ಒಂದು ಇರುವೆ ಬೆಲೆ 20 ಸಾವಿರ ರೂಪಾಯಿ... ಯಾಕಿಷ್ಟು ಡಿಮ್ಯಾಂಡ್? ಇದರ ಹಿಂದಿರುವ ರಹಸ್ಯವೇನು? Ants 
ವಿದೇಶ

ಒಂದು ಇರುವೆ ಬೆಲೆ 20 ಸಾವಿರ ರೂಪಾಯಿ... ಯಾಕಿಷ್ಟು ಡಿಮ್ಯಾಂಡ್? ಇದರ ಹಿಂದಿರುವ ರಹಸ್ಯವೇನು? Ants

ಪ್ರಮುಖ ಮುಖ್ಯಾಂಶಗಳು

  • ಇರುವೆಗಳನ್ನೂ ಕದ್ದು ಸಾಗಿಸುವ ಬಗ್ಗೆ ನಿಮಗೆ ತಿಳಿದಿದೆಯೇ?
  • ಇದು ನಗುವ ವಿಷಯವಲ್ಲ, ಇದೊಂದು ಗಂಭೀರ ವಿಷಯ
  • ವಿದೇಶದಲ್ಲಿ ಜೀವಂತ ಇರುವೆಗಳನ್ನು ಕದ್ದು ಸಾಗಿಸಲಾಗುತ್ತದೆ
Ants : ಕಳ್ಳಸಾಗಣೆ ಎಂಬ ಪದ ಕೇಳುತ್ತಿದ್ದಂತೆ ನಮ್ಮ ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ ಆನೆ ದಂತ, ಹುಲಿ ಚರ್ಮ, ಚಿನ್ನದ ಗಟ್ಟಿ, ಕೆಲವು ಪ್ರಾಣಿಗಳು ಅಥವಾ ಮಾದಕವಸ್ತುಗಳ ಕಳ್ಳಸಾಗಣೆ. ಆದರೆ, ಇರುವೆಗಳನ್ನೂ ಕದ್ದು ಸಾಗಿಸುವ ಬಗ್ಗೆ ನಿಮಗೆ ತಿಳಿದಿದೆಯೇ? ಇದನ್ನು ಕೇಳಿ ನಿಮ್ಮ ಮುಖದಲ್ಲಿ ನಗು ಬರಬಹುದು ಆದರೆ, ಇದು ನಗುವ ವಿಷಯವಲ್ಲ, ಇದೊಂದು ಗಂಭೀರ ವಿಷಯ. ಕೀನ್ಯಾದ ನೈರೋಬಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಿದ ಚೀಲಗಳಲ್ಲಿ ಸಾವಿರಾರು ಜೀವಂತ ಇರುವೆಗಳು ಕಂಡುಬಂದಿವೆ. ಅಷ್ಟಕ್ಕೂ ಇರುವೆಗಳನ್ನು ಏಕೆ ಕಳ್ಳಸಾಗಣೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಅನೇಕರಿಗೆ ಸಂದೇಹವಿದ್ದರೂ, ಅದರ ಹಿಂದೆ ಸ್ಪಷ್ಟ ಕಾರಣವೂ ಇದೆ. ಅದೇನೆಂದು ನಾವೀಗ ತಿಳಿದುಕೊಳ್ಳೋಣ.
ಕಳೆದ ಮಾರ್ಚ್‌ ತಿಂಗಳಲ್ಲಿ ನೈರೋಬಿಯ ಜೋಮೋ ಕೆನ್ಯಾಟ್ಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 27 ವರ್ಷದ ಚೀನೀ ಪ್ರಜೆ ಜಾಂಗ್ ಕೆಕ್ವಾನ್‌ನನ್ನು ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ಲಾಸ್ಟಿಕ್ ಟ್ಯೂಬ್‌ಗಳು ಮತ್ತು ಟಿಶ್ಯೂ ಪೇಪರ್‌ನಲ್ಲಿ ಅಡಗಿಸಿಟ್ಟಿದ್ದ 2,200 ಕ್ಕೂ ಹೆಚ್ಚು ಜೀವಂತ ರಾಣಿ ಇರುವೆಗಳನ್ನು ಆತ ಸಾಗಿಸುತ್ತಿದ್ದನೆಂದು ವರದಿಯಾಗಿದೆ. ಇದಿಷ್ಟೇ ಅಲ್ಲದೆ, ಮೊಂಬಾಸಾದಿಂದ ಥೈಲ್ಯಾಂಡ್‌ಗೆ ಕಳುಹಿಸಲಾಗಿದ್ದ ಇರುವೆಗಳ ಮತ್ತೊಂದು ದೊಡ್ಡ ಸರಕನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ಇವು ಸಾಮಾನ್ಯ ಇರುವೆಗಳಲ್ಲ. ಇವು ಮೆಸ್ಟರ್ ಸೆಫಲೋಟ್‌ಗಳು ಎಂದು ಕರೆಯಲ್ಪಡುವ ವಿಶ್ವದ ಅತಿದೊಡ್ಡ ಕೊಯ್ಲುಗಾರ ಇರುವೆಗಳು. ಅವು ಸುಮಾರು ಒಂದು ಇಂಚು ಉದ್ದದವರೆಗೆ ಬೆಳೆಯಬಹುದು. ಅವು ಹೆಚ್ಚಾಗಿ ಪೂರ್ವ ಆಫ್ರಿಕಾದಲ್ಲಿ ಕಂಡುಬರುತ್ತವೆ. ದೊಡ್ಡ ಕೆಂಪು ರಾಣಿ ಇರುವೆಗಳನ್ನು ಆನ್‌ಲೈನ್ ಬ್ಲಾಕ್​ ಮಾರ್ಕೆಟ್​ನಲ್ಲಿ 20,505 ರೂಪಾಯಿಗಳವರೆಗೆ ($220) ಮಾರಾಟ ಮಾಡಲಾಗುತ್ತದೆ. ವಿದೇಶಿಯರು ತೆರೆದ ಹೊಲಗಳು ಮತ್ತು ಬೆಟ್ಟಗಳಲ್ಲಿ ಇರುವೆಗಳನ್ನು ಬೇಟೆಯಾಡಲು ನಮ್ಮಲ್ಲಿಗೆ ಬಂದಿದ್ದಾರೆ ಎಂದು ಆಫ್ರಿಕಾದ ಇರುವೆ ವ್ಯಾಪಾರಿಗಳು ಸಹ ಹೇಳುತ್ತಾರೆ.

ಆಕ್ರಮಣಕಾರಿಯಲ್ಲ

ಆದರೆ, ಇದು ಕಾನೂನುಬಾಹಿರ ಎಂದು ಹಲವರಿಗೆ ತಿಳಿದಿಲ್ಲ. ಬೆಲ್ಜಿಯಂ, ವಿಯೆಟ್ನಾಂ ಮತ್ತು ಕೀನ್ಯಾದ ಶಂಕಿತರು ಪರೀಕ್ಷಾ ಟ್ಯೂಬ್‌ಗಳು ಮತ್ತು ಸಿರಿಂಜ್‌ಗಳಲ್ಲಿ ನೆನೆಸಿದ ಹತ್ತಿಯನ್ನು ಬಳಸಿ ಇರುವೆಗಳನ್ನು ಕಳ್ಳಸಾಗಣೆ ಮಾಡುತ್ತಾರೆ. ಕೀನ್ಯಾ ವನ್ಯಜೀವಿ ಸೇವೆಯು ಇರುವೆಗಳು ಎರಡು ತಿಂಗಳವರೆಗೆ ಬದುಕಬಲ್ಲವು ಎಂದು ಹೇಳುತ್ತದೆ. ಈ ಮೆಸ್ಟರ್ ಸೆಫಲೋಟ್‌ಗಳು ಅತ್ಯಂತ ನಿಗೂಢ ಇರುವೆಗಳಲ್ಲಿ ಒಂದಾಗಿದೆ ಎಂದು ಜೀವಶಾಸ್ತ್ರಜ್ಞ ಡಿನೋ ಮಾರ್ಟಿನ್ಸ್ ಬಿಬಿಸಿಗೆ ತಿಳಿಸಿದ್ದಾರೆ. ಅವು ದೊಡ್ಡ ವಸಾಹತುಗಳನ್ನು ರೂಪಿಸುತ್ತವೆ. ಅವುಗಳನ್ನು ಇಡುವುದು ಸುಲಭ ಮತ್ತು ಆಕ್ರಮಣಕಾರಿಯಲ್ಲ ಎಂದು ಅವರು ಹೇಳಿದ್ದಾರೆ.

ಕಳ್ಳಸಾಗಾಣೆ ಏಕೆ?

ಅಷ್ಟಕ್ಕೂ ಈ ಇರುವೆಗಳನ್ನು ಈ ರೀತಿ ಏಕೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಹಲವರು ಆಶ್ಚರ್ಯ ಪಡುತ್ತಾರೆ. ಏಷ್ಯಾ ಮತ್ತು ಯುರೋಪ್‌ನಲ್ಲಿ ಇರುವೆಗಳ ವಸಾಹತುಗಳನ್ನು ಬೆಳೆಸುವುದು ಒಂದು ದೊಡ್ಡ ಹವ್ಯಾಸವಾಗಿದೆ. ಇರುವೆಗಳ ಸಂಕೀರ್ಣ ಜೀವನಶೈಲಿಯನ್ನು ವೀಕ್ಷಿಸಲು ಜನರು ಲಕ್ಷಗಟ್ಟಲೆ ಖರ್ಚು ಮಾಡುತ್ತಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ರಾಣಿ ಇರುವೆ 100 ಯುಎಸ್ ಡಾಲರ್‌ಗಳವರೆಗೆ ಬೆಲೆ ಬಾಳುತ್ತದೆ ಎಂದು ವರದಿಯಾಗಿದೆ.
ಇನ್ನೂ ಚೀನಿಯರು ಈ ಇರುವೆಗಳನ್ನು ಸಂಧಿವಾತದಂತಹ ಕಾಯಿಲೆಗಳಿಗೆ ಪರಿಹಾರವಾಗಿ ಬಳಸುತ್ತಾರೆ. ಇವುಗಳ ದೇಹದಲ್ಲಿರುವ ಸೂಕ್ಷ್ಮಜೀವಿಗಳು ಹೊಸ ರೀತಿಯ ಔಷಧಿಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆಯೇ ಎಂದು ನಿರ್ಧರಿಸಲು ಅಂತಾರಾಷ್ಟ್ರೀಯ ಅಧ್ಯಯನಗಳು ನಡೆಯುತ್ತಿವೆ. ಆದರೆ, ಇರುವೆಗಳ ಕಳ್ಳಸಾಗಣೆ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧವಾಗಿದೆ.

ಪ್ರಕೃತಿಗೆ ಹಾನಿಕಾರಕ

ತಜ್ಞರು ಹೇಳುವಂತೆ ಇರುವೆಗಳನ್ನು ಕಳ್ಳಸಾಗಣೆ ಮಾಡುವುದು ಪ್ರಕೃತಿಗೆ ತುಂಬಾ ಹಾನಿಕಾರಕ. ಇದು ಪರಿಸರದ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಕಳ್ಳಸಾಗಣೆದಾರರು ಇರುವೆಗಳ ವಸಾಹತುಗಳ ಉಳಿವಿಗೆ ಆಧಾರವಾಗಿರುವ ರಾಣಿ ಇರುವೆಗಳನ್ನೇ ಗುರಿಯಾಗಿಸುತ್ತಾರೆ. ಇದು ಹೊಸ ವಸಾಹತುಗಳು ರೂಪುಗೊಳ್ಳುವುದನ್ನು ತಡೆಯುತ್ತದೆ. ಹಾರ್ವೆಸ್ಟರ್ ಇರುವೆಗಳು ಪರಿಸರ ವ್ಯವಸ್ಥೆಯ ಎಂಜಿನಿಯರ್‌ಗಳು. ಇವು ಹುಲ್ಲು ಮತ್ತು ಇತರ ಸಸ್ಯಗಳ ಬೀಜಗಳನ್ನು ಸಂಗ್ರಹಿಸುತ್ತವೆ. ಬೀಜ ವಿತರಣೆಯಲ್ಲಿ ಸಹಾಯ ಮಾಡುತ್ತದೆ. ದೊಡ್ಡ ಹುಲ್ಲುಗಾವಲುಗಳನ್ನು ರಚಿಸಲು ಈ ಇರುವೆಗಳು ಸಹಾಯ ಮಾಡುತ್ತದೆ ಮತ್ತು ಅವುಗಳ ನಾಶವು ಹುಲ್ಲುಗಾವಲುಗಳ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ, ಇರುವೆಗಳು ಹೋದರೆ, ಅವುಗಳನ್ನು ತಿನ್ನುವ ಪ್ಯಾಂಗೊಲಿನ್ ಮತ್ತು ಇರುವೆಗಳನ್ನು ತಿಂದು ಬದುಕುಳಿಯುವ ಜೀವಿಗಳ ಮೇಲೂ ಪರಿಣಾಮ ಬೀರುತ್ತದೆ, (ಏಜೆನ್ಸೀಸ್​).