ಪುಟಿನ್ ಆಕ್ರೋಶಕ್ಕೆ ಬೆಚ್ಚಿಬಿದ್ದ ಜಗತ್ತು! ಖಮೇನಿ ಸಾವಿಗೆ ಸೇಡು ತೀರಿಸಿಕೊಳ್ಳಲು ಇರಾನ್‌ಗೆ ರಷ್ಯಾ ಸಾಥ್ ಕೊಡುತ್ತಾ..?
ಮಾಸ್ಕೋ: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ಹತ್ಯೆಯು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಸುನಾಮಿ ಎಬ್ಬಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Putin Reaction) ಈ ಹತ್ಯೆಯನ್ನು ಕಟುವಾಗಿ ಖಂಡಿಸಿದ್ದು, ಇದು ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನವ ನೈತಿಕತೆಯ ಎಲ್ಲಾ ಮಾನದಂಡಗಳ ಉಲ್ಲಂಘನೆ ಎಂದು ಗುಡುಗಿದ್ದಾರೆ.
ಮತ್ತೊಂದೆಡೆ, ಇರಾನ್ ನಡೆಸುತ್ತಿರುವ ಪ್ರತೀಕಾರದ ಕ್ಷಿಪಣಿ ದಾಳಿಗಳಿಂದಾಗಿ ಇಡೀ ಮಧ್ಯಪ್ರಾಚ್ಯವು ಯುದ್ಧದ ಅಖಾಡವಾಗಿ ಮಾರ್ಪಟ್ಟಿದೆ.
ಪುಟಿನ್ ಆಕ್ರೋಶ: ಇದು ಅತ್ಯಂತ ಹೀನಾಯ ಕೃತ್ಯ
ಇರಾನ್‌ನ ದೀರ್ಘಕಾಲದ ಮಿತ್ರ ರಷ್ಯಾ, ಖಮೇನಿ ಸಾವಿನ ನಂತರ ಅಮೇರಿಕಾ ಮತ್ತು ಇಸ್ರೇಲ್ ವಿರುದ್ಧ ಕೆಂಡ ಕಾರಿದೆ. ಖಮೇನಿಯ ಹತ್ಯೆಯು ಕೇವಲ ರಾಜಕೀಯವಲ್ಲ, ಇದೊಂದು ನೈತಿಕತೆಯಿಲ್ಲದ ಕೊಲೆ ಎಂದು ಕಿಡಿಕಾರಿದೆ. ಈ ಕೃತ್ಯದ ಮೂಲಕ ಅಂತಾರಾಷ್ಟ್ರೀಯ ಶಾಂತಿಯನ್ನು ಹದಗೆಡಿಸಲಾಗಿದೆ ಎಂದು ಪುಟಿನ್ ಗುಡುಗಿದ್ದಾರೆ. ರಷ್ಯಾ ಈಗ ಇರಾನ್‌ಗೆ ಸೇನಾ ಬೆಂಬಲ ನೀಡುತ್ತದೆಯೇ ಎಂಬ ಕುತೂಹಲ ಈಗ ಜಗತ್ತನ್ನು ಕಾಡುತ್ತಿದೆ.
ಗಾಢ ಸಂತಾಪ: ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರಿಗೆ ಪತ್ರ ಬರೆದಿರುವ ಪುಟಿನ್, ಖಮೇನಿ ಮತ್ತು ಅವರ ಕುಟುಂಬ ಸದಸ್ಯರ ಸಾವಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಖಮೇನಿ ಅವರನ್ನು ರಷ್ಯಾ ಮತ್ತು ಇರಾನ್ ನಡುವಿನ ಸ್ನೇಹ ಸಂಬಂಧವನ್ನು ಬಲಪಡಿಸಲು ಶ್ರಮಿಸಿದ ಅಪ್ರತಿಮ ರಾಜತಾಂತ್ರಿಕ ಎಂದು ಪುಟಿನ್ ಶ್ಲಾಘಿಸಿದ್ದಾರೆ.
ಅಮೇರಿಕಾ-ಇಸ್ರೇಲ್ ವಿರುದ್ಧ ವಾಗ್ದಾಳಿ: ಅಮೇರಿಕಾ ಮತ್ತು ಇಸ್ರೇಲ್ ನಡೆಸಿದ ಈ ಜಂಟಿ ವೈಮಾನಿಕ ದಾಳಿಯು ಸಾರ್ವಭೌಮ ರಾಷ್ಟ್ರದ ಮೇಲಿನ ಅಪ್ರಚೋದಿತ ಆಕ್ರಮಣ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ತೀವ್ರ ವಾಗ್ದಾಳಿ ನಡೆಸಿದೆ.
ಇರಾನ್ ವಿರುದ್ಧ ಅರಬ್ ರಾಷ್ಟ್ರಗಳ ಕೆಂಗಣ್ಣು
ದುಬೈ, ಕತಾರ್ ಮತ್ತು ಕುವೈತ್ ಮೇಲಿನ ಇರಾನ್‌ನ ಕ್ಷಿಪಣಿ ದಾಳಿಯನ್ನು ಸೌದಿ ಅರೇಬಿಯಾ ತೀವ್ರವಾಗಿ ಖಂಡಿಸಿದೆ.
ಇರಾನ್ ತನ್ನ ನೆರೆಹೊರೆಯ ರಾಷ್ಟ್ರಗಳ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತಿದೆ. ಈ ದಾಳಿಗಳಿಂದ ಆಗುವ ಭೀಕರ ಪರಿಣಾಮಗಳಿಗೆ ಇರಾನ್ ನೇರ ಹೊಣೆಯಾಗಲಿದೆ ಎಂದು ಸೌದಿ ಕಿಂಗ್ಡಮ್ ಎಚ್ಚರಿಸಿದೆ.
ಯುಎಇ, ಬಹ್ರೇನ್ ಮತ್ತು ಜೋರ್ಡಾನ್‌ಗೆ ಸೌದಿ ತನ್ನ ಸಂಪೂರ್ಣ ಬೆಂಬಲ ಘೋಷಿಸಿದ್ದು, ಇರಾನ್‌ನ ಉದ್ಧಟತನವನ್ನು ತಡೆಯಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದೆ.
ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಜಂಟಿ ಹೇಳಿಕೆ
ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಜರ್ಮನಿಯ ನೂತನ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಇರಾನ್ ತಕ್ಷಣವೇ ವಿವೇಚನಾರಹಿತ ದಾಳಿಗಳನ್ನು ನಿಲ್ಲಿಸಬೇಕು. ಅಂತಿಮವಾಗಿ ಇರಾನ್ ಜನರು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಲು ಅವಕಾಶ ನೀಡಬೇಕು ಎಂದು ಅವರು ತಿಳಿಸಿದ್ದಾರೆ. ಆದರೆ, ಸಂಧಾನದ ಹಾದಿ ಈಗ ಮುಚ್ಚಿಹೋಗಿದೆ ಎಂದು ಫ್ರಾನ್ಸ್‌ನ ರಕ್ಷಣಾ ಸಚಿವೆ ಆಲಿಸ್ ರುಫೊ ಆತಂಕ ವ್ಯಕ್ತಪಡಿಸಿದ್ದಾರೆ. ಇದು ಮಾತುಕತೆಯ ಸಮಯವಲ್ಲ, ನಾವು ಈಗ ಯುದ್ಧದ ಮಧ್ಯದಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಗಗನಮಾರ್ಗಗಳು ಬಂದ್; ವಿಮಾನಯಾನ ಸ್ಥಗಿತ
ಯುದ್ಧದ ತೀವ್ರತೆಯಿಂದಾಗಿ ಕತಾರ್ ತನ್ನ ವಾಯುಮಾರ್ಗವನ್ನು ಮುಚ್ಚಿದೆ. ಸಿರಿಯಾ ಕೂಡ ದಕ್ಷಿಣ ಭಾಗದ ಗಗನಮಾರ್ಗವನ್ನು ಸ್ಥಗಿತಗೊಳಿಸಿದೆ. ಲುಫ್ತಾನ್ಸಾ, ಏರ್ ಫ್ರಾನ್ಸ್ ಮತ್ತು ಕತಾರ್ ಏರ್ವೇಸ್ ಸೇರಿದಂತೆ ಜಗತ್ತಿನ ಪ್ರಮುಖ ಏರ್ಲೈನ್ಸ್ ಸಂಸ್ಥೆಗಳು ಲೆಬನಾನ್ ಮತ್ತು ಗಲ್ಫ್ ರಾಷ್ಟ್ರಗಳಿಗೆ ವಿಮಾನ ಹಾರಾಟವನ್ನು ರದ್ದುಗೊಳಿಸಿವೆ.
ಯುರೋಪಿಯನ್ ಯೂನಿಯನ್ ಎಚ್ಚರಿಕೆ
EU ನ ವಿದೇಶಾಂಗ ನೀತಿ ಮುಖ್ಯಸ್ಥೆ ಕಾಜಾ ಕಲ್ಲಾಸ್ ಅವರು ಪರಿಸ್ಥಿತಿಯು ಅತ್ಯಂತ ಅಪಾಯಕಾರಿ ಹಂತದಲ್ಲಿದೆ ಎಂದು ವಿವರಿಸಿದ್ದಾರೆ. ಇರಾನ್‌ನ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಗಳು ಜಾಗತಿಕ ಭದ್ರತೆಗೆ ದೊಡ್ಡ ಬೆದರಿಕೆಯಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಯುರೋಪಿಯನ್ ಯೂನಿಯನ್ ಈಗಾಗಲೇ ತನ್ನ ಸಿಬ್ಬಂದಿಯನ್ನು ಈ ವಲಯದಿಂದ ತೆರವುಗೊಳಿಸಲು ಆರಂಭಿಸಿದೆ.
ಮುಂದೇನು..?
ಖಮೇನಿ ನಿಧನದ ನಂತರ ಇರಾನ್‌ನಲ್ಲಿ ಈಗ ಅಸ್ಥಿರತೆ ಮನೆ ಮಾಡಿದೆ. ಅತ್ತ ಅಮೇರಿಕಾ ಮತ್ತು ಇಸ್ರೇಲ್ ತನ್ನ ದಾಳಿಯನ್ನು ಮುಂದುವರಿಸಿದ್ದರೆ, ಇತ್ತ ರಷ್ಯಾ ಇರಾನ್ ಬೆನ್ನಿಗೆ ನಿಂತಿದೆ. ಇಡೀ ಜಗತ್ತು ಈಗ ಎರಡು ಬಣಗಳಾಗಿ ವಿಭಜನೆಯಾಗುತ್ತಿದ್ದು, ಇದು ಮಹಾಯುದ್ಧಕ್ಕೆ ನಾಂದಿ ಹಾಡುತ್ತಿದೆಯೇ ಎಂಬ ಭೀತಿ ಶುರುವಾಗಿದೆ,(ಏಜೆನ್ಸೀಸ್).