ ಪ್ರಶಸ್ತಿಗೆ ಭಾಜನವಾಗಿದೆ.
ಜ್ಯಾಫ್ರಿ ಎಪ್‌ಸ್ಟೀನ್ ಪ್ರಕರಣದ ತನಿಖಾ ವರದಿಗಾಗಿ ದಿ ವಾಲ್‌ಸ್ಟ್ರೀಟ್ ಜರ್ನಲ್ ಹಾಗೂ ಟ್ರಂಪ್ ಸರ್ಕಾರದ ಸೈನಿಕೀಕೃತ ವಲಸೆ ಕಾರ್ಯಾಚರಣೆಯ ತೀವ್ರತೆಯನ್ನು ಬಿಂಬಿಸಿದ ಚಿಕಾಗೋ ಟ್ರಿಬ್ಯೂನ್ ಪತ್ರಿಕೆಗಳು ಪುಲಿಟ್ಜರ್ ಗೌರವಕ್ಕೆ ಪಾತ್ರವಾಗಿವೆ.
ತಮ್ಮ ಅಧಿಕಾರವಧಿಯಲ್ಲಿ ಜಾಗತಿಕವಾಗಿ ಬರೋಬ್ಬರಿ 8 ಯುದ್ಧಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಿದ್ದೇನೆ ಎಂದು ಟ್ರಂಪ್ ಹಲವು ಬಾರಿ ಹೇಳಿಕೊಂಡಿದ್ದು, ಇತಿಹಾಸದಲ್ಲಿ ಬೇರೆ ಯಾವ ಅಮೆರಿಕನ್ ಅಧ್ಯಕ್ಷರೂ ಮಾಡದ ಸಾಧನೆಯನ್ನು ತಾನು ಮಾಡಿದ್ದರಿಂದ ನೋಬೆಲ್ ಪ್ರಶಸ್ತಿಗೆ ತಾವೇ ಅತ್ಯಂತ ಅರ್ಹ ವ್ಯಕ್ತಿ ಎಂದು ಅವರು ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡಿದ್ದಾರೆ. (ಏಜೆನ್ಸೀಸ್).