ಟೆಲ್ ಅವಿವ್: ಬುಧವಾರ (ಸೆ.30) ದುಬೈನಿಂದ ಇಸ್ರೇಲ್ ರಾಜಧಾನಿ ಟೆಲ್ ಅವಿವ್ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದಿರುವ ಘಟನೆ ಎಲ್ಲರ ಎದೆ ನಡುಗಿಸಿದೆ. ವಿಮಾನದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಸಹ ಪೈಲಟ್ ಚಾಕುವಿನಿಂದ ಹಲ್ಲೆ ನಡೆಸಿ ವಿಮಾನವನ್ನು ಪತನ ಮಾಡಲು ಮುಂದಾದ ವಿಫಲ ಘಟನೆ ಸದ್ಯ ಜಗತ್ತಿನಾದ್ಯಂತ ಚರ್ಚೆಯಾಗುತ್ತಿದೆ.
ಈಗ, ಈ ಘಟನೆ ಬಗ್ಗೆ ವಿಮಾನದಲ್ಲಿ ಹಾಜರಿದ್ದ ಇಸ್ರೇಲಿ ವೈದ್ಯರೊಬ್ಬರು ತಾವು ಪ್ರತ್ಯಕ್ಷವಾಗಿ ಕಂಡಿದ್ದನ್ನು ಹಂಚಿಕೊಂಡಿದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದರೂ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಪ್ರಯಾಣಿಕರ ಜೀವವನ್ನು ಹೇಗೆ ಕಾಪಾಡಿದರೆನ್ನವ ಸಾಹಸ ಗಾತೆಯನ್ನು ಬಿಚ್ಚಿಟ್ಟಿದ್ದಾರೆ.
ದುಬೈನಿಂದ ಟೆಲ್ ಅವಿವ್ ಕಡೆಗೆ ಪ್ರಯಾಣ ಬೆಳೆಸಿದ್ದ ಫ್ಲೈದುಬೈ ವಿಮಾನದಲ್ಲಿ, ಡಾ. ಶೋಟಾ ಮೊಸೇವ್ ಎಂಬ ಇಸ್ರೇಲಿ ದಂತವೈದ್ಯರು ಪ್ರಯಾಣಿಕರಾಗಿದ್ದರು. ವಿಮಾನದಲ್ಲಿದ್ದ ಏಕೈಕ ವೈದ್ಯರಾಗಿ ಇವರೇ ಇದ್ದರು. ಡಾ. ಶೋಟಾ ಹೇಳುವ ಪ್ರಕಾರ, ವಿಮಾನ ಸಹಜವಾಗಿಯೇ ತನ್ನ ಪ್ರಯಾಣವನ್ನು ಬೆಳೆಸಿತ್ತು. ಆದರೆ, ಕೆಲ ಸಮಯದ ನಂತರ ಕಾಕ್ಪಿಟ್ನಿಂದ ಕಿರುಚಿದ ಶಬ್ದಗಳು ಕೇಳಿ ಬಂದವು. ನಂತರ ವಿಮಾನ ಒಂದೇ ಸಲ ಕುಸಿಯ ತೊಡಗಿತು, ಆಗ ತಮ್ಮನ್ನು ಸೇರಿದಂತೆ ಎಲ್ಲಾ ಪ್ರಯಾಣಿಕರು ಭಯಗ್ರಸ್ತರಾದೆವು.
ಆಮೇಲೆ, ಕಾಕ್ಪಿಟ್ ಬಾಗಿಲು ತೆರೆಯಿತು. ನಾನು ಕಾಕ್ಪಿಟ್ ಹತ್ತಿರ ಹೋದಾಗ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ರಕ್ತಸಿಕ್ತವಾಗಿದ್ದು, ಅವರ ತಲೆ, ಕೈಗಳಿಂದ ರಕ್ತ ಸೋರುತ್ತಿತ್ತು. ಅವರ ಮೈತುಂಬಾ ಗಾಯಗಳಾದಂತೆ ಕಾಣಿಸಿತು ಎಂದಿದ್ದಾರೆ. ದೇಹದಿಂದ ರಕ್ತ ನೀರಿನಂತೆ ಸೋರುತ್ತಿದ್ದ ಕಾರಣ ಅವರು ಪ್ರಜ್ಞೆ ಕಳೆದುಕೊಳ್ಳುತ್ತಿದ್ದಾರೆಂದು ಅನ್ನಿಸಿತು ಎಂದಿದ್ದಾರೆ.
ಒಂದೆಡೆ ವಿಮಾನವು ಕುಸಿತ ಕಾಣುತ್ತಿದ್ದರೆ, ಮತ್ತೊಂದೆಡೆ ಕ್ಯಾಪ್ಟನ್ ಮಚ್ಚಾರ್ ಪ್ರಾಣಾಪಾಯದಲ್ಲಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಡಾ. ಮೊಸೇವ್, ವಿಮಾನದಲ್ಲಿದ್ದ ಲಭ್ಯವಿರುವ ವಸ್ತುಗಳನ್ನೇ ಬಳಸಿ ಕ್ಯಾಪ್ಟನ್ ಮಚ್ಚಾರ್ ಅವರ ತಲೆ ಹಾಗೂ ಕೈಗಳ ರಕ್ತಸ್ರಾವವನ್ನು ತಡೆಯಲು ಹರಸಾಹಸ ಪಟ್ಟರು. ಅವರ ಸಮಯಪ್ರಜ್ಞೆ ಮತ್ತು ಚಿಕಿತ್ಸೆಯಿಂದಾಗಿ ಕ್ಯಾಪ್ಟನ್ ರಕ್ತದೊತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ, ವಿಮಾನ ಲ್ಯಾಂಡ್ ಆದ ಬಳಿಕ ಸೌದಿಯ ಆಸ್ಪತ್ರೆಗೆ ದಾಖಲಾಗಲು ಸಹಕಾರಿಯಾಯಿತು.
ಕ್ಯಾಪ್ಟನ್‌ಗೆ ಚಿಕಿತ್ಸೆ ನೀಡುತ್ತಿದ್ದಂತೆಯೇ, ವಿಮಾನದಲ್ಲಿದ್ದ ಕೆಲ ಧೈರ್ಯಶಾಲಿ ಪ್ರಯಾಣಿಕರು ಒಟ್ಟಾಗಿ ಹಲ್ಲೆ ನಡೆಸಿದ ಸಹ ಪೈಲಟ್ ಮೇಲೆ ಮುಗಿಬಿದ್ದು, ಅವನನ್ನು ಗಟ್ಟಿಯಾಗಿ ಹಿಡಿದು ವಿಮಾನದ ಸೀಟ್ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ನಂತರ ಪೈಲಟ್ಗಳ ಇನ್ನೊಂದು ತಂಡ, ವಿಮಾನವನ್ನು ತಮ್ಮ ಹತೋಟಿಗೆ ತೆಗೆದುಕೊಂಡು, ಸೌದಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದರು ಎಂದು ಡಾ. ಶೋಟಾ ಮೊಸೇವ್ ತಿಳಿಸಿದ್ದಾರೆ.
ಎಕ್ಸ್ (X) ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಅತ್ಯಂತ ಗಂಭೀರ ಅಪಾಯದ ಪರಿಸ್ಥಿತಿಯಲ್ಲಿ ಮತ್ತು ತೀವ್ರವಾಗಿ ಗಾಯಗೊಂಡಿದ್ದರೂ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅಪಾರ ಧೈರ್ಯವನ್ನು ಹಾಗೂ ಇತರರ ಪ್ರಾಣ ರಕ್ಷಿಸುವ ದೃಢ ಸಂಕಲ್ಪವನ್ನು ಪ್ರದರ್ಶಿಸಿದ್ದಾರೆ. ಅವರ ಶೌರ್ಯವು ನೂರಾರು ಜೀವಗಳನ್ನು ಉಳಿಸಲು ಮತ್ತು ದೊಡ್ಡ ದುರಂತವನ್ನು ತಪ್ಪಿಸಲು ಸಹಾಯ ಮಾಡಿದೆ.
ಕ್ಯಾಪ್ಟನ್ ಮಚ್ಚಾರ್ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಮಚ್ಚಾರ್ ಅವರ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ, (ಏಜೆನ್ಸೀಸ್).