ಲೆಬನಾನ್ನ 900 ವರ್ಷ ಹಳೆಯ ಬ್ಯೂಫೋರ್ಟ್ ಕೋಟೆ ವಶಕ್ಕೆ ಪಡೆದ ಇಸ್ರೇಲ್
- ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ
- ಲೆಬನಾನ್ನ 900 ವರ್ಷ ಹಳೆಯ ಬ್ಯೂಫೋರ್ಟ್ ಕೋಟೆ ವಶಕ್ಕೆ ಪಡೆದ ಇಸ್ರೇಲ್
- ಶನಿವಾರ ಹಿಜ್ಬೊಲ್ಲಾ ದಾಳಿಗೆ ಪ್ರತೀಕಾರವಾಗಿ ಕೋಟೆ ವಶಕ್ಕೆ
- ಇರಾನ್ ಅಮೆರಿಕ ಯುದ್ದದಲ್ಲಿ ಸಿಲುಕಿಕೊಂಡ ಲೆಬನಾನ್
ಲೆಬನಾನ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಪ್ರಾರಂಭವಾಗಿ ಸುಮಾರು ಎರಡು ತಿಂಗಳು ಕಳೆದರೂ ಶಾಂತಿ ಎಂಬ ಶಬ್ದ ಬಲು ದೂರವೇ ಉಳಿದಿದೆ ಎಂದರೆ ಸುಳ್ಳಲ್ಲ. ಒಂದು ಕಡೆ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ನಡೆಯುತ್ತಿದ್ದರೆ, ಇನ್ನೊಂದು ಬದಿಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ಬಡಿದಾಡುತ್ತಿವೆ.
900 ವರ್ಷ ಹಳೆಯ ಕೋಟೆ ಗೆದ್ದ ಇಸ್ರೇಲ್!
ಲೆಬನಾನ್ ಮೇಲೆ ಇಸ್ರೇಲ್ ದಿನನಿತ್ಯ ವಾಯುದಾಳಿ ನಡೆಸುತ್ತಿದ್ದು, ಇಂದು (ಭಾನುವಾರ, ಮೇ.31) ದಕ್ಷಿಣ ಲೆಬನಾನ್ ಮೇಲೆ ದಾಳಿ ನಡೆಸಿ ಸುಮಾರು 900 ವರ್ಷ ಹಳೆಯದಾದ ಬ್ಯೂಫೋರ್ಟ್ ಕೋಟೆ (Israel Captures Beaufort Castle) ಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ಶನಿವಾರ (ಮೇ.30) ಇಸ್ರೇಲ್ ಮೇಲೆ ಲೆಬನಾನ್ನ ಮಿಲಿಟರಿ ಸಂಘಟನೆ ಹಿಜ್ಬೊಲ್ಲಾ ದಾಳಿ ನಡೆಸಿದ ಪ್ರತೀಕಾರವಾಗಿ ಈ ಕೋಟೆಯನ್ನು ಇಸ್ರೇಲ್ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.
ನಮಗೆ ಈ ಬ್ಯೂಫೋರ್ಟ್ ಕೋಟೆ ಹಾಗೂ ವಾಡಿ ಅಲ್-ಸಲುಕಿ ಪ್ರದೇಶದ ಮೇಲೆ ಹಿಡಿತ ಸಾಧಿಸಿದರೆ ಮಾತ್ರ ಹಿಜ್ಬೊಲ್ಲಾದ ಚಲನ, ವಲನದ ಮೇಲೆ ಕಣ್ಣಿಡಲು ಸಾಧ್ಯವಾಗುತ್ತಿತ್ತು. ಆದ್ದರಿಂದ ನಾವು ಈ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದೆವೆಂದು ಇಸ್ರೇಲ್ ಆರ್ಮಿ ಹೇಳಿದೆ.
ಇಬ್ಬರ ಯುದ್ಧದಲ್ಲಿ ಸಿಲುಕಿಕೊಂಡ ಲೆಬನಾನ್!
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದಾಗ ಇರಾನ್ನ ಸಹಾಯಕ್ಕೆ ಲೆಬನಾನ್ ನಿಂತಿತು. ಇಸ್ರೇಲ್ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ ಲೆಬನಾನ್ಗೆ ಕೆಲವೇ ದಿನಗಳಲ್ಲಿ ಇಸ್ರೇಲ್ ತಕ್ಕ ಪಾಠ ಕಲಿಸಿತು.
ಇನ್ನೊಂದು ಕಡೆ ಅಮೆರಿಕ ಮತ್ತು ಇರಾನ್ ಶಾಂತಿ ಮಾತುಕತೆ ನಡೆಸುತ್ತಿದ್ದರೂ, ಇತ್ತ ಇಸ್ರೇಲ್, ಲೆಬನಾನ್ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸದ ಪರಿಣಾಮ ಈ ಸಂಘರ್ಷದಲ್ಲಿ ಇರಾನ್ ಪರ ನಿಂತ ಪರಿಣಾಮ ಲೆಬನಾನ್ ಸಾಕಷ್ಟು ನಷ್ಟ ಅನುಭವಿಸುವಂತಾಯಿತು ಎನ್ನುವುದು ಜಾಗತಿಕ ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಏನಿದು ಬ್ಯೂಫೋರ್ಟ್ ಕೋಟೆ?
ಬ್ಯೂಫೋರ್ಟ್ ಕೋಟೆ (Beaufort Castle) ಲೆಬನಾನ್ ದೇಶದ ದಕ್ಷಿಣ ಭಾಗದಲ್ಲಿರುವ ಒಂದು ಅತ್ಯಂತ ಐತಿಹಾಸಿಕ ಮತ್ತು ಪ್ರಸಿದ್ಧವಾದ ಪರ್ವತ ಕೋಟೆಯಾಗಿದೆ. ಇದನ್ನು ಸ್ಥಳೀಯವಾಗಿ ಕಲಾತ್ ಆಶ್-ಶಕೀಫ್ ಎಂದು ಕರೆಯಲಾಗುತ್ತದೆ, ಇದರರ್ಥ ಉನ್ನತ ಬಂಡೆಯ ಕೋಟೆ ಎಂದಾಗಿದೆ.
ಲಿಟಾನಿ ನದಿಯ ಪಕ್ಕದಲ್ಲಿರುವ ಅತ್ಯಂತ ಕಡಿದಾದ ಬೆಟ್ಟದ ತುದಿಯಲ್ಲಿ ನಿರ್ಮಾಣಗೊಂಡಿರುವ ಈ ಕೋಟೆಯು ಸಮುದ್ರ ಮಟ್ಟದಿಂದ ಸುಮಾರು 700 ಮೀಟರ್ ಎತ್ತರದಲ್ಲಿದೆ, ಇದು ಇಡೀ ಪ್ರದೇಶದ ಮೇಲೆ ನಿಗಾ ಇಡಲು ಸೂಕ್ತವಾದ ಆಯಕಟ್ಟಿನ ಮಿಲಿಟರಿ ನೆಲೆಯಾಗಿತ್ತು. ಈ ಕೋಟೆಯನ್ನು 12ನೇ ಶತಮಾನದಲ್ಲಿ ಕ್ರಿಶ್ಚಿಯನ್ ಯೋಧರು ನಿರ್ಮಿಸಿದರು ಮತ್ತು ನಂತರದ ದಿನಗಳಲ್ಲಿ ಸುಲ್ತಾನ್ ಸಲಾವುದ್ದೀನ್ ಸೇರಿದಂತೆ ವಿವಿಧ ಇಸ್ಲಾಮಿಕ್ ದೊರೆಗಳು ಇದನ್ನು ವಶಪಡಿಸಿಕೊಂಡು ಮತ್ತಷ್ಟು ಬಲಪಡಿಸಿದರು.
ತನ್ನ ಭೌಗೋಳಿಕ ಪ್ರಾಮುಖ್ಯತೆಯಿಂದಾಗಿ ಇತ್ತೀಚಿನ ಆಧುನಿಕ ಇತಿಹಾಸದಲ್ಲೂ ಈ ಕೋಟೆಯು ಸಾಕಷ್ಟು ರಕ್ತಪಾತಕ್ಕೆ ಸಾಕ್ಷಿಯಾಗಿದೆ. ವಿಶೇಷವಾಗಿ 20ನೇ ಶತಮಾನದ ಕೊನೆಯಲ್ಲಿ ನಡೆದ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಭೀಕರ ಸಂಘರ್ಷದ ಸಮಯದಲ್ಲಿ ಇದು ಪ್ರಮುಖ ಯುದ್ಧಭೂಮಿಯಾಗಿ ಮಾರ್ಪಟ್ಟಿತ್ತು. ಶತಮಾನಗಳ ಕಾಲ ನಡೆದ ಯುದ್ಧಗಳಿಂದಾಗಿ ಈ ಕೋಟೆಯು ಸಾಕಷ್ಟು ಹಾನಿಗೊಳಗಾಗಿದ್ದರೂ, ಇದರ ಬೃಹತ್ ಕಲ್ಲಿನ ಗೋಡೆಗಳು, ರಕ್ಷಣಾ ಗೋಪುರಗಳು ಮತ್ತು ಕಡಿದಾದ ಬಂಡೆಗಳ ರಚನೆಯು ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ, (ಏಜನ್ಸೀಸ್).